ಇದೇನಿದು ಇವರ ಹೊಸ ನಾಟಕ
ಭಾರತ ಈಗಲೇ ಹಿಂದೂ ರಾಷ್ಟ್ರವಾಗಿದೆ. ಅದಕ್ಕೆ ಸಂವಿಧಾನದ ಮಾನ್ಯತೆ ಅಗತ್ಯವಿಲ್ಲ ಎಂದು ನೋಂದಣಿ ಆಗದ ಸಂಘದ ಸರ ಸಂಘಚಾಲಕ ಮೋಹನ್ ಭಾಗವತ್ ಅವರು ಇತ್ತೀಚೆಗೆ ಹೇಳಿದರು. ಮಾನಸಿಕವಾಗಿ ರಾಜ್ಯಾಂಗವನ್ನು ಎಂದೂ ಗೌರವಿಸದ ಅವರಿಂದ ಇಂಥ ಮಾತು ಅನಿರೀಕ್ಷಿತವೇನಲ್ಲ. ಇದು ಅವರ ಸಂಘದ ಅಧಿಕೃತ ಹೇಳಿಕೆ ಅಲ್ಲ ಎಂಬ ಅಸಲಿ ಸತ್ಯ ಗೊತ್ತಾಗುತ್ತದೆ. ಇವರ ಸಂಘದಲ್ಲಿ ಒಬ್ಬೊಬ್ಬರು ಒಂದೊಂದು ರೀತಿ ಹೇಳಿ ನಮ್ಮನ್ನೇ ಗೊಂದಲದ ಮಡುವಿಗೆ ತಳ್ಳುತ್ತಾರೆ. ಇವರ ಸಂಘದ ಹಿರಿಯ ಸ್ವಯಂ ಸೇವಕ ಹಾಗೂ ಸಂವಿಧಾನಕ್ಕೆ ಬದ್ಧರಾಗಿ ಪ್ರಮಾಣ ವಚನ ಸ್ವೀಕರಿಸಿದ ಪ್ರಧಾನಿ ನರೇಂದ್ರ ಮೋದಿಯವರು ಭಾರತವನ್ನು ಹಿಂದೂ ರಾಷ್ಟ್ರ ಮಾಡುವುದಿಲ್ಲ ಎಂದು ಹೇಳುತ್ತಾರೆ. ಇನ್ನೊಂದೆಡೆ ಸಂಘದ ಸಹ ಕಾರ್ಯವಾಹ ಹಾಗೂ ನಮ್ಮ ಕರ್ನಾಟಕದವರೇ ಆದ ದತ್ತಾತ್ರೇಯ ಹೊಸಬಾಳೆ ಅವರು ಮುಸಲ್ಮಾನರು ಮತ್ತು ಕ್ರೈಸ್ತರು ಸೂರ್ಯ ನಮಸ್ಕಾರ ಮಾಡಬೇಕೆಂದು ಅಪ್ಪಣೆ ಕೊಡಿಸುತ್ತಾರೆ. ಮತ್ತೊಂದೆಡೆ ತನ್ನ ವ್ಯಾಪಾರ, ದಂಧೆಗಳ ಅನುಕೂಲಕ್ಕಾಗಿ ಬಿಜೆಪಿ ಸೇರಿದ ಹಾಗೂ ಕೇಂದ್ರ ಮಂತ್ರಿಯಾಗಿದ್ದ ಮತ್ತು ಈಗ ಕೇರಳದ ಎಡರಂಗವನ್ನು ಮುಗಿಸಲು ಸುಪಾರಿ ಪಡೆದು ಅಲ್ಲಿಗೆ ಹೋಗಿರುವ ರಾಜೀವ್ ಚಂದ್ರಶೇಖರ್ ಅಲ್ಪಸಂಖ್ಯಾತರ ಓಲೈಕೆಗಾಗಿ ಅಲ್ಲಿ ನಾನಾ ನಾಟಕಗಳನ್ನು ನಡೆಸಿದ್ದಾರೆ. ಇವರೆಲ್ಲರ ಮೂಲ ನಾಗಪುರದ ಸಂವಿಧಾನೇತರ ಶಕ್ತಿ ಕೇಂದ್ರವಾಗಿದೆ.
