ದತ್ತ ಪಾದುಕೆಯ ನೈಜ ಕತೆ

ದತ್ತಪೀಠದಲ್ಲಿರುವ ಕಾರ್ಪೆಂಟರ್ ಮಾಡಿದ ಮರದ ಚಪ್ಪಲಿಯನ್ನು ದತ್ತ ಪಾದುಕೆಗಳು ಎಂದು ನಂಬಿಸುವಲ್ಲಿ ಯಶಸ್ವಿ ಯಾದವರು ಮುಂದೆ ಕಲ್ಲಡ್ಕ ಪ್ರಭಾಕರ ಭಟ್ಟರ ಸಲಹೆಯಂತೆ ದತ್ತ ಜಯಂತಿಯ ಮುನ್ನಾ ದಿನ ಅನುಸೂಯಾ ಜಯಂತಿ ಮಾಡಲು ಆರಂಭಿಸಿದರು. ಅನುಸೂಯಾ ದತ್ತಾತ್ರೇಯನ ತಾಯಿ, ಆಕೆಯ ಜಯಂತಿಯನ್ನು ಮಾಡುವ ಮೂಲಕ ಹಿಂದೂ ಮಹಿಳೆಯರನ್ನು ದತ್ತ ಪೀಠಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸಬೇಕು ,ಮಕ್ಕಳಾಗದ ಮಹಿಳೆಯರು ದತ್ತಪೀಠಕ್ಕೆ ಬಂದರೆ ಮಕ್ಕಳಾಗುತ್ತವೆ ಎಂದು ಜನ ನಂಬುವಂತೆ ವ್ಯಾಪಕ ಪ್ರಚಾರ ಮಾಡಲು ಭಟ್ಟರು ಸಲಹೆ ಮಾಡಿದರು.ಈ ತಂತ್ರ ಯಶಸ್ವಿಯಾಯಿತು, ಮಹಿಳೆಯರೂ ಹೆಚ್ಚಿನ ಸಂಖ್ಯೆಯಲ್ಲಿ ದತ್ತ ಪೀಠಕ್ಕೆ ಬರಲಾರಂಭಿಸಿದರು ಎಂದು ಮಹೇಂದ್ರ ಕುಮಾರ್ ಅಸಲಿ ಕತೆಯನ್ನು ಬಿಚ್ಚಿಟ್ಟಿದ್ದಾರೆ.

Update: 2024-03-25 04:48 GMT

ಈಗ ನಮ್ಮ ನಡುವೆಯಿಲ್ಲದ ಮಹೇಂದ್ರ ಕುಮಾರ್ ಅವರ ಅನುಭವ ಕಥನ ಓದುವಾಗ ಅನೇಕ ರಹಸ್ಯಗಳು ಬಯಲಿಗೆ ಬಂದವು. ನವೀನ್ ಸೂರಿಂಜೆಯವರು ಮಹೇಂದ್ರ ಕುಮಾರ್ ಬರೆದ ಅಪೂರ್ಣ ಆತ್ಮಕತೆ ಮತ್ತು ಅವರ ಒಡನಾಡಿಗಳು ಆಡಿದ ಮಾತುಗಳನ್ನು ಸಂಗ್ರಹಿಸಿ ರೂಪಿಸಿದ ಬಜರಂಗದಳದ ಮಾಜಿ ನಾಯಕನ ಈ ಆತ್ಮಕತೆ, ಬರೀ ಒಬ್ಬ ವ್ಯಕ್ತಿಯ ಜೀವನಗಾಥೆಯಲ್ಲ, ಭಾರತದ ಮತ್ತು ಕರ್ನಾಟಕದ ಇಂದಿನ ಪರಿಸ್ಥಿತಿಯ ಹಿಂದಿನ ಚರಿತ್ರೆಯ ಮೇಲೆ ಹೊಸ ಬೆಳಕು ಚೆಲ್ಲುತ್ತದೆ.

