ಲಂಡನ್ ನಲ್ಲಿ ನೀರವ್ ಮೋದಿ ಜಾಮೀನು ಅರ್ಜಿ ಮತ್ತೆ ತಿರಸ್ಕೃತ: ಸಿಬಿಐ
ನೀರವ್ ಮೋದಿ PC: x.com/ani_digital
ಹೊಸದಿಲ್ಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ ಸಾಲ ವಂಚನೆ ಹಗರಣದ ಪ್ರಮುಖ ಆರೋಪಿ ಹಾಗೂ 2019ರ ಮಾರ್ಚ್ ನಿಂದ ಅಮೆರಿಕದ ಜೈಲಿನಲ್ಲಿರುವ ವಜ್ರದ ವ್ಯಾಪಾರಿ ನೀರವ್ ಮೋದಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಲಂಡನ್ ಹೈಕೋರ್ಟ್ ನ ಕಿಂಗ್ಸ್ ಬೆಂಚ್ ವಿಭಾಗ ತಿರಸ್ಕರಿಸಿದೆ ಎಂದು ಸಿಬಿಐ ಪ್ರಕಟಿಸಿದೆ.
ಕ್ರೌನ್ ಪ್ರಾಸಿಕ್ಯೂಶನ್ ಸರ್ವೀಸಸ್, ಲಂಡನ್ ಗೆ ತೆರಳಿದ್ದ ಸಿಬಿಐ ತಂಡದ ನೆರವಿನೊಂದಿಗೆ ಜಾಮೀನು ವಾದವನ್ನು ಪ್ರಬಲವಾಗಿ ವಿರೋಧಿಸಿದೆ ಎಂದು ಪ್ರಕಟಣೆಯಲ್ಲಿ ಹೇಳಿದೆ.
ಇದು ನೀರವ್ ಮೋದಿ ಸಲ್ಲಿಸಿದ 10ನೇ ಜಾಮೀನು ಅರ್ಜಿಯಾಗಿದ್ದು, ಇದುವರೆಗೆ ತೀರಾ ಅಪಾಯಕಾರಿ ವ್ಯಕ್ತಿ ಎಂಬ ಕಾರಣಕ್ಕೆ ಜಾಮೀನು ಅರ್ಜಿ ತಿರಸ್ಕೃತವಾಗಿತ್ತು. "ಈ ಪ್ರಕರಣವು ಯಾವುದೇ ಹಿನ್ನೆಲೆಯಿಂದ ನೋಡಿದರೂ, ದೊಡ್ಡ ವಂಚನೆ ಜಾಲವನ್ನು ಒಳಗೊಂಡಿದೆ. ಈ ಪ್ರಕರಣದಲ್ಲಿ ಜಾಮೀನು ನೀಡುವಂತಿಲ್ಲ ಹಾಗೂ ಅರ್ಜಿಯನ್ನು ತಿರಸ್ಕರಿಸಲಾಗಿದೆ" ಎಂದು ಕಳೆದ ಬಾರಿ ನ್ಯಾಯಾಧೀಶರು ಆದೇಶದಲ್ಲಿ ಸ್ಪಷ್ಟಪಡಿಸಿದ್ದರು.
ನೀರವ್ ಮೋದಿ ತಾನು ಯಾವುದೇ ತಪ್ಪು ಮಾಡಿಲ್ಲ ಎಂದು ಸಮರ್ಥಿಸಿಕೊಂಡಿದ್ದು, ಭಾರತ ಸರ್ಕಾರದಿಂದ ತನ್ನ ಜೀವಕ್ಕೆ ಅಪಾಯವಿದ್ದು, ಆದ್ದರಿಂದ ಭಾರತಕ್ಕೆ ಹೋಗುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ.