×
Ad

ಸಂಸತ್ ಮುಂಗಾರು ಅಧಿವೇಶನದಲ್ಲಿ ಚರ್ಚೆ ಮಾಡಲು ವಿಪಕ್ಷಗಳಿಗೆ ನಿಜವಾಗಿಯೂ ಅವಕಾಶ ಸಿಗುವುದೇ?

Update: 2025-07-22 11:44 IST

ಸಂಸತ್‌ನಲ್ಲಿ ಮುಂಗಾರು ಅಧಿವೇಶನ ಆರಂಭಗೊಂಡಿದೆ.

ಬಿಹಾರ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿರುವ ಹೊತ್ತಲ್ಲೇ ಸಂಸತ್ ಅಧಿವೇಶನ ನಡೆಯುತ್ತಿರುವುದರಿಂದ ರಾಜಕೀಯ ಬಿಸಿ ಜೋರಾಗಿಯೇ ಇರಬಹುದು ಎನ್ನಲಾಗುತ್ತಿದೆ. ಇದು ರಾಜಕೀಯ ಶಕ್ತಿಪ್ರದರ್ಶನಕ್ಕೆ ವೇದಿಕೆಯಾಗಲೂಬಹುದು.

ಪಹಲ್ಗಾಮ್ ದಾಳಿ ವಿಚಾರ, ಆಪರೇಷನ್ ಸಿಂಧೂರ, ಕದನ ವಿರಾಮ ಸಂಬಂಧ ಟ್ರಂಪ್ ಹೇಳಿಕೆ ನೀಡಿದ್ದ ವಿಚಾರ, ಬಿಹಾರದಲ್ಲಿನ ಮತದಾರರ ಪಟ್ಟಿ ಪರಿಷ್ಕರಣೆ ಇವೆಲ್ಲವೂ ಪ್ರಸ್ತಾಪವಾಗಲಿದ್ದು, ವಿಪಕ್ಷಗಳು ಸರಕಾರದ ಮೇಲೆ ದಾಳಿಗೆ ಸನ್ನದ್ಧವಾಗಿವೆ ಎನ್ನಲಾಗಿದೆ.

ನಿಜವಾಗಿಯೂ ಅಧಿವೇಶನದಲ್ಲಿ ಏನಾಗಬಹುದು ಎಂಬುದರ ಬಗೆಗೂ ಚರ್ಚೆಗಳಿವೆ. ಹೇಳಲಾದ ಪ್ರಕಾರ, ರಕ್ಷಣಾ ಸಚಿವ ರಾಜನಾಥ ಸಿಂಗ್ ನಿವಾಸದಲ್ಲಿ ಒಂದು ದೊಡ್ಡ ಸಭೆ ನಡೆದಿದೆ. ಅದರಲ್ಲಿ ಅಮಿತ್ ಶಾ, ಜೆ.ಪಿ. ನಡ್ಡಾ, ಕಿರಣ್ ರಿಜಿಜು, ಮನೋಹರ್ ಲಾಲ್ ಖಟ್ಟರ್, ಪಿಯೂಷ್ ಗೋಯಲ್ ಹೀಗೆ ಎಲ್ಲಾ ಹಿರಿಯ ಸಚಿವರು ಹಾಜರಿದ್ದರು. ಜೊತೆಗೆ ಮೂರೂ ಸೇನೆಗಳ ಮುಖ್ಯಸ್ಥರು, ಸಶಸ್ತ್ರ ಪಡೆಗಳ ಮುಖ್ಯಸ್ಥರು ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರರು ಕೂಡ ಅಲ್ಲಿ ಹಾಜರಿದ್ದರು. ರಾಜನಾಥ ಸಿಂಗ್ ಅವರು ಸಂಸತ್ತಿನ ಎರಡೂ ಸದನಗಳಲ್ಲಿ ಆಪರೇಷನ್ ಸಿಂಧೂರದ ಬಗ್ಗೆ ಹೇಳಿಕೆ ನೀಡಬಹುದು ಎನ್ನಲಾಗುತ್ತಿದೆ.

ಇಲ್ಲಿ ಗಮನಿಸಬೇಕಿರುವ ಮುಖ್ಯ ವಿಚಾರವೆಂದರೆ,

ವಿರೋಧ ಪಕ್ಷದೊಳಗೇ ಒಡಕು ಇದೆ ಎಂದು ಸರಕಾರಕ್ಕೆ ಚೆನ್ನಾಗಿ ತಿಳಿದಿದೆ.