ಈ ಮಹೇಂದ್ರ ಕುಮಾರ್ ಅವರನ್ನು ನಾನು ಮೊದಲು ನೋಡಿದ್ದು 2001 ರಲ್ಲಿ. ಶೃಂಗೇರಿಯಲ್ಲಿ ತುಂಗಾ ಮೂಲ ರಕ್ಷಿಸಿ ಹಾಗೂ ಗಣಿಗಾರಿಕೆ ವಿರೋಧಿಸಿ ನಡೆದ ಸಮಾವೇಶ. ಕಲ್ಕುಳಿ ವಿಠಲ್ ಹೆಗ್ಡೆ ಸಂಘಟಿಸಿದ್ದರು. ಮೇಧಾ ಪಾಟ್ಕರ್ ಮುಖ್ಯ ಅತಿಥಿಯಾಗಿ ಬಂದಿದ್ದರು. ನಾನು, ದೊರೆಸ್ವಾಮಿ, ಶಿವಸುಂದರ್, ಸಿರಿಮನೆ ನಾಗರಾಜ, ಮೊದಲಾದವರು ಬೆಂಗಳೂರಿನಿಂದ ಹೋಗಿದ್ದೆವು. ಅಲ್ಲಿ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಪುಸ್ತಕಗಳನ್ನು ಒಂದು ಮೇಜಿನ ಮೇಲಿಟ್ಟು ಮಾರಾಟ ಮಾಡುತ್ತಿದ್ದರು. ಆ ಪುಸ್ತಕಗಳಲ್ಲಿ ಕರ್ನಾಟಕ ವಿಮೋಚನಾ ರಂಗ ಪ್ರಕಟಿಸಿದ ಕೋಮುವಾದದ ಅಪಾಯ ಕುರಿತು ಎಚ್ಚರಿಸುವ ಒಂದೆರಡು ಪುಸ್ತಕಗಳಿದ್ದವು. ಸಮಾವೇಶಕ್ಕೆ ದೂರದ ಅರಣ್ಯ ಪ್ರದೇಶಗಳಿಂದ ಮೂಲ ನಿವಾಸಿಗಳು, ಬುಡಕಟ್ಟು ಸಮುದಾಯದ ಜನ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದರು. ಆಗ ಅಲ್ಲಿಗೆ ಒಮ್ಮಿಂದೊಮ್ಮೆಲೆ ಬಂದ ರಾಜ್ಯ ಬಜರಂಗದಳದ ಸಂಚಾಲಕ ಮಹೇಂದ್ರ ಕುಮಾರ್ ಕೋಮುವಾದವನ್ನು ವಿರೋಧಿಸುವ ಪುಸ್ತಕಗಳನ್ನು ಮಾರಾಟ ಮಾಡಬಾರದೆಂದು ತಡೆಯಲು ಯತ್ನಿಸಿದರು. ಆಗ ಮಾತಿಗೆ ಮಾತು ಬೆಳೆದು ಘರ್ಷಣೆ ಆಯಿತು. ಪೊಲೀಸರು ನಿಷೇಧಾಜ್ಞೆ ಘೋಷಿಸಿದರು. ನಿಷೇಧಾಜ್ಞೆ ಘೋಷಣೆ ನಂತರ ಪರಿಸ್ಥಿತಿ ಪ್ರಕ್ಷುಬ್ದವಾಯಿತು. ಪೊಲೀಸರು, ನಮ್ಮನ್ನು ಅಂದರೆ ದೊರೆಸ್ವಾಮಿ, ರವಿವರ್ಮಕುಮಾರ್, ಕೆ.ರಾಮದಾಸ್, ಮೊದಲಾದ ವರನ್ನು ಸುರಕ್ಷಿತವಾಗಿ ಶಿವಮೊಗ್ಗಕ್ಕೆ ಸಾಗಿಸಿದರು. ಆ ನಂತರ ಎಲ್ಲ ಮರೆತೇ ಹೋಗಿರುವಾಗ ಐದಾರು ವರ್ಷಗಳ ಹಿಂದೆ ಒಂದು ದಿನ ಫೋನ್ ರಿಂಗಣಿಸಿತು. ಕರೆಯನ್ನು ಸ್ವೀಕರಿಸಿದಾಗ ತಾನು ಮಹೇಂದ್ರ ಕುಮಾರ್ ಎಂದು ಪರಿಚಯಿಸಿಕೊಂಡರು. ನಿಮ್ಮ ಲೇಖನಗಳನ್ನು ತಪ್ಪದೇ ಓದುತ್ತಿರುವೆ, ನಾನು ಬದಲಾಗಲೂ ಅವು ಕೂಡ ಪ್ರೇರಣೆ ಎಂದು ಹೇಳಿದ ಮಹೇಂದ್ರ ಕುಮಾರ್, ಗಾಂಧಿ ಭವನದಲ್ಲಿ ಬಜರಂಗದಳದಿಂದ ಹೊರಗೆ ಬಂದವರೆಲ್ಲ ಕಾರ್ಯಕ್ರಮ ಇಟ್ಟಿದ್ದೇವೆ. ನೀವು ಬರಲೇಬೇಕೆಂದು ಒತ್ತಾಯಿಸಿದರು. ನಾನು ಒಪ್ಪಿ ಕಾರ್ಯಕ್ರಮಕ್ಕೆ ಹೋದೆ. ಅಲ್ಲಿ ನಿಕೇತರಾಜ್ ಮತ್ತು ಸುಧೀರ್ ಕುಮಾರ್‌ಮರೊಳ್ಳಿ ಪರಿಚಯವಾಯಿತು. ನಂತರ ಮಹೇಂದ್ರ ಕುಮಾರ್ ಅಕಾಲಿಕವಾಗಿ ನಿರ್ಗಮಿಸಿದರು.

