ಯಾರ ಸ್ಟಾರು? ಎಲ್ಲಿಗೆ ಲಿಂಕು?
ನೈಸರ್ಗಿಕ ಅನಾಹುತಗಳ ವೇಳೆ ಬೇರೆ ಸಂವಹನ ಮಾರ್ಗಗಳು ಇಲ್ಲದಿದ್ದಾಗ, ಭಾರತದ ಕುಗ್ರಾಮಗಳ ಮೂಲೆಗಳಿಗೆ ಇಂಟರ್ನೆಟ್ ಸಂಪರ್ಕದ ಮೂಲಕ ಶಿಕ್ಷಣ, ಆರೋಗ್ಯ ಸೇವೆಗಳನ್ನು, ಕೃಷಿ ಮಾಹಿತಿಗಳನ್ನು ತಲುಪಿಸುವ ಮೂಲಕ ಡಿಜಿಟಲ್ ಡಿವೈಡ್ ಅನ್ನು ತಗ್ಗಿಸುವ ನಿಟ್ಟಿನಲ್ಲಿ ಸ್ಯಾಟಲೈಟ್ ಇಂಟರ್ನೆಟ್ ಪರಿಣಾಮಕಾರಿ ಎಂಬುದು ನಿಜ. ಆದರೆ, ಸ್ಟಾರ್ ಲಿಂಕ್ ಆಗಮನದ ಮೂಲಕ ಭಾರತ ಕೆಂಡದುಂಡೆಗಳನ್ನು ಸೆರಗಿಗೆ ಕಟ್ಟಿಕೊಂಡಂತಾಗಿದೆ ಎಂಬುದೂ ಅಷ್ಟೇ ನಿಜ.
2020ರಲ್ಲಿ, ಭಾರತ ಸರಕಾರದ ಅನುಮತಿ ಇಲ್ಲದೆ ಅಕ್ರಮವಾಗಿ ಸ್ಯಾಟಲೈಟ್ ಇಂಟರ್ನೆಟ್ ಸಂಪರ್ಕ ಒದಗಿಸಿದ್ದ ‘ಸ್ಟಾರ್ ಲಿಂಕ್’ ಸಂಸ್ಥೆಗೆ ಭಾರತದ ಟೆಲಿಕಾಂ ಇಲಾಖೆ ನಿರ್ಬಂಧ ವಿಧಿಸಿತ್ತು.
2024ರ ನವೆಂಬರಿನಲ್ಲಿ ಅಂಡಮಾನ್ ಬಳಿ, ಮ್ಯಾನ್ಮಾರ್‌ನ ಟ್ರಾಲರ್ ದೋಣಿಯೊಂದರಲ್ಲಿ ದಾಖಲೆಯ 36,000 ಕೋಟಿ ರೂ. ಮೌಲ್ಯದ 5,500 ಕೆ.ಜಿ. ಮೆಥಾಂಫೆಟಾಮೈನ್ ಮಾದಕ ದ್ರವ್ಯವನ್ನು ಭಾರತೀಯ ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ಈ ಮಾದಕ ದ್ರವ್ಯ ಥಾಯ್ಲೆಂಡ್ ಕಡೆ ಸಾಗುತ್ತಿತ್ತು ಎನ್ನಲಾಗಿದೆ. ಆ ದೋಣಿಯಲ್ಲಿ ಸ್ಟಾರ್ ಲಿಂಕ್ ಮಿನಿ ಪೋರ್ಟಬಲ್ ಸ್ಯಾಟಲೈಟ್ ಸಂಪರ್ಕ ಪರಿಕರವನ್ನು ವಶಪಡಿಸಿಕೊಳ್ಳಲಾಗಿತ್ತು.
