‘ವೋಟ್ ಚೋರ್’ ಘೋಷಣೆ ಬಿಹಾರ ಚುನಾವಣೆಯ ದೆಸೆಯನ್ನೇ ಬದಲಿಸಲಿದೆಯೆ?
ದೇಶದ ರಾಜಕೀಯ ದಿಕ್ಕನ್ನೇ ನಿರ್ಧರಿಸಬಲ್ಲ ಮಹತ್ವದ ರಾಜ್ಯ ಬಿಹಾರ, ಮತ್ತೊಂದು ನಿರ್ಣಾಯಕ ಚುನಾವಣೆಯ ಹೊಸ್ತಿಲಲ್ಲಿದೆ.
ಈ ಬಾರಿ ಚುನಾವಣಾ ಕಣದಲ್ಲಿ ಅಭಿವೃದ್ಧಿ, ನಿರುದ್ಯೋಗ, ಬೆಲೆ ಏರಿಕೆಯಂತಹ ಸಾಂಪ್ರದಾಯಿಕ ವಿಷಯಗಳಿಗಿಂತಲೂ ಒಂದು ಹೊಸ ಮತ್ತು ಸ್ಫೋಟಕ ಆರೋಪ ಕೇಂದ್ರ ಬಿಂದುವಾಗಿದೆ.
ಅದುವೇ ‘ಮೋದಿ ವೋಟ್ ಚೋರ್’.
ಬಿಹಾರದಲ್ಲಿ ರಾಹುಲ್ ಗಾಂಧಿ, ತೇಜಸ್ವಿ ಯಾದವ್ ಮತ್ತು ಇಡೀ ‘ಇಂಡಿಯಾ’ ಒಕ್ಕೂಟ ಮತಗಳ್ಳತನದ ವಿಷಯದೊಂದಿಗೆ ಹೊಟಿರುವುದು ಮಹತ್ವದ ವಿದ್ಯಮಾನ.
ಜನಸಮೂಹ ದೊಡ್ಡ ಪ್ರಮಾಣದಲ್ಲಿ ಸೇರುತ್ತಿರುವುದನ್ನು ನೋಡಿದರೆ, ಅದೊಂದು ಆಂದೋಲನವೆಂಬಂತೆ ಗೋಚರವಾಗುತ್ತದೆ. ನಿಜವಾಗಿಯೂ ಇದು ಆಳದಲ್ಲಿ ಆಂದೋಲನದ ಸ್ವರೂಪ ಪಡೆದುಕೊಂಡಿದೆಯೇ ಅಥವಾ ಅಂತಿಮವಾಗಿ ಏನನ್ನೂ ಸಾಧಿಸದ ಬರೀ ಒಂದು ಪ್ರದರ್ಶನವೆ?
ಈ ಯಾತ್ರೆಗಳಲ್ಲಿ ಸೇರುತ್ತಿರುವ ಜನಸಂದಣಿ, ಕೇವಲ ಕುತೂಹಲದಿಂದ ಬಂದಿದ್ದೋ ಅಥವಾ ವ್ಯವಸ್ಥೆಯ ವಿರುದ್ಧದ ಆಕ್ರೋಶದ ಸಂಕೇತವೋ ಎಂಬ ಚರ್ಚೆ ಜೋರಾಗಿದೆ.
ರಾಜಕೀಯ ವಿಶ್ಲೇಷಕರ ಪ್ರಕಾರ, ಈ ಜನಸಮೂಹವನ್ನು ಮತಗಳಾಗಿ ಪರಿವರ್ತಿಸುವಲ್ಲಿ ‘ಇಂಡಿಯಾ’ ಒಕ್ಕೂಟ ಯಶಸ್ವಿಯಾದರೆ, ಬಿಹಾರದ ಫಲಿತಾಂಶಗಳು ಇಡೀ ದೇಶವನ್ನು ಬೆಚ್ಚಿಬೀಳಿಸಬಹುದು.
ಇಂಥ ಅನುಮಾನಗಳ ಹೊರತಾಗಿಯೂ ಗಮನಕ್ಕೆ ಬರುತ್ತಿರುವುದು, ವಿಪಕ್ಷಗಳ ಧ್ವನಿ.
