ಮತಗಳ್ಳತನ ಆರೋಪ: ಕಾಂಗ್ರೆಸ್‌ನ ಮುಂದಿನ ನಡೆಯೇನು?
ಪ್ರಶ್ನೆಯಿರುವುದು, ನಮ್ಮ ಪ್ರಜಾಪ್ರಭುತ್ವದ ಅಡಿಪಾಯದ ಬಗ್ಗೆ ಮತ್ತು ಪ್ರತೀ ಮತದ ಹಕ್ಕಿನ ಬಗ್ಗೆ.
ಮತಗಳ್ಳತನದ ಆರೋಪ ಸರಿಯಾಗಿದ್ದರೆ, ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷ ನಿಜವಾಗಿಯೂ ಒಂದೊಂದೂ ಪುಟಗಳನ್ನು ಓದಿ ಮಾಡಲಾದ ಸಾವಿರಾರು ಜನರ ಪಟ್ಟಿ ಇದಾಗಿದೆಯೆ? ಅಲ್ಲದೆ, ಈ ವಿಷಯದಲ್ಲಿ ವಿರೋಧ ಪಕ್ಷಗಳೆಲ್ಲ ಒಟ್ಟಿಗೆ ನಿಲ್ಲುವುದು ಸಾಧ್ಯವಾಗುತ್ತದೆಯೇ ಎಂಬುದು ಕೂಡ ಅತ್ಯಂತ ನಿರ್ಣಾಯಕ ಪ್ರಶ್ನೆ.
ಮತಗಳ್ಳತನಕ್ಕೆ ಸಂಬಂಧಿಸಿ ರಾಹುಲ್ ಗಾಂಧಿ ಬೆಚ್ಚಿಬೀಳಿಸುವ ಪುರಾವೆಗಳನ್ನು ಇಟ್ಟಿದ್ದಾರೆ. ಆ ಪುರಾವೆಗಳನ್ನು ಅವರು ಅಣುಬಾಂಬ್ ಎಂದೇ ಕರೆದಿದ್ದಾರೆ. ಈಗ, ರಾಹುಲ್ ಗಾಂಧಿಯವರ ಆರೋಪಗಳು ಸರಿಯೋ ತಪ್ಪೋ ಎಂಬುದು ಪ್ರಶ್ನೆ.
ಸರಿಯಾಗಿದ್ದರೆ, ಅದು ನಮ್ಮ ಪ್ರಜಾಪ್ರಭುತ್ವಕ್ಕೆ ಬಹಳ ಕಳವಳಕಾರಿ ವಿಷಯ. ತಪ್ಪಾಗಿದ್ದರೆ, ಇವಿಎಂ ವಿಚಾರದಲ್ಲಿ ಆದಂತೆಯೇ ಅದೊಂದು ಬರೀ ವ್ಯರ್ಥಾಲಾಪ.
ಇದಕ್ಕೆ ಇನ್ನೊಂದು ಕಡೆಯಿಂದ ಯಾವ ಸ್ಪಷ್ಟೀಕರಣ ಬರಬಹುದು? ಈ ಆರೋಪಗಳು ವಿಫಲವಾಗುತ್ತವೆಯೇ ಅಥವಾ ಚುನಾವಣಾ ಆಯೋಗಕ್ಕೆ ಉತ್ತರಿಸುವುದಕ್ಕೇ ಆಗದಷ್ಟು ಮಟ್ಟಿಗಿನ ಆರೋಪಗಳು ಇವಾಗಿವೆಯೆ?
ಏಕೆಂದರೆ ವಿರೋಧ ಪಕ್ಷಗಳು ಇವಿಎಂಗಳ ಬಗ್ಗೆ ಮಾತನಾಡುತ್ತಿದ್ದಾಗ, ವಾಸ್ತವವಾಗಿ ಇವಿಎಂ ಎಂದಿಗೂ ಸಮಸ್ಯೆಯಾಗಿರಲಿಲ್ಲ ಎಂಬ ವಿಚಾರ ಚರ್ಚೆಯಾಗಿತ್ತು.ಅವುಗಳನ್ನು ದೊಡ್ಡ ಪ್ರಮಾಣದಲ್ಲಿ ತಿರುಚಲು ಸಾಧ್ಯವಿಲ್ಲ ಎಂಬ ವಾದವೂ ಮುನ್ನೆಲೆಗೆ ಬಂದಿತ್ತು.
