×
Ad

ಸರಕಾರ ಕಡೆಗಣಿಸಿದ ಉತ್ತರದ ಹೋರಾಟಗಳು

Update: 2025-12-08 16:33 IST

ಕರ್ನಾಟಕದ ಉತ್ತರದ ಜಿಲ್ಲೆಗಳಿಗೆ ಬೆಂಗಳೂರು ತುಂಬಾ ದೂರ.ಆದರೆ ಉತ್ತರ ಕರ್ನಾಟಕದ ರಾಜಕಾರಣಿಗಳಿಗೆ ರಾಜಧಾನಿ ದೂರವಲ್ಲ. ಅಲ್ಲಿನ ಜನರಿಂದ ಚುನಾಯಿತರಾಗಿ ಬರುವ ಬಹುತೇಕ ಜನ ಪ್ರತಿನಿಧಿಗಳಿಗೆ ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಗಳಲ್ಲಿ ಐಷಾರಾಮಿ ಮನೆಗಳಿವೆ. ಹೆಚ್ಚಾಗಿ ರಾಜಧಾನಿಯಲ್ಲೇ ಇರುವ ಇವರು ಚುನಾವಣೆ ಬಂದಾಗ ಊರಿಗೆ ಹೋಗಿ ಸುಗ್ಗಿ ಮುಗಿಸಿಕೊಂಡು ಗೆದ್ದು ವಿಧಾನಸಭೆಯನ್ನು ಪ್ರವೇಶಿಸುತ್ತಾರೆ. ಮತ್ತೆ ಚುನಾವಣೆ ಬರುವವರೆಗೆ ನಡುವೆ ಊರಿನ ನೆನಪಾಗುವುದಿಲ್ಲವೆಂದಲ್ಲ, ಆಗಾಗ ಏನಾದರೂ ಮದುವೆ, ಗೃಹ ಪ್ರವೇಶದಂಥ ಕಾರ್ಯಕ್ರಮಗಳಿದ್ದರೆ ಬಂದು ಹೋಗುತ್ತಾರೆ.

ಉತ್ತರ ಕರ್ನಾಟಕದ ಎರಡು ಕಡೆ ಕಳೆದ ಎಂಭತ್ತೆರಡು ದಿನಗಳಿಂದ ತಮ್ಮ ನ್ಯಾಯ ಸಮ್ಮತ ಬೇಡಿಕೆಗಳಿಗಾಗಿ ಜನರು ಹೋರಾಟಕ್ಕೆ ಇಳಿದಿದ್ದಾರೆ. ಕಲ್ಯಾಣ ಕರ್ನಾಟಕದ ಪಕ್ಕದಲ್ಲಿ ಇರುವ ಆದರೆ ಕಿತ್ತೂರು ಕರ್ನಾಟಕಕ್ಕೆ

(ಹಿಂದಿನ ಮುಂಬೈ ಕರ್ನಾಟಕ) ಸೇರಿದ ಬಿಜಾಪುರ

(ಈಗ ವಿಜಯಪುರ)ದಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಬೇಕೆಂದು ಪಕ್ಷಾತೀತ ಹೋರಾಟವೊಂದು ನಡೆಯುತ್ತಿದೆ.ಇನ್ನೊಂದೆಡೆ ಕಲ್ಯಾಣ ಕರ್ನಾಟಕಕ್ಕೆ

