ನಕಲಿ ಧರ್ಮ ರಕ್ಷಕರಿಂದ ಅಸಲಿ ಧರ್ಮಕ್ಕೆ ಅಪಾಯ

ಇವರ ಪೊಳ್ಳು ಬೆದರಿಕೆಗೆ ಹೆದರುವ ದಿನಗಳು ಮುಗಿದವು. ಮಂಗಳೂರಿನ ಮಂಗಳಾದೇವಿ ಜಾತ್ರೆಯಲ್ಲಿ ಇವರು ಕಟ್ಟಿದ ಬಾವುಟದ ಕಡೆಗೆ ಹೊರಳಿಯೂ ನೋಡದೆ ಮುಸ್ಲಿಮ್ ವ್ಯಾಪಾರಿಗಳಲ್ಲಿ ವಸ್ತುಗಳನ್ನು ಖರೀದಿಸಿದ ಜನ ತಾವು ಯಾರ ಅಡಿಯಾಳುಗಳಲ್ಲ ಎಂದು ತೋರಿಸಿದ್ದಾರೆ. ಹಿಂದಿನ ಬಸವರಾಜ ಬೊಮ್ಮಾಯಿಯವರ ನೇತೃತ್ವದ ಬಿಜೆಪಿ ಸರಕಾರವಿದ್ದಾಗ ಮುಸ್ಲಿಮ್ ವ್ಯಾಪಾರಿಗಳಿಗೆ ಅಂಗಡಿ ಹಾಕಲು ಬಿಡಲಿಲ್ಲ. ಧಾರವಾಡದ ನುಗ್ಗಿಕೇರಿ ಹನುಮಂತನ ಗುಡಿಯ ಬಳಿ ಎಳೆ ನೀರು ಮಾರಾಟ ಮಾಡುವ ಮುಸ್ಲಿಮ್ ವಯೋವದ್ಧನ ಮೇಲೆ ಹಲ್ಲೆ ಮಾಡಿದರು. ಈ ಗೂಂಡಾಗಿರಿ ಪರಿಣಾಮವಾಗಿ ಜನ ಬಿಜೆಪಿಯನ್ನು ತಿರಸ್ಕರಿಸಿದರು. ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ಬಂತು. ಆದರೂ ಈ ಅವಿವೇಕಿಗಳು ಬುದ್ಧಿ ಕಲಿತಿಲ್ಲ.

Update: 2023-10-23 05:37 GMT

ಸಾಂದರ್ಭಿಕ ಚಿತ್ರ

ಧರ್ಮವನ್ನು ಸ್ವಯಂ ಘೋಷಿತ ‘ಧರ್ಮ ರಕ್ಷಕ’ರಿಂದ ರಕ್ಷಿಸಬೇಕಿದೆ. ಜಾತ್ರೆ, ಸಂತೆ, ಹಬ್ಬ, ಉರೂಸುಗಳು ಮನುಷ್ಯರು ತಮ್ಮ ನೆಮ್ಮದಿಗಾಗಿ ಮಾಡಿಕೊಂಡ ಏರ್ಪಾಡುಗಳು.

ಹಬ್ಬ ಹರಿದಿನ ರಥೋತ್ಸವಗಳಲ್ಲಿ ಮುಸಲ್ಮಾನರು ಸೇರಿ ಎಲ್ಲಾ ಸಮುದಾಯದ ವ್ಯಾಪಾರಿಗಳು ಅಂಗಡಿ ಹಾಕಿ ವ್ಯಾಪಾರ ಮಾಡುತ್ತಾರೆ. ಉರೂಸುಗಳಲ್ಲಿ ಹಿಂದೂ ವ್ಯಾಪಾರಿಗಳು ಸೇರಿದಂತೆ ಎಲ್ಲರೂ ವಹಿವಾಟು ನಡೆಸುತ್ತಾರೆ. ಅಲ್ಲಿ ನಂಬಿಕೆ ಮತ್ತು ಭಕ್ತಿಯಿಂದಾಗಲಿ, ಖುಷಿಗಾಗಿಯಾಗಲಿ ಸೇರುವ ಜನ ಯಾವ ಅಂಗಡಿಯಲ್ಲಿ ಕಡಿಮೆ ಬೆಲೆಗೆ ಒಳ್ಳೆಯ ವಸ್ತು ಸಿಗುತ್ತದೆ ಅಲ್ಲಿ ಖರೀದಿಸುತ್ತಾರೆ.