ಟಿಎಂಸಿ ವಿಭಿನ್ನ ರೀತಿಯಲ್ಲಿ ವಿಭಿನ್ನ ವಿಷಯಗಳನ್ನು ಎತ್ತಲು ಬಯಸುತ್ತದೆ.ಎಎಪಿಯ ಹಾದಿಯೂ ಬೇರೆಯೇ ಇದೆ. ಸರಕಾರ ಇದರಿಂದ ಲಾಭ ಪಡೆಯಬಹುದು ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ. ವಿರೋಧ ಪಕ್ಷಗಳು ಹೀಗೆ ಬೇರೆ ಬೇರೆ ವಿಷಯಗಳನ್ನು ಎತ್ತಲಿ ಎಂದೇ ಸರಕಾರ ಕೂಡ ಬಯಸುತ್ತಿದೆ.

ಈಗಾಗಲೇ ಸರ್ವಪಕ್ಷ ಸಭೆಯಲ್ಲಿ 51 ಪಕ್ಷಗಳ 54 ಪ್ರತಿನಿಧಿಗಳು ಭಾಗವಹಿಸಿದ್ದರು. ಅವರಲ್ಲಿ 40 ಮಂದಿ ತಮ್ಮ ಅಭಿಪ್ರಾಯಗಳನ್ನು ಮಂಡಿಸಿರುವುದಾಗಿ ತಿಳಿದುಬಂದಿದೆ.

ಪಹಲ್ಗಾಮ್ ದಾಳಿ, ಟ್ರಂಪ್ ಹೇಳಿಕೆ, ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಸಂಸತ್ತಿನಲ್ಲಿ ನಡೆಯುವ ಚರ್ಚೆಗಳಿಗೆ ಮೋದಿ ಪ್ರತಿಕ್ರಿಯಿಸಬೇಕೆಂದು ಕಾಂಗ್ರೆಸ್‌ನ ಗೌರವ್ ಗೊಗೊಯಿ, ಸಮಾಜವಾದಿ ಪಕ್ಷದ ರಾಮ್ ಗೋಪಾಲ್ ಯಾದವ್, ಸಿಪಿಎಂನ ಜಾನ್ ಬ್ರಿಟ್ಟಾಸ್, ಸಿಪಿಐನ ಪಿ. ಸಂತೋಷ್ ಕುಮಾರ್ ಒತ್ತಾಯಿಸಿರುವುದಾಗಿ ವರದಿಯಾಗಿದೆ.

ಮುಂಗಾರು ಅಧಿವೇಶನದ ಕಾರ್ಯಸೂಚಿಯೇನು?

ಮೋದಿ ಸರಕಾರ ಹಲವು ಮಸೂದೆಗಳನ್ನು ಮಂಡಿಸಲಿದೆ. ಪ್ರಮುಖವಾಗಿ, ಮಣಿಪುರ ರಾಷ್ಟ್ರಪತಿ ಆಡಳಿತಕ್ಕೆ ಸಂಸತ್ತಿನ ಅನುಮೋದನೆ ಮತ್ತು ಮಣಿಪುರ ಜಿಎಸ್‌ಟಿ ತಿದ್ದುಪಡಿ ಮಸೂದೆ 2025 ಇದೆ. ಅಲ್ಲಿನ ಜಿಎಸ್‌ಟಿ ಕಾನೂನನ್ನು ಕೇಂದ್ರ ಕಾನೂನಿಗೆ ಸಮನ್ವಯಗೊಳಿಸುವ ಉದ್ದೇಶ ಅದರದ್ದಾಗಿದೆ.

ಜನ ವಿಶ್ವಾಸ ನಿಬಂಧನೆಗಳ ತಿದ್ದುಪಡಿ ಮಸೂದೆ 2025, ಐಐಟಿ ಭಾರತೀಯ ನಿರ್ವಹಣಾ ಸಂಸ್ಥೆ ತಿದ್ದುಪಡಿ ಮಸೂದೆ 2025, ತೆರಿಗೆ ಕಾನೂನುಗಳ ತಿದ್ದುಪಡಿ ಮಸೂದೆ 2025 ಇವೆ.

