ಇಲ್ಲದ ವ್ಯಕ್ತಿಯ ಬಗ್ಗೆ ಕಟುವಾಗಿ ಬರೆಯಬಾರದು ಎಂಬುದು ನಿಜ. ಆದರೆ ಇತಿಹಾಸದ ಪುಟಗಳನ್ನು ತಿರುವಿ ಹಾಕುವಾಗ ಯಾವುದೇ ವ್ಯಕ್ತಿಯನ್ನು ಅಥವಾ ಘಟನೆಯನ್ನು ವೈಭವೀಕರಿಸುವಾಗ ವಾಸ್ತವ ಸಂಗತಿಗಳನ್ನು ಮರೆ ಮಾಚಬಾರದು. ಸತ್ಯವನ್ನು ಮುಚ್ಚಿಡಬಾರದು. ಯಾವುದೇ ವ್ಯಕ್ತಿಯ ವೈಯಕ್ತಿಕ ಬದುಕಿನ ಬಗ್ಗೆ ನಿಂದನೆಯನ್ನು ಮಾಡಬಾರದು. ಆದರೆ ಸಾರ್ವಜನಿಕ ಕ್ಷೇತ್ರದ ವ್ಯಕ್ತಿಯ ಬಗ್ಗೆ ಬರೆಯುವಾಗ ಸತ್ಯಕ್ಕೆ ಮೋಸ ಮಾಡಬಾರದು.

ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು ಬದುಕಿದ್ದರೆ ಅವರಿಗೆ ನೂರು ವರ್ಷಗಳು ತುಂಬುತ್ತಿದ್ದವು. ಅವರ ಅಭಿಮಾನಿಗಳು ತಮ್ಮ ನಾಯಕನ ಶತಮಾನೋತ್ಸವವನ್ನು ಕಳೆದ ವಾರ ಸಂಭ್ರಮದಿಂದ ಆಚರಿಸಿದರು. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹೆಗಡೆ ಹೆಸರಿನಲ್ಲಿ ಪಂಚಾಯತ್ ರಾಜ್ ಪ್ರಶಸ್ತಿಯನ್ನು ನೀಡುವುದಾಗಿ ಹೇಳಿದರು. ನಿಕಟ ಪೂರ್ವ ಮುಖ್ಯಮಂತ್ರಿ ಸಿದ್ದರಾಮಯ್ಯನವರೂ ಹೆಗಡೆ ಅವರಿಗೆ ಪ್ರಧಾನಿಯಾಗುವ ಅರ್ಹತೆ ಇತ್ತು ಎಂದು ನುಡಿದರು. ಇಂಥ ಕಾರ್ಯಕ್ರಮಗಳಲ್ಲಿ ಹೀಗೆ ಹೇಳಲೇಬೇಕಾಗುತ್ತದೆ. ಹೆಗಡೆ ಅವರು ಮೊದಲ ಬಾರಿ ಮುಖ್ಯಮಂತ್ರಿಯಾದ ಎಂಭತ್ತರ ದಶಕದ ಆ ದಿನಗಳು ನನ್ನ ನೆನಪಿನಲ್ಲಿವೆ. ನರಗುಂದ ರೈತ ಹೋರಾಟ ಮತ್ತು ಕಾಂಗ್ರೆಸ್ ಮುಖ್ಯಮಂತ್ರಿ ಗುಂಡೂರಾವ್ ಅವರ ದುರಾಡಳಿತದ ಕಾಂಗ್ರೆಸ್ ವಿರೋಧಿ ಅಲೆಯ ಪರಿಣಾಮವಾಗಿ 1983ರಲ್ಲಿ ಮೊದಲ ಸಲ ಕರ್ನಾಟಕದಲ್ಲಿ ಕಾಂಗ್ರೆಸೇತರ ಸರಕಾರ ಅಸ್ತಿತ್ವಕ್ಕೆ ಬಂತು. ಅದರ ಶ್ರೇಯಸ್ಸು ಬಹುತೇಕ ಸಮಾಜವಾದಿ ನಾಯಕ ಎಸ್.