×
Ad

ದೇವರಾಜ ಅರಸು ಮತ್ತು ಸಿದ್ದರಾಮಯ್ಯ

Update: 2026-01-12 09:30 IST

ದೇವರಾಜ ಅರಸು ಮತ್ತು ಸಿದ್ದರಾಮಯ್ಯ ಇವರಿಬ್ಬರ ಅಧಿಕಾರ, ಆಡಳಿತ ವೈಖರಿಗಳನ್ನು ಆಗ ಮತ್ತು ಈಗ ಒಟ್ಟಿಗೆ ನೋಡಿದವರು ತುಂಬಾ ಕಡಿಮೆ. ಈ ಐವತ್ತು ವರ್ಷಗಳ ಕಾಲಾವಧಿಯಲ್ಲಿ ಆರ್ಥಿಕ, ರಾಜಕೀಯ, ಸಾಮಾಜಿಕ ರಂಗಗಳಲ್ಲಿ ಹಲವಾರು ಬದಲಾವಣೆಗಳಾಗಿವೆ. ಇವೆರಡನ್ನೂ ನೋಡುತ್ತ ಬಂದವರು ಮಾತ್ರ ಒಂದಿಷ್ಟು ವಸ್ತುನಿಷ್ಠವಾದ ಪರಾಮರ್ಶೆ ಮಾಡಲು ಸಾಧ್ಯ ಎಂಬುದು ನನ್ನ ಅನಿಸಿಕೆ. ಅರಸು ಇದ್ದಾಗ ಜಾಗತೀಕರಣದ,

ನವ ಉದಾರೀಕರಣದ ಹೆಸರೇ ಕೇಳಿರಲಿಲ್ಲ. ಈಗಿನಂತಹ ಭಯಾನಕ ಕೋಮುವಾದದ ಅಪಾಯವೂ ಇರಲಿಲ್ಲ.

ಮುಖ್ಯಮಂತ್ರಿಯಾಗಿ ದೀರ್ಘಾವಧಿ ಅಧಿಕಾರದಲ್ಲಿರುವ ಸಿದ್ದರಾಮಯ್ಯನವರು ದೇವರಾಜ ಅರಸು ಅವರ ದಾಖಲೆಯನ್ನು ಸರಿಗಟ್ಟಿ ಮುಂದೆ ಸಾಗಿದ ಹಿನ್ನೆಲೆಯಲ್ಲಿ ಇಬ್ಬರ ನಡುವೆ ಹೋಲಿಕೆ ಮಾಡುವ ಹಲವಾರು ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಅವರಂತೆ ಇವರಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಇವರಿಬ್ಬರ ಕಾಲಘಟ್ಟವೇ ವಿಭಿನ್ನವಾದುದು. ಇಂಥ ಹೋಲಿಕೆ ಇಲ್ಲವೇ ಪರಾಮರ್ಶೆ ಮಾಡುವಾಗ ಆಯಾ ಕಾಲಘಟ್ಟದಲ್ಲಿಟ್ಟು ವಿಮರ್ಶೆ ಮಾಡಬೇಕಾಗುತ್ತದೆ. ಇಬ್ಬರ ಸಾಮಾಜಿಕ ಕಾಳಜಿಯ ಕಣ್ಣೋಟ ಒಂದೇ ಆದರೂ ಎದುರಿಸಿದ ಸವಾಲುಗಳು ಬೇರೆ ಬೇರೆಯಾಗಿವೆ.

ಅರಸು ಮತ್ತು ಸಿದ್ದರಾಮಯ್ಯನವರ ನಡುವೆ ಹೋಲಿಕೆ ಮಾಡುವಾಗ ಅನುಸರಿಸುವ ಮಾನದಂಡಗಳು ಯಾವುವು? ಅವರವರ ಆಡಳಿತ, ಕಾರ್ಯಕ್ರಮ, ಜನಪ್ರಿಯತೆಗಳ ಜೊತೆ ಜೊತೆಗೆ ಇವೆಲ್ಲಕ್ಕಿಂತ ಮುಖ್ಯವಾಗಿ ಇಬ್ಬರೂ ಅಧಿಕಾರದಲ್ಲಿ ಇದ್ದ ಮತ್ತು ಇರುವ ಕಾಲಘಟ್ಟ, ಸನ್ನಿವೇಶ ಮತ್ತು ರಾಷ್ಟ್ರೀಯ ಹಾಗೂ ಅಂತರ್‌ರಾಷ್ಟ್ರೀಯ ಪರಿಸ್ಥಿತಿ ಅವರಿಬ್ಬರನ್ನು ಇಟ್ಟು ವಿಮರ್ಶೆ ಮಾಡುವುದು ವೈಜ್ಞಾನಿಕ ಪರಾಮರ್ಶೆ ಎನಿಸುತ್ತದೆ. ಇಂಥ ಪರಾಮರ್ಶೆಯಲ್ಲಿ ಪೂರ್ವಾಗ್ರಹದೋಷ ಇರುವುದಿಲ್ಲ. ಇಬ್ಬರಿಗೂ ಸಹಜ ನ್ಯಾಯವನ್ನು ಒದಗಿಸಿದಂತಾಗುತ್ತದೆ.

