ಜಿನ್‌ಪಿಂಗ್ ಕೈಕುಲುಕುವಾಗ ಮೋದಿ ಹಿಂದಿನದ್ದೆಲ್ಲವನ್ನೂ ಮರೆತರೇ?
ಪ್ರಧಾನಿ ಮೋದಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಭೇಟಿಯಾಗಿದ್ದಾರೆ. ಅವರ ಕೈಕುಲುಕುತ್ತ ಫೋಟೊಗಳಲ್ಲಿ ಮಿಂಚಿದ್ದಾರೆ.
2014ಕ್ಕಿಂತ ಮೊದಲು ಮಾತಾಡಿದ್ದು ಅವರಿಗೆ ನೆನಪಿಲ್ಲವೇ ಎಂಬ ಅನುಮಾನ ಈಗ ಕಾಡುವಂತಾಗಿದೆ.
ಆಗ ಅವರು ನಮ್ಮ ಸೈನಿಕರು ಹತರಾದದ್ದರ ಬಗ್ಗೆ ಆಕ್ರೋಶದಿಂದ ಹೇಳಿದ್ದರು. ಕಾಂಗ್ರೆಸ್ ಸರಕಾರ ಶಿಷ್ಟಾಚಾರದ ಉಲ್ಲೇಖ ಮಾಡುತ್ತಿದೆ ಎಂದು ಟೀಕಾ ಪ್ರಹಾರ ನಡೆಸಿದ್ದರು.
ಆದರೆ ಮೋದಿ ಸರಕಾರದ ಅವಧಿಯಲ್ಲೇ ನಮ್ಮ 21 ಸೈನಿಕರು ಗಾಲ್ವಾನ್ ಕಣಿವೆಯಲ್ಲಿ ಹತರಾದರು. ಚೀನಾ ಭಾರತದ ನೆಲವನ್ನು ಆಕ್ರಮಿಸಿಕೊಂಡಿರುವ ಅನುಮಾನಗಳೆದ್ದವು.
ಈಗ ಮೋದಿ ಜಿನ್‌ಪಿಂಗ್ ಅವರನ್ನು ಭೇಟಿಯಾಗಿ ಕೈ ಕುಲುಕುತ್ತಿದ್ದಾರೆ.
ಯಥಾ ಪ್ರಕಾರ ಮಡಿಲ ಮೀಡಿಯಾ ಇದನ್ನು ಕೂಡ ಮೋದಿಯವರ ಮಹಾ ಸಾಧನೆ ಎನ್ನುತ್ತಿದೆ. ಏನೇನೋ ಬಣ್ಣ ಬಣ್ಣದ ಗ್ರಾಫಿಕ್ಸ್‌ಗಳನ್ನು ತೋರಿಸಿ ಜನರನ್ನು ಮರುಳು ಮಾಡುವ ಪ್ರಯತ್ನ ಮಡಿಲ ಮೀಡಿಯಾಗಳಲ್ಲಿ ಜೋರಾಗಿ ನಡೆದಿದೆ. ಈ ಗ್ರಾಫಿಕ್ಸ್‌ಗಳಲ್ಲಿ ಮೋದಿ ಹಾಗೂ ಜಿನ್ ಪಿಂಗ್ ಇಬ್ಬರೂ ಸೂಪರ್ ಮ್ಯಾನ್‌ಗಳಾಗಿ, ಹೀರೋಗಳಾಗಿ, ಇನ್ನೂ ಏನೇನೋ ಆಗಿ ಮಿಂಚುತ್ತಿದ್ದಾರೆ. ಆ ಗ್ರಾಫಿಕ್ಸ್‌ಗಳಲ್ಲಿ ಟ್ರಂಪ್ ವಿಲನ್ ಆಗಿ ಕಾಣುತ್ತಿದ್ದಾರೆ. ಇದನ್ನು ಟ್ರಂಪ್ ವಿರುದ್ಧದ ಭಾರೀ ದೊಡ್ಡ ನಡೆ ಎಂದೆಲ್ಲ ಕೊಚ್ಚಿಕೊಳ್ಳಲಾಗುತ್ತಿದೆ.
ಹಾಗಾದರೆ ಟ್ರಂಪ್ ಅಧ್ಯಕ್ಷರಾದಾಗ ಇವೇ ಮಡಿಲ ಮೀಡಿಯಾಗಳು ತೋರಿಸಿದ್ದ ಗ್ರಾಫಿಕ್ಸ್ ಏನಾಗಿತ್ತು? ಆಗ ಹೇಗೆ ಟ್ರಂಪ್ ಹಾಗೂ ಮೋದಿ ಹೀರೋಗಳಾಗಿ ಜಿನ್ ಪಿಂಗ್ ವಿಲನ್ ಆಗಿದ್ದರು?
