ಜನ ಚಳವಳಿಗಳು ಮತ್ತು ಪ್ರಭುತ್ವ
ಬಿಜಾಪುರಕ್ಕೆ (ವಿಜಯಪುರ) ಸರಕಾರಿ ವೈದ್ಯಕೀಯ ಕಾಲೇಜು ಆಗಲೇಬೇಕೆಂದು ಅಲ್ಲಿನ ಜನರು ಕಳೆದ 107 ದಿನಗಳಿಂದ ನಡೆಸುತ್ತಿರುವ ಹೋರಾಟ ತಾರ್ಕಿಕ ಅಂತ್ಯ ಕಾಣಬೇಕಿತ್ತು. ಆದರೆ, ನಡೆಯಲೇಬಾರದ ಘಟನೆ ನಡೆದು ಅನಿರೀಕ್ಷಿತ ಸ್ಥಿತಿಗೆ ತಲುಪಿದೆ. ಇದು ಅತ್ಯಂತ ಕಳವಳಕಾರಿ ಸಂಗತಿ. ಕಳೆದ ಮೂರು ತಿಂಗಳಿಂದ ನಿರಂತರವಾಗಿ ಶಾಂತಿಯುತವಾಗಿ ನಡೆಯುತ್ತಿದ್ದ ಹೋರಾಟವನ್ನು ಸ್ಥಳೀಯ ಜನಪ್ರತಿನಿಗಳು ನಿಭಾಯಿಸಿದ ರೀತಿ ಸಮಾಧಾನಕರ ಆಗಿರಲಿಲ್ಲ. ಇಷ್ಟು ದಿನಗಳ ಕಾಲ ಜನರು ಬೀದಿಗೆ ಬಂದು ಜಿಲ್ಲಾಧಿಕಾರಿ ಕಚೇರಿಯ ಮುಂದೆ ಧರಣಿ ನಡೆಸುವುದು ಅಲ್ಲಿನ ಜನ ಪ್ರತಿ ನಿಧಿಗಳಿಗೆ ಶೋಭೆ ತರುವ ವಿಷಯವಲ್ಲ. ಈ ನಡುವೆ ಸತ್ಯಾಗ್ರಹಿಗಳು ಮೂರು ತಿಂಗಳು ಧರಣಿ ನಡೆಸಿ, ಬೇರೆ ದಾರಿ ಕಾಣದೇ ಜಿಲ್ಲಾ ಉಸ್ತುವಾರಿ ಮಂತ್ರಿಗಳ ಮನೆಯ ಮುಂದೆ ಧರಣಿಯನ್ನು ನಡೆಸಲು ಮುಂದಾದರು. ಇದನ್ನು ಪೊಲೀಸರು ನಿರ್ದಯವಾಗಿ ಹತ್ತಿಕ್ಕಿದರು. ಅಷ್ಟೇ ಅಲ್ಲ, ಚಳವಳಿಯ ನಾಯಕರಾದ ಅನಿಲ್ ಹೊಸಮನಿ, ಭಗವಾನ್ ರೆಡ್ಡಿ ಹಾಗೂ ಇತರ ನಾಲ್ವರನ್ನು ಬಂಧಿಸಿ ಸೆರೆಮನೆಗೆ ತಳ್ಳಿರುವುದು ರಾಜ್ಯದ ಕಾಂಗ್ರೆಸ್ ಸರಕಾರಕ್ಕೆ ಒಳ್ಳೆಯ ಹೆಸರನ್ನು ತರುವುದಿಲ್ಲ.