ಈ ಪುಸ್ತಕ ಓದುವಾಗ 2001-2006ರ ಆ ದಿನಗಳು ನೆನಪಿಗೆ ಬಂದವು.ಪ್ರತಿವರ್ಷ ಡಿಸೆಂಬರ್ ತಿಂಗಳು ಬಂತೆಂದರೆ ನಾವೆಲ್ಲ ಚಿಕ್ಕಮಗಳೂರಿನ ಬಾಬಾ ಬುಡಾನ್‌ಗಿರಿಯಲ್ಲಿ ಸೇರುತ್ತಿದ್ದೆವು. ಅದೇ ಸಮಯದಲ್ಲಿ ಸಂಘ ಪರಿವಾರದವರು ಪ್ರತಿವರ್ಷ ದತ್ತ ಜಯಂತಿ ಕಾರ್ಯಕ್ರಮ ನಡೆಸಿ ಇದು ದತ್ತಾತ್ರೇಯನ ಕ್ಷೇತ್ರ. ಈ ಕಾರಣಕ್ಕೆ ಇದನ್ನು ತಮಗೆ ಬಿಟ್ಟು ಕೊಡಬೇಕೆಂದು ಅತ್ಯಂತ ಪ್ರಚೋದನಕಾರಿ ಘೋಷಣೆಗಳೊಂದಿಗೆ ಮೆರವಣಿಗೆ ನಡೆಸುತ್ತಿದ್ದರು. ಕೋಮು ಸೌಹಾರ್ದ ವೇದಿಕೆಯಿಂದ ನಾವೂ ಸೌಹಾರ್ದ ಸಮಾವೇಶ ನಡೆಸುತ್ತಿದ್ದೆವು. ನಮ್ಮ ಸಮಾವೇಶದಲ್ಲಿ ಆಂಧ್ರಪ್ರದೇಶದ ಕ್ರಾಂತಿಕಾರಿ ಕವಿ,ಗಾಯಕ ಗದ್ದರ್, ದೇವನೂರ ಮಹಾದೇವ, ಕೆ.ರಾಮದಾಸ್, ಕುಂ.ವೀರಭದ್ರಪ್ಪ, ಜಿ.ಕೆ.ಗೋವಿಂದ ರಾವ್, ಗೌರಿ ಲಂಕೇಶ್ ಹಾಗೂ ನಾಡಿನ ಪ್ರಗತಿಪರ ಸ್ವಾಮಿಗಳು ಹೀಗೆ ಅನೇಕರು ಪಾಲ್ಗೊಳ್ಳುತ್ತಿದ್ದರು. ಆಗ ಮಹೇಂದ್ರ ಕುಮಾರ್ ಬಜರಂಗದಳದ ಬಹುದೊಡ್ಡ ನಾಯಕ. ಸಿ.ಟಿ.ರವಿ, ಸುನೀಲ್ ಕುಮಾರ್ ಅತ್ಯಂತ ಸಾಮಾನ್ಯ ಕಾರ್ಯಕರ್ತರು. ಮುಂದೆ ದತ್ತನ ಹೆಸರು ಹೇಳಿ ಇವರು ಶಾಸಕರೂ ಆದರು.ಆದರೆ ಚರ್ಚ್ ಮೇಲೆ ದಾಳಿಯ ಪ್ರಕರಣದಲ್ಲಿ ಮಹೇಂದ್ರ ಕುಮಾರ್ ಜೈಲು ಪಾಲಾದರು. ಮಹೇಂದ್ರ ಕುಮಾರ್ ಜೈಲಿಗೆ ಹೋದ ಕತೆಯನ್ನು ಈ ಪುಸ್ತಕದಲ್ಲಿ ಅತ್ಯಂತ ವಿವರವಾಗಿ ದಾಖಲಿಸಲಾಗಿದೆ.