(ಹಿಂದಿನ ಹೈದರಾಬಾದ್ ಕರ್ನಾಟಕ) ಸೇರಿದ ಕೊಪ್ಪಳದಲ್ಲಿ ಜೀವ ನಾಶಕ ಅಪಾಯಕಾರಿ ಉದ್ದಿಮೆಗಳ ವಿರುದ್ಧ ಎರಡೂವರೆ ತಿಂಗಳಿನಿಂದ ಕೊಪ್ಪಳದ ಜನರಿಂದ ಶಾಂತಿಯುತ ಚಳವಳಿಯೊಂದು ನಡೆದಿದೆ. ಇಷ್ಟು ಸುದೀರ್ಘವಾದ ಹೋರಾಟಗಳು ನಡೆಯುತ್ತಿದ್ದರೂ ಬೆಂಗಳೂರಿನ ವಿಧಾನ ಸೌಧದಲ್ಲಿ ಇರುವವರಿಗೆ ದೂರದ ಊರುಗಳ ಚಳವಳಿಗಳ ಧ್ವನಿ ಕೇಳಿಸುತ್ತಿಲ್ಲ.ಅಲ್ಲಿಂದ ಆರಿಸಿ ಬರುವವರ ಕಿವಿಗೆ ಕೇಳಿದರೂ ಕೇಳಿಸದಂತೆ ಇರುತ್ತಾರೆ. ಈ ಎರಡೂ ಕಡೆ ಬಹುತೇಕ ಶಾಸಕರು ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಸೇರಿದವರು. ಬಿಜಾಪುರ ನಗರದ ಶಾಸಕ ಮಾತ್ರ ಆಗಾಗ ಬಾಯಿ ಭೇದಿ ಮಾಡಿಕೊಳ್ಳುವ ಸ್ವಯಂ ಘೋಷಿತ ಹುಲಿ ಯತ್ನಾಳ್ ಮಾತ್ರ ಬಿಜೆಪಿಗೆ ಸೇರಿದವರು.

ನಾನು ಕೂಡ ನನ್ನ ಹೆಮ್ಮೆಯ ಅವಿಭಜಿತ ಬಿಜಾಪುರ ಜಿಲ್ಲೆಯಿಂದಲೇ ಬಂದವನು. ನಮ್ಮ ಜಿಲ್ಲೆಯ ಜನರು ಸರಕಾರ ಸೇರಿದಂತೆ ಯಾರಿಗೂ ಕೈಯೊಡ್ಡಿ ಬೇಡಿಕೊಂಡವರಲ್ಲ. ಯಾರನ್ನೂ ಅವಲಂಬಿಸಿದವರಲ್ಲ. ನಮ್ಮ ಜಿಲ್ಲೆಯಲ್ಲಿ ಐದು ನದಿಗಳು ಹರಿಯುತ್ತವೆ. ಅಂತಲೆ ಇದನ್ನು ಕರ್ನಾಟಕದ ಪಂಜಾಬ್ ಎಂದು ಕರೆಯುತ್ತಾರೆ. ಯಾರಿಗೂ ಕೈಯೊಡ್ಡದ ಇಲ್ಲಿನ ಜನ ಊರಿಗೆ ಬರಗಾಲ ಬಂದರೆ ದುಡಿಯಲು ದೂರದ ದೊಡ್ಡ ನಗರಗಳಿಗೆ ಹೋಗುತ್ತಾರೆ. ಮುಂಬೈ, ಗೋವಾ, ಬೆಂಗಳೂರು, ಮಂಗಳೂರು, ಉಡುಪಿ, ದಾವಣಗೆರೆ, ಬರೋಡ ಹೀಗೆ ಯಾವುದೇ ಊರಿಗೆ ಹೋಗಿ, ನಮ್ಮ ಬಿಜಾಪುರದ ಜನ ಸಿಗುತ್ತಾರೆ.