ಬಿಜಾಪುರದ ಜನ ಸರಕಾರದಿಂದ ಇದನ್ನು ನಿರೀಕ್ಷಿಸಿರಲಿಲ್ಲ. ಹೋರಾಟಗಾರರು ಸ್ವಂತಕ್ಕಾಗಿ ಯಾವ ಬೇಡಿಕೆಯನ್ನು ಸರಕಾರದ ಮುಂದೆ ಇಟ್ಟಿರಲಿಲ್ಲ. ಸದಾ ಬರಗಾಲದಿಂದ ಬೆಂದು ಹೋಗುತ್ತಿರುವ ಜಿಲ್ಲೆಯ ಜನರಿಗೆ ಸರಕಾರಿ ಮೆಡಿಕಲ್ ಕಾಲೇಜು ಬೇಕೆಂದು ಬಾಬಾಸಾಹೇಬರ ಪ್ರತಿಮೆಯ ಆಸರೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಧರಣಿ ನಡೆಸಿದ್ದರು. 107 ದಿನ ಸತ್ಯಾಗ್ರಹ ನಡೆದರೂ ಒಂದೇ ಒಂದು ಅಹಿತಕಾರಿ ಘಟನೆ ಸಂಭವಿಸಿರಲಿಲ್ಲ. ಆದರೆ, ಚಳವಳಿಯ ಭಾಗವಾಗಿ ಸರಕಾರದ ಮೇಲೆ ಒತ್ತಡ ಹೇರಲು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲರ ಮನೆಯ ಮುಂದೆ ಪ್ರತಿಭಟನೆ ನಡೆಸಲು ಮುಂದಾದಾಗ ಈ ಅಹಿತಕರ ಘಟನೆ ನಡೆದು ಸರಕಾರಕ್ಕೆ ಕೆಟ್ಟ ಹೆಸರು ಬಂತು.
ಈ ಸತ್ಯಾಗ್ರಹ 94 ದಿನ ತಲುಪಿದಾಗ ನಾವೂ ಸಿಪಿಐ ನಾಯಕ ಹಾಗೂ ‘ಹೊಸತು’ ಸಂಪಾದಕ ಡಾ. ಸಿದ್ಧನಗೌಡ ಪಾಟೀಲ, ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಹಿಂದಿನ ಉಪ ಕುಲಪತಿ ಡಾ.ಮಲ್ಲಿಕಾ ಘಂಟಿ, ವಾಲ್ಮೀ ನಿರ್ದೇಶಕರಾಗಿದ್ದ ರಾಜೇಂದ್ರ ಪೊದ್ದಾರ, ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಮತ್ತು ವಿದ್ಯಾರ್ಥಿ ಸುನಿಲ್ ಪಾಟೀಲ್ ಮೊದಲಾದವರು ಬಿಜಾಪುರಕ್ಕೆ ಹೋಗಿದ್ದೆವು. ಇಡೀ ದಿನ ಧರಣಿಯಲ್ಲಿ ಪಾಲ್ಗೊಂಡೆವು. ಹೋರಾಟದ ಮುಂದಿನ ದಾರಿಯ ಬಗ್ಗೆ ಸಮಾಲೋಚನೆ ಮಾಡಿದೆವು. ನಾವು ಹೋಗಿ ಬಂದ ನಂತರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲರು ಕೂಡ ಸತ್ಯಾಗ್ರಹಿಗಳ ಬೇಡಿಕೆಗೆ ಸ್ಪಂದಿಸಿ ತಾನು ಕೂಡ ಸರಕಾರಿ ಮೆಡಿಕಲ್ ಕಾಲೇಜಿನ ಪರವಾಗಿ ಇರುವುದಾಗಿ ಹೇಳಿದ್ದರು. ಚಳವಳಿಕಾರರನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿಸುವುದಾಗಿ ಬಹಿರಂಗವಾಗಿ ಭರವಸೆಯನ್ನು ನೀಡಿದ್ದರು.