ಬಂಗಾರಪ್ಪನವರಿಗೆ ಸಲ್ಲುತ್ತದೆ ಎಂದರೆ ಅತಿಶಯೋಕ್ತಿಯಲ್ಲ. ಆಗ ಕಾಂಗ್ರೆಸೇತರ ಸಮಾನ ಮನಸ್ಕ ಪಕ್ಷಗಳು ಒಂದು ಗೂಡಿ ಜನತಾರಂಗವನ್ನು ರಚಿಸಿಕೊಂಡು ಚುನಾವಣಾ ಕಣಕ್ಕಿಳಿದವು. ಅದರಲ್ಲಿ ಪ್ರಮುಖ ಪಾತ್ರವನ್ನು ವಹಿಸಿದವರು ಸಾರೆಕೊಪ್ಪಬಂಗಾರಪ್ಪ. ಒಂದು ವೇಳೆ ಜನತಾರಂಗ ಬಹುಮತಗಳಿಸಿದರೆ ಬಂಗಾರಪ್ಪನವರು ಮುಖ್ಯಮಂತ್ರಿ ಎಂಬ ಒಂದು ಅಲಿಖಿತ ಒಪ್ಪಂದವಾಗಿತ್ತು. ಆಗ ರಾಜ್ಯದಲ್ಲಿ ಬಂಗಾರಪ್ಪಗಾಳಿ ಬೀಸುತ್ತಿತ್ತು. ಬಂಗಾರಪ್ಪನವರು ತಮ್ಮ ಸೊರಬ ಮತ ಕ್ಷೇತ್ರಕ್ಕೆ ಒಂದು ದಿನವೂ ಹೋಗದೆ ಇಡೀ ಕರ್ನಾಟಕವನ್ನು ಮೂರು ಸಲ ಸುತ್ತಿದರು. ಪ್ರತೀ ಜಿಲ್ಲೆ, ಪ್ರತೀ ತಾಲೂಕಿನಲ್ಲಿ ಅವರು ಹೆಸರು ಹಿಡಿದು ಕರೆಯುವ ಅಭಿಮಾನಿಗಳಿದ್ದರು. ಅತ್ಯಂತ ಜನಪ್ರಿಯ ಮಾಸ್ ಲೀಡರ್ ಆಗಿದ್ದ ಅವರು ಹೋದಲ್ಲೆಲ್ಲ ಭಾರೀ ಸಂಖ್ಯೆಯಲ್ಲಿ ಜನರು ಸೇರುತ್ತಿದ್ದರು. ಚುನಾವಣಾ ಫಲಿತಾಂಶ ಬಂದ ನಂತರ ಕಾಂಗ್ರೆಸ್ ಪರಾಭವಗೊಂಡು ಜನತಾರಂಗ ಬಹುಮತವನ್ನು ಗಳಿಸಿತ್ತು. ಈ ಫಲಿತಾಂಶವನ್ನು ಪ್ರತಿಪಕ್ಷಗಳೂ ನಿರೀಕ್ಷಿಸಿರಲಿಲ್ಲ. ಅಲಿಖಿತ ಒಪ್ಪಂದದಂತೆ ಬಂಗಾರಪ್ಪನವರು ಮುಖ್ಯಮಂತ್ರಿಯಾಗಬೇಕಿತ್ತು. ಆದರೆ ಆ ವರೆಗೆ ಚುನಾವಣಾ ಪ್ರಚಾರದಲ್ಲಿ ಎಲ್ಲೂ ಕಾಣಿಸಿಕೊಳ್ಳದಿದ್ದ, ದಿಲ್ಲಿಯನ್ನು ಸೇರಿದ್ದ ರಾಮಕೃಷ್ಣ ಹೆಗಡೆ ಅವರು ದಿಢೀರನೆ ಬೆಂಗಳೂರಿಗೆ ಬಂದು ಇಳಿದರು. ಒಬ್ಬರೇ ಬರಲಿಲ್ಲ, ಮಾಜಿ ಪ್ರಧಾನಿ ಹಾಗೂ ಜನತಾ ಪಕ್ಷದ ನಾಯಕರಾಗಿದ್ದ ಚಂದ್ರಶೇಖರ್ ಅವರನ್ನು ಜೊತೆಗೆ ಕರೆದುಕೊಂಡು ಬಂದಿದ್ದರು. ಶಾಸಕಾಂಗ ಸಭೆಯ ಮುಂಚೆಯೇ ರಾಮಕೃಷ್ಣ ಹೆಗಡೆ ಅವರ ಹೆಸರು ಒಮ್ಮಿಂದೊಮ್ಮೆಲೇ ಕೇಳಿ ಬರತೊಡಗಿತು. ಜನತಾ ಪಕ್ಷದ ರಾಷ್ಟ್ರೀಯ ನಾಯಕ ಚಂದ್ರಶೇಖರ್ ಅವರು ಶಾಸಕಾಂಗ ಸಭೆಯನ್ನು ಕರೆದು ಎಲ್ಲರಿಗೂ ಅಚ್ಚರಿಯುಂಟಾಗುವಂತೆ ರಾಮಕೃಷ್ಣ ಹೆಗಡೆ ಅವರ ಹೆಸರನ್ನು ಸೂಚಿಸಿದರು. ಅದನ್ನು ಶಾಸಕಾಂಗ ಸಭೆ ತಿರಸ್ಕರಿಸದಂತೆ ನೋಡಿ ಕೊಂಡರು. ಆಗ ಬಂಗಾರಪ್ಪ ಮಾತ್ರವಲ್ಲ ಎಸ್ .ಆರ್.ಬೊಮ್ಮಾಯಿ ಮತ್ತು ದೇವೇಗೌಡರು ಮುಖ್ಯಮಂತ್ರಿಯಾಗಲು ಪೈಪೋಟಿಗಿಳಿದಿದ್ದರು. ಇವರ ಜಗಳದಲ್ಲಿ ಹೆಗಡೆಯವರು ಒಮ್ಮತದ ಅಭ್ಯರ್ಥಿ ಎಂದು ಚಂದ್ರಶೇಖರ್ ಹೇಳಿಬಿಟ್ಟರು. ಆಸಕ್ತ ಮಾಧ್ಯಮಗಳು ಹೆಗಡೆ ಅವರ ಪರವಾಗಿ ನಿಂತವು. ಹೀಗೆ ಹಿತ್ತಲ ಬಾಗಿಲಿನಿಂದ ಬಂದ ರಾಮಕೃಷ್ಣ ಹೆಗಡೆಯವರು ರಾಜ್ಯದ ಮುಖ್ಯಮಂತ್ರಿ ಯಾದರು. ಆಗ ಸದನದಲ್ಲಿ 6 ಸದಸ್ಯರನ್ನು ಹೊಂದಿದ್ದ ಸಿಪಿಐ ಮತ್ತು ಸಿಪಿಎಂಗಳು ಮತ್ತು 18 ಸದಸ್ಯರನ್ನು ಹೊಂದಿದ್ದ ಬಿಜೆಪಿಗಳು ಸರಕಾರಕ್ಕೆ ಬಾಹ್ಯ ಬೆಂಬಲವನ್ನು ನೀಡಿದವು. ತನಗಾದ ಈ ಅನ್ಯಾಯದಿಂದ ಬಂಗಾರಪ್ಪನವರು ಸಿಡಿದೆದ್ದರು. ಆಗ ಪ್ರಜಾವಾಣಿ ಮುಖ್ಯ ವರದಿಗಾರರಾಗಿದ್ದ ರಘುರಾಮ ಶೆಟ್ಟರು ಈ ಬಗ್ಗೆ ‘ಸಮ್ಮತವಲ್ಲದ ಒಮ್ಮತ’ ಎಂಬ ತಲೆ ಬರಹದಲ್ಲಿ ವಿಶೇಷ ವರದಿಯನ್ನು ಬರೆದರು. ಅದು