2023ರ ಡಿಸೆಂಬರಿನಲ್ಲಿ, ಗಲಭೆಗ್ರಸ್ತ ಮಣಿಪುರದಲ್ಲಿ ಸೇನೆ ಕಾರ್ಯಾಚರಣೆಯ ವೇಳೆ, ಸ್ಟಾರ್ ಲಿಂಕ್ ಸಂಪರ್ಕ ಪರಿಕರ ಬಳಕೆ ಪತ್ತೆ ಆಗಿತ್ತು. ಅಲ್ಲಿ ಅಶಾಂತಿಯ ಕಾರಣಕ್ಕೆ ಭಾರತ ಸರಕಾರ ಇಂಟರ್ನೆಟ್ ಸಂಪರ್ಕವನ್ನು ಕಡಿತಗೊಳಿಸಿದಾಗಲೆಲ್ಲ ಈ ಸಂವಹನ ಸಾಧನ ಬಳಕೆ ಆಗುತ್ತಿತ್ತು ಎನ್ನಲಾಗಿದೆ.
ಭಾರತದ ಸುತ್ತಮುತ್ತ ಭೂತಾನ್, ಬಾಂಗ್ಲಾ, ಶ್ರೀಲಂಕಾಗಳೆಲ್ಲ ಈಗಾಗಲೇ ಸ್ಟಾರ್ ಲಿಂಕ್ ಸಂಪರ್ಕ ಹೊಂದಿವೆ. ಸ್ಯಾಟಲೈಟ್ ಇಂಟರ್ನೆಟ್ ಸಂಪರ್ಕವನ್ನು ವ್ಯಾಪ್ತಿಯೊಳಗೆ ಸೀಮಿತಗೊಳಿಸಿಕೊಳ್ಳಲು ಜಿಯೊ ಫೆನ್ಸಿಂಗ್ ತಂತ್ರಜ್ಞಾನ ಲಭ್ಯವಿದೆಯಾದರೂ, ಅದು ನಿಖರವಾಗಿ ದೇಶದ ಗಡಿಗೆ ಸೀಮಿತವಾಗಿಲ್ಲದಿರುವುದರಿಂದ, ಭಾರತಕ್ಕೆ ಆ ದೇಶಗಳ ಗಡಿ ಭಾಗಗಳಲ್ಲಿ ಭದ್ರತೆಗೆ ‘ಸ್ಟಾರ್ ಲಿಂಕ್’ ಅಪಾಯಕಾರಿ ಆಗಿ ಪರಿಣಮಿಸಿದೆ.
ಇಂತಹದೊಂದು ಹಿನ್ನೆಲೆ ಇರುವ ಸ್ಟಾರ್ ಲಿಂಕ್ ಸಂಸ್ಥೆಗೆ, ಕಳೆದ ವಾರ ಭಾರತ ಸರಕಾರವು ಗ್ಲೋಬಲ್ ಮೊಬೈಲ್ ಪರ್ಸನಲ್ ಕಮ್ಯುನಿಕೇಷನ್ ಬೈ ಸ್ಯಾಟಲೈಟ್ (ಜಿಎಂಪಿಸಿಎಸ್) ಪರವಾನಿಗೆಯನ್ನು ಮಂಜೂರು ಮಾಡಿದೆ. ಈ ಸ್ಟಾರ್ ಲಿಂಕ್ ಎಂಬುದು ಅಮೆರಿಕದ ಅಧ್ಯಕ್ಷ ಟ್ರಂಪ್ ಅವರ ಗಳಸ್ಯ-ಕಂಠಸ್ಯರಾಗಿದ್ದು, ಇತ್ತೀಚೆಗಷ್ಟೇ ಶ್ವೇತಭವನದಿಂದ ಹೊರದೂಡಿಸಿಕೊಂಡಿರುವ ಉದ್ಯಮಪತಿ ಎಲಾನ್ ಮಸ್ಕ್ ಅವರ ‘ಸ್ಪೇಸ್ ಎಕ್ಸ್’ ಎಂಬ ಏರೊಸ್ಪೇಸ್ ಉದ್ಯಮ ಸಂಸ್ಥೆಯ ಉಪಸಂಸ್ಥೆ. 2019ರಲ್ಲಿ ಆರಂಭಗೊಂಡಿರುವ ಈ ಸಂಸ್ಥೆ ಇಂದು ಜಗತ್ತಿನಾದ್ಯಂತ 130 ದೇಶಗಳಲ್ಲಿ ತನ್ನ ಸ್ಯಾಟಲೈಟ್ ಆಧರಿತ ಇಂಟರ್ನೆಟ್ ಸೇವೆಗಳನ್ನು ಒದಗಿಸುತ್ತಿದೆ. ಇದಕ್ಕಾಗಿ ಸಂಸ್ಥೆಯು ಭೂಮಿಗೆ ತಗ್ಗಿನ ಕಕ್ಷೆಯಲ್ಲಿ ಸುತ್ತುಬರುವ (Low earth orbit - LEO) 7,600ಕ್ಕೂ ಮಿಕ್ಕಿ ಉಪಗ್ರಹಗಳನ್ನು ಹೊಂದಿದೆ ಮತ್ತು ಶೀಘ್ರವೇ 12,000ದಷ್ಟು ಇಂತಹ ಉಪಗ್ರಹಗಳನ್ನು ಹೊಂದಲು ತಯಾರಿ ನಡೆಸುತ್ತಿದೆ.