ಈ ಎಲ್ಲ ವಿದ್ಯಮಾನಗಳ ಹಿನ್ನೆಲೆಯಲ್ಲಿ ಇನ್ನೇನು ಎಲ್ಲವೂ ಸೌಹಾರ್ದಯುತವಾಗಿ ಇತ್ಯರ್ಥ ಆಗುತ್ತದೆ ಎಂದು ಆಶಾದಾಯಕ ನಿರೀಕ್ಷೆ ಇಟ್ಟುಕೊಂಡು ನಿಟ್ಟುಸಿರು ಬಿಟ್ಟಾಗ ಅನಿರೀಕ್ಷಿತವಾಗಿ ನಡೆಯಬಾರದ ಘಟನೆ ನಡೆಯಿತು. ಜಿಲ್ಲಾ ಉಸ್ತುವಾರಿ ಮಂತ್ರಿಗಳ ಮನೆಯ ಮುಂದೆ ಧರಣಿ ನಡೆಸುತ್ತಿದ್ದ ಜನರ ಮೇಲೆ ಪೊಲೀಸರು ಒಮ್ಮಿಂದೊಮ್ಮ್ಮೆಲೇ ಎರಗಿದರು. ಯಾಕೆ ಹೀಗಾಯಿತೋ ಗೊತ್ತಾಗುತ್ತಿಲ್ಲ. ಧರಣಿಯಲ್ಲಿ ಪಾಲ್ಗೊಂಡಿದ್ದ ಸಂಗನ ಬಸವ ಸ್ವಾಮಿಗಳನ್ನು
ನೂಕಲು ಹೋದ ಮಪ್ತಿ ಉಡುಪಿನಲ್ಲಿ ಇದ್ದ ಪೊಲೀಸರು ಅವರ ಕೈಯಲ್ಲಿ ಇದ್ದ ಮೊಬೈಲನ್ನು ಕಸಿದುಕೊಂಡರು. ಆಗ ಕೋಪಗೊಂಡ ಸ್ವಾಮಿಗಳು ಮೊಬೈಲ್ ಕಸಿದುಕೊಂಡವನ ಕಪಾಳಕ್ಕೆ ಹೊಡೆದರೆಂದು ಮಾಧ್ಯಮಗಳಲ್ಲಿ ಬಂದ ವರದಿ. ನಂತರ ಉತ್ತರ ಕರ್ನಾಟಕದ ಹೆಸರಾಂತ ಅಂಬೇಡ್ಕರ್‌ವಾದಿ ಹಾಗೂ ಪತ್ರಕರ್ತ ಅನಿಲ್ ಹೊಸಮನಿ ಹಾಗೂ ಎಡಪಂಥೀಯ ನಾಯಕ ಭಗವಾನರೆಡ್ಡಿ ಸೇರಿ 6 ಮಂದಿಯನ್ನು ಬಂಧಿಸಿ ಜೈಲಿಗೆ ಹಾಕಲಾಗಿದೆ.ಇಷ್ಟೇ ಅಲ್ಲ ಮೂರು ತಿಂಗಳುಗಳ ಕಾಲ ಶಾಂತಿಯುತ ಧರಣಿ ನಡೆಸಿದ ಪೆಂಡಾಲನ್ನು ಪೊಲೀಸರು ರಾತ್ರೋರಾತ್ರಿ ಧ್ವಂಸಗೊಳಿಸಿದ್ದಾರೆ. ಇದು ಪ್ರಜಾಪ್ರಭುತ್ವ ಹಾಗೂ ಅಭಿವ್ಯಕ್ತಿ ಸ್ವಾ ತಂತ್ರ್ಯಕ್ಕೆ ಮಾಡಿದ ಅಪಚಾರವಲ್ಲವೇ ?