ಪ್ರಕಟವಾಗಲಿಲ್ಲ. ಮುಂದೆ ಅಲ್ಲಿಂದ ಹೊರಗೆ ಬಂದ ಶೆಟ್ಟರು ತಮ್ಮದೇ ‘ಮುಂಗಾರು’ ದಿನಪತ್ರಿಕೆಯನ್ನು ಆರಂಭಿಸಿದರು. ರಾಜಕೀಯದಲ್ಲಿ ಇಂಥ ಅನೇಕ ರಹಸ್ಯ ಸಂಗತಿಗಳು ಬಯಲಿಗೆ ಬರುವುದೇ ಇಲ್ಲ. ಹೀಗಾಗಿ ಗತಿಸಿ ಹೋದ ರಾಜಕಾರಣಿಗಳು ಸಾವಿನ ನಂತರವೂ ಬಹು ಎತ್ತರಕ್ಕೆ ಬೆಳೆದು ಬಿಡುತ್ತಾರೆ. ಹೆಗಡೆಯವರು ವಿಲಾಸಿ ಜೀವನಕ್ಕೆ ಹೆಸರಾದವರು. ಅವರ ವೈಯಕ್ತಿಕ ಜೀವನದ ವಿವರ ಇಲ್ಲಿ ಅ ಪ್ರಸ್ತುತ. ಮುಖ್ಯಮಂತ್ರಿಯಾಗಿದ್ದಾಗ ಅವರ ಅಧಿಕಾರಾವಧಿಯಲ್ಲಿ ಹಲವಾರು ಜನಪರ ಕಾರ್ಯಕ್ರಮ ಗಳನ್ನು ರೂಪಿಸಿದರೆಂಬುದು ನಿಜ ಅಧಿಕಾರ ವಿಕೇಂದ್ರೀಕರಣ, ಪಂಚಾಯತ್ ರಾಜ್ ವ್ಯವಸ್ಥೆ, ಇದರ ಜೊತೆಗೆ ನೀರ್ ಸಾಬ್ ಎಂದೇ ಹೆಸರಾದ ಅಬ್ದುಲ್ ನಝೀರ ಸಾಹೇಬರ ಸಾಧನೆ ಇವೆಲ್ಲ ಹೆಗಡೆಯವರಿಗೆ ಹೆಸರನ್ನು ತಂದು ಕೊಟ್ಟವು. ಆದರೆ ಆ ಕಾಲಘಟ್ಟದಲ್ಲಿ ಬಂಗಾರಪ್ಪನವರಿಗೆ ವಂಚನೆ ಮತ್ತು ಅನ್ಯಾಯವಾಗಿದ್ದು ನಿಜ. ಅವರಿಗೆ ವಚನ ಕೊಟ್ಟವರು ಕೈ ಕೊಟ್ಟರು. ಮುಂದೆ ಬಂಗಾರಪ್ಪನವರು ಮತ್ತೆ ಕಾಂಗ್ರೆಸ್ ಸೇರಿ ವಿಧಾನ ಸಭೆಯ ವಿರೋಧ ಪಕ್ಷದ ನಾಯಕರಾದರು. 1983_-84 -85ರ ಆ ಕಾಲಘಟ್ಟದಲ್ಲಿ ನಾನು ‘ಸಂಯುಕ್ತ ಕರ್ನಾಟಕ’ ಪ್ರತಿನಿಧಿಯಾಗಿ ವಿಧಾನಸಭೆ ಅಧಿವೇಶನದ ಕಲಾಪದ ವರದಿ ಮಾಡಲು ಹೋಗುತ್ತಿದ್ದೆ.ಆಗ ಮುಖ್ಯ ಮಂತ್ರಿ ರಾಮಕೃಷ್ಣ ಹೆಗಡೆ ಮತ್ತು ವಿರೋಧ ಪಕ್ಷದ ನಾಯಕ ಬಂಗಾರಪ್ಪನವರ ನಡುವೆ ಸದನದಲ್ಲಿ ನಿತ್ಯವೂ ವಾಗ್ವಾದ ನಡೆಯುತ್ತಿತ್ತು. ಹೆಗಡೆ ಅವರದು ಕೊಂಚ ವ್ಯಂಗ್ಯ ಮತ್ತು ಲೇವಡಿ ಮಾಡುವ ಸ್ವಭಾವ. ಅವರು ವೀರೇಂದ್ರ ಪಾಟೀಲರ ಸಂಪುಟದಲ್ಲಿ ಹಣಕಾಸು ಸಚಿವರಾಗಿದ್ದಾಗ ಕಮ್ಯುನಿಸ್ಟ್ ನಾಯಕರಾಗಿದ್ದ ಬಿ.