ವಿಜಯನಗರ: ಅಡವಿ ಮಲ್ಲಾಪುರ ಗ್ರಾಮದಲ್ಲಿ ಅಭಿವೃದ್ಧಿ ಮರೀಚಿಕೆ
ವಿಜಯನಗರ: ಜಿಲ್ಲಾ ಕೇಂದ್ರ ವಿಜಯನಗರದಿಂದ 110 ಕಿ.ಮೀ. ದೂರದಲ್ಲಿರುವ ಹರಪನಹಳ್ಳಿ ತಾಲೂಕಿನ ಹಳ್ಳಿಯಾಗಿರುವ ನಿಚ್ಚವನಹಳ್ಳಿ ಗ್ರಾಪಂ ವ್ಯಾಪ್ತಿಯ ಅಡವಿ ಮಲ್ಲಾಪುರ ಗ್ರಾಮದಲ್ಲಿ ಹಲವಾರು ಸಮಸ್ಯೆಗಳು ತಾಂಡವವಾಡುತ್ತಿವೆ.
ಮೂಲ ಸೌಕರ್ಯಗಳಾದ ಆರೋಗ್ಯ, ಶಿಕ್ಷಣ ಸೌಕರ್ಯಗಳು ಮರೀಚಿಕೆಯಾಗಿ ಗ್ರಾಮಸ್ಥರ ಬದುಕು ಶೋಚನೀಯವಾಗಿದೆ. ಅತೀ ಚಿಕ್ಕದಾದ ಈ ಗ್ರಾಮದಲ್ಲಿ 150ಕ್ಕೂ ಅಧಿಕ ಕುಟುಂಬಗಳ 1,300 ಜನಸಂಖ್ಯೆ ವಾಸಿಸುತ್ತಿದ್ದು, ಇಲ್ಲಿ ಹೆಚ್ಚಾಗಿ ಕುರಿಗಾರರು, ಕೃಷಿಕರು, ಬಡ ಕೂಲಿ ಕಾರ್ಮಿಕರಿದ್ದಾರೆ.
ಚುನಾವಣೆಗಳು ಬಂದಾಗ ಮಾತ್ರ ಎಲ್ಲ ಪಕ್ಷದವರು ನಮ್ಮ ಗ್ರಾಮವನ್ನು ನೆನಪಿಸಿಕೊಂಡು ಬರುತ್ತಾರೆ. ನಮ್ಮ ಬಹುದಿನಗಳ ಗೋಳು ಪರಿಹರಿಸಲು ಈವರೆಗೆ ಅಧಿಕಾರಿಗಳಾಗಲಿ, ಜನ ಪ್ರತಿನಿಧಿಗಳಾಗಲಿ ಸ್ಪಂದಿಸಿಲ್ಲ ಎಂಬುದು ಈ ಗ್ರಾಮದ ನಾಗರಿಕರ ಆರೋಪವಾಗಿದೆ.
ಇನ್ನೂ ತಾಲೂಕಿನಲ್ಲಿ ಎಡೆ ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕೆಲ ಮನೆಗಳ ಮುಂದೆ ಮಳೆ ನೀರು ನಿಂತು ಅನೇಕರ ಆರೋಗ್ಯ ಏರುಪೇರಾಗಿದೆ. ಮಕ್ಕಳ ಆರೋಗ್ಯದಲ್ಲಿ ಈ ಹಿಂದೆ ತೀವ್ರ ಜ್ವರ ಕಾಣಿಸಿಕೊಂಡು ತಿಂಗಳುಗಳ ಕಾಲ ಆಸ್ಪತ್ರೆಗಳಿಗೆ ಅಲೆಯುತ್ತಿದ್ದೇವೆ ಎಂದು ಕೂಲಿಕಾರರು ಅಂಗಲಾಚುತ್ತಿದ್ದಾರೆ. ಇತ್ತ ಮಳೆ ಬಂದರೆ ಇಡೀ ಊರಿನ ನೀರು ಕೆಳ ಭಾಗದ ಮನೆಗಳ ಮುಂದೆ ನಿಂತು ಸೊಳ್ಳೆ, ಕ್ರಿಮಿ, ಕೀಟಗಳ ತಾಣವಾಗಿ ನೀರು ತುಂಬಿ ಮನೆಯ ಅವರಣಗಳೆಲ್ಲ ನಡುಗಡ್ಡೆಯಾಗುತ್ತದೆ ಸಾರ್ವಜನಿಕರು ಎಂದು ಆರೋಪಿಸಿದ್ದಾರೆ.