ಚುನಾವಣಾ ಆಯೋಗ ಮೋದಿ ಸರಕಾರದೊಂದಿಗೆ ಅಥವಾ ಬಿಜೆಪಿಯೊಂದಿಗೆ ಶಾಮೀಲಾಗಿ ಮತಗಳನ್ನು ಕದಿಯುತ್ತಿದೆ ಎಂದು ವಿರೋಧಪಕ್ಷಗಳ ಒಕ್ಕೂಟ ದೊಡ್ಡ ಧ್ವನಿಯಲ್ಲಿ ಹೇಳುತ್ತಿದೆ.
ರಾಹುಲ್ ಗಾಂಧಿಯವರು ನರೇಂದ್ರ ಮೋದಿಯ ಮೇಲೆ ನೇರವಾಗಿ ದಾಳಿ ಮಾಡಿ ಅವರನ್ನು ‘ವೋಟ್ ಚೋರ್’ ಎಂದು ಕರೆದಿದ್ದಾರೆ. ಈ ಆರೋಪವು ಕೇವಲ ರಾಜಕೀಯ ವಾಕ್ಸಮರವಲ್ಲ, ಬದಲಾಗಿ ಚುನಾವಣಾ ಪ್ರಕ್ರಿಯೆಯ ಪಾವಿತ್ರ್ಯತೆಯನ್ನೇ ಪ್ರಶ್ನಿಸುವ ಗಂಭೀರ ಯತ್ನವಾಗಿದೆ.
ಇದೆಲ್ಲವೂ ಬಿಹಾರದಲ್ಲಿ, ಅಲ್ಲಿನ ಈ ಸಲದ ಚುನಾವಣೆಯಲ್ಲಿ ತರಬಹುದಾದ ಬದಲಾವಣೆಗಳೇನಿರಬಹುದು?
ಈ ಪ್ರಶ್ನೆಯೊಂದಿಗೆ ಪತ್ರಕರ್ತೆ ಆರ್ಫಾ ಖಾನುಮ್ ಶೆರ್ವಾನಿ ಪಾಟ್ನಾದ ಇಬ್ಬರು ಹಿರಿಯ ಪತ್ರಕರ್ತರ ಜೊತೆ ‘ದಿ ವೈರ್’ ಗಾಗಿ ಮಾತುಕತೆ ನಡೆಸಿದ್ದಾರೆ. ಅಲ್ಲಿ ವ್ಯಕ್ತವಾಗಿರುವ ಅಭಿಪ್ರಾಯಗಳ ಪ್ರಕಾರ ಇಂಥ ಯಾತ್ರೆಗಳು, ಘೋಷಣೆಗಳು ಪ್ರಭಾವ ಬೀರುವುದು ನಿಜ. ಆದರೆ ಆ ಪ್ರಭಾವ ಯಾವ ವರ್ಗದ ಮೇಲೆ ಆಗುತ್ತದೆ ಎಂಬುದು ಕೂಡ ಮುಖ್ಯ.
ಬಿಹಾರದಲ್ಲಿನ ಆಟವೇನಿದ್ದರೂ, ಅದು ಜಾತಿ ಅಥವಾ ಧರ್ಮದ ಮೇಲೆ ನಡೆಯುವಂಥದ್ದು. ‘ವೋಟ್ ಚೋರ್’ ಎಂಬ ಘೋಷಣೆ, ಸಾಂಪ್ರದಾಯಿಕ ಜಾತಿ ಸಮೀಕರಣಗಳನ್ನು ಮೀರಿ ಮತದಾರರನ್ನು ಒಂದುಗೂಡಿಸಬಲ್ಲದೇ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ.
ಹಿಂದುಳಿದ ವರ್ಗಗಳು, ದಲಿತರು ಮತ್ತು ಅಲ್ಪಸಂಖ್ಯಾತರು ತಮ್ಮ ಜಾತಿ ಗುರುತಿಗಿಂತ ಹೆಚ್ಚಾಗಿ ತಮ್ಮ ಮತದಾನದ ಹಕ್ಕು ಅಪಾಯದಲ್ಲಿದೆ ಎಂದು ಭಾವಿಸಿದರೆ ಮಾತ್ರ ಈ ತಂತ್ರ ಯಶಸ್ವಿಯಾಗಲು ಸಾಧ್ಯ.