ವಿ.ಕಕ್ಕಿಲ್ಲಾಯರು ರೈತ ಸಂಘದ ನಿಯೋಗದ ನಾಯಕತ್ವ ವನ್ನು ವಹಿಸಿ ಅವರ ಬಳಿ ಹೋಗಿದ್ದರು. ಆಗ ಹೆಗಡೆಯವರು ಕಕ್ಕಿಲ್ಲಾಯರಿಗೆ ನಿಮಗೆ ಕೃಷಿಯ ಬಗ್ಗೆ ಗೊತ್ತುಂಟೋ ಎಂದು ವ್ಯಂಗ್ಯವಾಗಿ ಕೇಳಿದರು. ಇದಕ್ಕೆ ಅದೇ ಭಾಷೆಯಲ್ಲಿ ಉತ್ತರಿಸಿದ ಕಕ್ಕಿಲ್ಲಾಯರು ನಿಮಗೆ ಎಷ್ಟು ಗೊತ್ತಿದೆಯೋ ಅಷ್ಟು ನಮಗೂ ಗೊತ್ತುಂಟು ಎಂದು ಮಾರುತ್ತರ ನೀಡಿದರು.

ಮಾಧ್ಯಮಗಳಿಂದ ಅಂದರೆ ಬಹುತೇಕ ಪತ್ರಿಕೆಗಳಿಂದ ಮೌಲ್ಯಾಧಾರಿತ ರಾಜಕಾರಣಿ ಎಂದು ಬಿರುದಾಂಕಿತರಾದ ಹೆಗಡೆ ಅವರನ್ನು ಈಗಲೂ ಕೂಡ ಮೌಲ್ಯಾಧಾರಿತರು ಎಂದು ವರ್ಣಿಸಲಾಗುತ್ತಿದೆ. ಆದರೆ ಇದೇ ಮೌಲ್ಯಾಧಾರಿತ ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಯಾಗಿದ್ದಾಗ ಬಾಟ್ಲಿಂಗ್ ಹಗರಣ ನಡೆಯಿತು. ರೇವಜಿತು ಪ್ರಕರಣ ಬಯಲಿಗೆ ಬಂತು. ಇದನ್ನು ಸದನದಲ್ಲಿ ಬಯಲಿಗೆಳೆದ ಬಂಗಾರಪ್ಪನವರು ಮೌಲ್ಯಾಧಾರಿತರ ಬಂಡವಾಳವನ್ನು ಬಯಲಿಗೆಳೆದರು. ಅಲ್ಲಿಯ ತನಕ ಹೆಗಡೆ ಅವರನ್ನು ಬೆಂಬಲಿಸುತ್ತ ಬಂದಿದ್ದ ಲಂಕೇಶ್ ಅವರು ತಮ್ಮ ಪತ್ರಿಕೆಯಲ್ಲಿ ಹೆಗಡೆಯವರನ್ನು ಗುಳ್ಳೆನರಿ ಎಂದು ಕರೆದು ದಾಳಿ ಆರಂಭಿಸಿದರು. 1988 ರಲ್ಲಿ ದೂರವಾಣಿ ಕದ್ದಾಲಿಕೆಯ ಹಗರಣವೂ ಹೊರಬಿತ್ತು. ಹೀಗಾಗಿ ಹೆಗಡೆ ರಾಜೀನಾಮೆ ಕೊಡುವುದು ಅನಿವಾರ್ಯವಾಯಿತು.