ರಾಹುಲ್ ಗಾಂಧಿ ಈ ಆರೋಪ ಮಾಡುವಾಗ, ತಪ್ಪು ಡೇಟಾನ್ನು ಸಂಗ್ರಹಿಸಲಾಗಿದೆಯೇ? ಅಥವಾ ಇದು ಕೇವಲ ರಾಜಕೀಯ ಚಾತುರ್ಯವೇ?
ಪ್ರಶ್ನೆಯಿರುವುದು, ನಮ್ಮ ಪ್ರಜಾಪ್ರಭುತ್ವದ ಅಡಿಪಾಯದ ಬಗ್ಗೆ ಮತ್ತು ಪ್ರತೀ ಮತದ ಹಕ್ಕಿನ ಬಗ್ಗೆ.
ಈ ಆರೋಪ ಸರಿಯಾಗಿದ್ದರೆ, ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷ ನಿಜವಾಗಿಯೂ ಒಂದೊಂದೂ ಪುಟಗಳನ್ನು ಓದಿ ಮಾಡಲಾದ ಸಾವಿರಾರು ಜನರ ಪಟ್ಟಿ ಇದಾಗಿದೆಯೆ? ಅಲ್ಲದೆ, ಈ ವಿಷಯದಲ್ಲಿ ವಿರೋಧ ಪಕ್ಷಗಳೆಲ್ಲ ಒಟ್ಟಿಗೆ ನಿಲ್ಲುವುದು ಸಾಧ್ಯವಾಗುತ್ತದೆಯೇ ಎಂಬುದು ಕೂಡ ಅತ್ಯಂತ ನಿರ್ಣಾಯಕ ಪ್ರಶ್ನೆ.
ಗುರುವಾರ ರಾಹುಲ್ ಗಾಂಧಿಯವರು ಬಹಳ ಮಹತ್ವದ ಪತ್ರಿಕಾಗೋಷ್ಠಿ ನಡೆಸಿದರು. ೨೦೨೪ರ ಲೋಕಸಭಾ ಚುನಾವಣಾ ದತ್ತಾಂಶದ ವಿಶ್ಲೇಷಣೆಯನ್ನು ಮಾಧ್ಯಮಗಳೆದುರು ಅತ್ಯಾಧುನಿಕ ಶೈಲಿಯಲ್ಲಿ ಮುಂದಿಟ್ಟರು.
ಕೇವಲ ೫ ತಿಂಗಳಲ್ಲಿ ಮಹಾರಾಷ್ಟ್ರದಲ್ಲಿ ೧ ಕೋಟಿ ಹೊಸ ಮತದಾರರನ್ನು ಹೇಗೆ ಸೇರಿಸಲಾಗಿದೆ ಎಂಬುದನ್ನು ರಾಹುಲ್ ಹೇಳಿದ್ದಾರೆ. ಇದು ೫ ವರ್ಷಗಳಲ್ಲಿ ಸೇರ್ಪಡೆಯಾದ ಸಂಖ್ಯೆಗಿಂತ ಹೆಚ್ಚು.
ಚುನಾವಣಾ ಆಯೋಗವು ಎಲ್ಲಾ ಸಮೀಕ್ಷೆಯ ದತ್ತಾಂಶ ಮತ್ತು ಮತದಾರರ ಪಟ್ಟಿಯ ಸಾಫ್ಟ್ ಕಾಪಿ ನೀಡಲು ನಿರಾಕರಿಸಿತು. ಬದಲಾಗಿ, ಆಯೋಗ ನೀಡಿದ ಸಾವಿರಾರು ಪುಟಗಳ ದಾಖಲೆ ಆಪ್ಟಿಕಲ್ ಕ್ಯಾರೆಕ್ಟರ್ ರೆಕಗ್ನಿಷನ್ ಯಂತ್ರದ ಮೂಲಕ ಓದಲು ಆಗದಂಥದ್ದು. ೭ ಅಡಿ ಎತ್ತರದಷ್ಟಿದ್ದ ಆ ದಾಖಲೆಗಳನ್ನು ಸ್ವತಃ ಓದಿ ವಿಶ್ಲೇಷಿಸಬೇಕಾಗಿತ್ತು.
ಸಂಜೆ ೫ ಗಂಟೆಯ ನಂತರ ಮತದಾನದ ಪ್ರಮಾಣ ಹೆಚ್ಚಾಗುವುದು ಹೇಗೆಂಬ ಪ್ರಶ್ನೆಯನ್ನೂ ರಾಹುಲ್ ಎತ್ತಿದ್ದಾರೆ.