ಹೀಗೆ ಖರೀದಿಸುವಾಗ, ಅವರು ವ್ಯಾಪಾರಿಯ ಮತ ಧರ್ಮವನ್ನು ನೋಡುವುದಿಲ್ಲ. ಜನರನ್ನು ಒಡೆದು ಓಟಿನ ಬೆಳೆ ಬೆಳೆಯಲು ನೀವು ಯಾವುದೇ ಬಣ್ಣದ ಬಾವುಟ ಕಟ್ಟಬಹುದು. ಜನ ಬಾವುಟ ನೋಡುವುದಿಲ್ಲ. ವ್ಯಾಪಾರ ಧರ್ಮ ಎಂಬುದೊಂದಿದೆ. ಅಲ್ಲಿರುವುದು ಮಾರಾಟಗಾರ ಮತ್ತು ಖರೀದಿದಾರ ಎಂಬ ಎರಡೇ ಸಂಬಂಧ ಗಳಿರುವುದು. ಇಷ್ಟು ಕನಿಷ್ಠ ಜ್ಞಾನವಿಲ್ಲದ ಅವಿವೇಕಿಗಳಿಗೆ ಪಾಠ ಕಲಿಸುವ ಗುಣ ಈ ಮಣ್ಣಿಗಿದೆ. ಇದು ಹಿಟ್ಲರ್, ಗೊಬ್ಬೆಲ್ಸ್, ಮುಸ್ಸೋಲಿನಿಗಳ ದೇಶವಲ್ಲ, ಇದು ಬುದ್ಧ, ಬಸವಣ್ಣ, ಗಾಂಧೀಜಿ, ಬಾಬಾಸಾಹೇಬರು, ಭಗತ್ ಸಿಂಗ್, ಸುಭಾಷ್ ಚಂದ್ರ ಬೋಸ್ ಅವರಿಗೆ ಸೇರಿದ ಭಾರತ. ನೆನಪಿರಲಿ, ಇಲ್ಲಿ ಕೋಮು ದ್ವೇಷದ ರಕ್ತಪಾತ ಮಾಡುವ ನಿಮ್ಮ ಆಟ ನಡೆಯುವುದಿಲ್ಲ.

ಇತ್ತೀಚಿನ ವರ್ಷಗಳಲ್ಲಿ ಸ್ವಯಂ ಘೋಷಿತ ಧರ್ಮ ರಕ್ಷಕರ ಹಾವಳಿಯಿಂದ ಸದುದ್ದೇಶದಿಂದ ಕೂಡಿರುವ ನೈಜ ಧರ್ಮಕ್ಕೆ ಅಪಾಯ ಎದುರಾಗಿದೆ.ಅವರವರ ನಂಬಿಕೆಯಂತೆ ಪರಮಾತ್ಮನ ಸಾಕ್ಷಾತ್ಕಾರಕ್ಕಾಗಿ ಮಾನಸಿಕ ಶಾಂತಿಗಾಗಿ ದೇವರು, ಧರ್ಮದ ಮೊರೆ ಹೋಗುತ್ತಿದ್ದ ಜನ ಈ ‘ಧರ್ಮ ರಕ್ಷಕರ’ ದಾಂಧಲೆಯಿಂದ ತತ್ತರಿಸಿ ಹೋಗಿದ್ದಾರೆ. ಇಂದು ಧರ್ಮ ಎಲ್ಲಿಗೆ ಬಂದಿದೆ ಅಂದರೆ ಯಾರು ಯಾವ ಊಟ ಮಾಡಬೇಕು, ಯಾವ ಬಟ್ಟೆ ತೊಡಬೇಕು ಎಂಬುದರ ಜೊತೆಗೆ ಈಗ ಜಾತ್ರೆ, ಉತ್ಸವಗಳಲ್ಲಿ ವ್ಯಾಪಾರಕ್ಕಾಗಿ ಅಂಗಡಿ ಹಾಕುವವರ ಜಾತಿ, ಮತ ಹುಡುಕುತ್ತಾ ‘ಅವರು ಇಲ್ಲಿ ವ್ಯಾಪಾರ ಮಾಡಕೂಡದು’ ಎಂದು ಫರ್ಮಾನು ಹೊರಡಿಸುತ್ತಿದ್ದಾರೆ.