ಈ ವರ್ಷ ಆರೆಸ್ಸೆಸ್‌ನ ಶತಮಾನೋತ್ಸವದ ಸಂಭ್ರಮ. ಸಂಘಟನೆಗೆ ನೂರು ವರ್ಷ ತುಂಬಿದ ಸಂದರ್ಭದಲ್ಲಿ ಭಾರತವನ್ನು ‘ಹಿಂದೂ ರಾಷ್ಟ್ರ’ ಎಂದು ಅಧಿಕೃತ ವಾಗಿ ಘೋಷಿಸುವುದು ಸಂಘದ ಗುರಿಯಾಗಿತ್ತು. ಆದರೆ, ಬಾಬಾಸಾಹೇಬರ ಸಂವಿಧಾನ ಇರುವವರೆಗೆ ಅದು ಸಾಧ್ಯವಿಲ್ಲ ಎಂದು ಖಚಿತವಾದ ನಂತರ ಭಾಗವತರು ತಮಗೆ ತಾವೇ ಹಿಂದೂ ರಾಷ್ಟ್ರ ಎಂದು ಘೋಷಿಸಿಕೊಂಡು ಖುಷಿ ಪಡುತ್ತಿದ್ದಾರೆ. ಖುಷಿ ಪಡಲು ಯಾರ ಅಭ್ಯಂತರವೂ ಇಲ್ಲ. ಆದರೆ ಇದಕ್ಕಾಗಿ ನಾನಾ ನಾಟಕಗಳ ಮನರಂಜನೆ ಅಗತ್ಯವಿರಲಿಲ್ಲ. ಇವರ ಸಂಘಟನೆ ಮಾತ್ರವಲ್ಲ ಇವರಿಗೆ ಸೈದ್ಧಾಂತಿಕ ಎದುರಾಳಿಯಾಗಿರುವ ಭಾರತ ಕಮ್ಯುನಿಸ್ಟ್ ಪಕ್ಷಕ್ಕೂ ಇದು ಶತಮಾನೋತ್ಸವದ ವರ್ಷ. ಚುನಾವಣಾ ರಾಜಕಾರಣದಲ್ಲಿ ಪ್ರಭಾವ ಕಳೆದುಕೊಂಡ ಕಮ್ಯುನಿಸ್ಟರು ತಮ್ಮ ಪಾಡಿಗೆ ತಾವು ಶತಮಾನೋತ್ಸವವನ್ನು ಆಚರಿಸುತ್ತಿದ್ದಾರೆ. ಆದರೆ ಇವರಂತೆ ಅವರು ಯಾವುದೇ ನಾಟಕಗಳನ್ನು ಮಾಡದೇ ತಮ್ಮ ಪಾಡಿಗೆ ತಾವು ಸಂಭ್ರಮಿಸುತ್ತಿದ್ದಾರೆ.ಕಮ್ಯುನಿಸ್ಟರಿಗೆ ತ್ಯಾಗ, ಬಲಿದಾನದ ದೊಡ್ಡ ಇತಿಹಾಸವೇ ಇದೆ.ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದ ಕಮ್ಯುನಿಸ್ಟರು ಎಂದೂ ಬ್ರಿಟಿಷ್ ಸರಕಾರದ ಕ್ಷಮೆ ಕೇಳಲಿಲ್ಲ.ಅಂಡಮಾನ್ ನಿಕೋಬಾರ್‌ಗೆ ಹೋಗಿ ಅಲ್ಲಿ ಹಚ್ಚಿದ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಅಂಡಮಾನ್ ಜೈಲಿನಲ್ಲಿ ಇದ್ದವರ ಪಟ್ಟಿಯನ್ನು ನೋಡಿದರೆ ಗೊತ್ತಾಗುತ್ತದೆ. ಸಾವರ್ಕರ್ ಅವರಂತೆ ಇವರು ಕ್ಷಮೆ ಕೇಳಿ ಹೊರಗೆ ಬರಲಿಲ್ಲ. ರಾಜ್ಯಸಭೆಯಲ್ಲಿ ಕಮ್ಯುನಿಸ್ಟ್ ನಾಯಕರಾಗಿದ್ದ ಸೀತಾರಾಮ ಯಚೂರಿಯವರು ಸದನದಲ್ಲೇ ಈ ಪಟ್ಟಿಯನ್ನು ಓದಿದ್ದರು. ಪಟ್ಟಿಯಲ್ಲಿ ಇದ್ದ ಬಹುತೇಕ ಮಂದಿ ಕಮ್ಯುನಿಸ್ಟ್ ಚಳವಳಿಯ ಜೊತೆಗೆ ಗುರುತಿಸಿಕೊಂಡವರು. ಇದನ್ನು ಪ್ರಸ್ತಾಪಿಸಲು ಕಾರಣ ರಾಷ್ಟ್ರವಾದಿಗಳೆಂದು ಹೇಳಿಕೊಳ್ಳುವ ಇವರು ಆರೆಸ್ಸೆಸ್ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿರಲಿಲ್ಲ.
ಆಗ ಸ್ವಾತಂತ್ರ್ಯಾ ಹೋರಾಟದಲ್ಲಿ ಪಾಲ್ಗೊಳ್ಳದ ಇವರು ಈಗ ಬಹುತ್ವ ಭಾರತವನ್ನು ಮನುವಾದಿ ಹಿಂದೂ ರಾಷ್ಟ್ರವನ್ನಾಗಿ ಮಾಡಲು ಹೊರಟಿದ್ದಾರೆ. ಇವರು ಈಗ ಮಾಡುತ್ತಿರುವುದನ್ನು ನಾಟಕ ಎಂದು ಯಾಕೆ ಹೇಳಬೇಕಾಯಿತೆಂದರೆ ಇವರ ಕಾರ್ಯಕರ್ತರು ಹಾಗೂ ಭಕ್ತರು ದೇಶಾದ್ಯಂತ ಕ್ರಿಸ್ಮಸ್ ಆಚರಿಸುತ್ತಿದ್ದ ಕ್ರೈಸ್ತ ಬಾಂಧವರ ಮೇಲೆ 60 ಕಡೆ ದಾಳಿ ಮಾಡಿದರು. ಕೆಲವು ಕಡೆ ಚರ್ಚುಗಳ ಮುಂದೆ ಕುಳಿತು ಹನುಮಾನ್ ಚಾಲಿಸಾ ಪಠಿಸಿದರು. ಏಸು ,
ಮೇರಿಯವರ ಪ್ರತಿಮೆಗಳನ್ನು ಭಗ್ನಗೊಳಿಸಿದವರಿಗೆ, ಬೈಬಲ್ ಸುಟ್ಟವರಿಗೆ ಇದೇನು ಹೊಸದಲ್ಲ. ಆದರೆ ಒಂದೆಡೆ ಭಕ್ತರು ಇದನ್ನೆಲ್ಲ ಮಾಡುತ್ತಿದ್ದರೆ,
ಇನ್ನೊಂದೆಡೆ ಇವರ ವಿಶ್ವಗುರು ದಿಲ್ಲಿಯಲ್ಲಿ ಚರ್ಚ್‌ಗೆ ಹೋಗಿ ಕ್ರೈಸ್ತರ ಜೊತೆ ನಿಂತು ಪ್ರಾರ್ಥನೆ ಮಾಡಿದರು. ಕೆಲವೆಡೆ ದಾಳಿ, ದಿಲ್ಲಿಯಲ್ಲಿ ಪ್ರಾರ್ಥನೆ ಇದನ್ನೇ ನಾಟಕ ಎಂದು ಕರೆಯುವುದು.
ಸಂಘದ ಎರಡನೇ ಸರ ಸಂಘಚಾಲಕ ಮಾಧವ ಸದಾಶಿವ ಗೊಳ್ವಾಲ್ಕರ್ ಅವರು ಮುಸಲ್ಮಾನರು , ಕ್ರೈಸ್ತರು ಮತ್ತು ಕಮ್ಯುನಿಸ್ಟರು ತಮ್ಮ ಪ್ರಧಾನ ಶತ್ರುಗಳು ಎಂದು ಏಳು ದಶಕಗಳ ಹಿಂದೆಯೇ ಘೋಷಿಸಿರುವುದರಿಂದ ಸಹಜವಾಗಿ ಭಕ್ತರು ಚರ್ಚ್ ಮುಂದೆ ಹನುಮಾನ್ ಚಾಲಿಸಾ ಪಠಿಸಿ ಕಂಡ ಕಂಡಲ್ಲಿ ಹಲ್ಲೆಗಳನ್ನು ಮಾಡಿದರು. ಆದರೆ ‘ವಿಶ್ವಗುರು’ ಗಳೇಕೆ ದಿಢೀರನೇ ಚರ್ಚ್‌ಗೆ ಹೋದರು? ಎಂಬ ಪ್ರಶ್ನೆಗೆ ಉತ್ತರ ಹುಡುಕಲು ಹೊರಟರೆ ಕೇರಳ ರಾಜ್ಯ ಕಣ್ಣ ಮುಂದೆ ಬಂದು ನಿಲ್ಲುತ್ತದೆ. ಭಾರತದ ಕೆಲವು ರಾಜ್ಯಗಳ ಚುನಾವಣೆಗಳಲ್ಲಿ ನಾನಾ ಕಸರತ್ತುಗಳನ್ನು ಮಾಡಿ ಗೆಲುವು ಸಾಧಿಸಿದ ಇವರಿಗೆ ಕೇರಳ ಮಾತ್ರ ಈ ವರೆಗೆ ಕೈಗೆ ಸಿಗುತ್ತಿಲ್ಲ.