ಅತ್ಯಂತ ಮುಖ್ಯ ವಿಷಯವೆಂದರೆ, ರಾಹುಲ್ ಗಾಂಧಿ ಮತಗಳ್ಳತನದ ಆರೋಪ ಮಾಡುವಾಗ ಅದನ್ನು ಸಾಬೀತುಪಡಿಸಲು ಸಾಧ್ಯವಾಗದಿದ್ದರೆ ಆ ಎಲ್ಲಾ ಆರೋಪಗಳು ನೆಲಕಚ್ಚುತ್ತವೆ. ಬಿಜೆಪಿ ಇದನ್ನೇ ಅಸ್ತ್ರವಾಗಿ ಬಳಸಿ, ವಿಪಕ್ಷಗಳು ಸೋಲಿನ ಹತಾಶೆಯಿಂದ ಸುಳ್ಳು ಆರೋಪ ಮಾಡುತ್ತಿವೆ ಎಂದು ಪ್ರಚಾರ ಮಾಡಲಿದೆ.
ಬಿಹಾರ ಚುನಾವಣೆಯಲ್ಲಿ ರಾಹುಲ್ ಗಾಂಧಿಗೆ ಮತಗಳ ಕಳ್ಳತನ ನಿಜವಾದ ಸಮಸ್ಯೆಯೇ ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ.
ಮತಗಳ್ಳತನ ನಿಜವಾಗಿಯೂ ನಡೆಯುತ್ತಿದ್ದರೆ ಕಾಂಗ್ರೆಸ್ ಏನು ಮಾಡುತ್ತಿದೆ?
ಬಿಜೆಪಿ ಜನರ ಹೆಸರುಗಳನ್ನು ಎಲ್ಲೆಲ್ಲಿ ಅಳಿಸಲಾಗುತ್ತದೆಯೋ ಅಲ್ಲಿ ಅದು ಕೆಲಸ ಮಾಡುತ್ತಿರುವ ರೀತಿ ನೋಡಬೇಕು.
ಫಾರ್ಮ್ 6 ಭರ್ತಿ ಮಾಡುವುದು, ದೂರು ನೀಡುವುದು, ಸ್ಲಿಪ್ ತೆಗೆದುಕೊಂಡು ಃಐಔ ಬಳಿ ಹೋಗಿ ಅದನ್ನು ಸರಿಪಡಿಸುವುದು ಇದನ್ನೆಲ್ಲ ಬಿಜೆಪಿ ಮಾಡುತ್ತದೆ. ಇದೊಂದು ವ್ಯವಸ್ಥಿತವಾದ ತಳಮಟ್ಟದ ಕೆಲಸ.
ಕಾಂಗ್ರೆಸ್ ಜನರು ಆ ಕೆಲಸ ಮಾಡುತ್ತಿದ್ದಾರೆಯೇ? ಮತ್ತು ಅವರು ಅದನ್ನು ಮಾಡದಿದ್ದರೆ, ಬರೀ ಹೇಳುವುದರಿಂದ, ಆರೋಪ ಮಾಡುವುದರಿಂದ ಏನೂ ಆಗುವುದಿಲ್ಲ.
ವಾಸ್ತವವಾಗಿ ಏನನ್ನಾದರೂ ಸೇರಿಸಲು ಸಾಧ್ಯವಾಗದ ಹೊರತು, ವಿರೋಧ ಪಕ್ಷಗಳ ದೌರ್ಬಲ್ಯ ಎಲ್ಲರಿಗೂ ಕಾಣುತ್ತದೆ.
ಕೇವಲ ವೇದಿಕೆಗಳಲ್ಲಿ ಆರೋಪ ಮಾಡುವುದಕ್ಕೂ, ಮತಗಟ್ಟೆ ಮಟ್ಟದಲ್ಲಿ ಹೋರಾಡುವುದಕ್ಕೂ ಅಜಗಜಾಂತರವಿದೆ.
ಆದರೆ, ಹೀಗೆ ವಾದಿಸುವಾಗ ಇಡೀ ಸರಕಾರಿ ಯಂತ್ರ ಯಾರ ಬಳಿಯಿದೆ ಎನ್ನುವುದು ಕೂಡ ಯೋಚಿಸಬೇಕಾದ ಸಂಗತಿ.
ಕೇಂದ್ರದಲ್ಲಿ, ರಾಜ್ಯದಲ್ಲಿ, ದೇಶದ ಬಹುತೇಕ ರಾಜ್ಯಗಳಲ್ಲಿ ಬಿಜೆಪಿಯದ್ದೇ ಸರಕಾರವಿದೆ. ಸಂಪನ್ಮೂಲಗಳೆಲ್ಲ ಅದರ ಬಳಿಯೇ ಇವೆ. ಬಿಜೆಪಿ ಎಂದರೆ ಬಿಜೆಪಿ ಮಾತ್ರವಾಗಿರದೆ, ಅದು ಚುನಾವಣಾ ಆಯೋಗ, ಈ.ಡಿ., ಸಿಬಿಐ, ಐಟಿ, ಮೀಡಿಯಾ ಎಲ್ಲವೂ ಜೊತೆಗಿರುವ ವ್ಯವಸ್ಥೆಯಾಗಿದೆ. ಹೀಗಿರುವಾಗ ವಿರೋಧ ಪಕ್ಷಗಳು ಹೇಗೆ ಹೋರಾಡುತ್ತವೆ ಎಂಬ ಪ್ರಶ್ನೆ ಏಳುತ್ತದೆ.
ಬಿಹಾರದ ಬಹಳಷ್ಟು ಮತದಾರರ ಬಳಿ ಇರುವ, ಹಳ್ಳಿಯಲ್ಲಿನ ಸಾಮಾನ್ಯ ಮತದಾರರ ಬಳಿ ಇರುವ ಆಧಾರ್ ಕಾರ್ಡ್ ಮತ್ತು ಮತದಾರರ ಗುರುತಿನ ಚೀಟಿಯನ್ನು ಎಸ್‌ಐಆರ್‌ನಲ್ಲಿ ಮಾನ್ಯ ಮಾಡುತ್ತಿಲ್ಲ ಎನ್ನುವಲ್ಲಿಂದಲೇ ಒಂದು ಪಕ್ಷದ ಪರವಾದ ಕಾರ್ಯಾಚರಣೆ ಶುರುವಾಗಿದೆ ಎಂದರ್ಥ. ಹಾಗಾಗಿಯೇ ಅದು ರಾಹುಲ್ ಗಾಂಧಿಯವರನ್ನು ಅಫಿಡವಿಟ್ ಕೊಡುವಂತೆ ಕೇಳುತ್ತದೆ.
ಮುಖ್ಯ ಚುನಾವಣಾ ಆಯುಕ್ತರು ಪತ್ರಿಕಾಗೋಷ್ಠಿಯಲ್ಲಿ ಕೇಳಲಾಗುತ್ತಿದ್ದ ಯಾವುದೇ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಲಿಲ್ಲ ಮತ್ತು ಅವರು ಒಂದು ನಿರ್ದಿಷ್ಟ ಪಕ್ಷದ ಪರವಾಗಿ ಪತ್ರಿಕಾಗೋಷ್ಠಿ ನಡೆಸುತ್ತಿದ್ದಾರೆ ಎಂಬಂತೆ ಕಂಡಿತು.
ಹೀಗಾಗಿಯೇ, ಅವರ ಆ ಪತ್ರಿಕಾಗೋಷ್ಠಿಯಿಂದ ಬಿಜೆಪಿಗೇ ಹೆಚ್ಚು ಪೆಟ್ಟು ಬಿತ್ತು. ಇದು ವಿಪಕ್ಷಗಳ ಆರೋಪಕ್ಕೆ ಇನ್ನಷ್ಟು ಪುಷ್ಟಿ ನೀಡಿದಂತಾಯಿತು.
ಆದರೆ ಇಲ್ಲಿ ಮತಗಳ್ಳತನ ವಿಷಯವೊಂದನ್ನೇ ವಿಪಕ್ಷಗಳು ಎತ್ತಿಕೊಂಡು ಹೊರಟಿರುವಾಗ, ದಲಿತರು, ಆದಿವಾಸಿಗಳು, ಹಿಂದುಳಿದವರು ಮತ್ತು ಮುಸ್ಲಿಮರ ಮೇಲೆ ಅದು ಪ್ರಭಾವ ಬೀರುತ್ತದೆಯೆ?
ವಿದ್ಯುತ್, ರಸ್ತೆಗಳು, ನೀರು, ಬ್ಯಾಂಕ್ ಖಾತೆಗಳು, ಉದ್ಯೋಗಕ್ಕಿಂತ ಮತಗಳ್ಳತನದ ವಿಷಯ ಮುಖ್ಯ ಎಂದು ಅವರು ನಂಬುತ್ತಾರೆಯೇ?