ದೇವರಾಜ ಅರಸು ಎಪ್ಪತ್ತನೇ ದಶಕದ ಆರಂಭದಲ್ಲಿ ಒಂದು ಮಹತ್ವದ ಹಾಗೂ ನಿರ್ಣಾಯಕ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರವನ್ನು ವಹಿಸಿಕೊಂಡವರು. ನಾನು ಆವಾಗ ಅವರನ್ನ್ನೂ ಅವರ ಆಡಳಿತವನ್ನು ಕಣ್ಣಾರೆ ಕಂಡವನು.ಆಗ ನನಗೆ ಇಪ್ಪತ್ತೆರಡರ ಪ್ರಾಯ.ಸ್ವಾತಂತ್ರ್ಯ ಹೋರಾಟಗಾರ ಮನೆತನದಿಂದ ಬಂದ ಕಾರಣದಿಂದ ಹಾಗೂ ಇಂಚಗೇರಿ ಮಠದ ಮಹಾದೇವರು ಮುರಗೋಡ ಅವರ ನಿಕಟ ಸಂಪರ್ಕದಿಂದ ಚಿಕ್ಕ ವಯಸ್ಸಿನಲ್ಲೇ ರಾಜಕಾರಣಿಗಳ ಚಟುವಟಿಕೆಗಳು ಹಾಗೂ ವಿದ್ಯಮಾನಗಳ ಒಡನಾಟ ಗಳಿದ್ದವು. ಜೊತೆಗೆ ಎಡಪಂಥೀಯ ಸೈದ್ಧಾಂತಿಕ ಸ್ಪರ್ಶ ನನ್ನ ಬೌದ್ಧಿಕತೆಯ ಗುಣಮಟ್ಟವನ್ನು ಹೆಚ್ಚಿಸಲು ಪೂರಕವಾಯಿತು. ಅದು ನನ್ನ ಯೌವನದ ಕಾಲ ಘಟ್ಟ. ಅಂದಿಗೂ ಇಂದಿಗೂ ಬರೋಬ್ಬರಿ ಐದು ದಶಕಗಳ ಅಂತರ.ಬದುಕಿನ ಇಳಿ ಸಂಜೆಯಲ್ಲಿ ಇರುವ ನಾನು ಅಂದಿನ ದೇವರಾಜ ಅರಸು ಹಾಗೂ ಇಂದಿನ ಸಿದ್ದರಾಮಯ್ಯನವರ ನಡೆ, ನುಡಿ, ಆಡಳಿತ, ಜನಪರ ಕಾರ್ಯಕ್ರಮಗಳನ್ನು ಅಂದಂದಿನ ಕಾಲ ಘಟ್ಟದಲ್ಲಿ ಇಟ್ಟು ಪರಾಮರ್ಶಿಸಲು ಪ್ರಯತ್ನಿಸುತ್ತೇನೆ.

ದೇವರಾಜ ಅರಸು ಮತ್ತು ಸಿದ್ದರಾಮಯ್ಯ ಇವರಿಬ್ಬರ ಅಧಿಕಾರ, ಆಡಳಿತ ವೈಖರಿಗಳನ್ನು ಆಗ ಮತ್ತು ಈಗ ಒಟ್ಟಿಗೆ ನೋಡಿದವರು ತುಂಬಾ ಕಡಿಮೆ. ಈ ಐವತ್ತು ವರ್ಷಗಳ ಕಾಲಾವಧಿಯಲ್ಲಿ ಆರ್ಥಿಕ, ರಾಜಕೀಯ, ಸಾಮಾಜಿಕ ರಂಗಗಳಲ್ಲಿ ಹಲವಾರು ಬದಲಾವಣೆಗಳಾಗಿವೆ. ಇವೆರಡನ್ನೂ ನೋಡುತ್ತ ಬಂದವರು ಮಾತ್ರ ಒಂದಿಷ್ಟು ವಸ್ತುನಿಷ್ಠವಾದ ಪರಾಮರ್ಶೆ ಮಾಡಲು ಸಾಧ್ಯ ಎಂಬುದು ನನ್ನ ಅನಿಸಿಕೆ. ಅರಸು ಇದ್ದಾಗ ಜಾಗತೀಕರಣದ , ನವ ಉದಾರೀಕರಣದ ಹೆಸರೇ ಕೇಳಿರಲಿಲ್ಲ. ಈಗಿನಂತಹ ಭಯಾನಕ ಕೋಮುವಾದದ ಅಪಾಯವೂ ಇರಲಿಲ್ಲ. ಆಗ ಭಾರತ ಮಾತ್ರವಲ್ಲ ಜಾಗತಿಕವಾಗಿ ಎಲ್ಲೆಡೆ ಸಮಾಜವಾದ, ಸಾಮಾಜಿಕ ನ್ಯಾಯದ ಗಾಳಿ ಬೀಸುತ್ತಿತ್ತು. ಅಂತಲೇ ಅವರು ಭೂ ಸುಧಾರಣೆ ಕಾಯ್ದೆಯನ್ನು ಜಾರಿ ಮಾಡಲು, ಜೀತ ಮುಕ್ತ, ಋಣ ಮುಕ್ತ ಕಾಯ್ದೆ ತರಲು ಹಾಗೂ ಮಲ ಹೊರುವ ಪದ್ಧತಿ ನಿಷೇಧ,ಹಿಂದುಳಿದ ಸಮುದಾಯಗಳಿಗೆ ಮೀಸಲು ವ್ಯವಸ್ಥೆ ತರಲು ಸಾಧ್ಯವಾಯಿತು.