ಅಲ್ಲಿ ಹಲವಾರು ವರ್ಷಗಳಿಂದ ಕಮ್ಯುನಿಸ್ಟರು ಬೇರು ಬಿಟ್ಟಿದ್ದಾರೆ. ಈ ಕೆಂಪು ಕೋಟೆಯನ್ನು ಭೇದಿಸಲು ಸಂಘ ಮಾಡದ ಕಸರತ್ತು ಗಳು ಇಲ್ಲ. ಈ ಸೇರಿದಂತೆ ಹಿಂದುಳಿದ ಸಮುದಾಯಗಳ ಅಚಲ ಬೆಂಬಲದಿಂದ ಬೆಳೆದು ನಿಂತ ಕಮ್ಯುನಿಸ್ಟರಿಗೆ ಚುನಾವಣಾ ರಾಜಕೀಯದಲ್ಲಿ ನೇರ ಎದುರಾಳಿ ಎಂದರೆ ಕಾಂಗ್ರೆಸ್ ಮತ್ತು ಅದು ಕಟ್ಟಿಕೊಂಡ ಸಂಯುಕ್ತ ರಂಗ (ಯುಡಿಎಫ್). ಹೀಗಾಗಿ ಸಂಘದ ರಾಜಕೀಯ ಅಂಗವಾದ ಬಿಜೆಪಿ ಅಲ್ಲಿ ಒಂದೇ ಒಂದು ಸ್ಥಾನವನ್ನು ಗೆಲ್ಲಲು ಈ ವರೆಗೆ ಸಾಧ್ಯವಾಗಿಲ್ಲ. ಕೇರಳದ ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ 60 ರಷ್ಟು ಹಿಂದೂಗಳು ಹಾಗೂ ಶೇಕಡಾ 40 ರಷ್ಟು ಅಲ್ಪಸಂಖ್ಯಾತರು (ಮುಸಲ್ಮಾನರು ಮತ್ತು ಕ್ರೈಸ್ತರು ಹಾಗೂ ಜೈನರು ಇದ್ದಾರೆ. ಹಿಂದೂಗಳ ಅಂದರೆ ಆಳವರ (ಬಿಲ್ಲವರು) ನಡುವೆ ನಾರಾಯಣ ಗುರುಗಳ ಸೈದ್ಧಾಂತಿಕ ವಾರಸುದಾರರಾದ ಕಮ್ಯುನಿಸ್ಟರ ಪ್ರಭಾವವಿದೆ. ಜೊತೆಗೆ ಮುಸಲ್ಮಾನರು ಹಾಗೂ ಕ್ರೈಸ್ತರ ಬೆಂಬಲವೂ ಇದೆ. ಕಮ್ಯುನಿಸ್ಟರನ್ನು ಬಿಟ್ಟರೆ ಕಾಂಗ್ರೆಸ್ ಜೊತೆಗೆ ಅಲ್ಪಸಂಖ್ಯಾತ ಸಮುದಾಯಗಳಿವೆ. ಹೀಗಾಗಿ ಕೇರಳದ ರಾಜಕೀಯದಲ್ಲಿ ಪ್ರವೇಶ ಪಡೆಯಲು ಅಲ್ಪಸಂಖ್ಯಾತ ಸಮುದಾಯಗಳ ಬೆಂಬಲವೂ ಬೇಕು.ಅದಕ್ಕಾಗಿಯೇ ವಿಶ್ವಗುರುಗಳ ದಿಢೀರ್ ಚರ್ಚ್ ಭೇಟಿ.ಇದನ್ನೇ ನಾಟಕ ಎಂದು ಕರೆಯುವುದು.ಇದು ಓಲೈಕೆಯ ನಾಟಕವಲ್ಲದೇ ಬೇರೇನೂ ಅಲ್ಲ.
ನಾಗಪುರದ ಗುರುಗಳು ಈ ನಾಟಕದ ನಿರ್ದೇಶಕರು. ಉಳಿದವರು ಪಾತ್ರಧಾರಿಗಳು. ಚರ್ಚುಗಳ ಮುಂದೆ ಹನುಮಾನ್ ಚಾಲಿಸಾ ಪಠಿಸುವುದು, ಹಬ್ಬದ ಸಂಭ್ರಮದಲ್ಲಿರುವ ಕ್ರೈಸ್ತರ ಮೇಲೆ ದಾಳಿ ಮಾಡುವುದು ಭಕ್ತರಿಗೆ ವಹಿಸಿದ ಪಾತ್ರವಾದರೆ , ಕ್ರಿಸ್ಮಸ್ ಸಂದರ್ಭದಲ್ಲಿ ಚರ್ಚ್‌ಗೆ ಹೋಗಿ ಪ್ರಾರ್ಥನೆ ಮಾಡುವುದು ‘ವಿಶ್ವಗುರು’ವಿಗೆ ವಹಿಸಿದ ಪಾತ್ರ. ಅವರವರ ಪಾತ್ರವನ್ನು ಸರಿಯಾಗಿ ನಿರ್ವಹಿಸಿದರು.
