ಬೇಲಿ ಹಾಕುವ ಮೊದಲೇ ಡೇಟಾ ಚಿನ್ನ ‘ಆನಿ’ ಪಾಲು ಮಾಡಲಿದೆಯೇ ಪಿಎಂ ಗತಿಶಕ್ತಿ?
ಯಾವುದೇ ಸ್ವಸ್ಥ ಸರಕಾರದ ಪ್ರಾಥಮಿಕ ಜವಾಬ್ದಾರಿ ಎಂದರೆ ತನ್ನ ಬಳಿ ದಾಸ್ತಾನಿರುವ ಪ್ರಜೆಗಳ ಡೇಟಾಗಳನ್ನು ಭದ್ರಪಡಿಸುವುದಕ್ಕೆ ಸಂಭಾವ್ಯ ಎಲ್ಲ ಕ್ರಮಗಳನ್ನೂ ಕೈಗೊಳ್ಳುವುದು. ಈ ಸಹಜ ಹಾದಿಗೆ ಭಿನ್ನವಾಗಿ, ಸ್ವತಃ ಸರಕಾರವೇ ಮುಂದೆ ನಿಂತು ಖಾಸಗಿಯವರಿಗೆ ಡೇಟಾಗಳನ್ನು ತಟ್ಟೆಯಲ್ಲಿಟ್ಟು ಒದಗಿಸುತ್ತಿರುವುದು ಮತ್ತು ಡೇಟಾ ಭದ್ರತೆಯ ಕಾಯ್ದೆ ಜಾರಿಗೆ ತರಲು ಹಿಂದೇಟು ಹಾಕುತ್ತಿರುವುದು ಆತಂಕಕಾರಿ.
ಪಿಎಂ ಗತಿಶಕ್ತಿ-ನ್ಯಾಷನಲ್ ಮಾಸ್ಟರ್ ಪ್ಲಾನ್ (PMGS-NMP) ಎಂಬುದು ಮೂಲತಃ ಭಾರತ ಸರಕಾರದ 16 ಸಚಿವಾಲಯಗಳ ಸಂಯೋಜನೆಯಲ್ಲಿ ಮೂಲಸೌಕರ್ಯ-ಸಂಪರ್ಕ ಸಂಬಂಧಿ ಯೋಜನೆಗಳ ಅನುಷ್ಠಾನಕ್ಕೆ ಸುಗಮ ಹಾದಿ ತೆರೆಯುವ ಉದ್ದೇಶವಿದ್ದ ಡಿಜಿಟಲ್ ಪ್ಲಾಟ್‌ಫಾರಂ. ದೇಶದಾದ್ಯಂತ ಜನ, ಸರಕು, ಸೇವೆಗಳ ಸಂಚಲನವನ್ನು ಸುಸೂತ್ರಗೊಳಿಸುವುದು ಈ ಪ್ಲಾಟ್‌ಫಾರಂನ ಉದ್ದೇಶ.
ಈ ವಾರದ ಆರಂಭದಲ್ಲಿ (ಅಕ್ಟೋಬರ್ 13) ಸದ್ರಿ ಪಿಎಂ-ಗತಿಶಕ್ತಿ ತನ್ನ ಅಸ್ತಿತ್ವದ 4ನೇ ವರ್ಷವನ್ನು ಆಚರಿಸಿಕೊಂಡಿತು. ಸಮಾರಂಭದಲ್ಲಿ ಅತಿಥಿ ಆಗಿದ್ದ ಭಾರತ ಸರಕಾರದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು, ಭಾರತವನ್ನು 2047ರ ಹೊತ್ತಿಗೆ ಅಭಿವೃದ್ಧಿ ಹೊಂದಿದ ದೇಶವಾಗಿ ಮಾರ್ಪಡಿಸುವ ಹಾದಿಯಲ್ಲಿ ‘ಮೂಲಸೌಕರ್ಯಗಳ ಯೋಜಿಸುವಿಕೆ-ಅಭಿವೃದ್ಧಿ ಎಕೊ ಸಿಸ್ಟಮ್‌ಗೆ’ ಪೂರಕ ಅನ್ನಿಸುವ ಹಲವು ಕಾರ್ಯಕ್ರಮಗಳನ್ನು ಉದ್ಘಾಟಿಸಿದರು.