ರಾಹುಲ್ ಅವರು ಹೊಸದಾಗಿ ಹೇಳಿರುವ ವಿಷಯ, ಕರ್ನಾಟಕದ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಲಕ್ಷ ಮತಗಳನ್ನು ಕದಿಯಲಾಗಿದೆ ಎಂಬುದು.
ಇದು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ. ಕಾಂಗ್ರೆಸ್ ಇಲ್ಲಿ ಮತಗಳ್ಳತನ ನಡೆದಿರುವುದು ಖಚಿತವಾಗಿದೆ ಎಂದು ಹೇಳುತ್ತದೆ.
೧ ಲಕ್ಷ ೨೫೦ ಮತಗಳು ನಕಲಿ ಎಂಬುದು ರಾಹುಲ್ ಅವರ ಆರೋಪ. ರಾಹುಲ್ ಹೀಗೆ ಹೇಳುವಾಗ, ಪ್ರತೀ ಮತದ ವಿಭಜನೆಯನ್ನು ನೀಡಿದ್ದಾರೆ.
೧೧,೯೬೫ ನಕಲಿ ಮತದಾರರು ಎಂದು ರಾಹುಲ್ ಹೇಳುತ್ತಾರೆ. ಅವರ ಹೆಸರು ಹಲವು ಮತಗಟ್ಟೆಗಳಲ್ಲಿ ಹಲವಾರು ಬಾರಿ ಬರುತ್ತಿದೆ. ಬೇರೆ ಬೇರೆ ಮತಗಟ್ಟೆಗಳಲ್ಲಿ ಅದೇ ಮತದಾರರು ಮತದಾನ ಮಾಡುತ್ತಾರೆ ಎಂಬುದನ್ನು ಹೇಳಿದ್ದಾರೆ.
ಆದಿತ್ಯ ಶ್ರೀವಾಸ್ತವ ಎನ್ನುವ ವ್ಯಕ್ತಿಯ ಬಗ್ಗೆ ರಾಹುಲ್ ಪ್ರಸ್ತಾಪಿಸುತ್ತಾರೆ. ಬೂತ್ ಸಂಖ್ಯೆ ೪೫೮ರಲ್ಲಿ ಮತ ಚಲಾ ಯಿಸುವ ಈ ವ್ಯಕ್ತಿಯೇ ಮತ್ತೆ ಬೂತ್ ಸಂಖ್ಯೆ ೪೫೯ರಲ್ಲಿ ಮತ ಚಲಾಯಿಸುವುದು, ಅದೇ ವ್ಯಕ್ತಿ ಕರ್ನಾಟಕದಲ್ಲಿ ಮಾತ್ರವಲ್ಲದೆ, ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದಲ್ಲೂ ಕಾಣಿಸಿಕೊಳ್ಳುವುದರ ಬಗ್ಗೆ ರಾಹುಲ್ ಹೇಳಿದ್ದಾರೆ.
ಇನ್ನು ನಕಲಿ ಅಥವಾ ಅಸ್ತಿತ್ವದಲ್ಲಿಲ್ಲದ ವಿಳಾಸಗಳನ್ನು ಹೊಂದಿರುವ ೪೦,೦೦೯ ಮತದಾರರ ಬಗ್ಗೆ ಹೇಳಿದ್ದಾರೆ.ಒಂದೇ ವಿಳಾಸದಲ್ಲಿ ಬೃಹತ್ ಸಂಖ್ಯೆಯಲ್ಲಿ ಕಂಡ ೧೦,೪೫೨ ಮತದಾರರ ಬಗ್ಗೆ ಕೂಡ ಅವರು ಹೆಳಿದ್ದಾರೆ.
೮೦ ಜನರು ಒಂದೇ ಕೋಣೆಯ ಮನೆಯ ವಿಳಾಸದಲ್ಲಿದ್ದುದನ್ನು ಹೇಳಿದ್ದಾರೆ.
ಇನ್ನು, ಗುರುತಿಸಲಾಗದ ಕಳಪೆ ಫೋಟೊ ಹೊಂದಿದ್ದ ೪,೧೩೨ ಮತದಾರರ ಬಗ್ಗೆಯೂ ಹೇಳಿದ್ದಾರೆ.