ನಾವೆಲ್ಲ ಸಿದ್ದರಾಮಯ್ಯನವರ ನೇತೃತ್ವದ ರಾಜ್ಯ ಸರಕಾರದ ಬಗ್ಗೆ ವಿಶೇಷ ಅಭಿಮಾನವನ್ನು ಹೊಂದಿದವರು. ಅದರಲ್ಲೂ ಸಮಾಜವಾದಿ ಚಳವಳಿಯ ಹಿನ್ನೆಲೆಯಿಂದ ಬಂದ ಸಿದ್ದರಾಮಯ್ಯನವರು ನಮ್ಮವರು ಎಂದು ಅವರ ಬಗ್ಗೆ ಗೌರವವಿದೆ.ಅದರಂತೆ ಸಿದ್ದರಾಮಯ್ಯನವರು ಕೂಡ ಅಧಿಕಾರ ಬಂದ ನಂತರ ಉಳಿದವರಂತೆ ಬದಲಾಗಲಿಲ್ಲ. ಸಂಘ ಪರಿವಾರದ ಕೋಮುವಾದ ಮತ್ತು ಮನುವಾದಗಳ ಬಗ್ಗೆ ಹಾಗೂ ಅವರ ವಿಧ್ವಂಸಕ ಚಟುವಟಿಕೆಗಳ ಕುರಿತು ದಿಟ್ಟವಾದ ನಿಲುವನ್ನು ತಾಳುತ್ತ ಬಂದರು. ವೈಯಕ್ತಿಕವಾಗಿಯೂ ಅತ್ಯಂತ ಶುದ್ಧ ವ್ಯಕ್ತಿತ್ವವನ್ನು ಹೊಂದಿದವರು. ಅಂತಲೇ ಬಿಜಾಪುರದ ಚಳವಳಿಕಾರರೂ ಕೂಡ ಸಿಎಂ ಸಿದ್ದರಾಮಯ್ಯನವರ ಬಗ್ಗೆ ವಿಶೇಷ ಅಭಿಮಾನ ಮತ್ತು ಗೌರವವನ್ನು ಹೊಂದಿದವರು.
ಆದರೆ ಇದೆಲ್ಲ ಭ್ರಮ ನಿರಸನವಾಗುವಂಥ ವಿದ್ಯಮಾನಗಳು ಬಿಜಾಪುರದಲ್ಲಿ ನಡೆದವು.ಇದು ಸಿದ್ದರಾಮಯ್ಯನವರ ಹೆಸರಿಗೆ ಕಳಂಕ ತರುವ ಹುನ್ನಾರವೇ ಎಂಬ ಸಂದೇಹ ಸಹಜವಾಗಿ ಮೂಡುತ್ತದೆ. ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲರು ಬಹಿರಂಗವಾಗಿ ಭರವಸೆಯನ್ನು ನೀಡಿದ ನಂತರ ಹೀಗೇಕಾಯಿತು? ಇದು ಪೊಲೀಸರ ಅತಿರೇಕದ ವರ್ತನೆಯೇ ? ಈ ಪ್ರಶ್ನೆಗೆ ನಮಗೆ ಉತ್ತರ ಬೇಕಾಗಿದೆ.
ನಾನು ಬಿಜಾಪುರ ಜಿಲ್ಲೆಯಲ್ಲೇ ಹುಟ್ಟಿ ಬೆಳೆದವನು.ಅಲ್ಲಿ ಬಾಲ್ಯದಿಂದಲೂ ಹಲವಾರು ಹೋರಾಟಗಳನ್ನು ನೋಡುತ್ತಾ,ಅದರಲ್ಲಿ ಪಾಲ್ಗೊಳ್ಳುತ್ತ ಬಂದವನು. ಊರು ಬಿಟ್ಟು ಹುಬ್ಬಳ್ಳಿ ಮತ್ತು ಬೆಂಗಳೂರು ಸೇರಿದ ನಂತರ ಕೂಡ ಕಳೆದ ಐವತ್ತು ವರ್ಷಗಳ ಕಾಲದಿಂದಲೂ ಬಿಜಾಪುರದ ಸಂಪರ್ಕ ವನ್ನು ನಿರಂತರವಾಗಿ ಇಟ್ಟುಕೊಂಡವನು. ನಾನು ಕಂಡಂತೆ ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಬೇಡಿಕೆಗಾಗಿ ಇಷ್ಟೊಂದು ಸುದೀರ್ಘವಾದ ಆಂದೋಲನ ಜಿಲ್ಲೆಯಲ್ಲಿ ನಡೆಸಿರಲಿಲ್ಲ. ಹಿಂದೆ ಅರುವತ್ತರ ದಶಕದಲ್ಲಿ ಆಲಮಟ್ಟಿ ಅಣೆಕಟ್ಟೆಗಾಗಿ ಸುದೀರ್ಘ ಹೋರಾಟ ನಡೆದ ನೆನಪು ನನಗೆ ಇನ್ನೂ ಇದೆ. ಬಿಜಾಪುರ ಜಿಲ್ಲೆಯ ಜನ ಎಂಥವರೆಂದರೆ ಒಮ್ಮೆಲೇ ಅವರಿಗೆ ಸಿಟ್ಟು ಬರುವುದಿಲ್ಲ. ಅವರು ತಾಳ್ಮೆಗೆ ಹೆಸರಾದವರು. ಆದರೆ ತಾಳ್ಮೆ ತಪ್ಪಿದಾಗ ಬೀದಿಗಿಳಿಯುತ್ತಾರೆ. ಒಮ್ಮೆ ಬೀದಿಗೆ ಇಳಿದರೆ ಎಂಥ ಬೆಲೆಯನ್ನಾದರೂ ತೆತ್ತು ಗೆಲುವಿನ ಬಾವುಟವನ್ನು ಹಾರಿಸುತ್ತಾರೆ. ಐದು ನದಿಗಳು ಹರಿದರೂ ಬರದಿಂದ ತತ್ತರಿಸಿದ ಈ ಜಿಲ್ಲೆಯ ಜನ ಭಾರತ-ಚೀನಾ ಯುದ್ಧದ ಸಂದರ್ಭದಲ್ಲಿ ಇಂದಿರಾ ಗಾಂಧಿ ಅವರನ್ನು ಬಿಜಾಪುರಕ್ಕೆ ಕರೆಸಿ ಅವರ ತೂಕದಷ್ಟು ಬಂಗಾರದ ಆಭರಣಗಳನ್ನು ರಾಷ್ಟ್ರೀಯ ರಕ್ಷಣಾ ನಿಧಿಗೆ ನೀಡಿದವರು.
ಬಿಜಾಪುರ ಒಂದು ವಿಶಿಷ್ಟ ಜಿಲ್ಲೆ,ಇಲ್ಲಿ ಕಡು ಬಡವರಿದ್ದಾರೆ.ದುಡಿಯಲು ದೂರದ ಊರುಗಳಿಗೆ ಗುಳೆ ಹೋಗುವವರು ಇಲ್ಲಿ ಸಾಕಷ್ಟಿದ್ದಾರೆ. ಅದೇ ರೀತಿ ಭಾರೀ ಭೂಮಾಲಕರ, ಗೌಡ, ಪಾಟೀಲರ ಜಿಲ್ಲೆ ಎಂದು ಹೆಸರಾಗಿದೆ.ಇಂಥ ನೆಲದಲ್ಲಿ ಬಡವರಿಗೆ ಸರಕಾರಿ ಆಸ್ಪತ್ರೆ ಆಸರೆಯಾಗಿದೆ. ಅಲ್ಲಿ ಸರಕಾರಿ ಮೆಡಿಕಲ್ ಕಾಲೇಜಿಗಾಗಿ ಆಸ್ಪತ್ರೆ ಪಕ್ಕದಲ್ಲಿ 150 ಎಕರೆ ಸರಕಾರಿ ಆಸ್ಪತ್ರೆಯ ಜಮೀನನ್ನು ಮೀಸಲು ಇಡಲಾಗಿದೆ. ಇದರ ಮೇಲೆ ಭೂ ಮಾಫಿಯಾದ ಕಣ್ಣು ಬಿದ್ದಿದೆ.ಇಲ್ಲಿ ಖಾಸಗಿ ಸಹಭಾಗಿತ್ವದ ‘ಪಿಪಿಪಿ’ ಮೆಡಿಕಲ್ ಕಾಲೇಜು ಮಾಡಲು ಅವರು ಒತ್ತಡ ಹೇರುತ್ತಿದ್ದಾರೆ. ಖಾಸಗಿ ಸಹಭಾಗಿತ್ವ ಎಂಬುದು ರಾಜ್ಯ ಸರಕಾರದ ಯೋಜನೆ ಅಲ್ಲ. ಇದು ಕೇಂದ್ರ ಸರಕಾರದ ಪ್ರಸ್ತಾವ.ಇದನ್ನು ಬಳಸಿಕೊಂಡು 150 ಎಕರೆ ನುಂಗಲು ಇಲ್ಲಿನ ಕೆಲವು ರಾಜಕಾರಣಿಗಳ ಲೆಕ್ಕಾಚಾರವಾಗಿದೆ.