ಟ್ರಂಪ್ ಅಧಿಕಾರಕ್ಕೆ ಬಂದಾಗ, ಜಿನ್‌ಪಿಂಗ್ ಉದ್ವಿಗ್ನರಾಗಿದ್ದಾರೆ ಎಂದಿದ್ದ ಅದೇ ಮಡಿಲ ಮೀಡಿಯಾ, ಈಗ ಟ್ರಂಪ್ ಉದ್ವಿಗ್ನರಾಗಿದ್ದಾರೆ ಎಂದು ಹಾಸ್ಯಾಸ್ಪದವಾಗಿ ಅಬ್ಬರಿಸುತ್ತಿದೆ.
ಭಾರತ ಈಗ ಚೀನಾದ ಜೊತೆ ಕೈಕುಲುಕುತ್ತಿರುವಾಗ, ಚೀನಾವನ್ನು ಎಷ್ಟು ನಂಬಬಹುದು ಎಂಬುದು ದೊಡ್ಡ ಪ್ರಶ್ನೆ.
ದೇಶದ ಜನರನ್ನು ಇನ್ನೂ ಎಷ್ಟು ಮೂರ್ಖರನ್ನಾಗಿಸಲಾಗುತ್ತದೆ?
ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿಯ ಹಿಂದಿದ್ದ ಪಾಕಿಸ್ತಾನವನ್ನು ಬೆಂಬಲಿಸಿದ, ಆಪರೇಷನ್ ಸಿಂಧೂರ ವೇಳೆ ಪಾಕಿಸ್ತಾನವನ್ನು ಬೆಂಬಲಿಸಿದ ಅದೇ ಚೀನಾದೊಂದಿಗೆ ಇವತ್ತು ಪ್ರಧಾನಿ ಮೋದಿ ನಿಂತಿದ್ದಾರೆ ಮತ್ತು ಇಡೀ ಮಡಿಲ ಮೀಡಿಯಾ ಅದನ್ನು ಕೊಂಡಾಡುತ್ತಿದೆ.
ಆಪರೇಷನ್ ಸಿಂಧೂರ ಸಮಯದಲ್ಲಿ ಅವು ಒಮ್ಮೆಯೂ ಚೀನಾದ ಪಾತ್ರವನ್ನು ಪ್ರಶ್ನಿಸಲಿಲ್ಲ.
ಆಪರೇಷನ್ ಸಿಂಧೂರದ ವೇಳೆ ಚೀನಾ ಪಾಕಿಸ್ತಾನದ ಜೊತೆಗಿದ್ದುದನ್ನು ನಮ್ಮ ದೇಶದ ಹಿರಿಯ ಸೇನಾಧಿಕಾರಿ ಜನರಲ್ ರಾಹುಲ್ ಸಿಂಗ್ ಅವರೇ ಹೇಳಿದ್ದರು.
‘‘ಭಾರತ ಕೇವಲ ಪಾಕಿಸ್ತಾನದೊಂದಿಗೆ ಹೋರಾಡುತ್ತಿಲ್ಲ, ಪಾಕಿಸ್ತಾನ ಮತ್ತು ಚೀನಾ ಎರಡರ ವಿರುದ್ಧವೂ ಹೋರಾಡುತ್ತಿದೆ’’ ಎಂದು ಅವರು ಹೇಳಿದ್ದರು.
ಈಗ ಮೋದಿ ಚೀನಾ ಅಧ್ಯಕ್ಷ ಜಿನ್‌ಪಿಂಗ್ ಭೇಟಿಯಾದಾಗ ಅವರ ಮನಸ್ಸಿನಲ್ಲಿ ಯಾವ ಶಿಷ್ಟಾಚಾರದ ಪ್ರಶ್ನೆಯಿತ್ತು?
ವಿದೇಶಾಂಗ ನೀತಿಯ ಮೇಲೆ ಇರಬೇಕಾದ ಗಮನ ಇಲ್ಲವಾಗಿದೆ.
ಈಗಲೂ ಬಿಜೆಪಿಯ ಐಟಿ ಸೆಲ್ ಬರೀ ಸುಳ್ಳುಗಳಲ್ಲಿಯೇ ಮುಳುಗಿದೆ.
ಈ ಭೇಟಿಯ ಮೂಲಕವೂ ಮತಗಳನ್ನು ಹೆಚ್ಚಿಸಿಕೊಳ್ಳುವ ಅದರ ಉದ್ದೇಶ ಸ್ಪಷ್ಟವಾಗಿದೆ.