ಆದರೆ ಸಿದ್ದರಾಮಯ್ಯನವರ ಕಾಲಘಟ್ಟವೇ ಬೇರೆ. ಜಾತಿಕವಾಗಿ ಸಮಾಜವಾದ ಅದೃಶ್ಯವಾಗಿದೆ. ನವ ಉದಾರೀಕರಣದ ,ಮಾರುಕಟ್ಟೆ ಆರ್ಥಿಕತೆಯ ಅಬ್ಬರ ಜನ ಕಲ್ಯಾಣ ಕಾರ್ಯಕ್ರಮಗಳು ಹಳ್ಳ ಹಿಡಿಯುತ್ತಿವೆ. ಈ ಜಾಗತೀಕರಣದ ಜೊತೆಗೆ ಭಾರತದಲ್ಲಿ ಫ್ಯಾಶಿಸ್ಟ್ ಕೋಮುವಾದದ ಆರ್ಭಟ ಅತ್ಯಂತ ಆಕ್ರಮಣಕಾರಿ ಆಗಿದೆ.ಇಂಥ ಪ್ರತಿಕೂಲ ಪರಿಸ್ಥಿತಿಯಲ್ಲಿ ಎಪ್ಪತ್ತರ ದಶಕದಲ್ಲಿ ಮೈಸೂರಿನ ಸಮಾಜವಾದಿ ಚಳವಳಿಯೊಂದಿಗೆ ಗುರುತಿಸಿಕೊಂಡ ಸಿದ್ದರಾಮಯ್ಯ ಅವರು ಸಮಾಜಿಕ ನ್ಯಾಯ, ಸೌಹಾರ್ದ, ಸಮಾನತೆಯ ಬಾವುಟ ಹಿಡಿದು ಹೊರಟಿದ್ದಾರೆ.