ಸಾರ್ವಜನಿಕ ಆಸ್ತಿ ( 150 ಎಕರೆ) ಯನ್ನು ರಕ್ಷಿಸಬೇಕೆಂದು ಇಲ್ಲಿನ ಕೆಲವು ನಾಗರಿಕರು ಶಾಂತಿಯುತವಾಗಿ ಧರಣಿ ಆರಂಭಿಸಿದ್ದಾರೆ. ಜಾಗತೀಕರಣದ ಶಕೆ ಬಂದ ನಂತರ ಸರಕಾರಿ ಜಮೀನು ನುಂಗುವ ಭೂ ಮಾಫಿಯಾಗಳು ‘ಉದ್ಯಮಿಗಳೆಂದು’ ಹೊಸ ಹೆಸರನ್ನು ಪಡೆದಿದ್ದಾರೆ.
ಖಾಸಗಿ ಸಹಭಾಗಿತ್ವ ಅಂದರೆ ಅವರೇನೂ ಹಣ ಹೂಡಿಕೆ ಮಾಡುವುದಿಲ್ಲ. ಜುಜುಬಿ ಒಂದೆರಡು ಕೋಟಿ ರೂ. ಹಾಕಿ ಬಹುದೊಡ್ಡ ಆಸ್ತಿ ಹಾಗೂ ಒಂದು ಸಾವಿರ ಹಾಸಿಗೆಗಳ ಆಸ್ಪತ್ರೆ, ಕ್ಯಾನ್ಸರ್ ಹಾಗೂ ಹೃದಯ ಚಿಕಿತ್ಸಾ ಘಟಕಗಳು, ರೋಗ ಪತ್ತೆ ಹಚ್ಚುವ ಅತ್ಯಾಧುನಿಕ ಯಂತ್ರಗಳು, ನುರಿತ ವೈದ್ಯರು ಇವೆಲ್ಲ ಸೌಕರ್ಯಗಳನ್ನು ಪುಗಸಟ್ಟೆ ಹೊಡೆಯುವುದಕ್ಕೆ ಇರುವ ಇನ್ನೊಂದು
ಹೆಸರು ಪಿಪಿಪಿ. ಅಂದರೆ ಖಾಸಗಿ ಸಹಭಾಗಿತ್ವ. ಇಂಥ ಆಸ್ಪತ್ರೆಗಳಿಂದ ಕಡು ಬಡವರಿಗೆ ಒಂದು ಪೈಸೆಯೂ ಪ್ರಯೋಜನವಿಲ್ಲ. ಇದು ಜನರಿಗೆ
ಸೇರಿದ ಆಸ್ತಿ.ಇದನ್ನು ಕಂಡ ಕಂಡವರಿಗೆ ಮಾರಾಟ ಮಾಡುವ ಅಧಿಕಾರ ಯಾರಿಗೂ ಇಲ್ಲ.