ಮೋದಿಯವರನ್ನು ಈಗಲೂ ಇನ್ನೂ ವಿಜೃಂಭಿಸುವ ಸುಳ್ಳುಗಳನ್ನು ಹರಡುವುದರಿಂದ ಭಾರತಕ್ಕೆ ಏನು ಲಾಭ?
ಭಾರತದ ವಿದೇಶಾಂಗ ನೀತಿಯಲ್ಲಿನ ಲೋಪಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ.
ಎಸ್. ಜೈಶಂಕರ್ ಸ್ವತಂತ್ರ ಭಾರತದ ಇತಿಹಾಸದಲ್ಲೇ ಅತ್ಯಂತ ನಿಷ್ಪ್ರಯೋಜಕ, ಅಸಮರ್ಥ ವಿದೇಶಾಂಗ ಸಚಿವ ಎಂದು ವಿಪಕ್ಷಗಳು ಹೇಳುತ್ತಿರುವುದಕ್ಕೆ ರುಜುವಾತುಗಳು ಸಿಗುತ್ತಲೇ ಇವೆ.
‘‘ಚೀನಾ ದೊಡ್ಡ ಆರ್ಥಿಕತೆಯಾಗಿದೆ, ನಾವು ಅವರೊಂದಿಗೆ ಹೇಗೆ ಸ್ಪರ್ಧಿಸಲು ಸಾಧ್ಯ?’’ ಎಂದು ಅವರು ಸಂದರ್ಶನವೊಂದರಲ್ಲಿ ಹೇಳಿದ್ದರು.
ಈಗ ಚೀನಾ ಜೊತೆ ಸಂಬಂಧಕ್ಕೆ ಮುಂದಾಗಿರುವಾಗ, ಚೀನಾ ನಮ್ಮೊಂದಿಗೆ ಪ್ರಾಬಲ್ಯದ ಸ್ಥಾನದಿಂದ ಮಾತನಾಡುತ್ತಿದೆ. ಹಾಗಾದರೆ ಭಾರತಕ್ಕೆ ಇದರಿಂದ ಏನು ಪ್ರಯೋಜನ ಸಿಗಲಿದೆ? ಭಾರತ ಚೀನಾಕ್ಕಿಂತ ದುರ್ಬಲವಾಗಿದೆ ಎಂದು ಈಗಾಗಲೇ ಒಪ್ಪಿಕೊಂಡಿರುವಾಗ, ಭಾರತ ಅದರಿಂದ ಏನನ್ನು ಪಡೆಯಬಹುದು?
ಆವತ್ತು ಆ ಮಾತನ್ನು ಜೈಶಂಕರ್ ಬದಲು ರಾಹುಲ್ ಗಾಂಧಿ ಹೇಳಿದ್ದರೆ ಎಷ್ಟು ಗದ್ದಲ ನಡೆಯುತ್ತಿತ್ತಲ್ಲವೆ? ಆದರೆ, ಮಡಿಲ ಮಾಧ್ಯಮಗಳು ಎಲ್ಲವನ್ನೂ ಮರೆತಿವೆ.
ಟ್ರಂಪ್ ಅಧಿಕಾರಕ್ಕೆ ಬಂದ ನಂತರ ಜಿನ್‌ಪಿಂಗ್ ಕಥೆ ಮುಗಿಯಿತು ಎಂದಿದ್ದ ಮೀಡಿಯಾಗಳು, ಈಗ ಟ್ರಂಪ್ ಅವರ ದಿನಗಳು ಮುಗಿದವು ಎಂದು ಹೇಳುತ್ತಿವೆ. ಟ್ರಂಪ್ ಅವರನ್ನು ಅಧಿಕಾರದಿಂದ ಕಿತ್ತೊಗೆಯಲಾಗುವುದು ಎಂದೆಲ್ಲ ಹೇಳುವುದು ಶುರುವಾಗಿದೆ.
ಚೀನಾ ಮತ್ತು ಅಮೆರಿಕದ ನಡುವಿನ ಸಂಬಂಧದಲ್ಲಿ ಯಾವುದೇ ವ್ಯತ್ಯಾಸಗಳಾಗುವುದಿಲ್ಲ ಎಂಬುದು ಸ್ಪಷ್ಟವಿದೆ.