1969ನೇ ವರ್ಷದಲ್ಲಿ ಕಾಂಗ್ರೆಸ್ ರಾಷ್ಟ್ರ ಮಟ್ಟದಲ್ಲಿ ವಿಭಜನೆ ಆಯಿತು. ನಿಜಲಿಂಗಪ್ಪ, ಅತುಲ್ಯ ಘೋಷ್, ಸಂಜೀವ ರೆಡ್ಡಿ ಮೊದಲಾದ ಹಿರಿಯ ನಾಯಕರು ಒಂದೆಡೆಗೆ ಹಾಗೂ ಇಂದಿರಾ ಗಾಂಧಿ, ಯಂಗ್ ಟರ್ಕ್ ಚಂದ್ರಶೇಖರ್, ಮೋಹನ್ ಧಾರಿಯಾ , ಮೋಹನ ಕುಮಾರ್ ಮಂಗಳಂ , ಕೆ.ಆರ್ . ಗಣೇಶ್ ಇನ್ನೊಂದು ಕಡೆ. ನಿಜಲಿಂಗಪ್ಪನವರು ಅಧ್ಯಕ್ಷರಾಗಿರುವ ಕಾಂಗ್ರೆಸ್‌ಗೆ ಸಿಂಡಿಕೇಟ್,ಇಂದಿರಾ ಗಾಂಧಿಯವರ ನಾಯಕತ್ವದ ಕಾಂಗ್ರೆಸ್‌ಗೆ ಇಂಡಿಕೇಟ್ ಎಂದು ಪತ್ರಿಕೆಗಳು ಹೆಸರಿಟ್ಟು ಅದೇ ವ್ಯಾಪಕವಾಗಿ ಪ್ರಚಾರ ಪಡೆಯಿತು. ಹಿರಿಯರ ನಾಯಕತ್ವದ ವಿರುದ್ಧ ಬಂಡೆದ್ದ ಇಂದಿರಾ ಗಾಂಧಿಯವರು ಬ್ಯಾಂಕುಗಳ ರಾಷ್ಟ್ರೀಕರಣ, ರಾಜಧನ ರದ್ದತಿಯಂಥ ದಿಟ್ಟ , ಪ್ರಗತಿಪರ ಕ್ರಮಗಳನ್ನು ಕೈಗೊಂಡರು. ಕಮ್ಯುನಿಸ್ಟ್ ಪಕ್ಷಗಳು ಅವರ ಬೆಂಬಲಕ್ಕೆ ನಿಂತವು. ಕರ್ನಾಟಕದಲ್ಲಿ ನಿಜಲಿಂಗಪ್ಪನವರ ಪ್ರಾಬಲ್ಯ. ಅವರ ಶಿಷ್ಯ ವೀರೇಂದ್ರ ಪಾಟೀಲರು ಮುಖ್ಯಮಂತ್ರಿ. ಬಹುತೇಕ ಪ್ರಭಾವಿ ಹಳೆಯ ಕಾಂಗ್ರೆಸ್ ನಾಯಕರೆಲ್ಲ ನಿಜಲಿಂಗಪ್ಪನವರ ಕಡೆ. ಆಗ ಇಂದಿರಾ ಗಾಂಧಿ ಅವರ ಪರವಾಗಿ ನಿಂತ ಏಕೈಕ ಕಾಂಗ್ರೆಸ್ ನಾಯಕರೆಂದರೆ ದೇವರಾಜ ಅರಸು.ಮುಂದೆ ಬಸವಲಿಂಗಪ್ಪನವರು, ಕೆ.ಎಚ್.ರಂಗನಾಥರು,ಕೆ.ಎಚ್.ಪಾಟೀಲರು, ಕರ್ನಾಟಕದ ಬಹುತೇಕ ಲೋಕಸಭಾ ಸದಸ್ಯರು ಇಂದಿರಾ ಗಾಂಧಿಯವರ ಪರವಾಗಿ ನಿಂತರು.ಆಗ ನಾನು ಬಿಜಾಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ಇದ್ದೆ. ದೇವರಾಜ ಅರಸು ಬಾಗೇವಾಡಿಗೆ ಬಂದಾಗ ನಾವೇ ಕೆಲವು ಗೆಳೆಯರು ಸಭೆಯನ್ನು ಏರ್ಪಡಿಸಿದ್ದೆವು.