ಇಂಥ ಬಿಜಾಪುರದ ಜನ ತಮ್ಮ ಬೇಡಿಕೆಗಳಿಗಾಗಿ ಹೋರಾಟಕ್ಕೆ ಇಳಿಯುವುದು ಅಪರೂಪ. ಈಗ ಅವರು ತಮಗೆ ಸರಕಾರಿ ಮೆಡಿಕಲ್ ಕಾಲೇಜು ಬೇಕೆಂದು ಬೀದಿಗೆ ಇಳಿದಿದ್ದಾರೆ. ಆದರೆ ಸರಕಾರ ಇಲ್ಲಿ ಖಾಸಗಿ ಸಹಭಾಗಿತ್ವದ ಮೆಡಿಕಲ್ ಕಾಲೇಜು ಮಾಡಲು ತಯಾರಿ ನಡೆಸಿದೆ. ಇಬ್ಬರು ಮಂತ್ರಿಗಳು ಈ ಜಿಲ್ಲೆಯನ್ನು ಪ್ರತಿನಿಧಿಸುತ್ತಿದ್ದಾರೆ. ಒಬ್ಬರು ಪ್ರಭಾವೀ ಮಂತ್ರಿ ಎಂ.ಬಿ.ಪಾಟೀಲ್, ಇನ್ನೊಬ್ಬರು ಸಕ್ಕರೆ ಸಚಿವ ಶಿವಾನಂದ ಪಾಟೀಲ್. ಇವರಿದ್ದರೂ ಕಳೆದ ಎರಡೂವರೆ ತಿಂಗಳಿಂದ ಸುದೀರ್ಘ ಹೋರಾಟವೊಂದು ಇಲ್ಲಿ ನಡೆಯುತ್ತಿದೆ. ಬಿಜಾಪುರದ ಜನ ಅರಮನೆಯನ್ನು ಕೇಳುತ್ತಿಲ್ಲ, ವಿಮಾನ ನಿಲ್ದಾಣವೂ ಅವರ ಬೇಡಿಕೆಯಲ್ಲ, ಅವರು ಕೇಳುತ್ತಿರುವುದು ಅಂಥ ದೊಡ್ಡ ಬೇಡಿಕೆಯನ್ನಲ್ಲ. ಬಡವರು, ಶ್ರಮಜೀವಿಗಳು ಹಾಗೂ ಅನುಕೂಲ ಇಲ್ಲದವರಿಗಾಗಿ ಸಂಪೂರ್ಣ ಸರಕಾರಿ ಮೆಡಿಕಲ್ ಕಾಲೇಜನ್ನು. ಆದರೆ ಸರಕಾರದಲ್ಲಿದ್ದವರಿಗೆ ಖಾಸಗಿ ಸಹಭಾಗಿತ್ವದ ಮೆಡಿಕಲ್ ಕಾಲೇಜು ಬೇಕಾಗಿದೆ. ಒಂದೆಡೆ ಜನ ಹೋರಾಟಕ್ಕೆ ಇಳಿದರೆ ಇನ್ನೊಂದು ಕಡೆ ಸರಕಾರ ಹಠ ಹಿಡಿದು ಕೂತಿದೆ. ಹಗ್ಗ ಹರಿಯುತ್ತಿಲ್ಲ, ಕೋಲು ಮುರಿಯುತ್ತಿಲ್ಲ.

ನಾವೆಲ್ಲ ತುಂಬಾ ಇಷ್ಟ ಪಡುವ ಸಿದ್ದರಾಮಯ್ಯನವರು ನಮ್ಮ ಮುಖ್ಯಮಂತ್ರಿ. ಇಂಥ ಜನ ಹೋರಾಟಗಳಿಗೆ ಅವರು ಸ್ಪಂದಿಸುತ್ತಲೇ ಬಂದಿದ್ದಾರೆ. ಈ ಬಾರಿ ಅವರ ಕಿವಿಗೆ ಬಿಜಾಪುರ ಜನರ ಕೂಗು ಕೇಳುತ್ತಿಲ್ಲ. ಕೇಳಿಸದಂತೆ ಅಡ್ಡ ನಿಂತವರು ಯಾರೆಂಬುದು ಬಿಜಾಪುರದ ಜನರಿಗೆ ಗೊತ್ತಿದೆ. ಇಂಥ ಹೋರಾಟಗಳ ಜೊತೆಗೆ ಇರಬೇಕಾದ ನಗರ ಶಾಸಕ ಬಸನಗೌಡ ಪಾಟೀಲರು ಬಾಯಿ ತೆರೆದರೆ ಮುಸಿಮ್ ದ್ವೇಷದ ವಿಷಕಾರಿ ಮುತ್ತುಗಳು ಉದುರುತ್ತವೆ. ಆದರೆ ಈ ವಿಷಯದಲ್ಲಿ ಅವರದು ಬರೀ ಮೌನವಲ್ಲ, ಜಾಣ ಮೌನ. ಸರಕಾರಿ ಮೆಡಿಕಲ್ ಕಾಲೇಜಿನಲ್ಲಿ ಪಾಲುಗಾರಿಕೆ ವಹಿಸುವುದಾಗಿ ಅವರು ಸದನದಲ್ಲೇ ಹೇಳಿದ್ದರು. ಹೀಗಾಗಿ ಇದರ ಬಗ್ಗೆ ಅವರಿಗೆ ಆಸಕ್ತಿ ಇಲ್ಲ. ಇನ್ನು ಉದ್ಯಮ ಮಂತ್ರಿ ಎಂ.ಬಿ.ಪಾಟೀಲರು ಬಹಿರಂಗವಾಗಿ ಬೆಂಬಲಿಸಿದಂತೆ ಕಾಣುತ್ತದೆ. ಆದರೆ ಅವರ ಅಂತರಂಗ ಮಾತ್ರ ನಿಗೂಢ. ಬರ ಪೀಡಿತ ಜಿಲ್ಲೆಯನ್ನು ಅದರಲ್ಲೂ ವಿಶೇಷವಾಗಿ ತಮ್ಮ ಬಬಲೇಶ್ವರ ಮತಕ್ಷೇತ್ರವನ್ನು ಸಂಪೂರ್ಣ ನೀರಾವರಿ ಮಾಡಿಸಿ ಎಲ್ಲೆಡೆ ಹಸಿರು ಕಾಣುವಂತೆ ಮಾಡಿದ ಅವರ ಸಾಧನೆ ಶ್ಲಾಘನೀಯ. ಆದರೆ ಸರಕಾರಿ ಮೆಡಿಕಲ್ ಕಾಲೇಜು ವಿಷಯದಲ್ಲಿ ಮಾತ್ರ ಅವರು ಯಾಕೆ ಆಸಕ್ತಿ ತೋರಿಸುತ್ತಿಲ್ಲವೋ ಗೊತ್ತಿಲ್ಲ. ಈ ಅಸಮಾಧಾನ ಚಳವಳಿಗಾರರಲ್ಲಿ ಇದೆ.

ಬಿಜಾಪುರದಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಮಾಡಲು ನೂರಾರು ಕೋಟಿ ರೂಪಾಯಿಗಳೇನೂ ಬೇಕಾಗಿಲ್ಲ. ಕೇವಲ ಐವತ್ತು ಕೋಟಿ ರೂ. ಸಾಕು. ಈಗಾಗಲೇ ಬಿಜಾಪುರದ ಅಥಣಿ ರಸ್ತೆಯಲ್ಲಿ ಅತ್ಯಂತ ಸುಸಜ್ಜಿತ ಸರಕಾರಿ ಆಸ್ಪತ್ರೆ ಇದೆ. ಅದಕ್ಕೆ ಸೇರಿದ 150 ಎಕರೆ ಜಾಗವೂ ಇದೆ.ಅದರ ಮಾರುಕಟ್ಟೆ ಮೌಲ್ಯ 4,500 ಕೋಟಿ ರೂಪಾಯಿ. ಯತ್ನಾಳ್ ಗೌಡರು ಸೇರಿದಂತೆ ಖಾಸಗಿಯವರಿಗೆ ಈ ಜಾಗದ ಮೇಲೆ ಕಣ್ಣು. ಹೇಗಾದರೂ ಮಾಡಿ ಅದನ್ನು ನುಂಗಿ ನೀರು ಕುಡಿಯುವ ದಾಹ ಅವರದು.

ಜನರ ಬೊಕ್ಕಸದ ಹಣದಿಂದ ನಿರ್ಮಿಸಿದ ಸುಸಜ್ಜಿತ ಸರಕಾರಿ ಆಸ್ಪತ್ರೆ, ಹಾಗೂ ಅದಕ್ಕೆ ಹೊಂದಿಕೊಂಡಂತೆ ಇರುವ 150 ಎಕರೆ ಜಾಗ,

ಇದನ್ನು ಸರಕಾರ ಖಾಸಗಿಯವರ ಮಡಿಲಿಗೆ ಹಾಕಲು ಹೊರಟಿದೆ. ಇಂಥ ಸಂದರ್ಭಗಳಲ್ಲಿ ಜನ ಪ್ರತಿನಿಧಿಗಳು ಜನರ ಜೊತೆಗೆ ಇರಬೇಕು. ಆದರೆ ವಿಷಾದದ ಸಂಗತಿಯೆಂದರೆ ಅವರು ಇದನ್ನು ಖಾಸಗಿಯವರ ಮಡಿಲಿಗೆ ಹಾಕಲು ಹೊರಟಿದ್ದಾರೆ ಎಂಬ ಬಗ್ಗೆ ಜನರಲ್ಲಿ ಅಸಮಾಧಾನ ಇದೆ. ಸಚಿವರಾದ ಎಂ.ಬಿ.ಪಾಟೀಲರು ಅನೇಕ ಒಳ್ಳೆಯ ಜನಪರ ಕೆಲಸಗಳನ್ನು ಮಾಡಿ ಜನರ ಪ್ರೀತಿ, ಗೌರವಗಳಿಗೆ ಪಾತ್ರರಾಗಿದ್ದಾರೆ.ಆದರೆ ಸರಕಾರಿ ಮೆಡಿಕಲ್ ಕಾಲೇಜು ವಿಷಯದಲ್ಲಿ ಮಾತ್ರ ಅವರು ಮನಸ್ಸು ಬಿಚ್ಚಿ ಮಾತಾಡುತ್ತಿಲ್ಲ. ಪ್ರತಿಭಟನೆ ನಾಲ್ಕು ದಿನ ನಡೆದು ನಿಂತು ಹೋಗುತ್ತದೆ ಎಂದು ಜನಪ್ರತಿನಿಧಿಗಳು ಉದಾಸೀನ ಧೋರಣೆ ತಾಳಿದಂತೆ ಕಾಣುತ್ತದೆ. ಆದರೆ ನಾನು ಸೂಕ್ಷ್ಮ ವಾಗಿ ಗಮನಿಸಿದಂತೆ ಇದು ಇಲ್ಲಿಗೆ ನಿಲ್ಲುವ ಸಾಧ್ಯತೆ ಕಡಿಮೆ. ಇದನ್ನು ಹೀಗೇ ಮುಂದುವರಿಸಿ ಚುನಾವಣೆಯಲ್ಲಿ ಪಾಠ ಕಲಿಸಲು ಜನ ತಯಾರಾಗಿದ್ದಾರೆ. ಅದಕ್ಕೂ ಮುನ್ನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜನರು ತಿರುಗಿ ಬೀಳುತ್ತಾರೆ. ಒಮ್ಮೆ ಜನ ತಿರುಗಿ ಬಿದ್ದರೆ ಮತ್ತೆಂದೂ ‘ನೀವು’ಗೆಲ್ಲಲು ಸಾಧ್ಯವಿಲ್ಲ.

ಬಿಜಾಪುರ ಜಿಲ್ಲೆಯ ಜನ ಎಂದೂ ಕೆರಳುವುದಿಲ್ಲ. ಎಷ್ಟೇ ತೊಂದರೆಯಾದರೂ ಸುಮ್ಮನಿದ್ದು ಸಹಿಸುತ್ತಾರೆ. ಆದರೆ ಹೊರಳಿ ನಿಂತರೆ ಗೆಲ್ಲುವವರೆಗೆ ಬಿಡುವುದಿಲ್ಲ. ಆಲಮಟ್ಟಿ ಅಣೆಕಟ್ಟ್ಟೆಗಾಗಿ ನಡೆದ ಹೋರಾಟದಲ್ಲಿ ನಾನು ಬಿಜಾಪುರದಲ್ಲೇ ಇದ್ದೆ. ಐದಾರು ತಿಂಗಳುಗಳ ಕಾಲ ನಡೆದ ಹೋರಾಟದಲ್ಲಿ ಕೊನೆಗೂ ಗೆದ್ದರು. ಅಣೆಕಟ್ಟೆಯ ಶಿಲಾನ್ಯಾಸಕ್ಕೆ ಅಂದಿನ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಬಿಜಾಪುರಕ್ಕೆ ಬಂದರು. ಇದರಲ್ಲೂ ಕೂಡ ಜನರು ಗೆಲ್ಲುತ್ತಾರೆ. ಘಟಾನುಘಟಿ ರಾಜಕೀಯ ನಾಯಕರ ರಾಜಕೀಯ ಭವಿಷ್ಯ ಮಣ್ಣು ಪಾಲಾದರೆ ಅಚ್ಚರಿ ಪಡಬೇಕಾಗಿಲ್ಲ. ಹಾಗಾಗದಂತೆ ಎಚ್ಚರ ವಹಿಸುವುದು ಸಚಿವರಾದ ಎಂ.ಬಿ.ಪಾಟೀಲ್, ಶಿವಾನಂದ ಪಾಟೀಲ್ ಸೇರಿದಂತೆ ಜಿಲ್ಲೆಯ ಎಲ್ಲ ಶಾಸಕರ ಕರ್ತವ್ಯವಾಗಿದೆ.