► ದತ್ತ ಪಾದುಕೆಯಾದ ಕತೆ

ಬಾಬಾ ಬುಡಾನಗಿರಿಯಲ್ಲಿ ಮೊದಲು ಯಾವುದೇ ಪಾದುಕೆಗಳಿರಲಿಲ್ಲ.ಅಲ್ಲಿ ದತ್ತ ಪಾದುಕೆಗಳು ಹೇಗೆ ಬಂದವು? ಎಂಬ ಬಗ್ಗೆ ನನಗೆ ಮೊದಲಿನಿಂದಲೂ ಕುತೂಹಲ ವಿತ್ತು. ಈ ಪ್ರಶ್ನೆಗೆ ಈ ಪುಸ್ತಕದಲ್ಲಿ ಉತ್ತರವಿದೆ.ಮಹೇಂದ್ರ ಕುಮಾರ್ ಅವರ ಭಾಷೆಯಲ್ಲೇ ಓದಿ...

1997 ರಲ್ಲಿ ನಾನು ಬಜರಂಗದಳದ ಜಿಲ್ಲಾ ಸಂಚಾಲಕನಾದೆ. ಚಿಕ್ಕಮಗಳೂರು ಜಿಲ್ಲಾ ಸಂಚಾಲಕನಾಗಿದ್ದ ಸುನಿಲ್ ಕುಮಾರ್ ರಾಜ್ಯ ಸಂಚಾಲಕರಾಗಿ ನೇಮಕಗೊಂಡರು. ಆಗ ನಮ್ಮ ಕೈಯಲ್ಲಿ ಚಿಲ್ಲರೆ ಹಣ ಓಡಾಡುತ್ತಿತ್ತು. ದತ್ತಾತ್ರೇಯನ ಹೆಸರಲ್ಲಿ ಹಣ ಸಂಗ್ರಹ ಮಾಡುತ್ತಿದ್ದೆವು.

ನಾನು ಜಿಲ್ಲಾ ಸಂಚಾಲಕನಾಗುತ್ತಿದ್ದಂತೆ ಪೂರ್ತಿ ಹುಮ್ಮಸ್ಸಿನಿಂದ ಕೆಲಸ ಮಾಡಲಾರಂಭಿಸಿದೆ. ರಾತ್ರಿ ಹಗಲು ಬಜರಂಗದಳದ ಧ್ಯಾನವೊಂದು ಬಿಟ್ಟು ಇನ್ನೇನೂ ಇರಲಿಲ್ಲ. ಬೈಠಕ್‌ಗಳ ಮೇಲೆ ಬೈಠಕ್ ನಡೆಸಲಾರಂಭಿಸಿದೆ. ಸೊನ್ನೆ ಸಂಖ್ಯೆಯ ಸದಸ್ಯರನ್ನು ಹೊಂದಿದ್ದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಬಜರಂಗದಳವನ್ನು ಬಲಿಷ್ಠವಾಗಿ ಕಟ್ಟಿ ಬೆಳೆಸಿದೆ. ಚಿಕ್ಕಮಗಳೂರಿನ ಯಾವ ತಾಲೂಕಿನ ಯಾವ ಹಳ್ಳಿಯನ್ನೂ ನಾನು ಬಿಡಲಿಲ್ಲ. ಗಲ್ಲಿ ಗಲ್ಲಿ, ಮನೆ ಮನೆ ತಿರುಗಿ ದತ್ತಾತ್ರೇಯನ ಹೆಸರಲ್ಲಿ ಬಜರಂಗದಳವನ್ನು ಕಟ್ಟಿದೆವು.