ಆಗ ನನ್ನ ವಯಸ್ಸು 20. ಮುಂದೆ ಲೋಕಸಭಾ ಚುನಾವಣೆಯಲ್ಲಿ ಇಂದಿರಾ ಕಾಂಗ್ರೆಸ್ ಪಕ್ಷಕ್ಕೆ ಗೆಲುವು. ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲೂ ಇದರ ಪುನರಾವರ್ತನೆ. ಹಳೆಯದನ್ನೆಲ್ಲ ಏಕೆ ಹೇಳಬೇಕಾಯಿತೆಂದರೆ ಅರಸರು ಅಧಿಕಾರಕ್ಕೆ ಬಂದ ಕಾಲಘಟ್ಟವೇ ಬೇರೆ.ದೇವರಾಜ ಅರಸರು ರಾಜಕಾರಣಿ ಮಾತ್ರವಲ್ಲ, ಅವರು ಚಿಂತಕರು .ಸೈದ್ಧಾಂತಿಕವಾಗಿ ಮಾರ್ಕ್ಸ್ ವಾದದತ್ತ ಅವರ ಒಲವು. ಆಗ ಮೆಜೆಸ್ಟಿಕ್‌ನ ಸರ್ಪಭೂಷಣ ಮಠದ ಆವರಣದಲ್ಲಿ ಇದ್ದ, ಆಗಿನ್ನೂ ಪುಟ್ಟದಾಗಿದ್ದ ನವ ಕರ್ನಾಟಕ ಪ್ರಕಾಶನದ ಪುಸ್ತಕ ಮಳಿಗೆಯಿಂದ ಎಡಪಂಥೀಯ ಸಾಹಿತ್ಯ, ಪುಸ್ತಕಗಳನ್ನು ತರಿಸಿ ಓದುತ್ತಿದ್ದರು.ಈ ಮಳಿಗೆ ನಮ್ಮ ರಮೇಶ್ ಕುಮಾರ, ಸಿದ್ದಲಿಂಗಯ್ಯ ಮೊದಲಾದ ಸಮಾನ ಮನಸ್ಕರು ಸೇರುವ ತಾಣ ಕೂಡ ಆಗಿತ್ತು. ಇದು ಅರಸರ ಹಿನ್ನೆಲೆಯಾದರೆ ಸಿದ್ದರಾಮಯ್ಯನವರು ಎಪ್ಪತ್ತರ ದಶಕದ ಆರಂಭದಲ್ಲಿ ಬಂದವರು. ಲೋಹಿಯಾವಾದಿ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರು ಇವರ ಸೈದ್ಧಾಂತಿಕ ಗುರುಗಳು. ಮೈಸೂರಿನ ಕಾನೂನು ಕಾಲೇಜಿನಲ್ಲಿ ಸಿದ್ದರಾಮಯ್ಯನವರು ವ್ಯಾಸಂಗ ಮಾಡುವಾಗ ಪ್ರೊ. ನಂಜುಂಡಸ್ವಾಮಿ ಅವರು ಅಲ್ಲಿ ಪ್ರಾಧ್ಯಾಪಕ ರು.ಹೀಗಾಗಿ ಅರಸು ಮತ್ತು ಸಿದ್ದರಾಮಯ್ಯನವರದು ಪ್ರಗತಿಪರ ಎಡಪಂಥೀಯ ಹಿನ್ನೆಲೆಯಾದರೂ ರಾಜಕೀಯವಾಗಿ ಕಾಂಗ್ರೆಸ್ ಪಕ್ಷವನ್ನು ಸೇರಿದವರು.