ಅಮೆರಿಕ 6 ಲಕ್ಷ ಚೀನೀ ವಿದ್ಯಾರ್ಥಿಗಳನ್ನು ಸ್ವಾಗತಿಸಿದೆ. ಚೀನಾದೊಂದಿಗಿನ ಅದರ ಸಂಬಂಧಗಳು ಬಲಗೊಳ್ಳುತ್ತಿವೆ.
ಆದರೆ ಅಮೆರಿಕ ಭಾರತದ ಮೇಲೆ ಶೇ. 50ರ ಸುಂಕದ ಬರೆ ಎಳೆದಿದೆ.
ಭಾರತ ಬಹುದೊಡ್ಡ ನಷ್ಟವನ್ನು ಅನುಭವಿಸುತ್ತಿದೆ.
ಆದರೆ ಸರಕಾರಕ್ಕೆ ಏಕೆ ಇದಾವುದೂ ಅರ್ಥವಾದಂತಿಲ್ಲ?
ಸ್ವತಂತ್ರ ಭಾರತದ ಇತಿಹಾಸದಲ್ಲಿ ಇಷ್ಟೊಂದು ಯು ಟರ್ನ್ ತೆಗೆದುಕೊಂಡ ಸರಕಾರ ಯಾವತ್ತೂ ಇರಲಿಲ್ಲ.
ಪಾಕಿಸ್ತಾನವನ್ನು ಬಹಿರಂಗವಾಗಿ ಬೆಂಬಲಿಸಿದ ಎರಡು ದೇಶಗಳು ಚೀನಾ ಮತ್ತು ತುರ್ಕಿಯ.
ತುರ್ಕಿಯ ಬಗ್ಗೆ ಏನೇನೆಲ್ಲ ಹೇಳಲಾಯಿತು. ಕಡೆಗೆ, ಒಮ್ಮೆ ತುರ್ಕಿಯ ಆಡಳಿತಗಾರರನ್ನು ಭೇಟಿ ಮಾಡಿದ್ದರು ಎಂಬ ನೆಪ ತೆಗೆದು ಆಮಿರ್ ಖಾನ್ ಅವರನ್ನೂ ಗುರಿಯಾಗಿಸಲಾಯಿತು. ಈಗ ಟರ್ಕಿಶ್ ವಾಯುಯಾನ ವಲಯದೊಂದಿಗಿನ ನಿಷೇಧವನ್ನು ತೆಗೆದುಹಾಕಲಾಗುತ್ತಿರುವ ಸುದ್ದಿ ಬಂದಿದೆ. ಡಿಜಿಸಿಎ ಭಾರತೀಯ ಮತ್ತು ಟರ್ಕಿಶ್ ವಿಮಾನಯಾನ ಸಂಸ್ಥೆಗಳ ನಡುವಿನ ಗುತ್ತಿಗೆ ಒಪ್ಪಂದಗಳನ್ನು ಅನುಮೋದಿಸಲು ಪ್ರಾರಂಭಿಸಿದೆ.
ಸರಳವಾಗಿ ಹೇಳುವುದಾದರೆ, ಟರ್ಕಿಶ್ ವಾಯುಯಾನ ವಲಯದೊಂದಿಗೆ ಸರಕಾರ ಯು ಟರ್ನ್ ತೆಗೆದುಕೊಂಡಿದೆ.
ಈಗ ಸಂಬಂಧಗಳನ್ನು ಮತ್ತೆ ಸ್ಥಾಪಿಸಲಾಗುತ್ತಿದೆ.
ತುರ್ಕಿಯದೊಂದಿಗಿನ ನಾಗರಿಕ ವಿಮಾನಯಾನ ಸಂಬಂಧ ಕಡಿತಗೊಳಿಸುವುದಾಗಿ ಹೇಳಿದ 3 ತಿಂಗಳ ನಂತರ, ಭಾರತೀಯ ಮತ್ತು ಟರ್ಕಿಶ್ ವಿಮಾನಯಾನ ಸಂಸ್ಥೆಗಳ ನಡುವೆ ವಿಮಾನ ಗುತ್ತಿಗೆ ಒಪ್ಪಂದಗಳನ್ನು ಅನುಮೋದಿಸುವುದು ನಡೆದಿದೆ.
3 ತಿಂಗಳ ಹಿಂದೆ ತುರ್ಕಿಯದೊಂದಿಗೆ ಯಾವುದೇ ಸಂಬಂಧಗಳಿಲ್ಲ ಎಂದು ಘೋಷಿಸಿದ್ದವರು ಈಗ ಮೃದುವಾಗಿದ್ದಾರೆ.
ಹೀಗಿರುವಾಗ, ನಮ್ಮ ವಿದೇಶಾಂಗ ನೀತಿಯನ್ನು ಯಾರು ನಂಬುತ್ತಾರೆ?