ಹೊಟ್ಟೆಗೆ ಹಿಟ್ಟಿಲ್ಲದಿದ್ದಾಗ ಜುಟ್ಟಿಗೆ ಮಲ್ಲಿಗೆ ಹೂವು ಬೇಕೇ ಎಂಬಂತೆ, ದೈನಂದಿನ ಬದುಕಿನ ಜ್ವಲಂತ ಸಮಸ್ಯೆಗಳ ಮುಂದೆ ಪ್ರಜಾಪ್ರಭುತ್ವದ ಹಕ್ಕಿನಂತಹ ಅಮೂರ್ತ ವಿಷಯಗಳು ಜನರಿಗೆ ಮುಖ್ಯವೆನಿಸುತ್ತವೆಯೇ?
ಬಿಹಾರ ಚುನಾವಣೆಯಲ್ಲಿ ಈ ಎಲ್ಲಾ ವಿಷಯಗಳು ಕಾಣೆಯಾಗಿ, ಮತಗಳ್ಳತನದ ವಿಷಯ ಮಾತ್ರ ಕೇಳಿಬರುತ್ತಿರುವುದರ ಪರಿಣಾಮವೇನಾಗಬಹುದು ಎಂಬುದನ್ನು ಕೂಡ ನೋಡಬೇಕಾಗುತ್ತದೆ.
ವಿಪಕ್ಷಗಳಿಗೆ ಅಸಮಾಧಾನವಿರುವುದು ಚುನಾವಣಾ ಆಯೋಗದ ನಡೆಯ ಬಗ್ಗೆ. ಅದು ವಿಪಕ್ಷಗಳು ಕೇಳುತ್ತಿರುವ ಡಿಜಿಟಲ್ ದಾಖಲೆಗಳನ್ನು ಕೊಡುತ್ತಿಲ್ಲ.
ರಾಹುಲ್ ಆರೋಪದ ಬೆನ್ನಲ್ಲೇ ಅದು ಡಿಜಿಟಲ್ ಡೇಟಾ ತೆಗೆದು, ಅದರ ಬದಲಿಗೆ ತ್ವರಿತವಾಗಿ ವಿಶ್ಲೇಷಿಸಲು ಸಾಧ್ಯವಾಗದಂತೆ ಸ್ಕ್ಯಾನ್ ಮಾಡಿದ ಪ್ರತಿಯನ್ನು ಇರಿಸಿತು.
ಸಿಸಿಟಿವಿ ದಾಖಲೆ ಕೇಳಿದರೆ ಮಹಿಳೆಯರ ಗೌಪ್ಯತೆಯ ಪ್ರಶ್ನೆ ಮುಂದೆ ಮಾಡಲಾಯಿತು.
ಈ ಹಾಸ್ಯಾಸ್ಪದ ನಡೆಗಳೆಲ್ಲವೂ ಚುನಾವಣಾ ಆಯೋಗ ಯಾವ ರಾಜಕೀಯದ ಪರ ಕೆಲಸ ಮಾಡುತ್ತಿದೆ ಎಂಬುದನ್ನು ಸ್ಪಷ್ಟವಾಗಿ ಬಯಲು ಮಾಡುತ್ತವೆ.
ಚುನಾವಣಾ ಆಯೋಗ ಮತ್ತು ಅದರ ವ್ಯವಸ್ಥೆಯ ಕಾರ್ಯನಿರ್ವಹಣೆ ಬಗ್ಗೆ ಜನರು ಅನುಮಾನ ವ್ಯಕ್ತಪಡಿಸಲು ಪ್ರಾರಂಭಿಸಿದ್ದಾರೆ. ಅದಕ್ಕಾಗಿಯೇ ವಿರೋಧ ಪಕ್ಷಗಳು ಮತಗಳ್ಳತನದ ಬಗ್ಗೆ ಮಾತನಾಡುತ್ತಿವೆ. ರಾಹುಲ್ ಗಾಂಧಿ ಮತ್ತು ತೇಜಸ್ವಿ ಯಾದವ್ ಮತಗಳ್ಳತನದ ವಿಷಯದೊಂದಿಗೆ ದೃಢವಾಗಿದ್ದಾರೆ.