ಹೆಗಡೆಯವರು ಮುಖ್ಯಮಂತ್ರಿಯಾಗಿದ್ದಾಗ ಎಂ.ಪಿ.ಪ್ರಕಾಶ ಅವರಿಗೆ ಆಪ್ತರಾಗಿದ್ದರು.

ಆ ಸಂದರ್ಭದಲ್ಲಿ ಪ್ರಕಾಶರ ಸಲಹೆಯಂತೆ ಬಿ.ಟಿ.ಲಲಿತಾ ನಾಯಕ್ ಮತ್ತು ಕವಿ ಸಿದ್ಧಲಿಂಗಯ್ಯ ಅವರನ್ನು ವಿಧಾನ ಪರಿಷತ್ತಿಗೆ ನಾಮಕರಣ ಮಾಡಿದರು,ನಂತರ ಲಲಿತಾ ನಾಯಕ್ ಮಂತ್ರಿಯೂ ಆದರು. ಸಾಹಿತ್ಯ, ಕಲೆ, ಸೇರಿದಂತೆ ಸಾಂಸ್ಕೃತಿಕ ಲೋಕದ ಬಗ್ಗೆ ಹೆಗಡೆ ಅವರಿಗೆ ವಿಶೇಷ ಒಲವು ಇತ್ತು. ಪ್ರಗತಿಶೀಲ ಲೇಖಕ ನಿರಂಜನ ಕೂಡ ಅವರಿಗೆ ಆಪ್ತರಾಗಿದ್ದರು. ಆದರೆ ಜನ ಚಳವಳಿಗಳನ್ನು ಹೆಗಡೆಯವರು ಎಂದೂ ಇಷ್ಟ ಪಡುತ್ತಿರಲಿಲ್ಲ.

ಹೆಗಡೆಯವರು ಅಧಿಕಾರದಲ್ಲಿದ್ದಾಗ ರೈತ ಮತ್ತು ದಲಿತ ಚಳವಳಿಗಳು ಅತ್ಯಂತ ಪ್ರಬಲವಾಗಿದ್ದವು. ಹೆಗಡೆಯವರ ಮೌನ ಸಮ್ಮತಿಯಂತೆ ರೈತ ಹೋರಾಟವನ್ನು ಹಾಸನ, ಚಿಕ್ಕ ಮಗಳೂರು ಮೊದಲಾದ ಕಡೆ ನಿರ್ದಾಕ್ಷಿಣ್ಯವಾಗಿ ಹತ್ತಿಕ್ಕಲಾಯಿತು. ಪ್ರೊ ಎಂ.ಡಿ.ನಂಜುಂಡ ಸ್ವಾಮಿ ಮತ್ತು ಎನ್.ಡಿ.ಸುಂದರೇಶ್ ಮೊದಲಾದವರನ್ನು ಬಂಧಿಸಿ ಸೆರೆಮನೆಗೆ ದೂಡಲಾಗಿತ್ತು. ದಲಿತ ಚಳವಳಿಯನ್ನು ಕೂಡ ನಯವಾದ ತಂತ್ರದ ಮೂಲಕ ಹತ್ತಿಕ್ಕಲಾಯಿತು. ದಾಂಡೇಲಿಯಲ್ಲಿ ಕಮ್ಯುನಿಸ್ಟ್ ನಾಯಕ ಆರ್.ಜಿ.ಸ್ಥಳೇಕರ ದಿಟ್ಟ ಹೋರಾಟಗಾರರಾಗಿದ್ದರು. 1984ರಲ್ಲಿ ದಾಂಡೇಲಿ ನಗರಸಭಾಧ್ಯಕ್ಷರಾಗಿ ಅವರು ಚುನಾಯಿತರಾಗಿದ್ದರು. ಸ್ಥಳೇಕರ್ ಅವರನ್ನು ಬಂಧಿಸಿ ಅಲ್ಲಿನ ಕಾರ್ಮಿಕ ಆಂದೋಲನವನ್ನು ಕೂಡ ಹತ್ತಿಕ್ಕಲಾಯಿತು.