ಅವುಗಳಲ್ಲಿ ಬಹಳ ಮುಖ್ಯವಾದ ಬೆಳವಣಿಗೆ ಎಂದರೆ, ಖಾಸಗಿ ವಲಯದವರಿಗೆ ಅಂದು ಪಿಎಂ ಗತಿಶಕ್ತಿ ನ್ಯಾಷನಲ್ ಮಾಸ್ಟರ್ ಪ್ಲಾನ್ (NMP) ಪ್ಲಾಟ್‌ಫಾರಂಗೆ ಪ್ರವೇಶಾವಕಾಶ ತೆರೆಯಲಾಯಿತು. ಭಾಸ್ಕರಾಚಾರ್ಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಸ್ಪೇಸ್ ಅಪ್ಲಿಕೇಷನ್ಸ್ ಆಂಡ್ ಜಿಯೋ-ಇನ್‌ಫಾರ್ಮ್ಯಾಟಿಕ್ಸ್ (BISAG-N) ಅಭಿವೃದ್ಧಿಪಡಿಸಿರುವ ಈ ಹೊಸ ವಿಶ್ಲೇಷಣಾ ವ್ಯವಸ್ಥೆಯ ಅಡಿಯಲ್ಲಿ ಖಾಸಗಿಯವರು ದೇಶದ ಜಿಯೋ ಸ್ಪಾಷಿಯಲ್ (ಅಂದರೆ ಭೌಗೋಳಿಕ ಡೇಟಾ, ಮೂಲ ಸೌಕರ್ಯ ಡೇಟಾ ಇತ್ಯಾದಿ) ಡೇಟಾಗಳನ್ನು ತಮ್ಮ ಬಳಕೆಗೆ ಪಡೆಯಬಹುದು. ಖಾಸಗಿ ಸಂಸ್ಥೆಗಳು, ಕನ್ಸಲ್ಟೆಂಟ್‌ಗಳು, ಸಂಶೋಧಕರು ಮತ್ತು ನಾಗರಿಕರಿಗೆ ಈ ಪ್ಲಾಟ್‌ಫಾರಂ ಪ್ರವೇಶಕ್ಕೆ ಅವಕಾಶ ಇದ್ದು, ಮೂಲಸೌಕರ್ಯ ಯೋಜನೆ, ಹೂಡಿಕೆ ನಿರ್ಧಾರಗಳ ಕುರಿತು ತೀರ್ಮಾನ ತೆಗೆದುಕೊಳ್ಳುವಲ್ಲಿ ಅವರಿಗೆ ಈ ಪ್ಲಾಟ್‌ಫಾರಂ ಸಹಾಯ ಮಾಡಲಿದೆಯಂತೆ. ಸರಕಾರವು ‘ಸೂಕ್ಷ್ಮವಲ್ಲದ’ ಎಂದು ಹೇಳಿರುವ ಸುಮಾರು 230 ಅಧಿಕೃತ ಡೇಟಾಸೆಟ್‌ಗಳನ್ನು ಖಾಸಗಿಯವರು ಇಲ್ಲಿ ಪಡೆಯಬಹುದು (ಇದರಲ್ಲಿ ಭೌತಿಕ ಮತ್ತು ಸಾಮಾಜಿಕ ಮೂಲಸೌಕರ್ಯ ಸಂಬಂಧಿ ಆಸ್ತಿಗಳು, ಸ್ಥಳ ಸೂಕ್ತವೇ ಎಂಬ ವಿಶ್ಲೇಷಣೆಗಳು, ಸಂಪರ್ಕ ಮ್ಯಾಪಿಂಗ್, ಅಲೈನ್‌ಮೆಂಟ್ ಪ್ಲಾನಿಂಗ್, ನಿಯಮ ಪಾಲನೆ ಆಗಿರುವ ಕುರಿತು ಪರಿಶೀಲನೆ, ಇತ್ಯಾದಿ ವಿಚಾರಗಳ ಬಗ್ಗೆ ಬಹುಪದರಗಳ ಜಿಯೋ ಸ್ಪಾಷಿಯಲ್ ಡೇಟಾ ಲಭ್ಯ) ಎಂದು ಸರಕಾರದ ಪ್ರಕಟಣೆ (PID release id: 2178521) ಹೇಳುತ್ತದೆ.
ಇದಲ್ಲದೆ ಈ ಯೋಜನೆಗೆ ಸಂಬಂಧಿಸಿದ ಡ್ಯಾಷ್‌ಬೋರ್ಡ್, ಡೇಟಾ ಅಪ್‌ಲೋಡಿಂಗ್ ಮ್ಯಾನೇಜ್‌ಮೆಂಟ್ ಸಿಸ್ಟಮ್ (ಡಿಯುಎಂಎಸ್) ನಾಲೇಜ್ ಮ್ಯಾನೇಜ್‌ಮೆಂಟ್ ಸಿಸ್ಟಮ್ (ಕೆಎಂಎಸ್), ದೂರ ತೀರದ ಮಾಹಿತಿಗಳನ್ನೊಳಗೊಂಡ PMGS-Offshoreಗಳನ್ನು ಕೂಡ ಸಚಿವರು ಬಿಡುಗಡೆ ಮಾಡಿದರು. ಮಾತ್ರವಲ್ಲ, ಆಸ್ಪಿರೇಷನಲ್ ಜಿಲ್ಲೆಗಳಿಗೆ ಸಂಬಂಧಿಸಿದ PMGS ಜಿಲ್ಲಾ ಮಾಸ್ಟರ್ ಪ್ಲಾನ್ (ಡಿಎಂಪಿ) ಇತ್ಯಾದಿಗಳನ್ನೂ ಅವರು ಬಿಡುಗಡೆ ಮಾಡಿದ್ದರು.
ಸಮಾರಂಭದಲ್ಲಿ ಭಾಷಣ ಮಾಡುತ್ತಾ ಸಚಿವ ಗೋಯಲ್ ಅವರು, ಖಾಸಗಿಯವರ ಯೋಜನೆಗಳ ಅನುಷ್ಠಾನದಲ್ಲಿ ಮ್ಯಾಕ್ರೊ ಮತ್ತು ಮೈಕ್ರೊ ಮಟ್ಟಗಳ ನಡುವಿನ ಸೇತುವೆ ಆಗಿ ಈ ವ್ಯವಸ್ಥೆ ಉಪಯೋಗಕ್ಕೆ ಬರಲಿದೆ ಎಂದು ಹೇಳಿದ್ದಾರೆ. ದೇಶದ ಅಭಿವೃದ್ಧಿಗೆ ಸಂಬಂಧಿಸಿದಂತೆ ಈ ಬೆಳವಣಿಗೆಯು ಆಟದ ನಿಯಮಗಳನ್ನೇ ಬದಲಿಸಲಿದೆ. ಪಿಎಂ ಗತಿಶಕ್ತಿ ಈಗ ಕೇವಲ ರಸ್ತೆ - ರೈಲು ಹಾದಿಗಳ ಸೂಚಕವಾಗಿ ಸೀಮಿತ ಅಲ್ಲ; ಈ ಹೊಸ ವ್ಯವಸ್ಥೆಯ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ಯೋಜನೆ ಮತ್ತು ಅನುಷ್ಠಾನಗಳಿಗೆ ಗಾಢವಾದ ಏಕತ್ರೀಕರಣ ಸಾಧ್ಯವಾಗಲಿದೆ ಎಂದಿದ್ದಾರೆ. ದೇಶದ 112 ಆಸ್ಪಿರೇಷನಲ್ ಜಿಲ್ಲೆಗಳ ಮಾಸ್ಟ್‌ಪ್ಲಾನ್ ಮೂಲಕ, ಪ್ರತೀ ಜಿಲ್ಲೆಯ ಆರೋಗ್ಯ ಆರೈಕೆ, ಶಿಕ್ಷಣ, ಲಾಜಿಸ್ಟಿಕ್ಸ್, ಕೈಗಾರಿಕಾ ಅಭಿವೃದ್ಧಿ, ಪರಿಸರ ನಿರ್ವಹಣೆ, ಸುರಕ್ಷತೆ ಮತ್ತು ಭದ್ರತೆ, ಖನಿಜ ಸಂಪನ್ಮೂಲ ಬಳಕೆ ಹಾಗೂ ನವೀಕರಿಸಬಲ್ಲ ಇಂಧನ ಉತ್ಪಾದನೆ ಕ್ಷೇತ್ರಗಳಲ್ಲಿ ಡೇಟಾ ಸಂಗ್ರಹದ ಮೂಲಕ ಪ್ರದೇಶಾಧಾರಿತ ಯೋಜನೆಗಳನ್ನು ರೂಪಿಸುವವರಿಗೆ ಬೆಂಬಲ ಒದಗಿಸಲಾಗುವುದು. ಹಾಗಾಗಿ ಪಿಎಂ ಗತಿಶಕ್ತಿ ಈಗ ಪೀಸ್ ಮೀಲ್ ದೃಷ್ಟಿಕೋನದ ಬದಲು ಏಕೀಕೃತ ಯೋಜನೆಯ ಮಾದರಿಯಾಗಿ ಮಹತ್ವದ ಬದಲಾವಣೆ ಕಂಡಂತಾಗಿದೆ ಎಂದು ಸಚಿವರು ಹೇಳಿದ್ದಾರೆ (PIB Release id- 2178500).