ಹೋದಲ್ಲೆಲ್ಲ ವಿವಾದ ಸೃಷ್ಟಿಸುವುದೇ ಅಭ್ಯಾಸ ಆಗಿರುವ ಉದ್ಯಮಿ ಎಲಾನ್ ಮಸ್ಕ್, ಅಮೆರಿಕದ ಅಧ್ಯಕ್ಷರ ಚುನಾವಣೆಯ ವೇಳೆ, ಡೊನಾಲ್ಡ್ ಟ್ರಂಪ್ ಅವರ ಚುನಾವಣೆ ಖರ್ಚನ್ನು ಬಹುತೇಕ ತಾನೇ ಭರಿಸುವ ಮೂಲಕ ಅವರ ಆಪ್ತವಲಯಕ್ಕೆ ಸೇರಿದ್ದರು. ಟ್ರಂಪ್ ಗೆದ್ದಾಗ, ಅಮೆರಿಕದ ಸರಕಾರಿ ವ್ಯವಸ್ಥೆಯಲ್ಲಿರುವ ಅನಗತ್ಯ ಖರ್ಚುಗಳನ್ನು ಕಡಿತಗೊಳಿಸಲು Department of Government Efficiency - DOGE ಎಂಬ ಅಧಿಕಾರ ಕೇಂದ್ರವನ್ನು ಹುಟ್ಟುಹಾಕಿದ್ದರು. ಅತ್ಯಂತ ಭದ್ರತೆಯ ಶ್ವೇತಭವನದಿಂದಲೇ ಕಾರ್ಯಾಚರಿಸುತ್ತಿದ್ದ ಈ ಆಔಉಇ ಮುಖ್ಯಸ್ಥರಾಗಿದ್ದ ಮಸ್ಕ್ ಅವರ ತಂಡವು ಫೆಬ್ರವರಿಯಲ್ಲಿ, ಶ್ವೇತಭವನದ ಆವರಣದಲ್ಲಿ, ಪಶ್ಚಿಮ ಭಾಗದಲ್ಲಿರುವ ಐಸೆನ್‌ಹಾವರ್ ಕಟ್ಟಡದ (The Eisenhower Executive Office Building - EEOB) ಮೇಲು ಮುಚ್ಚಿನ ತುದಿಯಲ್ಲಿ ತಮ್ಮ ಸ್ಟಾರ್ ಲಿಂಕ್ ಸ್ಯಾಟಲೈಟ್ ಸಂಪರ್ಕ ಸಾಧನವನ್ನು ಅಳವಡಿಸಿತ್ತು. ಅಮೆರಿಕದ ರಾಷ್ಟ್ರೀಯ ಭದ್ರತಾ ಮಂಡಳಿ, ಯುದ್ಧ ಸಂಬಂಧಿ ಕಚೇರಿ, ನೌಕಾಪಡೆಯ ಮುಖ್ಯಾಲಯಗಳಂತಹ ಮಹತ್ವದ ಕಚೇರಿಗಳನ್ನು ಹೊಂದಿರುವ ಈ ಕಟ್ಟಡದಲ್ಲಿ ಯಾರ ಅನುಮತಿಯೂ ಇಲ್ಲದೇ ಈ ಸ್ಯಾಟಲೈಟ್ ಇಂಟರ್ನೆಟ್ ಸಂಪರ್ಕವನ್ನು ಸ್ಥಾಪಿಸಲಾಗಿತ್ತಂತೆ. ಈ ಬಗ್ಗೆ ನ್ಯೂಯಾರ್ಕ್ ಟೈಮ್ಸ್ ಇತ್ತೀಚೆಗೆ ವರದಿ ಮಾಡಿದ ಬಳಿಕ, ಈ ಸುದ್ದಿ ವಿವಾದಕ್ಕೆ ಈಡಾಯಿತು. ಶ್ವೇತಭವನದ ಒಳಗೆ ಮೊಬೈಲ್ ಫೋನ್ ಬಳಕೆ, ಕಂಪ್ಯೂಟರ್ ನೆಟ್‌ವರ್ಕ್‌ಗಳಿಗೆ ಸಂಬಂಧಿಸಿದಂತೆ ಅತ್ಯಂತ ಬಿಗಿಯಾದ ಭದ್ರತಾ ವ್ಯವಸ್ಥೆಗಳಿವೆ. ಇದನ್ನೆಲ್ಲ ಮೀರಿ ಸ್ಥಾಪಿಸಲಾಗಿದ್ದ ಈ ಅನಧಿಕೃತ ಇಂಟರ್ನೆಟ್ ಸಂಪರ್ಕದ ಮೂಲಕ ಶ್ವೇತಭವನದ ಏನೆಲ್ಲ ಮಾಹಿತಿಗಳು ಹೊರಹೋಗಿವೆಯೋ ಯಾರಿಗೂ ಅಂದಾಜು ಇರುವಂತಿಲ್ಲ. ಆದರೆ, ಈಗ ಮಸ್ಕ್ ಶ್ವೇತಭವನದಿಂದ ಹೊರಬೀಳುತ್ತಲೇ, ಈ ವಿಚಾರ ಮಹತ್ವ ಪಡೆಯುತ್ತಿದೆ. ಮುಂದೆ ಇದು ಏನೆಲ್ಲ ತಿರುವು ಪಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಭಾರತ ಸರಕಾರದಿಂದ ಹೀಗೆ ಸ್ಯಾಟಲೈಟ್ ಆಧರಿತ ಇಂಟರ್ನೆಟ್ ಸೇವಾದಾತ ಸಂಸ್ಥೆಯಾಗಿ ಪರವಾನಿಗೆ ಪಡೆದಿರುವ ಮೂರನೇ ಸಂಸ್ಥೆ ಸ್ಟಾರ್ ಲಿಂಕ್. ಇನ್ನೆರಡು ಯುಟೆಲ್‌ಸ್ಯಾಟ್ ಸಂಸ್ಥೆಗೆ ಸೇರಿದ ವನ್ ವೆಬ್ ಮತ್ತು ರಿಲಯನ್ಸ್ ಜಿಯೊ. 2030ರ ಹೊತ್ತಿಗೆ ಭಾರತದಲ್ಲಿ ಸ್ಯಾಟಲೈಟ್ ಇಂಟರ್ನೆಟ್ ಮಾರುಕಟ್ಟೆ 16,000 ಕೋಟಿ ರೂ. ಗಾತ್ರದ್ದಾಗಲಿದೆ ಎಂದು ಮಾರುಕಟ್ಟೆ ಪರಿಣತರು ಅಂದಾಜಿಸಿದ್ದಾರೆ. ಜಾಗತಿಕವಾಗಿ ಇಂದು ಸ್ಟಾರ್ ಲಿಂಕ್‌ಗೆ 50 ಲಕ್ಷ ಗ್ರಾಹಕರಿದ್ದಾರೆ. ಅದೇ ವೇಳೆಗೆ ಭಾರತದಲ್ಲಿ, ಅವರಿಗೆ ಸ್ಪರ್ಧಿಗಳಾಗಿರುವ ಮತ್ತು ಸದ್ಯ ಸಾಂಪ್ರದಾಯಿಕ ಇಂಟರ್ನೆಟ್ ಸಂಪರ್ಕವನ್ನು ಮಾರುತ್ತಿರುವ ರಿಲಯನ್ಸ್ ಜಿಯೊ (47.24 