ಬಿಜಾಪುರ ಜಿಲ್ಲೆಯ ರಾಜಕಾರಣಿಗಳು ಪಕ್ಕದ ಕಲಬುರಗಿಯ ರಾಜಕೀಯ ನಾಯಕರನ್ನು ನೋಡಿ ಕಲಿಯುವುದು ಸಾಕಷ್ಟಿದೆ.ಕೇವಲ ಎರಡು ದಶಕಗಳ ಹಿಂದೆ ಕಲಬುರಗಿ ಹೇಗಿತ್ತು ಈಗ ಹೇಗಾಗಿದೆ?

ಒಮ್ಮೆ ನೋಡಿ. ಈಗ ರಾಷ್ಟ್ರ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆಯವರು ಪಟ್ಟು ಹಿಡಿದು ಕಲ್ಯಾಣ ಕರ್ನಾಟಕಕ್ಕೆ ಸಂವಿಧಾನದ ವಿಶೇಷ ಸ್ಥಾನಮಾನ (371ಜೆ)ಪಡೆದರು. ಇದಕ್ಕಾಗಿ ವೈಜನಾಥ ಪಾಟೀಲ್,ಬಿ.ಆರ್.ಪಾಟೀಲ್ ಮೊದಲಾದವರ ನೇತೃತ್ವದಲ್ಲಿ ಬಹುದೊಡ್ಡ ಹೋರಾಟವೇ ನಡೆಯಿತು. ಈಗ ಅಲ್ಲಿ ಕೇಂದ್ರೀಯ ವಿಶ್ವವಿದ್ಯಾನಿಲಯ, ಜಯದೇವ ಹೃದ್ರೋಗ ಆಸ್ಪತ್ರೆ,

ಇಎಸ್‌ಐ ಆಸ್ಪತ್ರೆ, ಹೀಗೆ ರಾಜಧಾನಿ ಬೆಂಗಳೂರಿನಲ್ಲಿ ಇರುವ ಎಲ್ಲ ಸೌಕರ್ಯಗಳು ಇವೆ.ಅಲ್ಲಿ ಸರಕಾರಿ ಜಾಗ ನುಂಗುವ ಮಸಲತ್ತನ್ನು ಯಾರೂ ಮಾಡಲಿಲ್ಲ.ಸಹಭಾಗಿತ್ವದ ಹೆಸರಿನಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಜಾಗವನ್ನು ಹೊಡೆಯುವ ಹುನ್ನಾರವನ್ನೂ ಮಾಡಲಿಲ್ಲ.

ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ಸರಕಾರಿ ಮೆಡಿಕಲ್ ಕಾಲೇಜಿಗಾಗಿ ಬಿಜಾಪುರದ ಜನರು ನಡೆಸಿರುವ ಹೋರಾಟಕ್ಕೆ ಸ್ಪಂದಿಸಬೇಕು. ಬೆಳಗಾವಿಯಲ್ಲಿ ಡಿಸೆಂಬರ್ 8ರಿಂದ ಅಂದರೆ ಇಂದಿನಿಂದ ಆರಂಭವಾಗಲಿರುವ ವಿಧಾನ ಸಭೆಯ ಅಧಿವೇಶನದಲ್ಲಿ ಈ ಕುರಿತು ಸಕಾರಾತ್ಮಕ ನಿಲುವನ್ನು ಪ್ರಕಟಿಸಬೇಕು. ಪ್ರತಿಪಕ್ಷಗಳು ಕೂಡ ಬಿಜಾಪುರದ ಜನರ ಬೇಡಿಕೆಗಾಗಿ ಸರಕಾರದ ಮೇಲೆ ಒತ್ತಡ ತರಬೇಕು.

ಇದು ಬಿಜಾಪುರದ ಜನರ ಬೇಡಿಕೆಯಾದರೆ ಕಲ್ಯಾಣ ಕರ್ನಾಟಕದ ಕೊಪ್ಪಳದ ಜನರು ತಮ್ಮ ಜೀವ ತೆಗೆಯುವ ಅಪಾಯಕಾರಿ ಉದ್ದಿಮೆಗಳ ವಿರುದ್ಧ ಸಿಡಿದೆದ್ದಿದ್ದಾರೆ. ನಾಡಿನ ಹಿರಿಯ ಚಿಂತಕ ಅಲ್ಲಮಪ್ರಭು ಬೆಟ್ಟದೂರು ಮತ್ತು ಹಲವಾರು ಸಂಗಾತಿಗಳು ನೇತೃತ್ವ ವಹಿಸಿದ್ದಾರೆ.