ಈಗ ದೇವರಾಜ ಅರಸು ಅವರನ್ನು ಹೊಗಳುವ ಅನೇಕ ಮಿತ್ರರಿಗೆ ಗೊತ್ತಿಲ್ಲ. ಆಗ ಅರಸು ಅವರನ್ನು ಅವರ ಕಾರ್ಯಕ್ರಮಗಳನ್ನು ಹಾಗೂ ಹಿಂದುಳಿದ ಸಮುದಾಯಗಳಿಗೆ ಮೀಸಲು ವ್ಯವಸ್ಥೆ ಕಲ್ಪಿಸುವ ಹಾವನೂರ ವರದಿಯನ್ನು ಕಟುವಾಗಿ ಟೀಕಿಸಿದವರು.ಆಗ ಪ್ರತಿಪಕ್ಷ ನಾಯಕರಾಗಿದ್ದ ದೇವೇಗೌಡರು, ಎಸ್.ಆರ್.

ಬೊಮ್ಮಾಯಿ ಅವರು ಅರಸು ಮೇಲೆ ಭ್ರಷ್ಟಾಚಾರ ಆರೋಪ ಹೊರಿಸಿ ನಿರಂತರ ದಾಳಿ ನಡೆಸಿದರು.ಗ್ರೊವರ್ ಆಯೋಗ ರಚಿಸಲು ಕಾರಣರಾದರು.ಈಗ ಸಿದ್ದರಾಮಯ್ಯನವರದೂ ಅದೇ ಸ್ಥಿತಿಯಾಗಿದೆ. ಆಗ ಸಮಾಜವಾದಿ ಸೋವಿಯತ್ ರಶ್ಯ ಇತ್ತು.ಪೂರ್ವ ಯುರೋಪಿನ ಕಮ್ಯುನಿಸ್ಟ್ ದೇಶಗಳಿದ್ದವು.ಇಂದಿನ ಬಿಜೆಪಿ (ಅಂದಿನ ಜನಸಂಘ) ಆಗ ಪ್ರಬಲವಾಗಿರಲಿಲ್ಲ.ರಾಜ್ಯ ವಿಧಾನಸಭೆಯಲ್ಲಿ ಅದಕ್ಕೆ ಒಬ್ಬಿಬ್ಬರು ಶಾಸಕರಿದ್ದರು.ಹೀಗಾಗಿ ಅರಸು ರೂಪಿಸಿದ ಭೂ ಸುಧಾರಣೆಯಂಥ ಶಾಸನಗಳಿಗೆ ವಿರೋಧಿಗಳಿರಲಿಲ್ಲ.ಆದರೆ ಈಗ ಸಂಪೂರ್ಣ ಭಿನ್ನವಾದ ಚಿತ್ರ.ಎಲ್ಲೆಡೆ ಕೋಮು ಉನ್ಮಾದ ಕೆರಳಿ ನಿಂತಿದೆ. ಬಹುತೇಕ ಯುವಕರ ತಲೆಗೆ ಮುಸ್ಲಿಮ್ ದ್ವೇಷದ, ಕೋಮು ಹಿಂದುತ್ವದ ಮತ್ತೇರಿಸಲಾಗಿದೆ. ಇಂಥ ಸನ್ನಿವೇಶದಲ್ಲಿ ಸಿದ್ದರಾಮಯ್ಯನವರು ಸಮಾನತೆ, ಸೌಹಾರ್ದದ ಮಾತುಗಳನ್ನು ಆಡುತ್ತಿದ್ದಾರೆ. ಸಂಘ ಪರಿವಾರವನ್ನು ನೇರವಾಗಿ ಹೆಸರು ಹೇಳಿಯೇ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.ಸದನದಲ್ಲಿ ಕೋಮುವಾದದ ವಿರುದ್ಧ ಮಾತಾಡುವಾಗ ಅವರ ಪಕ್ಷದವರೇ ಅನೇಕ ಬಾರಿ ಅವರ ಬೆಂಬಲಕ್ಕೆ ನಿಲ್ಲುವುದಿಲ್ಲ. ಈ ಹಿಂದೆ ಮಾತ್ರವಲ್ಲ ಈಗಲೂ ಕಾಂಗ್ರೆಸ್ ನ ಬಹುತೇಕ ನಾಯಕರು ಆರೆಸ್ಸೆಸ್ ಬಗ್ಗೆ ಮೌನ ತಾಳುತ್ತಾರೆ. ಜಿಲ್ಲೆ,ತಾಲೂಕು ಮಟ್ಟದಲ್ಲಿ ಕಾಂಗ್ರೆಸ್ ನಾಯಕರೇ ವಿಶ್ವ ಹಿಂದೂ ಪರಿಷತ್ತಿನ ಪದಾಧಿಕಾರಿಗಳಾಗಿರುತ್ತಿದ್ದರು. ಅದನ್ನು ಸಮರ್ಥಿಸಿಕೊಳ್ಳುತ್ತಿದ್ದರು. ಎಲ್ಲಿ ಓಟು ಬೀಳುವುದಿಲ್ಲವೋ ಎಂದು ಹೆದರಿ ಮಾತಾಡಲು ಹೆದರುತ್ತಿದ್ದರು.