ಹೆಗಡೆಯವರು ಮುಖ್ಯಮಂತ್ರಿಯಾದ ನಂತರ ಅವರ ರಾಜಕೀಯ ಪ್ರಭಾವ ವಿಸ್ತಾರಗೊಂಡಿತು. ಇದಕ್ಕೆ ಕಾರಣ ಉತ್ತರ ಕರ್ನಾಟಕದ ಲಿಂಗಾಯತರ ಓಟ್ ಬ್ಯಾಂಕ್. ಕರ್ನಾಟಕ ರಾಜ್ಯ ನಿರ್ಮಾಣವಾದ ನಂತರ ಲಿಂಗಾಯತರು ಮತ್ತು ಒಕ್ಕಲಿಗರು ಸರದಿಯಂತೆ ರಾಜ್ಯದ ಮುಖ್ಯಮಂತ್ರಿಯಾಗುತ್ತ ಬಂದರು. ಆದರೆ 1972ರ ವಿಧಾನ ಸಭಾ ಚುನಾವಣೆಯಲ್ಲಿ ದೇವರಾಜ ಅರಸು ನೇತೃತ್ವದ ಇಂದಿರಾ ಕಾಂಗ್ರೆಸ್ ಬಹುಮತ ಗಳಿಸಿ ಅಧಿಕಾರದ ಚುಕ್ಕಾಣಿ ಹಿಡಿಯಿತು. ವೀರಶೈವ ಲಿಂಗಾಯತ ರ ರಾಜಕೀಯ ನಾಯಕತ್ವ ಕೈತಪ್ಪಿಹೋದ ಪರಿಣಾಮವಾಗಿ ಲಿಂಗಾಯತರು ಕಾಂಗ್ರೆಸ್‌ನಿಂದ ದೂರವಾದರು. ಇಂಥ ಸನ್ನಿವೇಶದಲ್ಲಿ ಉತ್ತರ ಕರ್ನಾಟಕದ ಲಿಂಗಾಯತರು ರಾಮಕೃಷ್ಣ ಹೆಗಡೆಯವರಲ್ಲಿ ತಮ್ಮ ನಾಯಕನನ್ನು ಕಂಡು ಕೊಂಡರು. ಇದನ್ನು ಸರಿಯಾಗಿ ಉಪಯೋಗಿಸಿಕೊಂಡ ಹೆಗಡೆಯವರು ತಮ್ಮ ಕುರ್ಚಿಯನ್ನು ಭದ್ರ ಪಡಿಸಿಕೊಂಡರು. ಎಂಭತ್ತರ ದಶಕದ ಆರಂಭದಲ್ಲಿ ರಾಜ್ಯದ ಮುಖ್ಯಮಂತ್ರಿ ಆಗಿ ವಿಜೃಂಭಿಸಿದ ಹೆಗಡೆಯವರ ಪ್ರಭಾವ ತೊಂಭತ್ತರ ದಶಕದ ಆರಂಭದಲ್ಲಿ ಇಳಿ ಮುಖವಾಗತೊಡಗಿತು. 1996 ರಲ್ಲಿ ಬಿಜೆಪಿಯೇತರ ಪಕ್ಷಗಳು ಒಂದು ಗೂಡಿ ಸರಕಾರ ರಚಿಸುವ ಸಂದರ್ಭದಲ್ಲಿ ಪ್ರಧಾನಿಯಾಗುವ ಪ್ರಸ್ತಾವ ಕಮ್ಯುನಿಸ್ಟ್ ನಾಯಕ ಜ್ಯೋತಿ ಬಸು ಅವರ ಮನೆಯ ಬಾಗಿಲಿಗೆ ಬಂತು. ಆದರೆ ಅವರ ಪಕ್ಷ ಸಿಪಿಎಂ ಅದನ್ನು ತಿರಸ್ಕರಿಸಿತು. ಆಗ ಕಮ್ಯುನಿಸ್ಟ್ ನಾಯಕ ಹರಕಿಷನ್ ಸಿಂಗ್ ಸುರ್ಜಿತ್ ಎಚ್.