ಕೊಪ್ಪಳದಲ್ಲಿ ಎಂ .ಎಸ್.ಪಿ.ಎಲ್. ವಿಸ್ತರಣೆ ಹಾಗೂ ಕಿರ್ಲೋಸ್ಕರ್,ಕಲ್ಯಾಣಿ, ಎಕ್ಸ್ ಇಂಡಿಯಾ, ಸುಮಿ ಮೊದಲಾದ ಕಾರ್ಖಾನೆಗಳ ವಿಸ್ತರಣೆ ಹಾಗೂ ಹೊಸ ಕಾರ್ಖಾನೆಗಳ ಸ್ಥಾಪನೆಯನ್ನು ವಿರೋಧಿಸಿ ಜನರು ನಡೆಸುತ್ತಿರುವ ಧರಣಿ ಸಮರ್ಥನೀಯವಾಗಿದೆ. ಮನುಷ್ಯರು ಮಾತ್ರವಲ್ಲ ಸಕಲ ಜೀವಿಗಳಿಗೆ ಮಾರಕವಾದ ಈ ಕಾರ್ಖಾನೆಗಳು ಉಗುಳುವ ಹೊಗೆ, ಹಾಗೂ ಬೂದಿಯಿಂದ ಕೊಪ್ಪಳ ಜಿಲ್ಲೆಯ ಗಿಣಿಗೇರಿ, ಅಲ್ಲಾ ನಗರ,ಹಿರೇ ಬಗನಾಳ ,

ಕಾಸನ ಕಂಡಿ, ಬೇವಿನ ಹಳ್ಳಿ, ಬಸಾಪುರ ಮುಂತಾದ ಊರುಗಳ ಜನರಿಗೆ ಉಸಿರಾಡಲು ಕಷ್ಟ ವಾಗುತ್ತಿದೆ.ರೈತರ ಬೆಳೆಗಳು ಹಾಳಾಗಿವೆ. ರೈತ ಕುಟುಂಬಗಳ ಅನೇಕರು ಅಸ್ತಮಾ, ಟಿಬಿ, ಕ್ಯಾನ್ಸರ್‌ಗೆ ತುತ್ತಾಗಿದ್ದಾರೆ. ಹೀಗಾಗಿ ಜನರು ಬೀದಿಗೆ ಇಳಿದಿದ್ದಾರೆ.

ಕೊಪ್ಪಳ ನಮ್ಮ ನಾಡಿನ ಚಾರಿತ್ರಿಕ ಹಿನ್ನೆಲೆಯ ಮಹತ್ವದ ಜಿಲ್ಲೆ.ಅಶೋಕನ ಎರಡು ಶಿಲಾ ಶಾಸನಗಳು, ಕೋಟೆ ಕೊತ್ತಲಗಳು, ಜೈನ ಬಸದಿಗಳು, ಗವಿಮಠ ಮುಂತಾದವು ಇಲ್ಲಿವೆ.

ಅಪಾಯಕಾರಿ ಉದ್ಯಮಗಳಿಂದ ಆಕ್ರೋಶಗೊಂಡ ಜನರು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಲ್ಲಿ ಬಂದಾಗಲೂ ಮನವಿ ಮಾಡಿಕೊಂಡಿದ್ದಾರೆ. ಇಲ್ಲಿಯ ಶಾಸಕ ಮತ್ತು ಸಂಸದರು ತಮ್ಮ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ ಎಂಬ ಅಸಮಾಧಾನ ಜನರಲ್ಲಿದೆ.

ಕಾರಣ ಬೆಳಗಾವಿ ವಿಧಾನಸಭಾ ಅಧಿವೇಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಕುರಿತು ಜನರಿಗೆ ಭರವಸೆಯನ್ನು ನೀಡುವುದು ಅಗತ್ಯವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಸನತ್ ಕುಮಾರ ಬೆಳಗಲಿ

contributor

Similar News