ಒಂದಲ್ಲ, ಎರಡಲ್ಲ ಇಂಥ ಹಲವಾರು ನಾಟಕಗಳಿವೆ. ಭಾರತದ ಉಳಿದೆಡೆ ಗೊಮಾಂಸ ಭಕ್ಷಣೆ ಬಗ್ಗೆ ಬಹುದೊಡ್ಡ ರಂಪಾಟವನ್ನೇ ಮಾಡುವ ಹಾಗೂ ಹಲ್ಲೆ, ದಾಳಿಗಳನ್ನು ಮಾಡಲು ಹಿಂಜರಿಯದ ಇವರು ಕೇರಳ ಮತ್ತು ಗೋವಾ ರಾಜ್ಯಗಳಲ್ಲಿ ಅದನ್ನು ವಿರೋಧಿಸುವುದಿಲ್ಲ. ಅಲ್ಲಿ ಸಂಖ್ಯಾಬಲದಲ್ಲಿ ದೊಡ್ಡ ಪ್ರಮಾಣದಲ್ಲಿ ಇರುವ ಕ್ರೈಸ್ತರು ಹಾಗೂ ಮುಸಲ್ಮಾನರ ಒಂದಿಷ್ಟಾದರೂ ಮತಗಳನ್ನುಗಳಿಸಲು ಅಲ್ಲಿ ಮತದಾರರಿಗೆ ಉತ್ತಮ ದನದ ಮಾಂಸ ಒದಗಿಸುವುದಾಗಿ ಚುನಾವಣೆಯ ಸಂದರ್ಭದಲ್ಲಿ ಭರವಸೆಯನ್ನು ನೀಡುತ್ತ ಬಂದಿದ್ದಾರೆ.
ರಾಷ್ಟ್ರ ಮಟ್ಟದಲ್ಲಿ ಹಲವೆಡೆ ಗೋಹತ್ಯೆಯನ್ನು ವಿರೋಧಿಸಿದರೂ ಸಾವಿರಾರು ಟನ್ ಗೊಮಾಂಸವನ್ನು ವಿದೇಶಕ್ಕೆ ರಫ್ತು ಮಾಡಲು ಇವರ ವಿರೋಧವಿಲ್ಲ. ಇವರ ವಿಶ್ವಗುರುವಿನ ಸರಕಾರವೇ ಗೋ ಮಾಂಸ ರಫ್ತಿಗೆ ಮುಕ್ತ ಅವಕಾಶ ನೀಡಿದೆ. ಒಮ್ಮೆ ಉಡುಪಿಯಲ್ಲಿ ಹಾಜಬ್ಬ, ಹಸನಬ್ಬ ಅವರು ಆಕಳುಗಳನ್ನು ಸಾಗಿಸುತ್ತಿದ್ದಾರೆ ಎಂದು ಅವರನ್ನು ಬೆತ್ತಲೆ ಮಾಡಿ ಚಿತ್ರ ಹಿಂಸೆ ನೀಡಿದ ಘಟನೆ ದೊಡ್ಡ ಸುದ್ದಿಯಾಯಿತು. ಇದನ್ನು ಪ್ರತಿಭಟಿಸಿ ಆಗ ಉಡುಪಿಯಲ್ಲಿ ಭಾರೀ ಬಹಿರಂಗ ಸಭೆಯನ್ನು ಏರ್ಪಡಿಸಲಾಗಿತ್ತು. ಅಂದಿನ ಸಭೆಯಲ್ಲಿ ನಾನು ಮಾತನಾಡಿದ್ದೆ. ಬಹುತ್ವ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಹೊರಟವರು ತಮ್ಮ ಸಂಘಟನೆಯನ್ನು ಜೀವಂತವಾಗಿಡಲು ಇಂಥ ಹಲವಾರು ಕಸರತ್ತು ಗಳನ್ನು ಮಾಡುತ್ತ ಬಂದಿದ್ದಾರೆ.