ತುರ್ಕಿಯದೊಂದಿಗಿನ ಯು ಟರ್ನ್ ಅನ್ನು ಯಾವ ತರ್ಕದಿಂದ ಸಮರ್ಥಿಸಬಹುದು?
ತುರ್ಕಿಯದ ವಿರುದ್ಧ ಪ್ರಚಾರ ನಡೆದಾಗ, ಬಿಜೆಪಿ, ಮಡಿಲ ಮೀಡಿಯಾಗಳೆಲ್ಲ ಅದು ಭಾರತದ ಶತ್ರು ಎಂದವು. ಆದರೆ ಈಗ ಕಥೆಯೇ ಬೇರೆಯಾಗುತ್ತಿದೆ.
ಇನ್ನು, ಚೀನಾ ವಿಷಯದಲ್ಲಿ ಇಡೀ ಮಡಿಲ ಮೀಡಿಯಾ ಭಾರತ ಮತ್ತು ಚೀನಾ ತುಂಬಾ ಉತ್ತಮ ಸ್ನೇಹಿತರು ಎಂದು ಹೇಳುವಲ್ಲಿ ನಿರತವಾಗಿದೆ.
ಇದೇ ಚೀನಾದ ಹೆಸರಿನಲ್ಲಿ ‘ನ್ಯೂಸ್ ಕ್ಲಿಕ್’ ಮೇಲೆ ದಾಳಿಯಾಯಿತು.
ಅದರ ಸಂಪಾದಕರ ಬಂಧನವಾಯಿತು. ಉದ್ಯೋಗಿಗಳಿಗೆ ಕಿರುಕುಳ ನೀಡಲಾಯಿತು. ಆದರೆ ಈಗ ಮೋದಿ ಹೋಗಿ ಜಿನ್‌ಪಿಂಗ್ ಕೈಕುಲುಕಿದ್ದಾರೆ.
ಗಾಲ್ವಾನ್ ಕಣಿವೆಯಲ್ಲಿ ನಮ್ಮ ಸೈನಿಕರು ಮರಣ ಹೊಂದಿದರು.
ಸುಪ್ರಿಯಾ ಶ್ರಿನೇತ್ ಈ ವಿಷಯದ ಬಗ್ಗೆ ಮೋದಿ ಸರಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.
‘‘ಗಾಲ್ವಾನ್‌ನಲ್ಲಿ 20 ಸೈನಿಕರು ಹುತಾತ್ಮರಾದರು. ಪಹಲ್ಗಾಮ್‌ನಲ್ಲಿ 26 ಭಾರತೀಯ ನಾಗರಿಕರು ಹತರಾದರು. ಪೂಂಚ್‌ನಲ್ಲಿ 17 ಅಮಾಯಕ ಭಾರತೀಯ ನಾಗರಿಕರನ್ನು ಕೊಲ್ಲಲಾಯಿತು. ನೀವು ಚೀನಾದಲ್ಲಿರುವಾಗ, ಇದೆಲ್ಲವೂ ಒಮ್ಮೆಯಾದರೂ ನಿಮ್ಮ ಮನಸ್ಸಿಗೆ ಬಂದಿರಬೇಕು. ನಿಜಕ್ಕೂ ನಾಚಿಕೆಯಾಗಬೇಕು’’ ಎಂದಿದ್ದಾರೆ.
ಇಲ್ಲಿಯವರೆಗೆ ಪ್ರಧಾನಿ ಮೋದಿಯವರ ಬಾಯಿಂದ ಗಡಿ ಅತಿಕ್ರಮಣದ ವಿಷಯದಲ್ಲಿ, ಸೈನಿಕರ ಸಾವಿನ ವಿಷಯದಲ್ಲಿ ಚೀನಾ ಎಂಬ ಪದ ಬಂದಿರಲಿಲ್ಲ. ಈಗ ಹೋಗಿ ಚೀನಾ ಜೊತೆ ಕೈಕುಲುಕುವಾಗ, ನಾವು ಆ ಚೀನಾವನ್ನು ನಂಬಬಹುದೇ ಎಂಬ ಪ್ರಶ್ನೆ ಏಕೆ ಕಾಡುವುದಿಲ್ಲ?
ಭಯೋತ್ಪಾದಕ ಸಂಘಟನೆ ಲಷ್ಕರೆ ತಯ್ಯಿಬಾವನ್ನು ಬೆಂಬಲಿಸುವ ಚೀನಾವನ್ನು ನಾವು ನಂಬಬಹುದೇ?