ಆದರೆ ಸಿದ್ದರಾಮಯ್ಯನವರು ಮಾತಾಡಲು ಆರಂಭಿಸಿದ ನಂತರ ಈಗ ನಿಧಾನವಾಗಿ ಪ್ರಿಯಾಂಕ್ ಖರ್ಗೆ, ಸಂತೋಷ್ ಲಾಡ್, ಹರಿಪ್ರಸಾದ್ ಮೊದಲಾದವರು ಮಾತಾಡುತ್ತಿದ್ದಾರೆ. ಇದು ಸಿದ್ದರಾಮಯ್ಯನವರ ಬಗ್ಗೆ ನನ್ನ ಅಭಿಪ್ರಾಯ. ಇದಕ್ಕೆ ಭಿನ್ನವಾದ ಅಭಿಪ್ರಾಯಗಳೂ ಇರಬಹುದು. ಅಭ್ಯಂತರವಿಲ್ಲ. ಎಲ್ಲರ ನಿಲುವು ಒಂದೇ ಇರಬೇಕೆಂದಿಲ್ಲ. ತಾತ್ವಿಕವಾಗಿ ಸಮಾನ ಮನಸ್ಕರಾಗಿದ್ದರೂ ಕೆಲವು ವಿಷಯಗಳಲ್ಲಿ ಭಿನ್ನಾಭಿಪ್ರಾಯಗಳಿರುತ್ತವೆ.ಸಿದ್ದರಾಮಯ್ಯನವರು ಎಷ್ಟೇ ತತ್ವನಿಷ್ಠ ವ್ಯಕ್ತಿಯಾಗಿದ್ದರೂ ಈ ವ್ಯವಸ್ಥೆಯ ಇತಿಮಿತಿಯಲ್ಲಿ ಕೆಲಸ ಮಾಡುವ ಅನಿವಾರ್ಯತೆ ಇರುತ್ತದೆ. ಅದರಲ್ಲೂ ಕೋಮುವಾದಿ ಫ್ಯಾಶಿಸ್ಟ್ ಪಕ್ಷವೊಂದು ಕೇಂದ್ರದ ಅಧಿಕಾರ ಸೂತ್ರವನ್ನು ಕಳೆದ ಹನ್ನೊಂದು ವರ್ಷಗಳಿಂದ ಹಿಡಿದು ಕೂತಾಗ , ಪ್ರತಿನಿತ್ಯ ಕಿರುಕುಳ ಕೊಡುತ್ತಿರುವಾಗ ,ಕರ್ನಾಟಕದಿಂದ ವಸೂಲಿ ಮಾಡಿಕೊಂಡು ಹೋದ ಜಿಎಸ್‌ಟಿಯಲ್ಲಿ ರಾಜ್ಯದ ಪಾಲನ್ನು ಕೊಡದೇಸತಾಯಿಸುತ್ತಿರುವಾಗ ಅದಕ್ಕೆ ಮಣಿಯದೇ ಸವಾಲು ಹಾಕಿ ನಿಂತ ಸಿದ್ದರಾಮಯ್ಯನವರು ಸಹಜವಾಗಿ ಗೌರವಕ್ಕೆ ಪಾತ್ರರಾಗುತ್ತಾರೆ.ಹಿಂದುಳಿದ ಸಮುದಾಯಗಳ ಸಣ್ಣಪುಟ್ಟ ಜನ ವಿಭಾಗಗಳು ಹಾಗೂ ಅಲೆಮಾರಿ ಸಮುದಾಯಗಳ ಕುರಿತು ಸಾಕಷ್ಟು ಗಮನ ಹರಿಸಿಲ್ಲ ಎಂಬ ಅನೇಕ ಗೆಳೆಯರ ಅಭಿಪ್ರಾಯವನ್ನು ಗೌರವಿಸುತ್ತಲೇ ಈ ಎಲ್ಲ ಇತಿಮಿತಿಗಳ ನಡುವೆ ಸದ್ಯದ ಸನ್ನಿವೇಶದಲ್ಲಿ ಜನರನ್ನು ವಿಭಜಿಸುವ ಕೋಮುವಾದಿ ಶಕ್ತಿಗಳನ್ನು ಹಿಮ್ಮೆಟ್ಟಿಸಬೇಕು.ಇದನ್ನು ಗುರುತಿಸಿದ ಸಿದ್ದರಾಮಯ್ಯನವರು ಆ ಕರಾಳ ಶಕ್ತಿಗಳ ವಿರುದ್ಧ ಸಮರವನ್ನೇ ಸಾರಿದ್ದಾರೆ. ಜನರನ್ನು ಜಾತಿ, ಮತದ ಹೆಸರಿನಲ್ಲಿ ವಿಭಜಿಸಿ ಪರಸ್ಪರ ಹೊಡೆದಾಟಕ್ಕೆ ಹಚ್ಚುವ ಕರಾಳ ಶಕ್ತಿಗಳು ದರ್ಪದಿಂದ ಮೆರೆಯುತ್ತಿರುವಾಗ ದಮನಿತ ಜನರನ್ನು ಮಾತ್ರವಲ್ಲ ಎಲ್ಲ ಜನ ವಿಭಾಗಗಳನ್ನು ಒಂದುಗೂಡಿಸದೇ ಯಾವುದೇ ಹೋರಾಟವನ್ನು ರೂಪಿಸಲು, ಪರ್ಯಾಯವನ್ನು ಕಟ್ಟಲು ಸಾಧ್ಯವಾಗುವುದಿಲ್ಲ.ಅಂತಲೇ ಅಂಥ ವಿಭಜಕ ಶಕ್ತಿಗಳ ಸೋಲು ನನ್ನಂಥವರ ಮೊದಲ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ರಾಜಿ ರಹಿತ ನಿಲುವು ತಾಳಿದ ಸಿದ್ದರಾಮಯ್ಯನವರು ನನ್ನ ಸಹಜ ಆಯ್ಕೆಯಾಗಿದೆ.