ಕೋಮುವಾದಿಗಳು ಮತ್ತು ಜನಾಂಗ ದ್ವೇಷಿಗಳು ಧಾರ್ಮಿಕ ವ್ಯಕ್ತಿಗಳಲ್ಲ. ನಿಜವಾದ ಧಾರ್ಮಿಕ ವ್ಯಕ್ತಿ ಸಕಲ ಜೀವ ಚರಗಳನ್ನು ಪ್ರೀತಿಸುತ್ತಾನೆ. ಸಹ ಜೀವಿಗಳನ್ನು ಎಂದೂ ದ್ವೇಷಿಸುವುದಿಲ್ಲ. ಆದರೆ, ಧರ್ಮದ ಮುಖವಾಡ ಹಾಕಿಕೊಂಡು ತಮ್ಮ ರಾಜಕೀಯ ಸ್ವಾರ್ಥ ಸಾಧಿಸಿಕೊಳ್ಳುವವರು ತಮ್ಮ ಬೇಳೆ ಬೇಯಿಸಿಕೊಳ್ಳಲು ಸಮಾಜದ ಇತರ ಸಮುದಾಯದ ಜನರನ್ನು ದ್ವೇಷಿಸುವಂತೆ ಪ್ರಚೋದಿಸುತ್ತಾರೆ. ಒಂದು ಸಮುದಾಯದ ವಿರುದ್ಧ ಇನ್ನೊಂದು ಸಮುದಾಯವನ್ನು ಎತ್ತಿ ಕಟ್ಟುತ್ತಾರೆ. ಧಾರ್ಮಿಕ ಮತ್ತು ಇತಿಹಾಸದ ಮಹಾಪುರುಷರನ್ನು ಬಳಸಿಕೊಂಡು ನಕಲಿ ಶೌರ್ಯ ಪ್ರದರ್ಶನ ಮಾಡುತ್ತಾರೆ.

ಅಂಗಡಿಗಳಿಗೆ ಕೇಸರಿ ಬಾವುಟ ಕಟ್ಟಿ ಅಲ್ಲಿ ವ್ಯಾಪಾರ ಮಾಡಬಾರದು, ಇಲ್ಲಿ ಮಾಡಬೇಕು ಎಂದು ಜನರನ್ನು ಕೆರಳಿಸುತ್ತಾರೆ. ಆದರೆ ವ್ಯಾಪಾರ ಎಂಬುದಕ್ಕೂ ಒಂದು ಧರ್ಮವಿದೆ. ಅದು ವ್ಯಾಪಾರ ಧರ್ಮ. ಅಲ್ಲಿ ಗಿರಾಕಿ ಯಾವ ಧರ್ಮ, ಜಾತಿಯವನೆಂಬುದು ಮುಖ್ಯವಲ್ಲ. ಹಾಗೆಯೇ ವಸ್ತುವನ್ನು ಖರೀದಿಸುವ ಗಿರಾಕಿಗೂ ತಾನು ವ್ಯಾಪಾರ ಮಾಡುವ ಅಂಗಡಿಯ ಮಾಲಕ ಯಾವ ಜಾತಿ, ಮತದವನೆಂಬುದು ಮುಖ್ಯವಲ್ಲ. ಅವನಿಗೆ ನ್ಯಾಯವಾದ ಬೆಲೆಗೆ ಒಳ್ಳೆಯ ವಸ್ತು ಸಿಗಬೇಕು. ಇದು ವ್ಯಾಪಾರ ಧರ್ಮ. ಇಲ್ಲಿ ಯಾರನ್ನು ಯಾರೂ ಅವರು ಜನಿಸಿದ ಜಾತಿ ಮತದ ಕಾರಣಕ್ಕಾಗಿ ದ್ವೇಷಿಸುವ ಪರಿಸ್ಥಿತಿ ಇರುವುದಿಲ್ಲ.