ಕೋಟಿ), ಭಾರ್ತಿ ಏರ್‌ಟೆಲ್ (39 ಕೋಟಿ), ವೊಡಾಫೋನ್ ಐಡಿಯಾ (20.47) ಹಾಗೂ ಬಿಎಸ್ಸೆನ್ನೆಲ್ (9.09 ಕೋಟಿ) ಬಳಕೆದಾರರನ್ನು ಹೊಂದಿವೆ. ಈ ನಾಲ್ಕು ಕಂಪೆನಿಗಳ ಇಂಟರ್ನೆಟ್ ಟ್ರಾಫಿಕ್ ಗಾತ್ರ ಪ್ರತೀ ತಿಂಗಳಿಗೆ 2,301.2 ಕೋಟಿ ಜಿಬಿ ಆಗುವಷ್ಟಿದ್ದು, ಸ್ಟಾರ್ ಲಿಂಕ್ ಮತ್ತು ಕುಯಿಪರ್ (ಇದು ಅಮೆಝಾನ್‌ನ ಸ್ಯಾಟಲೈಟ್ ಇಂಟರ್ನೆಟ್ ಸೇವಾದಾತ ಸಂಸ್ಥೆ; ಅವರೂ ಭಾರತ ಪ್ರವೇಶಿಸುವ ಚಿಂತನೆಯಲ್ಲಿದ್ದಾರೆ.) ಸಂಸ್ಥೆಗಳು ಒಟ್ಟು ಸೇರಿ ಭಾರತದಲ್ಲಿ ಮಾಸಿಕ ಇನ್ನೂ 2,100.2 ಕೋಟಿ ಜಿಬಿ ಆಗುವಷ್ಟು ಡೇಟಾ ಹರಿವಿಗೆ ಕಾರಣ ಆಗಲಿದ್ದಾರೆ ಎಂದು ಮಾರುಕಟ್ಟೆ ಪರಿಣತರು ಅಭಿಪ್ರಾಯಪಡುತ್ತಿದ್ದಾರೆ. ಈ ನಡುವೆ ಏರ್‌ಟೆಲ್ ಮತ್ತು ಜಿಯೊಗಳೆರಡೂ ಕೂಡ ಸ್ಟಾರ್ ಲಿಂಕ್ ಸಂಪರ್ಕಗಳ ವಿತರಣೆಯ ಹಕ್ಕಿಗಾಗಿ ಮಸ್ಕ್ ಕಂಪೆನಿಯ ಜೊತೆ ಒಪ್ಪಂದ ಮಾಡಿಕೊಂಡಿವೆ.
ಸ್ಟಾರ್ ಲಿಂಕ್ ಭಾರತದಲ್ಲಿ ಕಾರ್ಯಾಚರಣೆ ಆರಂಭಿಸಲು 2022ರಿಂದಲೂ ಕಾಯುತ್ತಿದ್ದು, ಈಗ ಪರವಾನಿಗೆ ಸಿಕ್ಕಿದ ಬಳಿಕ ಸ್ಪೆಕ್ಟ್ರಂ ಖರೀದಿ, ಮೂಲಸೌಕರ್ಯ ರಚನೆ, ಭದ್ರತೆಯ ಭರವಸೆ ನೀಡುವುದು, ಸರಕಾರದ ಸುರಕ್ಷಾ ನಿಯಮಗಳನ್ನು ಪಾಲಿಸುವುದು, ಡೇಟಾ ಲೋಕಲೈಸೇಷನ್ ನಿಯಮ ಪಾಲನೆ ಇತ್ಯಾದಿ ಸಿದ್ಧತೆಗಳನ್ನು ಮಾಡಿಕೊಳ್ಳುವ ಅಗತ್ಯ ಇದೆ. ಟೆಲಿಕಾಂ ನಿಯಂತ್ರಣ ಪ್ರಾಧಿಕಾರವು (TRAI) ಅವರಿಗೆ ತಮ್ಮ ವಾರ್ಷಿಕ ಆದಾಯದ ಶೇ. 