ಇವರದು ರಾಷ್ಟ್ರೀಯವಾದಿ ಸಂಘಟನೆ ಎಂದು ಮಾಧ್ಯಮಗಳು ಕರೆಯುತ್ತ ಬಂದಿವೆ. ಇವರೂ ತಾವು ಮಹಾನ್ ರಾಷ್ಟ್ರೀಯವಾದಿಗಳೆಂದು ಹೇಳಿಕೊಳ್ಳುತ್ತ ಬಂದಿದ್ದಾರೆ.ಆದರೆ ಇವರನ್ನು ಹಾಗೆ ಕರೆಯುವುದು ಕೂಡ ಸರಿಯಲ್ಲ.ಒಂದು ರಾಷ್ಟ್ರ ಅಂದರೆ ಅದರಲ್ಲಿ ಒಂದೇ ಸಮುದಾಯದವರು ಇರುವುದಿಲ್ಲ. ಅದರಲ್ಲೂ ಭಾರತದಂಥ ರಾಷ್ಟ್ರದಲ್ಲಿ ನೂರಾರು ಸಮುದಾಯಗಳು,ಭಾಷೆಗಳನ್ನು ಆಡುವ ಜನರು, ಬುಡಕಟ್ಟುಗಳು ಸೇರಿವೆ.ಇದು ಆರೆಸ್ಸೆಸ್ ಪರಿಕಲ್ಪನೆಯ ರಾಷ್ಟ್ರವಲ್ಲ. ರಾಷ್ಟ್ರಕ್ಕಾಗಿ ಮಾತಾಡುವುದನ್ನು ಬಿಟ್ಟರೆ ಇವರು ಏನನ್ನೂ ಮಾಡಿಲ್ಲ. 1925ರಲ್ಲಿ ಅಸ್ತಿತ್ವಕ್ಕೆ ಬಂದರೂ ರಾಷ್ಟ್ರದ ಸ್ವಾತಂತ್ರ್ಯ ಹೋರಾಟದಲ್ಲಿ ಇವರು ಭಾಗವಹಿಸಲಿಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದವರನ್ನು ಬ್ರಿಟಿಷ್ ಪೊಲೀಸರಿಗೆ ಹಿಡಿದು ಕೊಟ್ಟ ಆರೋಪಗಳೂ ಇವರ ಮೇಲಿವೆ. ಸ್ವಾತಂತ್ರ್ಯಾ ನಂತರವೂ ರಾಷ್ಟ್ರಕ್ಕೆ ಇವರ ಕೊಡುಗೆ ಏನು? ಅಧಿಕಾರ ಕೈಗೆ ಸಿಕ್ಕರೆ ರಾಷ್ಟ್ರದ ಸಂಪತ್ತನ್ನು ಲೂಟಿ ಮಾಡಲು ಕಾರ್ಪೊರೇಟ್ ಖದಿಮರಿಗೆ ಅವಕಾಶ ಮಾಡಿಕೊಡುತ್ತಿದ್ದಾರೆ.ಸ್ವಾತಂತ್ರ್ಯಾ ನಂತರ ಜವಾಹರಲಾಲ್ ನೇಹರೂ ನೇತೃತ್ವದ ಸರಕಾರ ನಿರ್ಮಿಸಿದ ಸಾರ್ವಜನಿಕ ರಂಗದ ಉದ್ಯಮಗಳನ್ನು ಒಂದೊಂದಾಗಿ ಮಾರಾಟ ಮಾಡುತ್ತಿದ್ದಾರೆ. ಮುಂಬೈ, ಮಂಗಳೂರು ಸೇರಿದಂತೆ ಅನೇಕ ವಿಮಾನ ನಿಲ್ದಾಣಗಳನ್ನು ಅಂಬಾನಿ ಮತ್ತು ಅದಾನಿಗಳ ಮಡಿಲಿಗೆ ಹಾಕಿದ್ದಾರೆ. ಅಮೂಲ್ಯ ಖನಿಜ ಸಂಪತ್ತನ್ನು ಹೊಂದಿರುವ ಛತ್ತೀಸ್‌ಗಡ, ಮಧ್ಯಪ್ರದೇಶ, ಬಸ್ತಾರ ಮೊದಲಾದ ಕಡೆಯ ಅರಣ್ಯವನ್ನು ನಾಶ ಮಾಡಲು ಅವುಗಳನ್ನು ಅಗ್ಗದ ಬೆಲೆಗೆ ಅದಾನಿ, ಅಂಬಾನಿಗಳಿಗೆ ಬಿಟ್ಟು ಕೊಟ್ಟಿದ್ದಾರೆ. ಭಾರತ ಮಾತೆಯನ್ನು ಹೀಗೆ ತುಂಡು, ತುಂಡಾಗಿ ಮಾರಾಟ ಮಾಡುವವರು ರಾಷ್ಟ್ರೀಯವಾದಿಗಳು ಹೇಗಾಗುತ್ತಾರೆ?