ಇಲ್ಲಿ ಮೂಲಭೂತ ಪ್ರಶ್ನೆಯೆಂದರೆ, ಒಬ್ಬ ವ್ಯಕ್ತಿಯ ಮತದಾನದ ಹಕ್ಕು ಅಪಾಯದಲ್ಲಿದ್ದರೆ, ಉದ್ಯೋಗ, ವಿದ್ಯುತ್, ರಸ್ತೆಗಳು, ನೀರಿನ ಸಮಸ್ಯೆ ಇನ್ನೂ ಮುಖ್ಯವಾಗುತ್ತವೆಯೇ?
ವಿಪಕ್ಷಗಳು ಈ ಎರಡೂ ವಿಷಯಗಳನ್ನು ಜೋಡಿಸಲು ಪ್ರಯತ್ನಿಸುತ್ತಿವೆ.
‘‘ನಿಮ್ಮ ಮತವನ್ನು ಕದಿಯುವುದರಿಂದಲೇ ನಿಮಗೆ ಅಸಮರ್ಥ ಸರಕಾರ ಸಿಗುತ್ತಿದೆ, ಅದಕ್ಕಾಗಿಯೇ ನಿರುದ್ಯೋಗ ಮತ್ತು ಬಡತನ ತಾಂಡವವಾಡುತ್ತಿವೆ. ಮೊದಲು ನಿಮ್ಮ ಹಕ್ಕನ್ನು ಉಳಿಸಿಕೊಳ್ಳಿ, ಆಗ ಮಾತ್ರ ಉತ್ತಮ ಬದುಕನ್ನು ಕೇಳಲು ಸಾಧ್ಯ’’ ಎಂಬ ನಿರೂಪಣೆಯನ್ನು ಅವರು ಕಟ್ಟಲು ಯತ್ನಿಸುತ್ತಿದ್ದಾರೆ.
ಇದು ತುಂಬಾ ಸಂಕೀರ್ಣವಾದ ಪ್ರಶ್ನೆ.
ಬಿಹಾರದಲ್ಲಿ ನಿರುದ್ಯೋಗ ಬಹಳ ದೊಡ್ಡ ಸಮಸ್ಯೆಯಾಗಿದೆ. ವಲಸೆ ಬಹಳ ದೊಡ್ಡ ಸಮಸ್ಯೆಯಾಗಿದೆ. ಬಿಹಾರದ ಜನರು ಸಾಮಾನ್ಯವಾಗಿ ಉದ್ಯೋಗಕ್ಕಾಗಿ, ಜೀವನೋಪಾಯಕ್ಕಾಗಿ ದೊಡ್ಡ ನಗರಗಳಿಗೆ ಹೋಗುತ್ತಾರೆ.
ನಿರುದ್ಯೋಗ ಅಥವಾ ವಲಸೆ ಅಥವಾ ಶಿಕ್ಷಣ ಅಥವಾ ಆರೋಗ್ಯ - ಇವು ಜನರು ಯಾವಾಗಲೂ ಪ್ರತೀ ಚುನಾವಣೆಯಲ್ಲೂ ಪ್ರತೀ ಸರಕಾರವನ್ನೂ ಪ್ರಶ್ನಿಸಲು ಎತ್ತುವ ವಿಷಯಗಳಾಗಿವೆ. ಆದರೆ ಅದಕ್ಕಿಂತ ದೊಡ್ಡ ಸಮಸ್ಯೆಯನ್ನು ಈಗ ಎತ್ತಲಾಗುತ್ತಿದೆ.
ಪ್ರಜಾಪ್ರಭುತ್ವದ ಹಕ್ಕನ್ನು ನಿರಾಕರಿಸಿದಾಗ, ಮತದಾರನ ಹಕ್ಕನ್ನು ನಿರಾಕರಿಸುತ್ತಿರುವಾಗ, ಮೂಲಭೂತ ಹಕ್ಕನ್ನು ಅತಿಕ್ರಮಿಸಲು ಬಯಸಿದರೆ, ಅದರ ಬಗ್ಗೆ ಮಾತನಾಡುವುದು ಅನಿವಾರ್ಯವಾಗುತ್ತದೆ.
ಬಿಹಾರದಲ್ಲಿ 35-40 ವರ್ಷಗಳಿಂದ ಮತದಾರರಾಗಿರುವವರ ಬಳಿ, 50 ವರ್ಷಗಳಿಂದ ಅಲ್ಲಿ ವಾಸಿಸಿರುವವರ ಬಳಿ ಯಾವುದೇ ಬಿಎಲ್‌ಒ ಬಂದಿಲ್ಲದ ಉದಾಹರಣೆಗಳೂ ಇವೆ. ಇದು ಬಹಳ ದೊಡ್ಡ ಸಮಸ್ಯೆ.