ಇವಲ್ಲದೆ ಭೂ ಪರಂಪರೆ ತಾಣಗಳು ಮತ್ತು ಭೂಅವಶೇಷಗಳ ಸಂರಕ್ಷಣೆ ಮತ್ತು ನಿರ್ವಹಣೆ ಮಸೂದೆ, ಕಲ್ಲುಗಣಿ ಅಭಿವೃದ್ಧಿ ಮತ್ತು ನಿಯಂತ್ರಣ ತಿದ್ದುಪಡಿ ಮಸೂದೆ, ರಾಷ್ಟ್ರೀಯ ಕ್ರೀಡಾ ಆಡಳಿತ ಮಸೂದೆ ಇದೆ. ರಾಷ್ಟ್ರೀಯ ಡೋಪಿಂಗ್ ವಿರೋಧಿ ತಿದ್ದುಪಡಿ ಮಸೂದೆ ಇವೆ. ಇವೆಲ್ಲವೂ ಸರಕಾರ ಬಯಸುವ ಮಸೂದೆಗಳು. ವಿರೋಧ ಪಕ್ಷ ಖಂಡಿತವಾಗಿಯೂ ಅಂತಹ ಎಲ್ಲಾ ವಿಷಯಗಳ ಬಗ್ಗೆ ಚರ್ಚೆಗಳನ್ನು ಎತ್ತುತ್ತವೆ.

ಆಗಸ್ಟ್ 15ಕ್ಕೆ ಮೊದಲು ಮುಂಗಾರು ಅಧಿವೇಶನ ಕೊನೆಗೊಳ್ಳುತ್ತಿತ್ತು. ಆದರೆ ಅದನ್ನು ಆಗಸ್ಟ್ 21ರವರೆಗೆ ಈ ವರ್ಷ ವಿಸ್ತರಿಸಲಾಗಿದೆ.

ಆದ್ದರಿಂದ ಸರಕಾರ ಖಂಡಿತವಾಗಿಯೂ ಈ ಮುಂಗಾರು ಅಧಿವೇಶನದಲ್ಲಿ ಯಾವುದೋ ರಹಸ್ಯ ಅಜೆಂಡಾ ಹೊಂದಿದೆ ಎನ್ನಲಾಗುತ್ತಿದೆ. ಹಿಡನ್ ಅಜೆಂಡಾದ ಭಾಗವಾಗಿ ಮೋದಿ ಸರಕಾರ ದೊಡ್ಡ ಮಸೂದೆಯನ್ನು ತರಲು ಬಯಸುತ್ತದೆ ಎಂದು ವಿಶ್ಲೇಷಿಸಲಾಗಿದೆ. ಹಾಗಾದರೆ ಅದು ಯಾವ ಮಸೂದೆಯಾಗಿರಬಹುದು?

ಈ ಅಧಿವೇಶನದಲ್ಲಿ ‘ಒಂದು ರಾಷ್ಟ್ರ ಒಂದು ಚುನಾವಣೆ’ಯನ್ನು ಅಂಗೀಕರಿಸಲು ಅದು ಬಯಸುತ್ತದೆಯೇ?

ಸರಕಾರ ಖಂಡಿತವಾಗಿಯೂ ಒಂದು ರಹಸ್ಯ ಅಜೆಂಡಾ ಹೊಂದಿರುವುದರಿಂದಲೇ ಅಧಿವೇಶನದ ಅವಧಿ ವಿಸ್ತರಿಸಿದೆ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ.

ಕಠಿಣ ಪ್ರಶ್ನೆಗಳು ಎದುರಾದಾಗ, ಉತ್ತರಿಸುವುದು ಕಷ್ಟವಾದಾಗ, ಆ ಪ್ರಶ್ನೆಗಳೇ ಚರ್ಚೆಯಿಂದ ಸರಿದು ಹೋಗುವಂತೆ ಮಾಡುವುದು ಬಿಜೆಪಿ ಹಾಗೂ ಮೋದಿ ಸರಕಾರದ ಹಳೆಯ ಶೈಲಿ. ಯಾವ ವಿಷಯ ಸರಕಾರಕ್ಕೆ ತಲೆನೋವಾಗಿದೆಯೋ ಅದೇ ಮೂಲೆಗೆ ಸೇರುವಂತೆ ಅದಕ್ಕಿಂತ ಬಹಳ ದೊಡ್ಡದು ಏನನ್ನಾದರೂ ಚರ್ಚೆಗೆ ತಂದು ಬಿಡುವುದು ಮೋದಿ ಸರಕಾರ ಅನುಸರಿಸಿಕೊಂಡು ಬಂದಿರುವ ನೀತಿ. ಈಗ ಮುಂಗಾರು ಅಧಿವೇಶನದಲ್ಲಿ ಸರಕಾರಕ್ಕೆ ಉತ್ತರಿಸಲು ಬಹಳ ಕಷ್ಟವಾಗುವ ಹಲವಾರು ಪ್ರಶ್ನೆಗಳೊಂದಿಗೆ ವಿಪಕ್ಷಗಳು ಸಿದ್ಧವಾಗಿವೆ ಅದಕ್ಕೆ ಉತ್ತರಿಸುವುದು ಹೇಗೆ ಎಂದು ಸಿದ್ಧವಾಗುವ ಬದಲು ಆ ಪ್ರಶ್ನೆಗಳೇ ಮೂಲೆ ಸೇರುವಂತಹ ಇನ್ನೊಂದೇನಾದರೂ ದೊಡ್ಡ ಕ್ರಮಕ್ಕೆ ಮೋದಿ ಸರಕಾರ ಮುಂದಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ

ಇನ್ನು ವಿಪಕ್ಷಗಳು ಇಲ್ಲಿ ಒಟ್ಟಾಗಿ ಸರಕಾರವನ್ನು ಎದುರಿಸಲಿವೆಯೇ ಅಥವಾ ಅವುಗಳ ನಡುವಿನ ಒಡಕು ಗೋಚರವಾಗಲಿವೆಯೇ ಎಂಬ ಪ್ರಶ್ನೆ ಕೂಡ ಇದೆ.

‘ಇಂಡಿಯಾ’ ಮೈತ್ರಿಕೂಟದ ಸಭೆಯಲ್ಲಿ ಎಎಪಿ ಭಾಗವಹಿಸುತ್ತಿಲ್ಲ.

ದಿಲ್ಲಿ ವಿಧಾನಸಭೆ ಚುನಾವಣೆಯ ನಂತರ ತಾವು ಇಂಡಿಯಾ ಮೈತ್ರಿಕೂಟದ ಭಾಗವಾಗಿಲ್ಲ ಎಂಬ ಹೇಳಿಕೆ ಕೂಡ ಆ ಪಕ್ಷದಿಂದ ಬಂದಿದೆ.

ಬಿಹಾರದಲ್ಲಿ ಚುನಾವಣೆ ಹತ್ತಿರವಾಗುತ್ತಿರುವ ಸಮಯದಲ್ಲಿ ಮುಂಗಾರು ಅಧಿವೇಶನ ನಡೆಯುತ್ತಿದೆ.

ಆಪರೇಷನ್ ಸಿಂಧೂರದ ನಂತರ ವಿಶೇಷ ಅಧಿವೇಶನ ಕರೆಯಬೇಕೆಂಬ ವಿಪಕ್ಷಗಳ ಒತ್ತಾಯಕ್ಕೆ ಸರಕಾರ ಮಣಿಯಲಿಲ್ಲ. ಆ ನಂತರದ ಮೊದಲ ಅಧಿವೇಶನ ಇದಾಗಿದೆ. ಹಾಗಾಗಿ, ಮತದಾರರ ಪಟ್ಟಿ ಪರಿಷ್ಕರಣೆ ಕಾರಣದಿಂದಲಾದರೂ ಮಮತಾ ಬ್ಯಾನರ್ಜಿಯವರ ಬೆಂಬಲ ಗಳಿಸುವುದು ಸಾಧ್ಯವಾಗಬಹುದು ಎಂಬ ಲೆಕ್ಕಾಚಾರ ಕಾಂಗ್ರೆಸ್‌ನದ್ದಾಗಿದೆ.

ರಾಹುಲ್ ಗಾಂಧಿ ಇತ್ತೀಚೆಗೆ ಬಿಹಾರ ನಾಯಕರ ಸಭೆ ನಡೆಸಿದ್ದರು. ಅದರಲ್ಲಿ 10 ದೊಡ್ಡ ನಾಯಕರು ಹಾಜರಿದ್ದರು. ಮತದಾರರ ಪಟ್ಟಿ ಪರಿಷ್ಕರಣೆ ತುಂಬ ಗಂಭೀರ ವಿಚಾರ ಎಂಬುದನ್ನು ರಾಹುಲ್ ಹೇಳಿದ್ದಾರೆ.