ಡಿ.ದೇವೇಗೌಡರ ಹೆಸರು ಸೂಚಿಸಿದರು. ಅದಕ್ಕೆ ಎಲ್ಲರ ಬೆಂಬಲ ದೊರಕಿತು. ಗೌಡರು ಪ್ರಧಾನಿಯಾದರು. ಇದನ್ನು ಸಹಿಸಲು ಆಗದೇ ಹೆಗಡೆಯವರು ಹೊಟ್ಟೆ ಉರಿದು ಕೊಂಡರು. ಪತ್ರಿಕಾ ಗೋಷ್ಠಿ ಕರೆದು ಬಾಯಿಗೆ ಬಂದಂತೆ ಬೈದರು.ಗೌಡರಿಗೆ ಇಂಗ್ಲಿಷ್ ಬರುವುದಿಲ್ಲ ಎಂದೆಲ್ಲ ಲೇವಡಿ ಮಾಡಿದರು. ಆಗ ಜನತಾ ಪಕ್ಷದ ಅಧ್ಯಕ್ಷರಾಗಿದ್ದ ಲಾಲು ಪ್ರಸಾದ್ ಯಾದವ್ ಹೆಗಡೆಯವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿದರು. ಹೆಗಡೆಯವರು ಜನತಾ ಪಕ್ಷದಿಂದ ಹೊರಗೆ ಬಂದು ಲೋಕಶಕ್ತಿ ಎಂಬ ಹೊಸ ಪಕ್ಷವನ್ನು ಹುಟ್ಟು ಹಾಕಿದರು.ತಾವು ವಿರೋಧಿಸುತ್ತ ಬಂದಿದ್ದ ಕೋಮುವಾದಿ ಬಿಜೆಪಿಯ ಜೊತೆಗೆ ಕೈಜೋಡಿಸಿದರು. ಹೆಗಡೆ ಅವರು ಈಗ ನಮ್ಮ ನಡುವೆ ಇಲ್ಲ.ಇಲ್ಲದ ವ್ಯಕ್ತಿಯ ಬಗ್ಗೆ ಕಟುವಾಗಿ ಬರೆಯಬಾರದು ಎಂಬುದು ನಿಜ. ಆದರೆ ಇತಿಹಾಸದ ಪುಟಗಳನ್ನು ತಿರುವಿ ಹಾಕುವಾಗ ಯಾವುದೇ ವ್ಯಕ್ತಿಯನ್ನು ಅಥವಾ ಘಟನೆಯನ್ನು ವೈಭವೀಕರಿಸುವಾಗ ವಾಸ್ತವ ಸಂಗತಿಗಳನ್ನು ಮರೆ ಮಾಚಬಾರದು. ಸತ್ಯವನ್ನು ಮುಚ್ಚಿಡಬಾರದು. ಯಾವುದೇ ವ್ಯಕ್ತಿಯ ವೈಯಕ್ತಿಕ ಬದುಕಿನ ಬಗ್ಗೆ ನಿಂದನೆಯನ್ನು ಮಾಡಬಾರದು. ಆದರೆ ಸಾರ್ವಜನಿಕ ಕ್ಷೇತ್ರದ ವ್ಯಕ್ತಿಯ ಬಗ್ಗೆ ಬರೆಯುವಾಗ ಸತ್ಯಕ್ಕೆ ಮೋಸ ಮಾಡಬಾರದು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಸನತ್ ಕುಮಾರ ಬೆಳಗಲಿ

contributor