ಇಂದು ಎಂಥ ಅಪಾಯಕಾರಿ ಕಾಲ ಘಟ್ಟದಲ್ಲಿ ಇದ್ದೇವೆಂದರೆ ಆರ್ಥಿಕ ಹಾಗೂ ಸಾಮಾಜಿಕ ನ್ಯಾಯದ , ಸಮಾನತೆಯ ಯಾವ ಪ್ರಶ್ನೆಗಳ ಬಗೆಗೂ ಚರ್ಚೆಯಾಗದಂಥ ಪರಿಸ್ಥಿತಿ ನಿರ್ಮಾಣಗೊಂಡಿದೆ.ಅರಸು ಮತ್ತು ಎಡಪಂಥೀಯ ಪಕ್ಷಗಳ ಪರಿಶ್ರಮದಿಂದ ಜಾರಿಗೆ ಬಂದ ಭೂ ಸುಧಾರಣೆ ಕಾಯ್ದೆಯ ಹೆಚ್ಚಿನ ಫಲಾನುಭವಿಗಳು ಇರುವ ಕರಾವಳಿಯ ಮಂಗಳೂರು, ಉಡುಪಿ, ಕಾರವಾರ ಜಿಲ್ಲೆಗಳಲ್ಲಿ ಭೂ ಸುಧಾರಣೆ ಕಾಯ್ದೆಯ ಫಲಾನುಭವಿಗಳ ಇಂದಿನ ತಲೆಮಾರಿನ ಮಕ್ಕಳೇ ಕೋಮು ದ್ವೇಷದ ವಿಷವನ್ನು ಮೆದುಳಿನಲ್ಲಿ ತುಂಬಿ ಕೊಂಡು ಓಡಾಡುತ್ತಿದ್ದಾರೆ.ಜನರಿಗಾಗಿ ಮೇಣದ ಬತ್ತಿಯಂತೆ ಉರಿದು ಹೋದ ಸಮಾಜವಾದಿ ನಾಯಕ ಶಾಂತವೇರಿ ಗೋಪಾಲಗೌಡರ ಶಿವಮೊಗ್ಗ ಜಿಲ್ಲೆ ಇಂದು ಏನಾಗಿದೆ? ತಮ್ಮ ಜಿಲ್ಲೆಯನ್ನು ಲೋಕಸಭೆಯಲ್ಲಿ ಪ್ರತಿನಿಧಿಸಿದ್ದ ಇನ್ನೊಬ್ಬ ಸಮಾಜವಾದಿ ನಾಯಕ ಕವಿ ದಿನಕರ ದೇಸಾಯಿಯವರ ಉತ್ತರ ಕನ್ನಡ ಜಿಲ್ಲೆಯ ಇಂದಿನ ಸ್ಥಿತಿ ಏನು? ಹೋಗಲಿ ಜ್ಯೋತಿ ಬಸು ಅವರಂಥ ಮೇಧಾವಿ ಮುಖ್ಯಮಂತ್ರಿ ಮೂರು ದಶಕಕ್ಕೂ ಹೆಚ್ಚು ಕಾಲ ಮುಖ್ಯಮಂತ್ರಿ ಯಾಗಿದ್ದ ಪಶ್ಚಿಮ ಬಂಗಾಳ ಇಂದು ಎಲ್ಲಿಗೆ ತಲುಪಿದೆ? ಸ್ವಂತಕ್ಕೆ ಒಂದು ವಾಹನವೂ ಇಲ್ಲದ ಅತ್ಯಂತ ಸರಳವಾಗಿ ಬದುಕಿದ ಮಾಣಿಕ್ ಸರಕಾರ ಅವರು ಮುಖ್ಯಮಂತ್ರಿ ಯಾಗಿದ್ದ ತ್ರಿಪುರಾದಲ್ಲಿ ಸಿಪಿಎಂ ಕಚೇರಿಗಳಿಗೇ ಬೆಂಕಿ ಹಚ್ಚುವಷ್ಟು ಕೋಮುವಾದಿಗಳು ಹೇಗೆ ಬೆಳೆದರು? ದೂರವೇಕೆ ನಮ್ಮ ಪಕ್ಕದ ನಾರಾಯಣ ಗುರುಗಳ ನಾಡು ಎಂದು ಹೆಸರಾದ ನಮ್ಮ ಹೆಮ್ಮೆಯ ಕೇರಳದಿಂದ ಬರುತ್ತಿರುವ ಸುದ್ದಿಗಳು ಆತಂಕವನ್ನು ಉಂಟು ಮಾಡುತ್ತಿವೆ.ಕಮ್ಯುನಿಸ್ಟರು ಜತನದಿಂದ ಕಾಪಾಡಿಕೊಂಡು ಬಂದಿದ್ದ ಈ ರಾಜ್ಯದಲ್ಲೂ ಕೋಮುವಾದಿ ಶಕ್ತಿಗಳು ಚಿಗುರುತ್ತಿವೆ.ಇದಕ್ಕೆ ಇತ್ತೀಚಿನ ತಿರುವನಂತಪುರ ಮಹಾ ನಗರ ಪಾಲಿಕೆಯ ಇತ್ತೀಚಿನ ಚುನಾವಣೆಯ ಫಲಿತಾಂಶ ಉದಾಹರಣೆಯಾಗಿದೆ.ಈ ಹಿನ್ನೆಲೆಯಲ್ಲಿ ಬಸವಣ್ಣನವರು, ಕನಕದಾಸರು, ಶಿಶುನಾಳ ಶರೀಫ ಸಾಹೇಬರು ಹಾಗೂ ಕುವೆಂಪು ಅವರ ಪರಂಪರೆಯ ಕರ್ನಾಟಕದ ಜನತೆ ಸಿದ್ದರಾಮಯ್ಯನವರ ಕೈಗೆ ನಾಯಕತ್ವವನ್ನು ಕೊಟ್ಟಿದ್ದಾರಲ್ಲ , ಅದು ನಾವು ಹೆಮ್ಮೆ ಪಡಬೇಕಾದ ಸಂಗತಿ.ಮುಂದೇನೋ ಗೊತ್ತಿಲ್ಲ. ಸದ್ಯಕ್ಕಂತೂ ತೊಂದರೆಯಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಸನತ್ ಕುಮಾರ ಬೆಳಗಲಿ

contributor

Similar News