‘‘ಈಗ ಬಿಹಾರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಮಾಡಲಾಗುತ್ತಿದೆ. ಅದರ ನಂತರ ಅದನ್ನು ಬಂಗಾಳದಲ್ಲಿ ಮಾಡಲಾಗುತ್ತದೆ. ಅದರ ನಂತರ ಅಸ್ಸಾಮಿನಲ್ಲಿ ಮಾಡಲಾಗುತ್ತದೆ. ನಾವು ಬಂಗಾಳವನ್ನು ಗೆಲ್ಲುತ್ತೇವೆ, ನಾವು ಅಸ್ಸಾಂ ಅನ್ನು ಗೆಲ್ಲುತ್ತೇವೆ. ಅದಕ್ಕಾಗಿಯೇ ನಾವು ಆಕ್ರಮಣಕಾರಿಯಾಗಿ ಇರಬೇಕಿದೆ ಎಂದಿದ್ದಾರೆ’’ ರಾಹುಲ್ ಗಾಂಧಿ.

ಅದಕ್ಕಾಗಿಯೇ ಎಲ್ಲರೂ ಒಟ್ಟುಗೂಡುವ ಅಗತ್ಯದ ಬಗ್ಗೆ ಕೆ.ಸಿ. ವೇಣುಗೋಪಾಲ್ ಕಾಂಗ್ರೆಸ್ ಪರವಾಗಿ ಕರೆ ನೀಡಿದ್ದಾರೆ.

ರಾಹುಲ್ ಗಾಂಧಿ ಸ್ವತಃ ವಿಪಕ್ಷಗಳ ನಾಯಕರನ್ನು ಸಂಪರ್ಕಿಸುತ್ತಿದ್ದಾರೆ, ಅವರಲ್ಲಿ ಅಧಿವೇಶನಕ್ಕೆ ತಯಾರಿ ಕುರಿತು ಮಾತಾಡುತ್ತಿದ್ದಾರೆ. ಅವರ ಬೆಂಬಲ ಕ್ರೋಡೀಕರಿಸುವ ಪ್ರಯತ್ನದಲ್ಲಿದ್ದಾರೆ ಎಂದೂ ವರದಿಗಳಿವೆ.

ರಾಹುಲ್ ಗಾಂಧಿ ಹಾಗೂ ಪ್ರಮುಖ ವಿಪಕ್ಷ ನಾಯಕರ ನಡುವೆ ಫೋನ್ ಕಾಲ್‌ಗಳು, ಆನ್ ಲೈನ್ ಮೀಟಿಂಗ್‌ಗಳೂ ನಡೆದಿರುವ ಕುರಿತು ಚರ್ಚೆಯಿದೆ.

ಈ ಅಧಿವೇಶನದ ನಂತರ ಮುಂದಿನ ಚುನಾವಣೆ ಬಿಹಾರದಲ್ಲಿದೆ. ಆರ್‌ಜೆಡಿ, ಎಡ ಪಕ್ಷಗಳು ಮತ್ತು ಕಾಂಗ್ರೆಸ್‌ನ ಮಹಾಮೈತ್ರಿ ಅಲ್ಲಿದೆ. ಅದರ ನಂತರ, ಕೇರಳದಲ್ಲಿ ಎಡಪಕ್ಷಗಳು ಮತ್ತು ಕಾಂಗ್ರೆಸ್ ನಡುವೆ ಹಣಾಹಣಿ ಇರುತ್ತದೆ.

ಬಂಗಾಳದಲ್ಲಿ ಖಂಡಿತವಾಗಿಯೂ ಟಿಎಂಸಿ ಮತ್ತು ಎಡಪಕ್ಷಗಳ ನಡುವೆ ಸ್ಪರ್ಧೆ ಇರುತ್ತದೆ. ಕಾಂಗ್ರೆಸ್ ಅಲ್ಲಿ ಯಾವ ದಾರಿಯಲ್ಲಿ ಹೋಗಬೇಕು ಎಂದು ಇನ್ನೂ ನಿರ್ಧರಿಸಲಾಗಿಲ್ಲ. ಹೀಗಾಗಿ, ಈ ಅಧಿವೇಶನದ ಹೊತ್ತಿನಲ್ಲಿ ಟಿಎಂಸಿ ಮತ್ತು ಕಾಂಗ್ರೆಸ್ ನಡುವೆ ಎಲ್ಲವೂ ಸರಿಹೋಗಬಹುದೆ?

ಈ ಸಮಯದಲ್ಲಿ ಮೈತ್ರಿಕೂಟದಲ್ಲಿ ಒಟ್ಟಿಗೆ ಹೋಗುವುದು ಸಾಧ್ಯವಿಲ್ಲ ಎಂದು ಹೇಳುವುದು ಕಷ್ಟ. ರಾಜಕೀಯದಲ್ಲಿ ಯಾವಾಗ ಏನೂ ಆಗಬಹುದು.

ಈ ಮುಂಗಾರು ಅಧಿವೇಶನದಲ್ಲಿ ಇಂಡಿಯಾ ಮೈತ್ರಿಕೂಟದಲ್ಲಿ ಇಂಥ ಸಮನ್ವಯ ಸ್ವಲ್ಪ ಮಟ್ಟಿಗೆ ಸಾಧ್ಯವಾಗಬಹುದು ಎಂದು ಹಿರಿಯ ಪತ್ರಕರ್ತ ರಾಜದೀಪ್ ಸರ್ದೇಸಾಯಿ ಚರ್ಚೆಯೊಂದರಲ್ಲಿ ಹೇಳಿದ್ದಾರೆ.

ತಕ್ಷಣಕ್ಕೆ ಅವರೆದುರು ಯಾವುದೇ ಚುನಾವಣೆ ಇಲ್ಲವಾದರೂ, ನವೆಂಬರ್-ಡಿಸೆಂಬರ್ ಹೊತ್ತಿಗೆ ಅಂಥ ಸಂದರ್ಭ ಬರುತ್ತದೆ. ಆಗ ಅವರೆಲ್ಲರೂ ಚುನಾವಣೆಯಲ್ಲಿ ಮುಖಾಮುಖಿಯಾಗಬೇಕಾಗುತ್ತದೆ.

ವಿಶ್ಲೇಷಕರು ಹೇಳುವ ಪ್ರಕಾರ, ಈ ಅಧಿವೇಶನದಲ್ಲಿ ಆಪರೇಷನ್ ಸಿಂಧೂರ ಮತ್ತು ಮತದಾರರ ಪಟ್ಟಿ ಪರಿಷ್ಕರಣೆ ವಿಚಾರದಲ್ಲಿ ವಿರೋಧ ಪಕ್ಷಗಳು ಒಗ್ಗಟ್ಟಾಗಿರಲಿವೆ. ಈ ಅಧಿವೇಶನದಲ್ಲಿ ಸರಕಾರದ ವಿರುದ್ಧ ಮುಗಿಬೀಳಲು ಇವು ಪ್ರಮುಖ ವಿಷಯಗಳೆಂದು ವಿಪಕ್ಷಗಳು ಭಾವಿಸುತ್ತವೆ.

ಅಲ್ಲದೆ, ಕದನ ವಿರಾಮ ಘೋಷಣೆ ಬಗ್ಗೆ ಟ್ರಂಪ್ ಪದೇ ಪದೇ ಹೇಳಿಕೆ ನೀಡಿದ್ದ ವಿಚಾರ ಕೂಡ ರಾಹುಲ್ ಗಾಂಧಿಯವರ ಮನಸ್ಸಿನಲ್ಲಿದೆ.

ಟ್ರಂಪ್ ಹಾಗೆ ಪದೇ ಪದೇ ಹೇಳುತ್ತಿದ್ದುದರ ಬಗ್ಗೆ ಮೋದಿ ಉತ್ತರಿಸಬೇಕು ಎಂಬ ಒತ್ತಾಯ ಬರಲಿದೆ.