ಫಾರ್ಮ್ ೬ ದುರ್ಬಳಕೆ ಮಾಡಿಕೊಂಡ ೩೩,೬೯೨ ಪ್ರಕರಣಗಳ ಬಗ್ಗೆಯೂ ರಾಹುಲ್ ಹೇಳಿದ್ದಾರೆ. ಮೊದಲ ಸಲ ಮತದಾನಕ್ಕೆ ನೋಂದಾಯಿಸಿಕೊಳ್ಳಬೇಕಾದವರ ಫಾರ್ಮ್ ಬಳಸಿದ್ದವರಲ್ಲಿ ೭೦ ವರ್ಷ, ೮೦ ವರ್ಷ ವಯಸ್ಸಿನವರೂ ಇದ್ದಾರೆ ಎಂಬುದು ಅವರ ಆರೋಪ. ೧೮ರಿಂದ ೨೩ ವರ್ಷ ವಯಸ್ಸಿನವರಿಗೆ ಮಾತ್ರ ಇರುವ ಫಾರ್ಮ್ ೬ ಅನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎನ್ನುತ್ತಾರೆ.
ರಾಹುಲ್ ಗಾಂಧಿ ಅವರು ಕೇವಲ ಒಂದು ಕ್ಷೇತ್ರಕ್ಕೆ ಸೀಮಿತವಾಗಿಸಿ ಇಂಥದೊಂದು ಮತಗಳ್ಳತನದ ಚಿತ್ರ ಕೊಟ್ಟಿದ್ದಾರೆ. ಬಿಜೆಪಿ ಗೆದ್ದ ೨೫ ಕ್ಷೇತ್ರಗಳಲ್ಲಿಯೂ ಹೀಗೆಯೇ ಆಗಿರಬಹುದು ಎಂಬ ಅನುಮಾನವನ್ನೂ ಅವರು ವ್ಯಕ್ತಪಡಿಸಿದ್ದಾರೆ.
೨೫ ಕ್ಷೇತ್ರಗಳನ್ನು ಬಿಜೆಪಿ ೩೩,೦೦೦ ಮತಗಳ ಆಸುಪಾಸಿನ ಅಂತರದಿಂದ ಗೆದ್ದಿದೆ. ಹಾಗಾಗಿ ಇಷ್ಟೊಂದು ಕ್ಷೇತ್ರದಲ್ಲಿ ಇದೇ ರೀತಿ ನಡೆದರೆ ಲೋಕಸಭಾ ಚುನಾವಣೆ ಹೇಗೆ ತಿರುವು ಮುರುವಾಗಬಹುದು ಎಂಬುದನ್ನು ಊಹಿಸಬಹುದು.
ಅಂದರೆ, ೨೦೨೪ರ ಚುನಾವಣೆಯಲ್ಲಿನ ಗೆಲುವನ್ನು ಕದಿಯಲಾಗಿದೆಯೆ? ಈ ಗೆಲುವು ಕದ್ದಿರುವ ಮತಗಳಿಂದಲೇ ಆಗಿತ್ತೇ?
ಮಹದೇವಪುರದ ಚಿತ್ರಣ ತುಂಬಾ ಕುತೂಹಲಕಾರಿ ಯಾಗಿದೆ. ಇಲ್ಲಿ ಇಡೀ ಚುನಾವಣಾ ವ್ಯವಸ್ಥೆ ಮತ್ತು ಚುನಾವಣಾ ಆಯೋಗ ರಾಜಿ ಮಾಡಿಕೊಂಡಿದೆ ಎಂಬ ಗಂಭೀರ ಆರೋಪವನ್ನು ಕಾಂಗ್ರೆಸ್ ಮಾಡಿದೆ.
ಈಗ ಪ್ರಶ್ನೆಯೆಂದರೆ, ಈ ಅಣುಬಾಂಬ್ ಆರೋಪ ನಿಲ್ಲುತ್ತದೆಯೇ ಅಥವಾ ಇಲ್ಲವೇ ಎಂಬುದು.
ಇಷ್ಟು ದೊಡ್ಡ ಆರೋಪದ ನಂತರ, ಚುನಾವಣಾ ಆಯೋಗ ಪ್ರತಿಯೊಂದು ಅಂಶಕ್ಕೂ ಒಂದೊಂದಾಗಿ ಉತ್ತರ ಕೊಡುವ ಮೂಲಕ ಸ್ಪಷ್ಟಪಡಿಸಬಹುದಿತ್ತು. ಆದರೆ, ಚುನಾವಣಾ ಆಯೋಗ ಈಗಾಗಲೇ ಬಹಳಷ್ಟು ಬಗೆಯಲ್ಲಿ ಹೆಸರು ಕೆಡಿಸಿಕೊಂಡಿದೆ.
