ಜಾತಿ ಗಣತಿ: ಸಿದ್ದರಾಮಯ್ಯನವರಿಗೆ ಅಗ್ನಿಪರೀಕ್ಷೆ

ಭಾರತದಲ್ಲಿ ಬುದ್ಧ, ಮಹಾವೀರರ ಕಾಲದಲ್ಲಿ ಆರಂಭವಾದ ಆರೋಗ್ಯಕರ ಸಮಾಜ ರೂಪಿಸುವ ಕಾರ್ಯ ಆಗಾಗ ಹಿನ್ನಡೆ ಅನುಭವಿಸುತ್ತಲೇ ಬಂದಿದೆ. ಮನುವಾದಿಗಳ ಹೊಡೆತದಿಂದ ನಿಂತು ಹೋಗಿದ್ದ ಈ ಪರಿವರ್ತನಾ ರಥವನ್ನು ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರು ಮುಂದಕ್ಕೊಯ್ಯಲು ಯತ್ನಿಸಿದರು.ಅಕ್ಷರ ವಂಚಿತ ಸಮುದಾಯಗಳಿಂದ ವಚನಕಾರರು ಬಂದರು. ಆದರೆ ಜೀವ ವಿರೋಧಿ ಶಕ್ತಿಗಳು ಅಡ್ಡಹಾಕಿದವು. ಮಹಾರಾಷ್ಟ್ರದ ಸಂತರ ಚಳವಳಿಗೂ ಇದೇ ಗತಿಯಾಯಿತು. ಹೀಗೆ ಏಟು ತಿನ್ನುತ್ತ ಬಂದ ಬದಲಾವಣೆಯ ರಥವನ್ನು ಬಾಬಾಸಾಹೇಬರು ಮತ್ತೆ ಚುರುಕು ಗೊಳಿಸಿದರು. ಹಿಂದಿನವರು ಯಾರೂ ನೀಡದ ಸಂವಿಧಾನ ಎಂಬ ಅಸ್ತ್ರ ಬಳಸಿದರು. ಈಗ ಸಂವಿಧಾನದ ವಿರುದ್ಧವೂ ಮಸಲತ್ತು ನಡೆದಿದೆ. ಈ ಹಿನ್ನೆಲೆಯಲ್ಲಿ ಜಾತಿ ಗಣತಿ ಮಹತ್ವದ್ದಾಗಿದೆ.ಇದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಗ್ನಿ ಪರೀಕ್ಷೆ ಎಂದರೆ ಅತಿಶಯೋಕ್ತಿಯಲ್ಲ.

Update: 2024-03-04 07:11 GMT

ಕರ್ನಾಟಕದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದ ಹಿಂದುಳಿದ ವರ್ಗಗಳ ಶಾಸ್ವತ ಆಯೋಗ ನಡೆಸಿದ್ದ ಜಾತಿವಾರು ಜನಗಣತಿ (ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2015) ವರದಿಯನ್ನು ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ಕೆಲ ಬಲಿಷ್ಠ ಸಮುದಾಯಗಳ ತೀವ್ರ ವಿರೋಧದ ನಡುವೆ ಕೊನೆಗೂ ಸ್ವೀಕರಿಸಿದೆ. ಇದರ ಬಗ್ಗೆ ಸಹಜವಾಗಿ ಬಿಜೆಪಿ ಮತ್ತು ಜೆಡಿಎಸ್ ನಾಯಕರಿಂದ ಹಾಗೂ ಕೆಲವು ಮಠಾಧೀಶರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಆದರೆ, ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಸಮುದಾಯಗಳು ಸ್ವಾಗತಿಸಿವೆ.

ಈ ವರದಿಯನ್ನು ಸ್ವೀಕರಿಸುವ ಮೂಲಕ ಸಿದ್ದರಾಮಯ್ಯನವರು ಬಹುದೊಡ್ಡ ರಿಸ್ಕ್ ತೆಗೆದುಕೊಂಡಿದ್ದಾರೆ. 1973-74ರಲ್ಲಿ ಹಾವನೂರು ಆಯೋಗದ ವರದಿಯನ್ನು ಸ್ವೀಕರಿಸುವಾಗಲೂ ಆಗಿನ ಮುಖ್ಯಮಂತ್ರಿ ದೇವರಾಜ ಅರಸು ಅವರು ಇಂಥದ್ದೇ ರಿಸ್ಕ್ ತೆಗೆದುಕೊಂಡಿದ್ದರು. ಈಗ ಸಿದ್ದರಾಮಯ್ಯನವರು ಸ್ವಪಕ್ಷದಲ್ಲೇ ಘಟಾನುಘಟಿಗಳಿಂದ ವಿರೋಧ ಬಂದರೂ ಸೊಪ್ಪು ಹಾಕದೇ ವರದಿಯನ್ನು ಸ್ವೀಕರಿಸಿದ್ದಾರೆ. ರಾಜ್ಯದ ಎಲ್ಲಾ ಕುಟುಂಬಗಳ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಯನ್ನು ಅರಿಯಲು ಕಾಂತರಾಜು ನೇತೃತ್ವದ ಹಿಂದುಳಿದ ವರ್ಗಗಳ ಆಯೋಗ 2015 ರಲ್ಲಿ ಸಮೀಕ್ಷೆ ನಡೆಸಿತ್ತು. ಇದಕ್ಕಾಗಿ 158.47 ಲಕ್ಷ ರೂಪಾಯಿ ಖರ್ಚಾಗಿದೆ. ಆದರೆ, ಸರಕಾರಕ್ಕೆ ವರದಿ ಸಲ್ಲಿಕೆಯಾಗಿರಲಿಲ್ಲ. ಒಂಭತ್ತು ವರ್ಷಗಳ ನಂತರ ವರದಿ ಸಲ್ಲಿಕೆಯಾಗಿದೆ.

ಈ ವರದಿಯಲ್ಲಿ ನಿರ್ದಿಷ್ಟವಾಗಿ ಏನಿದೆ ಎಂಬುದು ಯಾರಿಗೂ ಗೊತ್ತಿಲ್ಲ. ಸರಕಾರ ವರದಿಯನ್ನು ಸ್ವೀಕರಿಸಿದ ತಕ್ಷಣ ವರದಿ ಜಾರಿಗೆ ಬಂದಂತಲ್ಲ. ಇದು ಜಾರಿಗೆ ಬರಬೇಕೆಂದರೆ ಸಚಿವ ಸಂಪುಟದಲ್ಲಿ ಚರ್ಚೆಯಾಗಬೇಕು. ಸದನದಲ್ಲಿ ಮಂಡಿಸಲು ಸದನದ ಒಪ್ಪಿಗೆ ಪಡೆಯಬೇಕು. ಸದನದಲ್ಲಿ ಮಂಡಿಸಿದ ನಂತರ ಅಲ್ಲಿ ಸುದೀರ್ಘ ಚರ್ಚೆ ನಡೆಯಬೇಕು. ಸದನದ ಅನುಮೋದನೆ ದೊರೆತ ನಂತರ ಸಾರ್ವಜನಿಕ ಚರ್ಚೆಗೆ ಒಳಪಡಬೇಕು. ಇದೆಲ್ಲ ಆಗಲು ಸಾಕಷ್ಟು ಕಾಲಾವಕಾಶ ಬೇಕು.ಆದರೂ ಸರಕಾರ ವರದಿಯನ್ನು ಸ್ವೀಕರಿಸಿರುವುದೇ ಅಪರಾಧ ಎಂಬಂತೆ ಪಟ್ಟ ಭದ್ರ ಹಿತಾಸಕ್ತಿಗಳು ಅರಚಾಡುತ್ತಿರುವುದು ಏಕೆ?

ಬಿಜೆಪಿಯ ಅನುಕೂಲ ಸಿಂಧು ನಾಯಕ ಬಸವರಾಜ ಬೊಮ್ಮಾಯಿ ಅವರಂತೂ ಜಾತಿ ಗಣತಿ ವರದಿಯಿಂದ ಸಾಮಾಜಿಕ ಅಶಾಂತಿ ಉಂಟಾಗುತ್ತದೆ ಎಂಬಂತೆ ಹೌಹಾರಿದ್ದಾರೆ. ಕೆಲ ಮಠಾಧೀಶರಿಗೂ ಈ ವರದಿ ಆತಂಕ ಉಂಟು ಮಾಡಿದೆ. ಧರ್ಮವನ್ನು ಬಂಡವಾಳ ಮಾಡಿಕೊಂಡು ಚುನಾವಣೆಯಲ್ಲಿ ಜಯ ಸಾಧಿಸುತ್ತ ಬಂದವರು ಒಳಗೊಳಗೆ ಜಾತಿಯನ್ನು ಏಣಿಯಾಗಿ ಬಳಸಿಕೊಂಡಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ.

ಲೋಕಸಭಾ ಚುನಾವಣೆ ಸಮೀಪಿಸುತ್ತಿರುವಂತೆ ಕೋಮು ದಳ್ಳುರಿ ಎಬ್ಬಿಸಲು ಹೊರಟವರು, ಓಟಿಗಾಗಿ ಮರ್ಯಾದಾ ಪುರುಷೋತ್ತಮನನ್ನು ದುರ್ಬಳಕೆ ಮಾಡಿಕೊಳ್ಳುವವರು, ಗಣೇಶೋತ್ಸವದ ಮೆರವಣಿಗೆಯಲ್ಲಿ ಸಾವರ್ಕರ್ ಜೊತೆಗೆ ನಾಥೂರಾಮ್ ಗೊಡ್ಸೆಯ ಫೋಟೊ ಹಿಡಿದುಕೊಂಡು ಹೊರಟವರಿಗೆ ಜಾತಿ ಗಣತಿಯಿಂದ ತಮ್ಮ ಲೆಕ್ಕಾಚಾರ ತಪ್ಪುವುದು ಭೀತಿ ಇರಬಹುದು. ಆದರೆ ಕಾಂಗ್ರೆಸ್ ಒಳಗಿನ ಜಿಲೇಬಿ ನಾಯಕರಿಗೆ ಈ ಭೀತಿ ಯಾಕೆ ಉಂಟಾಗಿದೆಯೋ ಅರ್ಥ ವಾಗುವುದಿಲ್ಲ.

ಹಿಂದೆ ವಿಶ್ವನಾಥ್ ಪ್ರತಾಪ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಮಂಡಲ ಆಯೋಗದ ವರದಿಯನ್ನು ಜಾರಿಗೆ ತರಲು ಹೊರಟಾಗ ಮಂಡಲದ ಎದುರು ಕಮಂಡಲದ ಅಸ್ತ್ರವನ್ನು ಬಳಸಿದ ಸಂಘಪರಿವಾರ ಅಡ್ವಾಣಿ ಅವರನ್ನು ರಥಾರೂಢರನ್ನಾಗಿ ಮಾಡಿ ಅಯೋಧ್ಯೆಗೆ ಕಳಿಸಿತು. ಹಾಗೆ ನೋಡಿದರೆ ಮಂಡಲ ಆಯೋಗ ಕೂಡ ನಿಖರ ಅಂಕಿ ಅಂಶಗಳನ್ನು ಒಳಗೊಂಡಿರಲಿಲ್ಲ. 1931 ರ ಜನಗಣತಿಯ ದತ್ತಾಂಶಗಳ ಮೇಲೆ ಈ ವರದಿ ತಯಾರಾಗಿತ್ತು.ಅಂದಿಗೂ ಇಂದಿಗೂ ಸಾಕಷ್ಟು ಬದಲಾವಣೆಯಾಗಿದೆ.

ರಾಜ್ಯ ಹಿಂದುಳಿದ ಆಯೋಗದ ಸಮೀಕ್ಷಾ ವರದಿಯ ಬಗ್ಗೆ ಕೆಲ ಜಾತಿಗಳ ಮೇಲ್ವರ್ಗಗಳ ಸಾಹುಕಾರರು ಯಾಕಿಷ್ಟು ಅಸಮಾಧಾನ ಗೊಂಡಿದ್ದಾರೆ? ಕಾರಣವಿಷ್ಟೇ, ಈ ವರದಿಯಿಂದ ಯಾವ ಸಮುದಾಯಗಳು ಹಿಂದುಳಿದಿವೆ ಎಂಬುದು ಬಯಲಿಗೆ ಬರುತ್ತದೆ. ಈವರೆಗೆ ಆ ಸಮುದಾಯಗಳ ಪಾಲಿನ ಸೌಕರ್ಯಗಳನ್ನು ಲಪಟಾಯಿಸಿದವರಿಗೆ ತೊಂದರೆ ಆಗುತ್ತದೆ. ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳು ವಾಸ್ತವವಾಗಿ ಇದನ್ನು ವಿರೋಧಿಸುವುದಿಲ್ಲ. ಆದರೆ ಶ್ರೇಣೀಕೃತ ಜಾತಿ ವ್ಯವಸ್ಥೆಯನ್ನು ಆಧರಿಸಿದ ಹಿಂದೂ ರಾಷ್ಟ್ರವನ್ನು ನಿರ್ಮಿಸಲು ಹೊರಟವರಿಗೆ ಎಲ್ಲಿ ತಮ್ಮ ಲೆಕ್ಕಾಚಾರ ತಪ್ಪುವುದೋ ಎಂದು ಗಾಬರಿ ಉಂಟಾಗಿದೆ. ಅದಕ್ಕಾಗಿ ಅವರು ಇವರನ್ನು ಉಪಯೋಗಿಸಿಕೊಂಡು ವಿರೋಧ ಹುಟ್ಟು ಹಾಕುತ್ತಿದ್ದಾರೆ.

ಕಾಂತರಾಜು ಆಯೋಗಕ್ಕೆ ಈಗ ಬರುತ್ತಿರುವ ವಿರೋಧವನ್ನು ಗಮನಿಸಿದರೆ ಐವತ್ತು ವರ್ಷಗಳ ಹಿಂದಿನ ಆ ದಿನಗಳು ನನಗೆ ನೆನಪಿಗೆ ಬರುತ್ತಿವೆ. ಆಗ ಮುಖ್ಯಮಂತ್ರಿ ಆಗಿದ್ದ ದೇವರಾಜ ಅರಸು ಅವರು ಅವಕಾಶ ವಂಚಿತ ಸಮುದಾಯಗಳಿಗೆ ನ್ಯಾಯ ಒದಗಿಸಲು ಹೈಕೋರ್ಟ್‌ನ ಹಿರಿಯ ವಕೀಲರಾಗಿದ್ದ ಲಕ್ಷ್ಮಣ ಹಾವನೂರು ಅವರ ನೇತೃತ್ವದಲ್ಲಿ ಆಯೋಗ ರಚಿಸಿದರು. ಈ ವರದಿ ಜಾರಿಗೆ ಬರುವ ಮೊದಲೇ ರಾಜ್ಯದಲ್ಲಿ ಇದರ ವಿರುದ್ಧ ಆಕ್ರೋಶ ವ್ಯಕ್ತವಾಗತೊಡಗಿತು. ಬೀದಿ, ಬೀದಿಯಲ್ಲಿ ಪ್ರತಿಭಟನೆಗಳು ನಡೆದವು. ಬ್ರಾಹ್ಮಣ, ವೀರಶೈವ , ಲಿಂಗಾಯತ, ಒಕ್ಕಲಿಗ ಸಮುದಾಯಗಳ ಬಲಿಷ್ಠ ಜಾತಿಗಳ ಭೂಮಾಲಕ ವರ್ಗದ ನಾಯಕರು ಅಪಸ್ವರ ತೆಗೆದರು. ಈಗ ಅರಣ್ಯ ಮಂತ್ರಿಯಾಗಿರುವ ಈಶ್ವರ ಖಂಡ್ರೆಯವರ ತಂದೆ ಭೀಮಣ್ಣ ಖಂಡ್ರೆಯವರು ಹಾವನೂರ ಆಯೋಗದ ವಿರುದ್ಧದ ಚಳವಳಿಯ ಮುಂಚೂಣಿಯಲ್ಲಿದ್ದರು. ಆಗ ದಾವಣಗೆರೆಯ ಶಾಮನೂರು ಶಿವಶಂಕರಪ್ಪ ಇಷ್ಟು ದೊಡ್ಡ ಸಾಹುಕಾರರಾಗಿ, ನಾಯಕರಾಗಿ ಬೆಳೆದಿರಲಿಲ್ಲ. ಆಗ ದಾವಣಗೆರೆಯಲ್ಲಿ ಕಮ್ಯುನಿಸ್ಟರ ಪ್ರಾಬಲ್ಯ. ಪಂಪಾಪತಿ ಶಾಸಕರು.

ಈಗ ಕಾಲ ಬದಲಾಗಿದೆ. ಶಾಮನೂರು ಅವರು ಹಿಂದುಳಿದ ಆಯೋಗವನ್ನು ವಿರೋಧಿಸುವಷ್ಟು ಪ್ರಬಲರಾಗಿದ್ದಾರೆ. ಆಗ ಮುಖ್ಯಮಂತ್ರಿ ದೇವರಾಜ ಅರಸು ಯಾವ ಒತ್ತಡಕ್ಕೂ ಮಣಿಯದೆ ಹಾವನೂರು ಆಯೋಗದ ವರದಿಯನ್ನು ಜಾರಿಗೆ ತಂದರು. ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರೂ ಆ ಧೈರ್ಯ ತೋರಿಸಲಿ.

1973ರ ಆ ದಿನದ ಬಿಜಾಪುರದ ದೇವರಾಜ ಅರಸು ಅವರ ಬಹಿರಂಗ ಸಭೆಯ ನೆನಪು ನನ್ನ ಮನದಂಗಳದಲ್ಲಿ ಇನ್ನೂ ಹಸಿರಾಗಿದೆ. ಅರಸು ಅವರ ಬಹಿರಂಗ ಸಭೆಯಲ್ಲಿ ಹಾವನೂರು ಆಯೋಗದ ವಿರೋಧಿಗಳು ಗಲಾಟೆ ಮಾಡಿ ಕಲ್ಲು ತೂರಿದಾಗ ಎದೆಗೆಡದ ಅರಸು ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರು ಜಾತಿ ರಹಿತ ಮದುವೆ ಮಾಡಿಸಲು ಹೊರಟಾಗ ಕಲ್ಲು ತೂರಿ, ಕೊಡಲಿ ಬೀಸಿದವರೇ ಈಗ ಮತ್ತೆ ಬಂದಿದ್ದಾರೆ. ಇದಕ್ಕೆಲ್ಲ ನಾನು ಹೆದರುವುದಿಲ್ಲ. ಸಮಾಜ ಬದಲಾವಣೆಗೆ ಯಾವ ಬೆಲೆ ತೆರಲೂ ಸಿದ್ಧ ಎಂದು ಆರ್ಭಟಿಸಿದಾಗ ಹಲ್ಲೆ ಕೋರರು ಪಲಾಯನ ಮಾಡಿ ಇಡೀ ಸಭೆಯಲ್ಲಿ ಶಾಂತಿ ಆವರಿಸಿತು. ಆಗ ಕೋಮುವಾದಿ ಶಕ್ತಿಗಳು ಈಗಿನಷ್ಟು ಪ್ರಬಲವಾಗಿರಲಿಲ್ಲ.

ಹೀಗೆ ಶತಮಾನಗಳಿಂದ ಬೇರು ಬಿಟ್ಟ ಕುವ್ಯವಸ್ಥೆಯ ಬೇರುಗಳಿಗೆ ಕೈ ಹಾಕಿದಾಗ ವಿರೋಧ ಬರುವುದು ಸಹಜ. ಹೀಗೆ ಬದಲಾವಣೆ ಮಾಡಲು ಹೊರಟಾಗ ಅನೇಕ ದೇಶಗಳಲ್ಲಿ ರಕ್ತಪಾತವಾಗಿದೆ.ಭಾರತದಲ್ಲಿ ಬಾಬಾಸಾಹೇಬರ ಸಂವಿಧಾನ ಎಂಬುದು ಇದೆಯಲ್ಲ ಅದು ಇಂಥ ಬದಲಾವಣೆಗಳಿಗೆ ಪೂರಕವಾಗಿದೆ. ಆದರೂ ಅದೇ ಸಂವಿಧಾನದ ವಿರುದ್ಧವೂ ಮಸಲತ್ತು ನಡೆದ ದಿನಗಳಿವು. ಹಿಂದೂಗಳೆಲ್ಲ ಒಂದೇ ಎಂದು ಹೇಳಿ ಎಲ್ಲ ದಮನಿತ ಸಮುದಾಯಗಳ ಉಸಿರು ನಿಲ್ಲಿಸುವ ಹುನ್ನಾರ ವ್ಯಾಪಕವಾಗಿ ನಡೆದಿರುವಾಗ ಕರ್ನಾಟಕದಲ್ಲಿ ಜಾತಿ ಗಣತಿ ವರದಿ ಬಂದಿದೆ. ಧರ್ಮದ ಹೆಸರಿನಲ್ಲಿ ಭಾರತವನ್ನು, ಭಾರತೀಯರನ್ನು ಒಡೆಯಲು ಹೊರಟವರು ಜಾತಿ ಗಣತಿ ವರದಿಯಿಂದ ದಿಗಿಲುಗೊಂಡಿದ್ದಾರೆ. ಇದು ಅವರಿಗೆ ಹಿಂದೂಗಳನ್ನು ವಿಭಜಿಸುವ ಹುನ್ನಾರವಾಗಿ ಕಾಣುತ್ತಿದೆ.ಈ ಆಯೋಗದಲ್ಲಿ ದಲಿತರು, ಹಿಂದುಳಿದವರು ಮಾತ್ರವಲ್ಲ ಅಲ್ಪಸಂಖ್ಯಾತ ಮುಸ್ಲಿಮ್, ಕ್ರೈಸ್ತ, ಜೈನ, ಬೌದ್ಧ ಸಮುದಾಯಗಳ ಬಗೆಗೂ ಮಾಹಿತಿ ಇದೆ.ಇದನ್ನು ಪರಿಶೀಲನೆ ಮಾಡಿ ಜಾರಿಗೆ ತರುವುದು ಅಗತ್ಯವಾಗಿದೆ.ದೇವರಾಜ ಅರಸು ಅವರಿಗೆ ಎಪ್ಪತ್ತರ ದಶಕದಲ್ಲಿ ದೊರತೆ ಚಾರಿತ್ರಿಕ ಅವಕಾಶ ಈಗ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ದೊರಕಿದೆ. ಈಗ ದೇವರಾಜ ಅರಸರ ಕಾಲವಲ್ಲ, ನಿಜ. ಅನೇಕ ಜಾಗತಿಕ, ರಾಷ್ಟ್ರೀಯ ಆರ್ಥಿಕ, ಸಾಮಾಜಿಕ ಬದಲಾವಣೆಗಳನ್ನು ಕಂಡ ಈ ಕಾಲದಲ್ಲಿ ಸಿದ್ದರಾಮಯ್ಯನವರು ಮನಸ್ಸು ಮಾಡಿದರೆ ಎಲ್ಲಾ ತೊಡಕುಗಳನ್ನು ನಿವಾರಿಸಿ ಈ ವರದಿಯನ್ನು ಜಾರಿಗೆ ತರಬಹುದು.

ಹಾವನೂರು ಆಯೋಗದ ವರದಿಗೂ ಆರಂಭದಲ್ಲಿ ಇದೇ ರೀತಿ ವಿರೋಧ ಬಂತು.ಎಲ್ಲೆಡೆ ಪ್ರತಿಭಟನೆಗಳೂ ನಡೆದವು. ಆದರೆ, ಕ್ರಮೇಣ ಎಲ್ಲರೂ ಒಪ್ಪಿದರು. ಈಗ ಈ ಜನಗಣತಿ ವರದಿಗೂ ಬಂದಿರುವ ವಿರೋಧ ನಂತರ ಕ್ರಮೇಣ ಕಡಿಮೆಯಾಗುತ್ತದೆ. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜಕೀಯ ಇಚ್ಛಾಶಕ್ತಿ ತೋರಿಸಬೇಕಿದೆ.

ಭಾರತದಲ್ಲಿ ಬುದ್ಧ, ಮಹಾವೀರರ ಕಾಲದಲ್ಲಿ ಆರಂಭವಾದ ಆರೋಗ್ಯಕರ ಸಮಾಜ ರೂಪಿಸುವ ಕಾರ್ಯ ಆಗಾಗ ಹಿನ್ನಡೆ ಅನುಭವಿಸುತ್ತಲೇ ಬಂದಿದೆ. ಮನುವಾದಿಗಳ ಹೊಡೆತದಿಂದ ನಿಂತು ಹೋಗಿದ್ದ ಈ ಪರಿವರ್ತನಾ ರಥವನ್ನು ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರು ಮುಂದಕ್ಕೊಯ್ಯಲು ಯತ್ನಿಸಿದರು.ಅಕ್ಷರ ವಂಚಿತ ಸಮುದಾಯಗಳಿಂದ ವಚನಕಾರರು ಬಂದರು. ಆದರೆ ಜೀವ ವಿರೋಧಿ ಶಕ್ತಿಗಳು ಅಡ್ಡಹಾಕಿದವು. ಮಹಾರಾಷ್ಟ್ರದ ಸಂತರ ಚಳವಳಿಗೂ ಇದೇ ಗತಿಯಾಯಿತು. ಹೀಗೆ ಏಟು ತಿನ್ನುತ್ತ ಬಂದ ಬದಲಾವಣೆಯ ರಥವನ್ನು ಬಾಬಾಸಾಹೇಬರು ಮತ್ತೆ ಚುರುಕು ಗೊಳಿಸಿದರು. ಹಿಂದಿನವರು ಯಾರೂ ನೀಡದ ಸಂವಿಧಾನ ಎಂಬ ಅಸ್ತ್ರ ಬಳಸಿದರು. ಈಗ ಸಂವಿಧಾನದ ವಿರುದ್ಧವೂ ಮಸಲತ್ತು ನಡೆದಿದೆ. ಈ ಹಿನ್ನೆಲೆಯಲ್ಲಿ ಜಾತಿ ಗಣತಿ ಮಹತ್ವದ್ದಾಗಿದೆ.ಇದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಗ್ನಿ ಪರೀಕ್ಷೆ ಎಂದರೆ ಅತಿಶಯೋಕ್ತಿಯಲ್ಲ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಸನತ್ ಕುಮಾರ್ ಬೆಳಗಲಿ

contributor

Similar News