ಅದೊಂದು ಬೈಠಕ್‌ನಲ್ಲಿ ಮತ್ತೆ ರಥಯಾತ್ರೆ ಮಾಡುವ ನಿರ್ಧಾರ ತೆಗೆದುಕೊಂಡೆವು. ‘ದತ್ತಪೀಠದಲ್ಲಿ ದತ್ತನ ಪಾದುಕೆಗಳು ಇವೆಯಂತೆ. ಅದನ್ನು ತಂದು ರಥದ ಶೋಭಾಯಾತ್ರೆಯಲ್ಲಿ ಇಡಬೇಕು. ಹಾಗೆ ದತ್ತನ ಪಾದುಕೆಗಳ ಶೋಭಾಯಾತ್ರೆ ನಡೆಸಿದರೆ ಜನರಿಂದ ಅಭೂತಪೂರ್ವ ಬೆಂಬಲ ಸಿಗುತ್ತದೆ. ಭಾವನಾತ್ಮಕವಾಗಿಯೂ ರಥಯಾತ್ರೆ ಜನರಿಗೆ ನಾಟುತ್ತದೆ’ ಎಂಬ ಅಭಿಪ್ರಾಯ ಬೈಠಕ್‌ನಲ್ಲಿ ವ್ಯಕ್ತವಾಯಿತು. ನಿಜ ಹೇಳಬೇಕೆಂದರೆ ನಾನೂ ದತ್ತಪೀಠವನ್ನು ಸರಿಯಾಗಿ ನೋಡಿರಲಿಲ್ಲ. ಅದಾಗಲೇ ದತ್ತಪೀಠಕ್ಕಾಗಿ ಹಲವು ವರ್ಷಗಳಿಂದ ಹೋರಾಟ ಮಾಡುತ್ತಿದ್ದರೂ ದತ್ತಪೀಠದಲ್ಲಿ ಪಾದುಕೆಗಳು ಇದೆಯೋ ಇಲ್ಲವೋ ಎಂಬುದು ನಮಗೆ ಗೊತ್ತಿರಲಿಲ್ಲ.

ನಾನು, ಮೋಹನ್ ಮನಸೋಳಿ, ಭೋಜರಾಜ್ ಅದೊಂದು ದಿನ ದತ್ತಪೀಠದ ಪಾದುಕೆಗಳನ್ನು ನೋಡಿಕೊಂಡು ಬರಲು ಹೊರಟೆವು. ದತ್ತಪೀಠದ ಒಳಭಾಗದಲ್ಲಿ ಒಂದು ನಂದಾದೀಪ, ಹೊರಭಾಗದಲ್ಲಿ ಒಂದು ತುಳಸೀಕಟ್ಟೆ ಹೊರತುಪಡಿಸಿದರೆ ದತ್ತಪೀಠ ಹಿಂದೂಗಳದ್ದು ಎನ್ನುವುದಕ್ಕೆ ಯಾವ ಪುರಾವೆಯೂ ಅಲ್ಲಿ ಸಿಗಲಿಲ್ಲ. ದತ್ತಾತ್ರೇಯನ ಪಾದುಕೆಗಳು ಬಿಡಿ, ದತ್ತಾತ್ರೇಯ ಇಲ್ಲಿ ತಪಸ್ಸು ಮಾಡಿದ್ದರು ಎಂಬುದಕ್ಕೆ ಸಣ್ಣ ಕುರುಹುಗಳೂ ಇರಲಿಲ್ಲ. ಎಲ್ಲಿ ನೋಡಿದರೂ ಹಸಿರು ಚಾದರ, ಗೋರಿಗಳಷ್ಟೇ ಕಾಣುತ್ತಿದ್ದವು.