ಕಳೆದ ಹಲವಾರು ತಿಂಗಳುಗಳಿಂದ, ಹಾಗೆ ನೋಡಿದರೆ ಹಲವಾರು ವರ್ಷಗಳಿಂದ ಚುನಾವಣಾ ಆಯೋಗ ಅನೇಕ ಪ್ರಶ್ನೆಗಳಿಗೆ ಉತ್ತರಿಸುವುದನ್ನು ನಿಲ್ಲಿಸಿದೆ.
ಅದು ಡಿಜಿಟಲ್ ಮತದಾರರ ಪಟ್ಟಿಯನ್ನೂ ಕೊಡುತ್ತಿಲ್ಲ.ವೀಡಿಯೊ ನೀಡುವುದಕ್ಕೂ ನಿರಾಕರಿಸುತ್ತಿದೆ. ಸಂಜೆ ೬ ಗಂಟೆಯ ನಂತರ ಮತದಾರರ ಸಂಖ್ಯೆ ಹೇಗೆ ಇದ್ದಕ್ಕಿದ್ದಂತೆ ಹೆಚ್ಚಾಗುತ್ತದೆ ಎಂಬುದಕ್ಕೂ ಅದು ಉತ್ತರಿಸುವುದಿಲ್ಲ.
ಕಾನೂನಿನ ಪ್ರಕಾರ ಅಗತ್ಯವಿರುವ ಫಾರ್ಮ್ ೧೭ಸಿ ಅನ್ನು ಅಪ್‌ಲೋಡ್ ಮಾಡುವುದು ಕಡ್ಡಾಯವಲ್ಲ ಎನ್ನುತ್ತಿದೆ.ವಿವಿಪಾಟ್ ಸ್ಲಿಪ್‌ಗಳನ್ನು ಎಣಿಸುವ ಅಗತ್ಯವಿಲ್ಲ ಎನ್ನುತ್ತಿದೆ.
ಈಗಾಗಲೇ ಇಷ್ಟೆಲ್ಲ ಅನುಮಾನಗಳಿಗೆ ಆಸ್ಪದ ಮಾಡಿಕೊಟ್ಟಿರುವ ಆಯೋಗ, ರಾಹುಲ್ ಗಾಂಧಿ ಎತ್ತಿರುವ ಪ್ರಶ್ನೆಗಳಿಗೆ ಉತ್ತರಿಸಿದ್ದರೆ, ಅದರ ವಿಶ್ವಾಸಾರ್ಹತೆ ಹೆಚ್ಚಾಗುತ್ತಿತ್ತು. ಆದರೆ ಕರ್ನಾಟಕದ ಚುನಾವಣಾ ಆಯೋಗ ರಾಹುಲ್ ಪತ್ರಿಕಾಗೋಷ್ಠಿಯ ನಂತರ, ಅಫಿಡವಿಟ್ ಮೂಲಕ ಇದನ್ನು ಸಲ್ಲಿಸುವಂತೆ ಅವರನ್ನು ಕೇಳಿತು.
ಆದರೆ ಪ್ರಶ್ನೆಯೆಂದರೆ, ರಾಹುಲ್ ಗಾಂಧಿ ಮಾಡಿದ ಆರೋಪಗಳು ತಪ್ಪು ಎಂದು ಚುನಾವಣಾ ಆಯೋಗ ಎಲ್ಲಿಯೂ ಹೇಳಿಲ್ಲ. ಸಾರ್ವಜನಿಕರನ್ನು ದಾರಿ ತಪ್ಪಿಸಲು ಪ್ರಯತ್ನಿಸಲಾಗುತ್ತಿದೆ. ಅದು ರೂಲ್ ಬುಕ್ ಅನ್ನು ಮುಂದಿಡುತ್ತಿದೆ. ಆದರೆ ಕೆಲವು ತಜ್ಞರು ರೂಲ್ ಬುಕ್ ಕೂಡ ತಪ್ಪು ಎಂದು ಹೇಳುತ್ತಿದ್ದಾರೆ.
ಯಾಕಾಗಿ ಆಯೋಗ ಅಫಿಡವಿಟ್ ಸಲ್ಲಿಸಲು ಕೇಳುತ್ತಿದೆ ಎನ್ನುವುದು ಕೂಡ ಪ್ರಶ್ನೆಯಾಗಿದೆ. ಇದು ದುರಹಂಕಾರದ ಪ್ರದರ್ಶನದಂತೆಯೂ ಕಾಣುತ್ತಿದೆ.
ಮತ್ತೊಂದೆಡೆ, ಬಿಜೆಪಿ ಮತ್ತು ಚುನಾವಣಾ ಆಯೋಗ ಪರಸ್ಪರ ತಾಳಮೇಳ ಇರುವಂತೆಯೂ ತೋರುತ್ತದೆ.