ನಾನು ಚಿಕ್ಕವನಾಗಿದ್ದಾಗಿಂದಲೇ ನೋಡುತ್ತಿರುವ ಬಿಜಾಪುರ ಜಿಲ್ಲೆಯ ರಾಜಕಾರಣವೇ ವಿಚಿತ್ರ. ಇದನ್ನೆಲ್ಲ ಬರೆಯಲು ಹೊರಟರೆ ಈ ಅಂಕಣದ ಜಾಗ ಸಾಲುವುದಿಲ್ಲ. ಅದೇನೇ ಇರಲಿ ಎಂ.ಬಿ.ಪಾಟೀಲರು ತಾವು ಗೆದ್ದ ಬಬಲೇಶ್ವರ ಮತಕ್ಷೇತ್ರ ಸೇರಿದಂತೆ ಜಿಲ್ಲೆಗೆ ಹಲವಾರು ಅಭಿವೃದ್ಧಿ ಯೋಜನೆಗಳನ್ನು ತಂದು ಬರದ ಜಿಲ್ಲೆಯನ್ನು ಹಸಿರು ಜಿಲ್ಲೆಯನ್ನಾಗಿ ಮಾಡಿದ್ದಾರೆ. ಕೆರೆಗಳನ್ನು ತುಂಬಿಸಿದ್ದಾರೆ. ಇಂಥ ಎಂ.ಬಿ.ಪಾಟೀಲರು ಈ ವಿಷಯದಲ್ಲಿ ಕೊಟ್ಟ ಮಾತನ್ನು ಉಳಿಸಿಕೊಳ್ಳಲಿ. ಬಂಧಿಸಲ್ಪಟ್ಟ ಎಲ್ಲರನ್ನೂ ಬಿಡುಗಡೆ ಮಾಡಿಸಲಿ.ಕೇಸುಗಳನ್ನು ವಾಪಸ್ ಪಡೆಯಲಿ. ಮುಖ್ಯ ಮಂತ್ರಿ ಸಿದ್ದರಾಮಯ್ಯನವರ ಮನವೊಲಿಸಿ ‘ಬಿಜಾಪುರದಲ್ಲಿ ಸಂಪೂರ್ಣ ಸರಕಾರಿ ಆಸ್ಪತ್ರೆ ಮಾಡುತ್ತೇವೆ’ ಎಂದು ಬಹಿರಂಗವಾಗಿ ಹೇಳಿಸಲಿ.ಇದನ್ನು ಬಿಟ್ಟು ಇನ್ಯಾವ ನಿರೀಕ್ಷೆಯೂ ಇಲ್ಲ.ಕೊನೆಯದಾಗಿ ಇನ್ನೊಂದು ಮಾತು.ಸರ್ಕಾರಿ ಮೆಡಿಕಲ್ ಕಾಲೇಜಿಗಾಗಿ ಬಿಜಾಪುರದಲ್ಲಿ ನಡೆದಿರುವ ಹೋರಾಟ ಮೊದಲೇ ಘೋಷಿಸಿದಂತೆ ಪಕ್ಷಾತೀತ ಮತ್ತು ಜಾತ್ಯತೀತವಾಗಿರಲಿ. ಬಿಜೆಪಿ ಸೇರಿದಂತೆ ಯಾವುದೇ ಪಕ್ಷ ಇದನ್ನು ರಾಜಕೀಯ ಸ್ವಾರ್ಥ ಸಾಧನೆಗೆ ಬಳಸಿಕೊಳ್ಳಲು ಅವಕಾಶ ನೀಡಬಾರದು.ಇದು ಸಚಿವ ಎಂ.ಬಿ.ಪಾಟೀಲರ ಪರ ಮತ್ತು ವಿರೋಧಿ ವೇದಿಕೆಯಾಗಬಾರದು. ಸಂಘಟಕರಿಗೆ ಈ ಎಚ್ಚರವಿರಲಿ.