ಇವರು ಬಹಿರಂಗವಾಗಿ ಹೇಳುವುದು ಒಂದಾದರೆ ಅಂತರಂಗದಲ್ಲಿ ಮಾತಡುವುದು ಇನ್ನೊಂದು ರೀತಿ. ಗಾಂಧಿಯವರನ್ನು ಹತ್ಯೆ ಮಾಡಿದ ನಾಥೂರಾಮ ಗೊಡ್ಸೆಗೂ ತಮಗೂ ಸಂಬಂಧವಿಲ್ಲ ಎನ್ನುತ್ತಾರೆ. ಇನ್ನೊಂದು ಕಡೆ ‘ಗಾಂಧಿಯನ್ನು ನಾನೇಕೆ ಕೊಂದೆ ’ ಎಂಬ ಗೊಡ್ಸೆಯ ಪುಸ್ತಕವನ್ನು ಗುಟ್ಟಾಗಿ ಮಾರಾಟ ಮಾಡುತ್ತಾರೆ.ಮತ್ತೊಂದೆಡೆ ಗಾಂಧೀಜಿ ಸಂಘದ ಶಾಖೆಗೆ ಭೇಟಿ ನೀಡಿದ್ದರು ಎಂದು ರೈಲು ಬಿಡುತ್ತಾರೆ,ಮಗದೊಂದು ಕಡೆ ಸಾಮಾಜಿಕ ಜಾಲತಾಣದಲ್ಲಿ ವಾಟ್ಸ್‌ಆ್ಯಪ್ ಯುನಿವರ್ಸಿಟಿಯ ಭಕ್ತ ಪಡೆಯ ಮೂಲಕ ಗಾಂಧಿಯವರ ವೈಯಕ್ತಿಕ ಜೀವನದ ಬಗ್ಗೆ ಕಟ್ಟುಕತೆಗಳನ್ನು ಹರಿಬಿಡುತ್ತಾರೆ. ದೇಶದ ಮೊದಲ ಪ್ರಧಾನಿ ನೆಹರೂ ಅವರ ಬಗ್ಗೆ ಅತ್ಯಂತ ಕೆಟ್ಟ ಅಪಪ್ರಚಾರ ಮಾಡುತ್ತಾರೆ, ಇದನ್ನು ಮಾಡುವುದು ಬರೀ ಭಕ್ತರಲ್ಲ, ಇವರ ‘ವಿಶ್ವಗುರು’ ಸ್ವತಃ ತನ್ನ ಸ್ಥಾನದ ಘನತೆ, ಗೌರವಗಳನ್ನು ಮರೆತು ನೆಹರೂ ಅವರ ಮಗಳು , ಮೊಮ್ಮಕ್ಕಳ ಬಗ್ಗೆ ಆಡಬಾರದ ಮಾತನ್ನು ಆಡುತ್ತಾರೆ, ಇನ್ನೊಂದೆಡೆ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸಲು ನೆಹರೂ ಆಮಂತ್ರಿಸಿದ್ದರು ಎನ್ನುತ್ತಾರೆ. ಇದರಲ್ಲಿ ಯಾವುದು ಸತ್ಯ?
ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನಾದರೂ ಇವರು ಬಿಟ್ಟಿದ್ದಾರಾ? ಇಲ್ಲ ಅವರ ಬಗ್ಗೆ ಒಳಗೊಳಗೆ ನಿಂದಾ ಸ್ತುತಿ ಮಾಡುತ್ತಾರೆ. ಬಹಿರಂಗವಾಗಿ ಹೊಗಳಿ ಅವರನ್ನು ಗಾಂಧಿ, ನೆಹರೂ ವಿರುದ್ಧ ಎತ್ತಿ ಕಟ್ಟುವ ಮಸಲತ್ತು ಮಾಡುತ್ತಾರೆ ಅಂಬೇಡ್ಕರ್ ಬಗ್ಗೆ ತೇಜೋವಧೆ ಮಾಡುವ ಅರುಣ್ ಶೌರಿ ಅವರ ಪುಸ್ತಕವನ್ನು ಇವರೇ ಪ್ರಚಾರ ಮಾಡಿ ಎಲ್ಲೆಡೆ ಮಾರಾಟವಾಗುವಂತೆ ಮಾಡಿದರು. ಅದಕ್ಕೆ ದಲಿತ ಮತ್ತು ಹಿಂದುಳಿದ ಸಮುದಾಯಗಳಿಂದ ತೀವ್ರ ವಿರೋಧ ಬಂದ ನಂತರ ಹಿಂದೆ ಸರಿದು ಪ್ಲೇಟ್ ಬದಲಿಸಿದರು.
ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದ ಇವರು, ಗಾಂಧಿ,ನೆಹರೂ , ಪಟೇಲ್, ಸುಭಾಷ್ ನಡುವೆ ಭಿನ್ನಾಭಿಪ್ರಾಯ ಇತ್ತು, ಪಟೇಲ್ ಪ್ರಧಾನಿಯಾಗುವುದನ್ನು ನೆಹರೂ ತಪ್ಪಿಸಿದರು ಎಂದು ಸುಳ್ಳು ಕತೆಗಳನ್ನು ಸೃಷ್ಟಿಸುತ್ತಿದ್ದಾರೆ. ಒಂದಂತೂ ನಿಜ ಗಾಂಧಿ, ನೆಹರೂ, ಸುಭಾಷ್, ಭಗತ್ ಸಿಂಗ್ ವಲ್ಲಭಭಾಯಿ ಪಟೇಲ್ ಒಂದು ವಿಷಯದಲ್ಲಿ ಮಾತ್ರ ಒಮ್ಮತಾಭಿಪ್ರಾಯ ಹೊಂದಿದ್ದರು. ಕೋಮುವಾದ ಮತ್ತು ಜಾತಿವಾದಗಳನ್ನು ಅವರು ಕಟುವಾಗಿ ವಿರೋಧಿಸಿದ್ದರು. ಇದಕ್ಕೆ ಅಂದಿನ ಅಮೂಲ್ಯ ದಾಖಲೆಗಳೇ ಸಾಕ್ಷಿಯಾಗಿವೆ.
ಮತ್ತೆ ಭಾಗವತರ ಪುರಾಣಕ್ಕೆ ಬರೋಣ. ಹಿಂದೂ ರಾಷ್ಟ್ರ ಎಂದು ಘೋಷಿಸಲು ಸಂವಿಧಾನದ ಅನುಮೋದನೆ ಅಗತ್ಯವಿಲ್ಲವಂತೆ ದೇಶದ ಸಂವಿಧಾನಕ್ಕಿಂತ ಅವರ ಸಂಘಟನೆಯೂ ದೊಡ್ಡದಲ್ಲ ಎಂಬುದನ್ನು ಅವರು ಅರ್ಥ ಮಾಡಿಕೊಳ್ಳಬೇಕಾಗಿದೆ.
ತಮಗೂ ರಾಜಕೀಯಕ್ಕೂ ಸಂಬಂಧವಿಲ್ಲ, ಸಂಘ ಪಕ್ಷಾತೀತ ಸಂಘಟನೆ ಎಂದು ಹೇಳುತ್ತಲೇ ಭಾಗವತರು ಸುತ್ತಿ ಬಳಸಿ ರಾಜಕಾರಣದ ಕುರಿತೇ ಮಾತನಾಡುತ್ತಾರೆ. ಕೇಂದ್ರ ದ ಚುಕ್ಕಾಣಿ ಹಿಡಿದಿರುವ ಪಕ್ಷದಲ್ಲಿ ಬಿಕ್ಕಟ್ಟು ಉಂಟಾದಾಗ ಸಂಘ ಮಧ್ಯ ಪ್ರವೇಶ ಮಾಡಿ ಜಗಳಗಳನ್ನು ಬಗೆಹರಿಸುತ್ತದೆ. ಇನ್ನೊಂದೆಡೆ ಮಹಿಳೆಯರನ್ನು ಮಾತೆಯರೆಂದು ಕರೆಯುವ ಸಂಘದ ಮುಖ್ಯಸ್ಥರಾದ ಭಾಗವತರು ಉತ್ತರ ಪ್ರದೇಶದ ಉನ್ನಾವೊದಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗರ್‌ನ ಜೀವಾವಧಿ ಶಿಕ್ಷೆಯನ್ನು ದಿಲ್ಲಿಯ ಹೈಕೋರ್ಟ್ ಅಮಾನತುಗೊಳಿಸಿ ಜಾಮೀನು ನೀಡಿದ ಬಗ್ಗೆ ಎಂದೂ ಪ್ರತಿಕ್ರಿಯೆ ನೀಡುವುದಿಲ್ಲ. ಇಂಥ ಸಂದರ್ಭಗಳಲ್ಲೆಲ್ಲ ಇವರದು ದಿವ್ಯ ಮೌನ.ಬಹುಶಃ ಇದು ಅವರಿಗೆ ಮಹತ್ವದ ವಿಷಯವಾಗಿರಲಿಕ್ಕಿಲ್ಲ. ಭಾಗವತರ ಪರಿಕಲ್ಪನೆಯ ಹಿಂದೂ ರಾಷ್ಟ್ರದಲ್ಲಿ ಇವೆಲ್ಲ ಸಹಜ ಎಂದು ಅವರು ಭಾವಿಸುವ ಸ್ವಾತಂತ್ರ್ಯವನ್ನು ಸಂವಿಧಾನ ಅವರಿಗೆ ನೀಡಿದೆ. ಅದಕ್ಕಾದರೂ ಕೃತಜ್ಞರಾಗಿರಲಿ.