DPDP ನಿಯಮಗಳಲ್ಲಿ ವಿಳಂಬ
ಡೇಟಾ ನಿರ್ವಹಣೆಗೆ ಸಂಬಂಧಿಸಿದಂತೆ, ಅತ್ತೂ ಕರೆದು, ಕಡೆಗೂ DPDP ಕಾಯ್ದೆಯನ್ನು ಸಂಸತ್ತು ಅಂಗೀಕರಿಸಿದ ಬಳಿಕ, 2023ರ ಆಗಸ್ಟ್ 11ರಂದು ಅದಕ್ಕೆ ರಾಷ್ಟ್ರಪತಿಗಳ ಅಂಕಿತ ಬಿದ್ದಿದೆ. ಈ ಕಾಯ್ದೆ ಜಾರಿಗೆ ಬಂದು 2 ವರ್ಷಗಳು ಕಳೆದರೂ, ಇವತ್ತಿನ ತನಕ ಈ ಕಾಯ್ದೆಯ ಅನುಷ್ಠಾನಕ್ಕೆ ಹಾದಿಮಾಡಿಕೊಡುವ ನಿಯಮಗಳನ್ನು ಸರಕಾರ ಅಂತಿಮಗೊಳಿಸಿಲ್ಲ. 2025ರ ಜನವರಿ 3ರಂದು ಕರಡು ನಿಯಮಗಳನ್ನು ಪ್ರಕಟಸಲಾಗಿದೆಯಾದರೂ, ಅವು ಇನ್ನೂ ಅಂತಿಮಗೊಂಡಿಲ್ಲ. ಹಾಗಾಗಿ DPDP ಕಾಯ್ದೆ ಸದ್ಯಕ್ಕೆ ಊಟಕ್ಕಿಲ್ಲದ ಉಪ್ಪಿನಕಾಯಿ.
ಸರಕಾರ ಡೇಟಾ ಸಂರಕ್ಷಣೆಗೆಂದು ಸಿದ್ಧಪಡಿಸಿರುವ DPDP ಕಾಯ್ದೆಯನ್ನು ಅನುಷ್ಠಾನಗೊಳಿಸಿ, ಬೇಲಿ ಭದ್ರಪಡಿಸಿಕೊಳ್ಳುವ ಮುನ್ನವೇ, ಡೇಟಾಗಳಿಗೆ ಈ ರೀತಿಯ ಪ್ರವೇಶಾವಕಾಶವನ್ನು ಖಾಸಗಿ ವಲಯಕ್ಕೆ ನೀಡುತ್ತಿರುವುದು ಸ್ವಲ್ಪ ಆತಂಕಕಾರಿ ಸಂಗತಿ. ಏಕೆಂದರೆ ಡೇಟಾ ಇಂದು ಎರಡನೇ ಚಿನ್ನ. ಈಗ ಚಿನ್ನದ ದರ ಎಷ್ಟು ಅಂತ ಗೊತ್ತುಂಟಲ್ಲ..!
DPDP ಕಾಯ್ದೆಯ ಮೂಲ ಉದ್ದೇಶ:
ಡೇಟಾ ದಾಸ್ತಾನುಗಾರರು (Data fiduciary) ಮತ್ತು ಸಂಸ್ಕರಿಸುವವರ (Data processers) ಜವಾಬ್ದಾರಿಗಳನ್ನು ನಿರ್ದಿಷ್ಟಪಡಿಸುವುದು, ದಾಸ್ತಾನುಗಾರರು ಡೇಟಾ ಸಂಗ್ರಹದ ಉದ್ದೇಶವನ್ನು ಖಚಿತವಾಗಿ ಹೇಳುವುದು ಮತ್ತು ಹೇಳಿದ ಉದ್ದೇಶಕ್ಕೆ ತಕ್ಕದಾದಷ್ಟೇ ಡೇಟಾವನ್ನು ಸಂಗ್ರಹಿಸಿ-ಬಳಸುವುದು, ಹೇಳಿರುವ ಉದ್ದೇಶಕ್ಕೆ ಹೊರತಾಗಿ ಬೇರೆ ಯಾವುದಕ್ಕೂ ಅದನ್ನು ಬಳಸದಿರುವುದು ಹಾಗೂ ಉದ್ದೇಶ ಪೂರ್ಣಗೊಂಡ ಬಳಿಕ ಡೇಟಾ ದಾಸ್ತಾನನ್ನು ನಾಶಪಡಿಸುವ ಮೂಲಕ ಡೇಟಾ ಮೂಲವ್ಯಕ್ತಿಗಳ (Data principles) ಖಾಸಗಿತನವನ್ನು ಕಾಪಾಡುವುದು - ಇವೆಲ್ಲ ಡೇಟಾ ದಾಸ್ತಾನುಗಾರರ ಕರ್ತವ್ಯ.