ಬಿಜೆಪಿ ಆಪರೇಷನ್ ಸಿಂದೂರ ಬಗ್ಗೆ ಚರ್ಚೆಗೆ ಸಿದ್ಧವಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಯಾವುದೇ ಚರ್ಚೆ ಅಷ್ಟು ಸುಲಭವಾಗಿ ನಡೆಯುತ್ತದೆ ಎಂದು ಭಾವಿಸಲು ಸಾಧ್ಯವಿಲ್ಲ. ಏಕೆಂದರೆ ಈ ಸಮಯದಲ್ಲಿ ಆಪರೇಷನ್ ಸಿಂಧೂರದ ಬಗ್ಗೆ ಚರ್ಚೆ ಮಾಡುವುದು ಕಷ್ಟ. ಸರಕಾರ ಅದನ್ನು ರಾಷ್ಟ್ರೀಯ ಭದ್ರತಾ ವಿಷಯ ಎಂದು ಹೇಳುತ್ತದೆ. ಅದರ ಬಗ್ಗೆ ಚರ್ಚೆ ಸಾಧ್ಯವಿಲ್ಲ ಎನ್ನುತ್ತದೆ. ಆಪರೇಷನ್ ಸಿಂದೂರದ ವಿಷಯವಾಗಿ ರಾಜನಾಥ ಸಿಂಗ್ ಉತ್ತರಿಸಲು ಸಾಧ್ಯವಾಗುವುದಿಲ್ಲ. ಅಲ್ಲಿ ವಿದೇಶಾಂಗ ನೀತಿಗೆ ಸಂಬಂಧಿಸಿದಂತೆ ಚರ್ಚೆಯಾಗುವ ಸಾಧ್ಯತೆ ಇದೆ.

ಪ್ರಧಾನಿ ಮೋದಿ ಮತ್ತು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರ ಉತ್ತರವನ್ನು ನಿರೀಕ್ಷಿಸಲಾಗುತ್ತದೆ. ಹಾಗೆಯೇ ಗೃಹ ಸಚಿವ ಅಮಿತ್ ಶಾ ಉತ್ತರ ನೀಡಬೇಕೆಂಬ ಒತ್ತಾಯವೂ ಬರಬಹುದು. ಏಕೆಂದರೆ ಪಹಲ್ಗಾಮ್‌ನಲ್ಲಿ ನಡೆದ ಭದ್ರತಾ ಲೋಪಕ್ಕೆ ಗೃಹ ಸಚಿವರನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತಿದೆ.

ಇನ್ನೊಂದು ಕುತೂಹಲಕಾರಿ ವಿಷಯವೆಂದರೆ,

ನ್ಯಾಯಮೂರ್ತಿ ಯಶವಂತ್ ವರ್ಮಾ ವಾಗ್ದಂಡನೆಗೆ ಸಂಬಂಧಿಸಿದ್ದು. ಜಗದೀಪ್ ಧನ್ಕರ್ ಕೂಡ ಇದರಲ್ಲಿ ಆಸಕ್ತಿ ವಹಿಸಿದಂತಿದೆ.

ಇನ್ನೊಂದೆಡೆ ನ್ಯಾಯಮೂರ್ತಿ ಶೇಖರ್ ಯಾದವ್ ಪ್ರಕರಣದಲ್ಲಿ, ಅವರು ದ್ವೇಷ ಭಾಷಣ ಮಾಡಿದ್ದಕ್ಕಾಗಿ ದೋಷಾರೋಪಕ್ಕೆ 50 ಜನರು ಸಹಿ ಮಾಡಿದ್ದಾರೆ ಎಂದು ಹೇಳಲಾಗಿದೆ. ವಿರೋಧ ಪಕ್ಷದವರು ಅವರನ್ನು ದೋಷಾರೋಪ ಮಾಡಲು ಬಯಸುತ್ತಿದ್ದಾರೆ. ಆದರೆ ಧನ್ಕರ್ ಅದರ ಬಗ್ಗೆ ಒಂದು ಮಾತನ್ನೂ ಹೇಳಲಿಲ್ಲ.

ನ್ಯಾ. ಶೇಖರ್ ಯಾದವ್ ವಿರುದ್ಧ ಕ್ರಮಕ್ಕೆ ಮೋದಿ ಸರಕಾರವೂ ಸಿದ್ಧವಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ.

ವಿರೋಧ ಪಕ್ಷಗಳು ದಾಳಿ ಮಾಡುತ್ತವೆ ಎಂದು ಭಾವಿಸುವ ಸರಕಾರ, ಪ್ರಮುಖ ವಿಷಯಗಳ ಬಗ್ಗೆ ಚರ್ಚೆಯನ್ನು ಬಯಸದು.

ಅಂಥ ಸ್ಥಿತಿಯಲ್ಲಿ ಈ ಅಧಿವೇಶನದಲ್ಲಿ ವಿರೋಧ ಪಕ್ಷಗಳು ಮತ್ತು ಸರಕಾರದ ನಡುವೆ ಯಾವುದೇ ಸಮನ್ವಯ ಇರುವುದು ಕಷ್ಟ ಎಂದೇ ಹೇಳಲಾಗುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಎ.ಎನ್. ಯಾದವ್

contributor

Similar News