ಪ್ರಜಾಪ್ರಭುತ್ವದ ಹಕ್ಕನ್ನು, ಒಬ್ಬ ವ್ಯಕ್ತಿಯ ಮತದಾನದ ಹಕ್ಕನ್ನು ಕಸಿಯಲು ಬಯಸಿದರೆ, ಅದನ್ನು ಉಳಿಸಿಕೊಳ್ಳುವ ಪ್ರಯತ್ನ ಅನಿವಾರ್ಯವಾಗುತ್ತದೆ.
ಅದನ್ನು ಒಂದು ವಿಷಯವಾಗಿ ಎತ್ತಬೇಕಾಗುತ್ತದೆ.
ಅದಕ್ಕಾಗಿಯೇ ಈ ಯಾತ್ರೆಗೆ ಪ್ರತಿಕ್ರಿಯೆ ಬಹಳ ಪ್ರಭಾವಶಾಲಿಯಾಗಿದೆ.
ಇದೆಲ್ಲದರ ನಡುವೆ, ಬಿಹಾರದಲ್ಲಿನ ಪರಿಸ್ಥಿತಿ ಏನು? ‘ಇಂಡಿಯಾ’ ಮೈತ್ರಿಕೂಟಕ್ಕೆ ಏನಾಗಲಿದೆ?
ಹರ್ಯಾಣದ ಚುನಾವಣೆ ನೋಡಿದರೆ, ಬಿಜೆಪಿ ವಿರೋಧ ಪಕ್ಷದ ಮತಗಳನ್ನು ಚದುರಿಸುವ ಮೂಲಕ ಅಧಿಕಾರಕ್ಕೆ ಬಂತು.
ಬಿಜೆಪಿಯವರು ಅಧಿಕಾರಕ್ಕೆ ಬಹಳ ಹತ್ತಿರದಲ್ಲಿದ್ದರು ಎಂದಲ್ಲ, ಆದರೆ ಅನೇಕ ಸ್ಥಳಗಳಲ್ಲಿ ಬಹಳ ಕಡಿಮೆ ಮತಗಳಿಂದ ಗೆದ್ದರು.
ಇದಕ್ಕಾಗಿ ಸಣ್ಣಪುಟ್ಟ ಪಕ್ಷಗಳನ್ನು, ಸ್ವತಂತ್ರ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಮತ ವಿಭಜನೆಯ ತಂತ್ರವನ್ನು ಬಿಜೆಪಿ ಯಶಸ್ವಿಯಾಗಿ ಬಳಸುತ್ತದೆ ಎಂಬ ಆರೋಪವಿದೆ.
ಬಿಹಾರದಲ್ಲೂ ಇದೇ ಪರಿಸ್ಥಿತಿ ಇದೆ. ವಿರೋಧ ಪಕ್ಷದ ಮತಗಳನ್ನು ಕಡಿತಗೊಳಿಸಲು ಬಿಜೆಪಿ ಹಲವು ಅಸ್ತ್ರಗಳನ್ನು ಹೊಂದಿದೆ.
ಅಸದುದ್ದೀನ್ ಉವೈಸಿಯವರ ಪಕ್ಷ, ಇತರ ಸಣ್ಣ ಜಾತಿ ಆಧಾರಿತ ಪಕ್ಷಗಳು ‘ಇಂಡಿಯಾ’ ಒಕ್ಕೂಟದ ಮತಬ್ಯಾಂಕ್‌ಗೆ ಕನ್ನ ಹಾಕುವ ಸಾಧ್ಯತೆ ಇದೆ.
ಅದೇನೇ ಇದ್ದರೂ, ಇಂಡಿಯಾ ಒಕ್ಕೂಟ ಮತ್ತು ಎನ್‌ಡಿಎ ನಡುವೆ ಬಿರುಸಿನ ಪೈಪೋಟಿ ಇರಲಿದೆ ಎಂಬುದರ ಬಗ್ಗೆ ಹೇಳಲಾಗುತ್ತಿದೆ.