ಈ DPDP ಕಾಯ್ದೆಯ ಕುರಿತು ಇರುವ ಬಹುಮುಖ್ಯವಾದ ಆಕ್ಷೇಪ ಎಂದರೆ, ದೇಶದ ಅತಿದೊಡ್ಡ ಡೇಟಾ ದಾಸ್ತಾನುಗಾರ ಆಗಿರುವ ಭಾರತ ಸರಕಾರವು ತನ್ನನ್ನು ಮತ್ತು ರಾಜ್ಯ ಸರಕಾರಗಳನ್ನು ಮಾತ್ರವಲ್ಲದೇ ತಾನು ಗುರುತಿಸಬಹುದಾದ ಸಂಸ್ಥೆಗಳನ್ನು ಈ ಕಾಯ್ದೆಯ ವ್ಯಾಪ್ತಿಯಿಂದ ಹೊರಗಿರಿಸಿಕೊಂಡಿದೆ. ದೇಶದ ಭದ್ರತೆಗೆ ಸಂಬಂಧಿಸಿದ ಅಥವಾ ದೇಶದ ಹಿತಾಸಕ್ತಿಗಳಿಗೆ ಸಂಬಂಧಿಸಿದ ಸಂಗತಿಗಳನ್ನು ಈ ಕಾಯ್ದೆಯ ವ್ಯಾಪ್ತಿಯಿಂದ ಹೊರಗಿರಿಸಿಕೊಳ್ಳುವುದಕ್ಕೆ ಅರ್ಥ ಇದೆ. ಉಳಿದ ಸಂಗತಿಗಳ ಕುರಿತು ಸರಕಾರ ಕೂಡಾ ಡೇಟಾ ನಿರ್ವಹಣೆ ಯಲ್ಲಿ ಜವಾಬ್ದಾರಿಯುತವೂ ಉತ್ತರದಾಯಿಯೂ ಆಗಿರಬೇಕಾದುದು ಅಗತ್ಯ. ಜಗತ್ತಿನ ಎಲ್ಲೆಡೆ ಬಹುತೇಕ ವ್ಯವಸ್ಥೆ ಹೀಗೇ ಇದೆ.
ಭಾರತದಲ್ಲಿ ಸರಕಾರಕ್ಕೆ DPDP ಕಾಯ್ದೆಯಲ್ಲಿ ಈ ಮಟ್ಟಿಗಿನ ಸಡಿಲು ಸಿಕ್ಕಿರುವುದರಿಂದ, ಹಲವು ಅಪಾಯ ಸಾಧ್ಯತೆಗಳಿವೆ. ಕಾನೂನು ಅನುಷ್ಠಾನಕ್ಕೆ ಬರುವ ಮೊದಲೇ ಸರಕಾರ ಈ ಗಡಿಬಿಡಿ ತೋರಿಸುತ್ತಿರುವುದು ಕೂಡ ಹಲವು ಸಂಶಯದ ಬೆರಳುಗಳನ್ನು ಎತ್ತುತ್ತವೆ. ಇಂದು ಡೇಟಾ ಜಗತ್ತು ಹೇಗಿದೆ ಎಂದರೆ, ಸಿಕ್ಕಿದ ಪ್ರತಿಯೊಂದು ಅಂಕಿ-ಸಂಖ್ಯೆ ಕೂಡ ಅದರಲ್ಲಿ ಹಿತಾಸಕ್ತಿ ಹೊಂದಿರುವವರಿಗೆ ಚಿನ್ನವಾಗಿ ಪರಿಣಮಿಸಬಹುದು. ಇಂದು ಆಧಾರ್ ತಳಪಾಯವನ್ನು ಆಧರಿಸಿಕೊಂಡು ‘ಇಂಡಿಯಾ ಸ್ಟ್ಯಾಕ್’ ಎಂಬ ಹಲವು ಪದರುಗಳ ಬೃಹತ್ ಡೇಟಾ ಸಮುಚ್ಚಯ ರೂಪುಗೊಳ್ಳುತ್ತಿದೆ. ಆರೋಗ್ಯ, ಶಿಕ್ಷಣ, ವಾಣಿಜ್ಯ, ಸರಕಾರಿ ಸೇವೆಗಳು, ಕೃಷಿ, ಸಹಕಾರ, ಸಾರಿಗೆ, ಸಂವಹನ ಸೇರಿದಂತೆ ಬಹುತೇಕ ಎಲ್ಲ ಸೇವೆಗಳು ಮತ್ತು ಅಲ್ಲಿಂದ ಹೊರಹೊಮ್ಮುವ, ದೇಶದ ಪ್ರಜೆಗಳ ಡೇಟಾಗಳು ಬೇರೆಬೇರೆ ಹಂತಗಳಲ್ಲಿ ಸರಕಾರಿ ದಾಸ್ತಾನಿನಲ್ಲಿ ಲಭ್ಯ. ಇವಕ್ಕೆ ಯಾವ ಸ್ಪಷ್ಟ ನಿಯಂತ್ರಣವೂ ಸದ್ಯಕ್ಕೆ ಇದ್ದಂತಿಲ್ಲ. ಸೀಮಿತ ನಿಯಂತ್ರಣ ಅಕಸ್ಮಾತ್ ಇದ್ದರೂ, ಅವುಗಳ ಕಳ್ಳತನಕ್ಕೆ ಕಳ್ಳಗಿಂಡಿಗಳೂ ಸಾಕಷ್ಟಿರುವಂತಿವೆ. ಹಾಗಾಗಿಯೇ ಇಂದು ಡಿಜಿಟಲ್ ವಂಚನೆ/ಅಪರಾಧಗಳು/ಡೀಪ್ ಫೇಕ್ ಕೆಡುಕುಗಳು ಪ್ರತಿದಿನ ಎಂಬಂತೆ ಸಂಭವಿಸುತ್ತಿವೆ.
ಇಂತಹ ಸನ್ನಿವೇಶದಲ್ಲಿ ಯಾವುದೇ ಸ್ವಸ್ಥ ಸರಕಾರದ ಪ್ರಾಥಮಿಕ ಜವಾಬ್ದಾರಿ ಎಂದರೆ ತನ್ನ ಬಳಿ ದಾಸ್ತಾನಿರುವ ಪ್ರಜೆಗಳ ಡೇಟಾಗಳನ್ನು ಭದ್ರಪಡಿಸುವುದಕ್ಕೆ ಸಂಭಾವ್ಯ ಎಲ್ಲ ಕ್ರಮಗಳನ್ನೂ ಕೈಗೊಳ್ಳುವುದು. ಈ ಸಹಜ ಹಾದಿಗೆ ಭಿನ್ನವಾಗಿ, ಸ್ವತಃ ಸರಕಾರವೇ ಮುಂದೆ ನಿಂತು ಖಾಸಗಿಯವರಿಗೆ ಡೇಟಾಗಳನ್ನು ತಟ್ಟೆಯಲ್ಲಿಟ್ಟು ಒದಗಿಸುತ್ತಿರುವುದು ಮತ್ತು ಡೇಟಾ ಭದ್ರತೆಯ ಕಾಯ್ದೆ ಜಾರಿಗೆ ತರಲು ಹಿಂದೇಟು ಹಾಕುತ್ತಿರುವುದು ಆತಂಕಕಾರಿ. ಸದ್ಯದ ಸನ್ನಿವೇಶದಲ್ಲಿ ಸರಕಾರ DPDP ಕಾಯ್ದೆಯ ನಿಯಮಗಳನ್ನು ಜಾರಿಗೆ ತರಲು ಮೀನಮೇಷ ಎಣಿಸುತ್ತಿರುವುದು ಬೇರೆಯೇ ಅರ್ಥಗಳನ್ನು ಹೊರಹೊಮ್ಮಿಸುವ ಸಾಧ್ಯತೆಗಳಿವೆ.