ಏಕೆಂದರೆ, ಚುನಾವಣಾ ಪ್ರಕ್ರಿಯೆಯನ್ನು ಈ ರೀತಿ ಪ್ರಶ್ನಿಸಲು ಸಾಧ್ಯವಿಲ್ಲ ಎಂದು ಚುನಾವಣಾ ಆಯೋಗ ಹೇಳುತ್ತಿರುವುದು ಬಿಜೆಪಿ ಹೇಳುತ್ತಿರುವಂತೆಯೇ ಇದೆ.
ನೀವು ಪ್ರಜಾಪ್ರಭುತ್ವವನ್ನು ಅಪಾಯಕ್ಕೆ ಸಿಲುಕಿಸಲು ಸಾಧ್ಯವಿಲ್ಲ ಎಂದು ಹೇಳಿಕೆ ನೀಡಲಾಗುತ್ತಿದೆ. ಆದರೆ ರಾಹುಲ್ ಗಾಂಧಿ ತಪ್ಪು ಹೇಳಿದ್ದಾರೆ ಎಂಬುದಕ್ಕೆ ಯಾವುದೇ ಸ್ಪಷ್ಟ ಪುರಾವೆಗಳನ್ನು ನೀಡಲಾಗುತ್ತಿಲ್ಲ.
ಆಲ್ಟ್ ನ್ಯೂಸ್ ಫ್ಯಾಕ್ಟ್-ಚೆಕ್ ಮಾಡಿದಾಗ, ಆದಿತ್ಯ ಶ್ರೀವಾಸ್ತವ ಬಗ್ಗೆ ರಾಹುಲ್ ಹೇಳಿರುವುದು ಸಂಪೂರ್ಣವಾಗಿ ಸರಿಯಾಗಿದೆ ಎಂದು ಕಂಡುಬಂದಿದೆ. ಅವರ ಹೆಸರನ್ನು ಹುಡುಕಿ ದಾಗ, ಅದು ಲಕ್ನೋ ಪೂರ್ವದಲ್ಲಿ ಕಂಡುಬಂದಿದೆ.ಅದು ಮುಂಬೈ ಉಪನಗರದಲ್ಲಿಯೂ ಕಂಡುಬಂದಿದೆ. ಆನಂತರ, ಅದು ಕರ್ನಾಟಕದ ಎರಡು ಸ್ಥಳಗಳಲ್ಲಿ ಕಂಡುಬಂದಿದೆ.
ಆದ್ದರಿಂದ ಇಲ್ಲಿ ಸ್ಪಷ್ಟವಾಗಿ ಕೆಲವು ಸಮಸ್ಯೆಗಳಿವೆ.ಈಗ ಇದನ್ನು ರಾಜಕೀಯ ಮಾಡಲಾಗುತ್ತಿದೆ ಎಂದು ಆರೋಪಿಸಬಹುದಾದರೂ, ಹೀಗೆ ಒಬ್ಬನೇ ವ್ಯಕ್ತಿಯ ಹೆಸರು ಹಲವು ಕಡೆಗಳಲ್ಲಿವೆ ಎಂಬುದು ನಿಜ ಮತ್ತಿದು ತುಂಬಾ ನಾಚಿಕೆಗೇಡು.
ಚುನಾವಣಾ ಆಯೋಗ ನಕಲಿ ಮತದಾರರ ಸಮಸ್ಯೆ ಬಗ್ಗೆ ತನಿಖೆ ನಡೆಸಬೇಕೆಂದು ಒಪ್ಪಿಕೊಂಡಿತ್ತು. ಆದರೆ ನಂತರ ಸದ್ದಿಲ್ಲದೆ ಅದನ್ನು ಮರೆಸಲಾಯಿತು. ಅದರ ಬಗ್ಗೆ ಯಾವುದೇ ಚರ್ಚೆ ನಡೆಯಲಿಲ್ಲ.
ಕೆಲವು ತಿಂಗಳ ಹಿಂದೆ ಸಿಸಿಟಿವಿ ವಿಷಯವನ್ನು ಕೇಳಿದಾಗ, ಚುನಾವಣಾ ಆಯೋಗ ನಿಯಮವನ್ನೇ ಬದಲಾಯಿಸಿತು. ಯಾವುದೇ ಮತಗಟ್ಟೆ ದೃಶ್ಯಗಳನ್ನು ನೀಡುವುದಿಲ್ಲ ಎಂದು ಚುನಾವಣಾ ಆಯೋಗ ಹೇಳಿತು.
ಆಧಾರ್, ವೋಟರ್ ಐಡಿ, ಪಡಿತರ ಚೀಟಿಯನ್ನು ಅಧಿಕೃತ ದಾಖಲೆಯಾಗಿ ತೆಗೆದುಕೊಳ್ಳಲು ಕೂಡ ಅದು ನಿರಾಕರಿಸುತ್ತಿದೆ. ವಿವಿಪಾಟ್ ಸ್ಲಿಪ್ ಎಣಿಸುವ ವಿಷಯವನ್ನು ಕೂಡ ಚುನಾವಣಾ ಆಯೋಗ ಪದೇ ಪದೇ ನಿರಾಕರಿಸಿದೆ. ಆದ್ದರಿಂದ ಹಲವು ಪ್ರಶ್ನೆಗಳು ಇದ್ದೇ ಇವೆ.
ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಬಿಹಾರದಲ್ಲಿ ಏನಾಗುತ್ತಿದೆ ಎಂಬುದು ಬಯಲಾಗುತ್ತಲೇ ಇದೆ.
ಪತ್ರಕರ್ತ ಅಜಿತ್ ಅಂಜುಮ್ ಈ ಬಗ್ಗೆ ಸಾಕಷ್ಟು ತನಿಖೆ ನಡೆಸಿದ್ದಾರೆ. ಅದಕ್ಕಾಗಿ ಅಜಿತ್ ಅಂಜುಮ್ ವಿರುದ್ಧ ಎಫ್‌ಐಆರ್ ಅನ್ನೂ ದಾಖಲಿಸಲಾಯಿತು.
ಸುಪ್ರೀಂ ಕೋರ್ಟ್ ಈಗ ಚುನಾವಣಾ ಆಯೋಗಕ್ಕೆ, ಅಳಿಸಲಾದ ೬೫ ಲಕ್ಷ ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡುವಂತೆ ಹೇಳಿದೆ. ಈಗ ಅದು ಏನು ಮಾಡಲಿದೆ ಎಂಬುದನ್ನು ನೋಡಬೇಕಿದೆ.
ಒಬ್ಬ ವ್ಯಕ್ತಿ ನಾಲ್ಕು ಸ್ಥಳಗಳಲ್ಲಿ ನೋಂದಾಯಿಸಿಕೊಳ್ಳುತ್ತಿದ್ದಾನೆ ಮತ್ತು ಇನ್ನೊಂದು ಸ್ಥಳದಲ್ಲಿ ೬೫ ಲಕ್ಷ ಜನರ ಹೆಸರನ್ನು ಅಳಿಸಲಾಗಿದೆ ಎಂಬುದು ಏನನ್ನು ಹೇಳುತ್ತದೆ? ೮೦ ಜನರು ಒಂದೇ ವಿಳಾಸದಲ್ಲಿರುವುದು ಹೇಗೆ ಸಾಧ್ಯ ಎಂದು ಕೂಡ ನೋಡಲಾರದಂಥ ಸ್ಥಿತಿ ಚುನಾವಣಾ ಆಯೋಗದ ಮುಂದಿದೆಯೆ?
ಹೀಗಿರುವಾಗ, ಅದು ರಾಹುಲ್ ಗಾಂಧಿಯವರಿಗೆ ಅಫಿಡವಿಟ್ ಸಲ್ಲಿಸಲು ಏಕೆ ಕೇಳುತ್ತಿದೆ?
ರಾಹುಲ್ ಇದೆಲ್ಲ ಆರೋಪ ಮಾಡಿದಾಗ, ನೀವು ಹೇಳುತ್ತಿರುವುದರ ಬಗ್ಗೆ ಪರಿಶೀಲಿಸುತ್ತೇವೆ ಎಂದು ಒಂದು ಮಾತು ಹೇಳಿದ್ದರೂ, ಆಯೋಗ ಅಷ್ಟರ ಮಟ್ಟಿಗೆ ತನ್ನ ಘನತೆ ಕಾಯ್ದುಕೊಳ್ಳಬಹುದಿತ್ತು. ಆದರೆ ಅದು ಪ್ರತಿಕ್ರಿಯಿಸುವ ರೀತಿಯೇ ಅಸಂಬದ್ಧವಾಗಿದೆ. ಇದರಿಂದಾಗಿಯೇ ಅದು ಈಗಾಗಲೇ ವಿಶ್ವಾಸಾರ್ಹತೆಯನ್ನೇ ಕಳೆದುಕೊಂಡಿದೆ.