ಶೈಕ್ಷಣಿಕ ಸೌಲಭ್ಯದ ಕೊರತೆ: ಈ ಗ್ರಾಮದಲ್ಲಿ 7ನೇ ತರಗತಿಯವರೆಗೆ ಮಾತ್ರ ವಿದ್ಯಾಭ್ಯಾಸಕ್ಕೆ ಅವಕಾಶ ಇದ್ದು, ಮುಂದಿನ ತರಗತಿಗಳಿಗೆ ದೂರದ ಅರಸೀಕೆರೆ ಗ್ರಾಮಕ್ಕೆ 6 ಕಿಲೋಮೀಟರ್ ಗಳಷ್ಟು ನಡೆದುಕೊಂಡೇ ಹೋಗಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ, ಈ ಶಾಲೆಯಲ್ಲಿ ಕೇವಲ ಇಬ್ಬರು ಶಿಕ್ಷಕರು ಮಾತ್ರ ಇದ್ದಾರೆ. ನಂತರದ ಶಿಕ್ಷಣಕ್ಕೆ 8-10 ಕಿ.ಮೀ.ದೂರದಲ್ಲಿರುವ ಅರಸೀಕೆರೆ ಇಲ್ಲವೇ ಹರಪನಹಳ್ಳಿಗೆ ಮಕ್ಕಳು ನಡೆದೇ ಹೋಗಬೇಕಾದ ಅನಿವಾರ್ಯತೆ ಇದೆ. ಈ ಗ್ರಾಮದ ಶಾಲಾ ಮಕ್ಕಳು ಪ್ರಯೋಗ ಶಾಲೆ, ಕಂಪ್ಯೂಟರ್, ಆಟದ ಮೈದಾನ, ಕುಡಿಯಲು ಶುದ್ಧ ನೀರಿಲ್ಲದೆ ವಿದ್ಯಾಭ್ಯಾಸ ಮಾಡಬೇಕಾಗಿದೆ.
ದಶಕಗಳೇ ಕಳೆದರೂ ಕಾಣದ ಬಸ್ ವ್ಯವಸ್ಥೆ: ಈ ಊರಿಗೆ ಸಾರಿಗೆ ವ್ಯವಸ್ಥೆ ಗಗನಕುಸುಮವಾಗಿದೆ. ಊರಿನಲ್ಲಿರುವ ಎರಡು ಆಟೊ ರಿಕ್ಷಾ, ಎರಡು ಟ್ರ್ಯಾಕ್ಟರ್ ಸೇರಿ ಬೈಕ್‌ಗಳೇ ಇಲ್ಲಿನ ಸಂಪರ್ಕ ಸಾಧನಗಳಾಗಿವೆ. ಬಡ ವಿದ್ಯಾರ್ಥಿಗಳು ಶಾಲೆಗೆ 6 ಕಿ.ಮೀ ನಡೆದುಕೊಂಡೆ ಹೋಗಬೇಕಾಗಿದೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ.
ಶಾಲೆಗೆ ಶಿಕ್ಷಕರ ಕೊರತೆ: ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು 130ಕ್ಕೂ ಅಧಿಕ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, ಕೇವಲ 2 ಸರಕಾರಿ ಶಿಕ್ಷಕರಿದ್ದಾರೆ. ಇದೀಗ ಒಟ್ಟು ಮುಖ್ಯ ಶಿಕ್ಷಕ ಹುದ್ದೆ ಸೇರಿ ಒಟ್ಟು 4 ಹುದ್ದೆಗಳು ಖಾಲಿ ಇವೆ. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದ್ದು 3 ಅರೆಕಾಲಿಕ ಶಿಕ್ಷಕರ ನೇಮಕ ಮಾಡಿಕೊಂಡಿದ್ದಾರೆ. ಇಲ್ಲಿಗೆ ಶಿಕ್ಷಕರ ಅಗತ್ಯವಿದ್ದು ಕೂಡಲೇ ಶಿಕ್ಷಣ ಇಲಾಖೆ ಶಿಕ್ಷಕರ ಕೊರತೆ ನಿಗಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ನಮ್ಮ ಶಾಲೆಗೆ ಅಡುಗೆ ಕೋಣೆಯ ಸಮಸ್ಯೆ ಮತ್ತು ಶಿಕ್ಷಕರ ಕೊರತೆ ಇದೆ. ಸಂಬಂಧಿಸಿದ ಅಧಿಕಾರಿಗಳು ಈ ಸಮಸ್ಯೆಯನ್ನು ಶೀಘ್ರದಲ್ಲಿ ನಿವಾರಿಸಬೇಕು. ಇಲ್ಲಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಿ ಮಕ್ಕಳ ಭವಿಷ್ಯಕ್ಕೆ ದಾರಿದೀಪವಾಗಬೇಕು.
-ಸಣ್ಣ ಕೊಟ್ರೇಶ್ ನಾಯ್ಕ್, ಪ್ರಭಾರಿ ಮುಖ್ಯ ಶಿಕ್ಷಕ, ಸರಕಾರಿ ಹಿ.ಪ್ರಾ. ಶಾಲೆ, ಅಡವಿ ಮಲ್ಲಾಪುರ
ನಾನು ಈ ಹಿಂದೆ ಅಡವಿ ಮಲ್ಲಪುರ ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳ ಬಗ್ಗೆ ಸ್ಥಳೀಯ ಶಾಸಕರಿಗೆ ಮನವಿ ಮಾಡಿದ್ದೇನೆ, ಗ್ರಾಮದ ಶಾಲೆಯ ಅಡುಗೆ ಕೋಣೆ ಮುಂದಿನ ತಿಂಗಳ ಮೊದಲ ವಾರದಲ್ಲಿ ಕಟ್ಟಡದ ಕಾಮಗಾರಿ ಪ್ರಾರಂಭಿಸಲಾಗುವುದು.
-ಆನಂದ ಕುಮಾರ್, ನಿಚ್ಚವನಹಳ್ಳಿ ಗ್ರಾಪಂ ಪಿಡಿಒ