ವ್ಯಾಪಾರ, ವಹಿವಾಟುಗಳಲ್ಲಿ ಯಾವುದೇ ಒಂದು ಸಮುದಾಯವನ್ನು ಬಹಿಷ್ಕರಿಸುವುದು ಅಸ್ಪಶ್ಯತೆಯ ಇನ್ನೊಂದು ರೂಪ. ಶತಮಾನಗಳಿಂದ ದಲಿತರನ್ನು ಊರಾಚೆ ಇಟ್ಟವರು ಈಗ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಹಿಂದುತ್ವದ ಹೊಸ ವೇಷ ಹಾಕಿದ್ದಾರೆ. ಈಗ ಅವರು ಟಾರ್ಗೆಟ್ ಮಾಡುತ್ತಿರುವುದು ಮುಸಲ್ಮಾನರು ಮತ್ತು ಕ್ರೈಸ್ತರನ್ನು. ಇವರನ್ನು ಬಿಟ್ಟರೆ ಕಮ್ಯುನಿಸ್ಟರು ಅವರ ಪ್ರಧಾನ ಶತ್ರುಗಳು. ಒಂದೆಡೆ ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಭಾಗವತರು ಮುಸಲ್ಮಾನರ ಬಗ್ಗೆ ಸೌಮ್ಯವಾಗಿ ಮಾತಾಡುತ್ತಾರೆ. ಇನ್ನೊಂದೆಡೆ ಮಂಗಳೂರು, ಗುಜರಾತ್‌ನಂತಹ ಕಡೆ ಅವರ ಶಿಷ್ಯರು ಜಾತ್ರೆ, ಸಂತೆಗಳಲ್ಲಿ ಮುಸಲ್ಮಾನರ ಅಂಗಡಿಗಳಲ್ಲಿ ಏನನ್ನು ಖರೀದಿ ಮಾಡಬಾರದು ಎಂದು ಗಲಾಟೆ ಮಾಡುತ್ತಾರೆ. ನಾನು ಚಿಕ್ಕ ವಯಸ್ಸಿನಿಂದ ನಮ್ಮ ಬಿಜಾಪುರ ಜಿಲ್ಲೆಯ ಬಸವನಬಾಗೇವಾಡಿಯ ಬಸವೇಶ್ವರ ಜಾತ್ರೆ, ಬಿಜಾಪುರದ ಸಿದ್ದೇಶ್ವರ ಜಾತ್ರೆಗಳನ್ನು ನೋಡುತ್ತ ಬೆಳೆದವನು. ಈಗಲೂ ಕಲಬುರಗಿ ಶರಣ ಬಸವೇಶ್ವರ ಜಾತ್ರೆ, ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆ, ಹುಬ್ಬಳ್ಳಿಯ ಸಿದ್ಧಾರೂಢರ ಜಾತ್ರೆಗಳು ಸೇರಿದಂತೆ ಹಲವಾರು ಜಾತ್ರೆಗಳಿಗೆ ಹೋಗುತ್ತಿರುತ್ತೇನೆ. ಅಲ್ಲಿ ಮುಸ್ಲಿಮ್ ವ್ಯಾಪಾರಿಗಳು ಬಂದರೆ ಮಾತ್ರ ಜಾತ್ರೆಯ ಸಂಭ್ರಮ ಎದ್ದು ಕಾಣುತ್ತದೆ. ಬಡವರು, ಜನಸಾಮಾನ್ಯರು ತಪ್ಪದೇ ಬರುವ ಜಾತ್ರೆಗಳಲ್ಲಿ ಅವರಿಗೆ ಬೇಕಾಗುವ ಕಡಿಮೆ ಬೆಲೆಯ ಬಳೆ, ಪಾತ್ರೆ, ರೆಡಿಮೆಡ್ ಉಡುಪು, ಮಕ್ಕಳ ಆಟಿಕೆಗಳು ಈಗ ನಾನಾ ತರದ ಸರಕುಗಳನ್ನು ಹೊತ್ತು ತರುವವರು ಮುಸ್ಲಿಮ್ ವ್ಯಾಪಾರಿಗಳು. ಅವರಿಲ್ಲದಿದ್ದರೆ ನೀವು ಹಿಂದೂಗಳೆಂದು ಕರೆಯುವ ಲಿಂಗಾಯತರು, ಒಕ್ಕಲಿಗರು, ಬಂಟರು, ಬಿಲ್ಲವರು, ನಾಯಕರು, ಕುರುಬರು ಹೀಗೆ ಯಾರೂ ಜಾತ್ರೆಯತ್ತ ಹೊರಳಿ ನೋಡುವುದಿಲ್ಲ.

ತಮ್ಮ ಪತ್ರಿಕೆಗಳ ಮೂಲಕ ಹಿಂದುತ್ವದ ಶೌರ್ಯ ಪ್ರದರ್ಶನ ಮಾಡುವ ಸಂಘಪರಿವಾರದ ಹಾಗೂ ಬಿಜೆಪಿಯ ಅನೇಕ ನಾಯಕರ ಟ್ರಾವಲ್ಸ್ ಎಜೆನ್ಸಿಗಳು ಬಸ್ಸುಗಳು ಇವೆ. ಈ ಬಸ್ಸುಗಳಲ್ಲಿ ನಿತ್ಯ ಮಂಗಳೂರು, ಉಡುಪಿಗಳಿಂದ, ಹುಬ್ಬಳ್ಳಿ, ಬೆಂಗಳೂರಿನಿಂದ ಕಲಬುರಗಿ, ದಾವಣಗೆರೆ, ಮೈಸೂರು, ಶಿವಮೊಗ್ಗಗಳಿಂದ ಸಾವಿರಾರು ಪ್ರಯಾಣಿಕರು ಸಂಚರಿಸುತ್ತಾರೆ. ಪ್ರಯಾಣ ಮಾಡುವವರ ಜಾತಿ, ಮತವನ್ನು ಯಾರೂ ಕೇಳುವುದಿಲ್ಲ. ಅವರಿಂದ ವಸೂಲಿ ಮಾಡುವುದು ಬಸ್ ಚಾರ್ಜ್ ಮಾತ್ರ. ಈ ಬಸ್ಸುಗಳಿಗೆ ವಿಎಚ್‌ಪಿ ಕಾರ್ಯಕರ್ತರು ಕೇಸರಿ ಬಾವುಟ ಕಟ್ಟಿ ಈ ಬಸ್ಸುಗಳಲ್ಲಿ ಮುಸಲ್ಮಾನರು ಪ್ರಯಾಣಿಸಲು ಅವಕಾಶವಿಲ್ಲ ಎಂದು ನಿರ್ಬಂಧ ವಿಧಿಸುವರೇ? ಹೋಗಲಿ ಮುಸ್ಲಿಮ್ ಗಿರಾಕಿಗಳಿಗೆ ಯಾವುದೇ ವಸ್ತುಗಳನ್ನು ಮಾರಾಟ ಮಾಡಬಾರದೆಂದು ಹಿಂದೂ ಬಟ್ಟೆ ಅಂಗಡಿ, ಟಿ.ವಿ ಅಂಗಡಿ, ಮೊಬೈಲ್ ಅಂಗಡಿಗಳ ಮಾಲಕರಿಗೆ ಇವರು ಕಟ್ಟುಪಾಡು ವಿಧಿಸುವರೇ? ಇಲ್ಲ ತಮ್ಮನ್ನು ಸಾಕಿ ಸಲಹುವ ಶ್ರೀಮಂತರ ಉಸಾಬರಿಗೆ ಇವರು ಹೋಗುವುದಿಲ್ಲ. ಹಾಗಿದ್ದರೆ ನಿರ್ಬಂಧ ಇರುವುದು ಬಡವರಿಗೆ ಮಾತ್ರವಾ?

ಸಾಮಾನ್ಯವಾಗಿ ಹಿಂದೂಗಳು ಮತ್ತು ಮುಸಲ್ಮಾನರನ್ನು ಬೇರ್ಪಡಿಸುವುದು ಅಷ್ಟು ಸುಲಭವಲ್ಲ. ಬಡ ಮುಸಲ್ಮಾನರು ಮತ್ತು ಹಿಂದೂಗಳನ್ನು ಬೆದರಿಕೆ ಹಾಕಿ ನೀವು ಬೇರ್ಪಡಿಸಬಹುದು. ಆದರೆ ಅನೇಕ ಉದ್ಯಮ, ವಹಿವಾಟುಗಳಲ್ಲಿ ಹಿಂದೂ ಮತ್ತು ಮುಸ್ಲಿಮ್ ಶ್ರೀಮಂತರು, ಕೈಗಾರಿಕೋದ್ಯಮಿಗಳು ಪಾಲುದಾರರಾಗಿರುತ್ತಾರೆ. ಹಣಕಾಸು ಮತ್ತು ಲಾಭದ ಹಿತಾಸಕ್ತಿ ಅವರನ್ನು ಒಂದು ಮಾಡಿರುತ್ತದೆ. ದೊಡ್ಡವರ ಸಂಬಂಧಗಳೇ ಭಿನ್ನ ವಾಗಿರುತ್ತವೆ. ವಿಶ್ವ ಹಿಂದೂ ಪರಿಷತ್ತಿನ ಹಿಂದಿನ ಅಧ್ಯಕ್ಷ ಅಶೋಕ್ ಸಿಂಘಾಲರ ಮಗಳನ್ನು ಮಂತ್ರಿ ಮುಖ್ತಾರ ಅಬ್ಬಾಸ್ ನಖ್ವಿ ಮದುವೆಯಾಗಬಹುದು, ಮುರಳಿ ಮನೋಹರ ಜೋಶಿಯವರ ಮಗಳನ್ನು ಬಿಜೆಪಿಯ ಇನ್ನೊಬ್ಬ ಮುಸ್ಲಿಮ್ ನಾಯಕ ಮದುವೆಯಾಗಬಹುದು. ಅಡ್ವಾಣಿ ಮುಸಲ್ಮಾನರ ಜೊತೆಗೆ ನೆಂಟಸ್ತಿಕೆ ಮಾಡಬಹುದು. ಆದರೆ ಜನಸಾಮಾನ್ಯರು ಜಾತಿ ಮತದ ಬೇಲಿ ದಾಟಿ ಮದುವೆಯಾದರೆ ಅದಕ್ಕೆ ‘ಲವ್ ಜಿಹಾದ್’ ಕತೆ ಕಟ್ಟುತ್ತಾರೆ.

ಜಾತ್ರೆ, ಸಂತೆಗಳಿಗೆ ಬರುವ ಬಡ ಹಿಂದೂ ಮತ್ತು ಮುಸಲ್ಮಾನರ ಮೇಲೆ ನಿರ್ಬಂಧ ವಿಧಿಸುವ ಕೋಮುವಾದಿ ಸಂಘಟನೆಗಳ ನೇತಾರರು ಜಾತ್ರೆಗಳಿಗೆ ಮಾತ್ರ ಇದನ್ನು ಯಾಕೆ ಅನ್ವಯಿಸುತ್ತಾರೆ? ಮಂಗಳೂರು, ಉಡುಪಿ ಸೇರಿದಂತೆ ಕರ್ನಾಟಕದ ಅನೇಕ ಕಡೆ ಬಟ್ಟೆ ಅಂಗಡಿಗಳು, ಚಿನ್ನದ ಅಂಗಡಿಗಳು, ವಿದ್ಯುತ್ ಉಪಕರಣ ಮಳಿಗೆಗಳು ಹೀಗೆ ಹಿಂದೂಗಳ ಮಾತ್ರವಲ್ಲ ಸಂಘಪರಿವಾರದ ನಾಯಕರು ಮತ್ತು ಅವರ ಸಂಬಂಧಿಕರ ಒಡೆತನಕ್ಕೆ ಒಳಪಟ್ಟಿವೆ. ಅವರಿಗೆ ಹೆಚ್ಚಿನ ಗಿರಾಕಿಗಳು ಮುಸಲ್ಮಾನರು. ಮುಸಲ್ಮಾನರಿಗೆ ಮಾರಾಟ ಮಾಡಬಾರದು ಎಂದು ಬಾವುಟ ಕಟ್ಟಿ ದಿಗ್ಬಂಧನ ವಿಧಿಸಬಾರದೇಕೆ? ಇದು ಎಂದೂ ಸಾಧ್ಯವಿಲ್ಲ. ಬಹುತೇಕ ಬಿಜೆಪಿ ನಾಯಕರ ವ್ಯಾಪಾರ, ಉದ್ದಿಮೆಗಳ ನಿತ್ಯದ ಗಿರಾಕಿಗಳು ಮುಸಲ್ಮಾನರು ಎಂಬುದು ಸಂಘದ ನಾಯಕರಿಗೆ ಗೊತ್ತಿದೆ. ಚುನಾವಣೆ ಸಂದರ್ಭದಲ್ಲಿ ಮುಸ್ಲಿಮ್ ಶ್ರೀಮಂತರಿಂದ ಬಿಜೆಪಿ ಚುನಾವಣಾ ನಿಧಿಯನ್ನು ವಸೂಲಿ ಮಾಡುವುದಿಲ್ಲವೇ?

ಜನವಿಭಜಕ ಛಿದ್ರಕಾರಿ ಶಕ್ತಿಗಳಿಗೆ ಜನಸಾಮಾನ್ಯರ ಬೆಂಬಲವಿಲ್ಲ. ಕರ್ನಾಟಕ ವಿಧಾನಸಭೆಯ ಇತ್ತೀಚಿನ ಚುನಾವಣೆಯಲ್ಲಿ ಅನುಭವಿಸಿದ ಅವಮಾನಕಾರಿ ಸೋಲು ಅವರನ್ನು ಹತಾಶರನ್ನಾಗಿ ಮಾಡಿದೆ. ಇವರಿಗೆ ಸ್ವಂತದ ಶಕ್ತಿಯಿಲ್ಲ. ಅದಕ್ಕಾಗಿ ದೇವರು,ದಿಂಡರು, ಗುಡಿ, ಗುಂಡಾರಗಳಿಂದ ಇವರನ್ನು ದೂರ ಇಡಬೇಕಾಗಿದೆ.ಧಾರ್ಮಿಕ ಸಂಸ್ಥೆಗಳ ದುರ್ಬಳಕೆಯನ್ನು ನಿರ್ಬಂಧಿಸಬೇಕಿದೆ. ಆವಾಗ ಮಾತ್ರ ಇವರ ಮತಾಂಧತೆಯ ನಶೆ ಇಳಿಯಲು ಸಾಧ್ಯ.

ಹಿಂದೂ ಗ್ರಾಹಕರನ್ನು ಮುಸಲ್ಮಾನರ ಅಂಗಡಿಗಳಿಗೆ ಹೋಗುವುದನ್ನು ತಡೆಯುವ ನಕಲಿ ಧರ್ಮ ರಕ್ಷಕರು, ಹಪ್ತಾ ವಸೂಲಿಗಾರರು ಹಿಂದೂಗಳ ಅಂಗಡಿಗೆ ಬಂದು ವಸ್ತುಗಳನ್ನು ಖರೀದಿಸುವ ಮುಸಲ್ಮಾನರನ್ನು ಯಾಕೆ ನಿರ್ಬಂಧಿಸುವುದಿಲ್ಲ? ಹಿಂದುತ್ವದ ನಿಜ ರಕ್ಷಕರು ನೀವಾಗಿದ್ದರೆ ಮುಸಲ್ಮಾನರ ಜೊತೆ ವಹಿವಾಟು ನಡೆಸದಂತೆ ಹಿಂದೂ ವ್ಯಾಪಾರಿಗಳಿಗೆ ನಿರ್ಬಂಧ ವಿಧಿಸಿ. ಇವರಿಂದ ಅದು ಸಾಧ್ಯವಿಲ್ಲ. ಇವರದೇನಿದ್ದರೂ ಬಡವರ ಮೇಲೆ ಒಣ ಶೌರ್ಯ ಪ್ರದರ್ಶನ.

ಈ ಮತಾಂಧತೆಯ ಮತ್ತೇರಿಸಿಕೊಂಡ ಮೂರ್ಖರಿಂದ ನಿಜವಾದ ಧರ್ಮನಿಷ್ಠರಿಗೂ ಬೇಸರವಾಗಿದೆ. ಧರ್ಮಕ್ಕೆ ಅಪಾಯವಿರುವುದು ಹಪ್ತಾ ವಸೂಲಿ ಮಾಡಿ, ಲೂಟಿ ಮಾಡಿ ದೋಚುವ ಇಂಥವರಿಂದ. ವಾಸ್ತವವಾಗಿ ಯಾವುದೇ ಧರ್ಮ ಅಪಾಯದಲ್ಲಿಲ್ಲ.ಅಪಾಯ ಎದುರಾಗಿರುವುದು 130 ಕೋಟಿ ಭಾರತೀಯರಿಗೆ ಘನತೆಯ ಬದುಕನ್ನು ಕಲ್ಪಿಸಿಕೊಟ್ಟಿರುವ ಸಂವಿಧಾನಕ್ಕೆ ಎಂಬುದನ್ನು ಮರೆಯಬಾರದು.

ಇವರ ಪೊಳ್ಳು ಬೆದರಿಕೆಗೆ ಹೆದರುವ ದಿನಗಳು ಮುಗಿದವು. ಮಂಗಳೂರಿನ ಮಂಗಳಾದೇವಿ ಜಾತ್ರೆಯಲ್ಲಿ ಇವರು ಕಟ್ಟಿದ ಬಾವುಟದ ಕಡೆಗೆ ಹೊರಳಿಯೂ ನೋಡದೆ ಮುಸ್ಲಿಮ್ ವ್ಯಾಪಾರಿಗಳಲ್ಲಿ ವಸ್ತುಗಳನ್ನು ಖರೀದಿಸಿದ ಜನ ತಾವು ಯಾರ ಅಡಿಯಾಳುಗಳಲ್ಲ ಎಂದು ತೋರಿಸಿದ್ದಾರೆ. ಹಿಂದಿನ ಬಸವರಾಜ ಬೊಮ್ಮಾಯಿಯವರ ನೇತೃತ್ವದ ಬಿಜೆಪಿ ಸರಕಾರವಿದ್ದಾಗ ಮುಸ್ಲಿಮ್ ವ್ಯಾಪಾರಿಗಳಿಗೆ ಅಂಗಡಿ ಹಾಕಲು ಬಿಡಲಿಲ್ಲ. ಧಾರವಾಡದ ನುಗ್ಗಿಕೇರಿ ಹನುಮಂತನ ಗುಡಿಯ ಬಳಿ ಎಳೆ ನೀರು ಮಾರಾಟ ಮಾಡುವ ಮುಸ್ಲಿಮ್ ವಯೋವದ್ಧನ ಮೇಲೆ ಹಲ್ಲೆ ಮಾಡಿದರು. ಈ ಗೂಂಡಾಗಿರಿ ಪರಿಣಾಮವಾಗಿ ಜನ ಬಿಜೆಪಿಯನ್ನು ತಿರಸ್ಕರಿಸಿದರು. ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ಬಂತು. ಆದರೂ ಈ ಅವಿವೇಕಿಗಳು ಬುದ್ಧಿ ಕಲಿತಿಲ್ಲ.

ಕಳೆದ ಮೂವತ್ತು ವರ್ಷಗಳಿಂದ ಭಕ್ತಿ, ಶ್ರದ್ಧೆಯ ತಾಣಗಳಾದ ದೇವಾಲಯ, ಮಠ, ಮಂದಿರ, ಜಾತ್ರೆ, ರಥೋತ್ಸವ, ಮುಂತಾದವುಗಳನ್ನು ತಮ್ಮ ರಾಜಕೀಯ ಅಜೆಂಡಾ ಜಾರಿಗೆ ಯಥೇಚ್ಛವಾಗಿ ದುರ್ಬಳಕೆ ಮಾಡಿಕೊಳ್ಳುತ್ತಾ ಬಂದ ಕರಾಳ ಶಕ್ತಿಗಳಿಂದಾಗಿ ಪೊಲೀಸರ ಕಾವಲಿನಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಬೇಕಾಗಿ ಬಂದಿದೆ. ಹೀಗೆಯೇ ಬಿಟ್ಟರೆ ಇದು ಇಲ್ಲಿಗೆ ನಿಲ್ಲುವುದಿಲ್ಲ. ಈ ಧಾರ್ಮಿಕ ಉನ್ಮಾದವನ್ನು ಉಪಯೋಗಿಸಿಕೊಂಡು ಬಾಬಾಸಾಹೇಬರ ಸಂವಿಧಾನವನ್ನು ತೆಗೆದು ಹಾಕಿ ಪಂಚಾಂಗವನ್ನು ದೇಶದ ಮೇಲೆ ಹೇರಿ ದಲಿತ, ದಮನಿತ ಸಮುದಾಯಗಳನ್ನು ಊರಾಚೆ ಇಡಲು ಮಸಲತ್ತು ನಡೆಸಿದರೆ ಅಚ್ಚರಿ ಪಡಬೇಕಾಗಿಲ್ಲ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Contributor - ಸನತ್ ಕುಮಾರ ಬೆಳಗಲಿ

contributor

Similar News