ಪಹಲ್ಗಾಮ್ ದಾಳಿ ಕುರಿತ ಜಾಲತಾಣ ಪೋಸ್ಟ್ ವಿವಾದ: ನೇಹಾ ಸಿಂಗ್ ವಿರುದ್ಧದ ದೂರು ವಜಾ
PC: x.com/NewIndianXpress
ಹೊಸದಿಲ್ಲಿ: ಪಹಲ್ಗಾಮ್ ದಾಳಿ ಕುರಿತ ಜಾಲತಾಣ ಪೋಸ್ಟ್ ಹಿನ್ನೆಲೆಯಲ್ಲಿ ಜಾನಪದ ಗಾಯಕಿ ನೇಹಾ ಸಿಂಗ್ ರಾಥೋಡ್ ವಿರುದ್ಧ ದಾಖಲಿಸಿದ್ದ ಅಪರಾಧ ಪ್ರಕರಣವನ್ನು ಉತ್ತರ ಪ್ರದೇಶದ ನ್ಯಾಯಾಲಯ ಮಂಗಳವಾರ ರದ್ದುಪಡಿಸಿದೆ.
ಅಯೋಧ್ಯೆ ಹೆಚ್ಚುವರಿ ಸಿವಿಲ್ ಜಡ್ಜ್ ಏಕ್ತಾ ಸಿಂಗ್ ಅವರು ಈ ಬಗ್ಗೆ ತೀರ್ಪುನೀಡಿ ಈ ದೂರನ್ನು ಪರಿಗಣಿಸುವಂತಿಲ್ಲ ಹಾಗೂ ದೂರು ದಾಖಲಿಸಲು ದೂರುದಾರರು ಯಾವುದೇ ಸ್ಥಾನ ಹೊಂದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾಗಿ ಲೈವ್ ಲಾ ವರದಿ ಮಾಡಿದೆ.
ರಾಥೋಡ್ ಅವರು ಸಾರ್ವಜನಿಕ ಅರಾಜಕತೆಗೆ ಕುಮ್ಮಕ್ಕು ನೀಡುವ ಮೂಲಕ ರಾಜಕೀಯ ಲಾಭ ಪಡೆಯಲು ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿತ್ ಶಾ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೂ ಇತ್ತೀಚಗೆ ನಡೆದ ಪಹಲ್ಗಾಮ್ ಉಗ್ರರ ದಾಳಿಗೂ ಸಂಬಂಧ ಕಲ್ಪಿಸಿದ್ದಾರೆ ಎಂದು ಆಪಾದಿಸಿ ಶಿವೇಂದ್ರ ಸಿಂಗ್ ಎಂಬವರು ವಕೀಲ ಮಾರ್ತಾಂಡ ಪ್ರತಾಪ್ ಸಿಂಗ್ ಮೂಲಕ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್ ಎಸ್ ಎಸ್)ನ ಸೆಕ್ಷನ್ 310ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.
ಗಾಯಕಿ ನೇಹಾ ಸಿಂಗ್ ಅವರು ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿತ್ ಶಾ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಇತರ ಬಿಜೆಪಿ ಮುಖಂಡರ ಘನತೆಗೆ ಧಕ್ಕೆ ತಂದ್ದಾರೆ ಎಂದು ಆಪಾದಿಸಲಾಗಿದ್ದು, ಯಾವುದೇ ಕೇಂದ್ರ ಅಥವಾ ರಾಜ್ಯ ಸಚಿವರ ವಿರುದ್ಧ ಯಾವುದೇ ಮಾನಹಾನಿ ಪ್ರಕರಣವನ್ನು ಸರ್ಕಾರಿ ಅಭಿಯೋಜಕರು ಕೇಂದ್ರ ಅಥವಾ ರಾಜ್ಯ ಸರ್ಕಾರಗಳ ಪೂರ್ವಾನುಮತಿ ಪಡೆದು ಸಲ್ಲಿಸಬೇಕು. ಆದರೆ ಈ ಪ್ರಕರಣದಲ್ಲಿ ಹಾಗಾಗಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದ್ದಾಗಿ ಲೈವ್ಲಾ ಹೇಳಿದೆ.
ಈ ಮಧ್ಯೆ ತಮ್ಮನ್ನು ಎಫ್ಐಆರ್ನಲ್ಲಿ ತಪ್ಪಾಗಿ ಸಿಲುಕಿಸಲಾಗಿದೆ ಎಂದು ಆಪಾದಿಸಿ ನೇಹಾಸಿಂಗ್ ಮಂಗಳವಾರ ಅಲಹಾಬಾದ್ ಹೈಕೋರ್ಟ್ ನ ಲಕ್ನೋ ಪೀಠದಲ್ಲಿ ದಾವೆ ದಾಖಲಿಸಿದ್ದಾರೆ
ಅಭಯ್ ಪ್ರತಾಪ್ ಸಿಂಗ್ ಎಂಬ ಮತ್ತೊಬ್ಬರು ಕೂಡಾ ಹಜರತ್ ಗಂಜ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೇಶ ವಿರೋಧಿ ಹೇಳಿಕೆಗಳಿಗೆ ಸಾಮಾಜಿಕ ಜಾಲತಾಣ ಬಳಕೆ ಮಾಡಿಕೊಂಡ ಆರೋಪ ಹೊರಿಸಲಾಗಿದ್ದು, ಪೆಹಲ್ಗಾಮ್ ಘಟನೆ ಹಿನ್ನೆಲೆಯಲ್ಲಿ ಕೋಮು ಉದ್ವಿಗ್ನತೆಗೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಆಪಾದಿಸಲಾಗಿದೆ.