ಇಲ್ಲಿ ಕಾಂಗ್ರೆಸ್ ಪಕ್ಷಕ್ಕೂ ಕೇಳಬಹುದಾದ ಪ್ರಶ್ನೆಯೆಂದರೆ, ಈ ಮತದಾರರ ಪಟ್ಟಿಯನ್ನು ಚುನಾವಣೆಗೆ ಮೊದಲು ಎಲ್ಲಾ ಪಕ್ಷಗಳಿಗೆ ನೀಡಿದ್ದಾಗ, ಕಾಣೆಯಾದ ವಿಳಾಸಗಳು, ನಕಲಿ ಉಲ್ಲೇಖಗಳು, ಫೋಟೊಗಳನ್ನೆಲ್ಲ ಆಗ ಏಕೆ ಗುರುತಿಸಲಿಲ್ಲ ಎಂಬುದು.
ಕರ್ನಾಟಕದಲ್ಲಿ ಇದೆಲ್ಲವೂ ನಡೆದಿದ್ದರೆ, ಆಗ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿತ್ತು. ಚುನಾವಣಾ ಆಯೋಗದ ವ್ಯವಸ್ಥೆ ರಾಜ್ಯ ಮಟ್ಟದ ಅಧಿಕಾರಿಗಳ ಮೇಲೆ ಅವಲಂಬಿತವಾಗಿದೆ. ಹಾಗಿರುವಾಗ, ರಾಜ್ಯ ಸರಕಾರದ ಅಧಿಕಾರಿಗಳೂ ಈ ಎಲ್ಲಾ ಕೆಲಸದಲ್ಲಿ ಭಾಗಿಯಾಗಿದ್ದರೆ ಎಂಬ ಪ್ರಶ್ನೆ ಏಳುತ್ತದೆ. ಅಧಿಕಾರದಲ್ಲಿದ್ದಾಗ ಅದನ್ನು ಏಕೆ ಕಂಡುಕೊಳ್ಳಲಿಲ್ಲ ಎಂಬ ಮತ್ತೊಂದು ಪ್ರಶ್ನೆಯೂ ಬರುತ್ತದೆ.
ಬಿಜೆಪಿ ಈ ಹಗರಣವನ್ನು ಮಾಡಿದ್ದರೆ, ಅದು ಪಶ್ಚಿಮ ಬಂಗಾಳ, ತಮಿಳುನಾಡು, ಕರ್ನಾಟಕವನ್ನೂ ಗೆಲ್ಲಬೇಕಿತ್ತಲ್ಲವೆ ಎಂಬ ಪ್ರಶ್ನೆಯೂ ತಲೆದೋರುತ್ತದೆ.
ರಾಹುಲ್ ಗಾಂಧಿ ಈ ವಿಷಯವನ್ನು ನ್ಯಾಯಾಲಯಕ್ಕೆ ಕೊಂಡೊಯ್ಯುತ್ತಾರೋ ಇಲ್ಲವೋ ಎಂಬುದು ಸ್ಪಷ್ಟವಾಗಿಲ್ಲ. ಏಕೆಂದರೆ ನ್ಯಾಯಾಲಯದಲ್ಲಿ ಅವರಿಗೆ ನಕಾರಾತ್ಮಕ ತೀರ್ಪು ಬಂದರೆ, ಬಹುಶಃ ಅದು ಅವರಿಗೆ ರಾಜಕೀಯವಾಗಿ ದೊಡ್ಡ ಹೊಡೆತವಾಗಬಹುದು.
ಹಾಗಾದರೆ ಕಾಂಗ್ರೆಸ್ ಈಗ ಈ ವಿಷಯವನ್ನು ಹೇಗೆ ಮುಂದಕ್ಕೆ ಕೊಂಡೊಯ್ಯುತ್ತದೆ? ಅದನ್ನು ಕಾನೂನುಬದ್ಧವಾಗಿ ಮುಂದಕ್ಕೆ ಕೊಂಡೊಯ್ಯುತ್ತದೆಯೇ ಅಥವಾ ಅದನ್ನು ರಾಜಕೀಯ ವಿಷಯವನ್ನಾಗಿ ಮಾಡಲು ಪ್ರಯತ್ನಿಸಿ ‘ಇಂಡಿಯಾ’ ಮೈತ್ರಿಕೂಟ ಒಗ್ಗೂಡಿ ಈ ಕೆಲಸವನ್ನು ಮುಂದುವರಿಸುತ್ತದೆಯೇ?