4ನ್ನು ಸರಕಾರಕ್ಕೆ ತೆರಬೇಕೆಂದು ಹೇಳಿದೆಯಂತೆ. ಇದು ಸ್ಪರ್ಧೆಗೆ ಎಲ್ಲರಿಗೂ ಸಮಾನ ಅವಕಾಶಗಳನ್ನು ನೀಡುವುದಿಲ್ಲ ಎಂಬ ದೂರು ಭಾರತೀಯ ಸ್ಪರ್ಧಿಗಳಿಗೆ ಇದೆ. ಇದನ್ನೆಲ್ಲ ಗಮನಿಸಿದರೆ, ಸ್ಟಾರ್ ಲಿಂಕ್‌ಗೆ ಏಕಾಏಕಿ ಭಾರತದ ಮಾರುಕಟ್ಟೆಯನ್ನು ಆಕ್ರಮಿಸಲು ಸಾಧ್ಯ ಆಗದು ಅನ್ನಿಸುತ್ತದೆ. ಸದ್ಯಕ್ಕೆ ಸ್ಟಾರ್ ಲಿಂಕ್ ತನ್ನ ಸಂಪರ್ಕ ಕಿಟ್‌ಗೆ 33,000 ರೂ. ಮತ್ತು ಮಾಸಿಕ ಚಂದಾ 3,000-4,200 ರೂ.ಗಳ ನಡುವೆ ಇರಿಸಿದೆಯಂತೆ. ಆರಂಭಿಕವಾಗಿ ಕೇವಲ 10 ಲಕ್ಷ ಪ್ರೀಮಿಯಂ ಗ್ರಾಹಕರು ಅದರ ಗುರಿಯಂತೆ.
ತನ್ನ ಧಣಿಯ ‘ವ್ಯಕ್ತಿತ್ವದ’ ಕಾರಣಕ್ಕಾಗಿ ಯಾವುದೇ ಕ್ಷಣದಲ್ಲಿ ಯಾರಿಗೂ ತಲೆನೋವು ಆಗಬಲ್ಲ, ದೇಶದ ಡೇಟಾ-ಸುರಕ್ಷತೆ-ಭದ್ರತೆಗಳಿಗೆ ಆತಂಕ ತರಬಲ್ಲ ಸ್ಟಾರ್ ಲಿಂಕ್ ಭಾರತಕ್ಕೆ ಬಂದಾಗಿದೆ. ನೈಸರ್ಗಿಕ ಅನಾಹುತಗಳ ವೇಳೆ ಬೇರೆ ಸಂವಹನ ಮಾರ್ಗಗಳು ಇಲ್ಲದಿದ್ದಾಗ, ಭಾರತದ ಕುಗ್ರಾಮಗಳ ಮೂಲೆಗಳಿಗೆ ಇಂಟರ್ನೆಟ್ ಸಂಪರ್ಕದ ಮೂಲಕ ಶಿಕ್ಷಣ, ಆರೋಗ್ಯ ಸೇವೆಗಳನ್ನು, ಕೃಷಿ ಮಾಹಿತಿಗಳನ್ನು ತಲುಪಿಸುವ ಮೂಲಕ ಡಿಜಿಟಲ್ ಡಿವೈಡ್ ಅನ್ನು ತಗ್ಗಿಸುವ ನಿಟ್ಟಿನಲ್ಲಿ ಸ್ಯಾಟಲೈಟ್ ಇಂಟರ್ನೆಟ್ ಪರಿಣಾಮಕಾರಿ ಎಂಬುದು ನಿಜ. ಆದರೆ, ಸ್ಟಾರ್ ಲಿಂಕ್ ಆಗಮನದ ಮೂಲಕ ಭಾರತ ಕೆಂಡದುಂಡೆಗಳನ್ನು ಸೆರಗಿಗೆ ಕಟ್ಟಿಕೊಂಡಂತಾಗಿದೆ ಎಂಬುದೂ ಅಷ್ಟೇ ನಿಜ.