ಒಂದು ಕಡೆ ಮೋದಿಯವರ ವರ್ಚಸ್ಸು, ಕೇಂದ್ರ ಮತ್ತು ರಾಜ್ಯ ಸರಕಾರದ ಅಧಿಕಾರ, ಅಪಾರ ಸಂಪನ್ಮೂಲ ಮತ್ತು ಸಂಘದ ಸಂಘಟನಾತ್ಮಕ ಶಕ್ತಿ ಇವೆ.
ಮತ್ತೊಂದು ಕಡೆ, ನಿತೀಶ್ ಕುಮಾರ್ ಮೇಲಿನ ಆಡಳಿತ ವಿರೋಧಿ ಅಲೆ, ತೇಜಸ್ವಿ ಯಾದವ್ ಅವರ ಹೆಚ್ಚುತ್ತಿರುವ ಜನಪ್ರಿಯತೆ ಮತ್ತು ‘ವೋಟ್ ಚೋರ್’ ಎಂಬ ಭಾವನಾತ್ಮಕ ವಿಷಯಗಳಿವೆ.
ಅಂತಿಮವಾಗಿ, ಬಿಹಾರದ ಮತದಾರರು ತಮ್ಮ ದೈನಂದಿನ ಬದುಕಿನ ಸಮಸ್ಯೆಗಳಿಗೆ ಆದ್ಯತೆ ನೀಡುತ್ತಾರೋ ಅಥವಾ ತಮ್ಮ ಪ್ರಜಾಸತ್ತಾತ್ಮಕ ಹಕ್ಕಿನ ರಕ್ಷಣೆಗಾಗಿ ಬೀದಿಗಿಳಿಯುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ.
ರಾಹುಲ್ ಗಾಂಧಿ ಹಾಗೂ ತೇಜಸ್ವಿ ಯಾದವ್ ಎತ್ತುತ್ತಿರುವ ಪ್ರಶ್ನೆಗಳು ಅತ್ಯಂತ ಮಹತ್ವದವು, ದೇಶದ ಪ್ರಜಾಪ್ರಭುತ್ವವನ್ನು ಉಳಿಸಲು ಅನಿವಾರ್ಯವಾಗಿರುವ ಪ್ರಶ್ನೆಗಳವು.
ಆದರೆ ಅದನ್ನು ಬಿಹಾರದ ಅತ್ಯಂತ ತಳಸ್ತರದಲ್ಲಿರುವ ರೈತರಿಗೆ, ಕಾರ್ಮಿಕರಿಗೆ ರಾಹುಲ್ ಹಾಗೂ ತೇಜಸ್ವಿ ಮನವರಿಕೆ ಮಾಡಬಲ್ಲರೇ ಎಂಬುದು ಬಹಳ ಮುಖ್ಯ.
ಇವರಿಬ್ಬರು ಕೇಳುತ್ತಿರುವ ಪ್ರಶ್ನೆಗಳು ತಮ್ಮ ಉಳಿದೆಲ್ಲ ಅಗತ್ಯಗಳನ್ನು ಪೂರೈಸಲು ಮೂಲಭೂತವಾಗಿ ಬೇಕಾಗಿರುವ ಅಧಿಕಾರದ ಕುರಿತದ್ದು ಎಂಬ ಜಾಗೃತಿ ಬಿಹಾರದ ಸಾಮಾನ್ಯ ಮತದಾರನಿಗೆ ಗೊತ್ತಾಗಬೇಕಿದೆ. ಆ ಜಾಗೃತಿ ಬಂದರೆ ಬಿಹಾರದಲ್ಲಿ ಬಹಳ ದೊಡ್ಡ ಬದಲಾವಣೆ ಕಾಣಲಿದೆ, ಇಲ್ಲದಿದ್ದರೆ ಮತ್ತೊಂದು ಹರ್ಯಾಣ, ಮತ್ತೊಂದು ಮಹಾರಾಷ್ಟ್ರದ ಸ್ಥಿತಿ ಅಲ್ಲೂ ನಿರ್ಮಾಣವಾಗಲಿದೆ
ಈ ಚುನಾವಣೆ ಕೇವಲ ಬಿಹಾರದ ಭವಿಷ್ಯವನ್ನು ಮಾತ್ರವಲ್ಲ, ಭಾರತದ ಪ್ರಜಾಪ್ರಭುತ್ವದ ಭವಿಷ್ಯವನ್ನೂ ನಿರ್ಧರಿಸಲಿದೆ.