ನಾವು ದತ್ತಪೀಠದಿಂದ ಮರಳಿ ಬಂದವರೇ ಇನ್ನೊಂದು ಬೈಠಕ್ ಸೇರಿದೆವು. ದತ್ತಪೀಠವನ್ನು ನಮ್ಮದಾಗಿಸಿಕೊಳ್ಳಲು ನಾವು ಶೂನ್ಯದಿಂದ ಕೆಲಸ ಮಾಡಬೇಕು. ದತ್ತನ ಪಾದುಕೆಗಳನ್ನು ಜನರ ಮುಂದೆ ಇಡಬೇಕು. ಆದರೆ ದತ್ತಪೀಠದಲ್ಲಿ ದತ್ತನ ಪಾದುಕೆಗಳು ಇಲ್ಲ.

ತರೀಕೆರೆಯ ಬಜರಂಗದಳದ ಮಂಡಲವು ಅದಕ್ಕೆ ಉಪಾಯ ಸೂಚಿಸಿತು. ತರೀಕೆರೆಯ ಬಡಗಿಯಿಂದ ದತ್ತನ ಮರದ ಪಾದುಕೆಯನ್ನು ಮಾಡಿಸುವುದು ಎಂಬ ಸಲಹೆ ನೀಡಿತು. ತರೀಕೆರೆಯ ಕಾರ್ಪೆಂಟರ್ ಮೂರ್ತಿ ಎಂಬವರು ಸುಂದರವಾದ ಆದರೆ ಹಳೆಯ ರೀತಿ ಕಾಣುವ ಪಾದುಕೆಯನ್ನು ಮಾಡಿಕೊಟ್ಟರು. ಆ ಪಾದುಕೆಗೆ ಬೆಳ್ಳಿಯ ಕವಚವನ್ನೂ ಹಾಕುವಂತೆ ಅದೇ ಕಾರ್ಪೆಂಟರಿಗೆ ಸೂಚಿಸಿದೆವು. ‘ಬೆಳ್ಳಿಯ ಕವಚ ಎಂದರೆ ಸ್ವಲ್ಪ ಜಾಸ್ತಿ ಖರ್ಚಾಗುತ್ತದೆ’ ಎಂದು ಕಾರ್ಪೆಂಟರ್ ಮೂರ್ತಿ ಹೇಳಿದರು. ಖರ್ಚು ಎಷ್ಟಾದರೂ ಆಗಲಿ, ಕೊಡುತ್ತೇವೆ ಎಂದೆವು. ಕೆಲ ದಿನಗಳಲ್ಲಿ ದತ್ತಾತ್ರೇಯ ಬೆಳ್ಳಿ ಲೇಪಿತ ಮರದ ಪಾದುಕೆ ಸಿದ್ಧವಾಯ್ತು. ನಮ್ಮ ರಥದಲ್ಲಿ ಸರ್ವ ರೀತಿಯ ಅಲಂಕಾರಗಳನ್ನು ಮಾಡಿ ದತ್ತ ಪಾದುಕೆಯನ್ನು ಮುಂದೆ ಇರಿಸಲಾಯಿತು. ದತ್ತನ ಪಾದುಕೆಗಳನ್ನು ನೋಡಲು ಜನ ಮುಗಿ ಬಿದ್ದರು.

‘ಬಜರಂಗದಳಕ್ಕೆ ದೇಣಿಗೆಯ ಮಹಾಪೂರ ಹರಿದು ಬಂತು, ಅದಕ್ಕಿಂತಲೂ ಮುಖ್ಯವಾಗಿ ಈಗ ದತ್ತನ ರಥಯಾತ್ರೆಯನ್ನು ತಡೆಯುವ ಧೈರ್ಯ ಯಾರಿಗೂ ಇರಲಿಲ್ಲ. ಖಾಲಿ ನಾಲ್ಕು ರಥ ಹೊರಟಿದ್ದಾಗ ಸಾಣೇಹಳ್ಳಿ ಶ್ರೀಗಳು ರಥವನ್ನು ತಡೆದಿತ್ತು. ಪೊಲೀಸರು, ಜಿಲ್ಲಾಡಳಿತ ಕೂಡಾ ರಥವನ್ನು ತಡೆದಿದ್ದರು. ಆದರೆ ಈಗ ದತ್ತನ ಪಾದುಕೆ ಹೊತ್ತಿರುವ ರಥವನ್ನು ತಡೆಯಲು ಯಾರಿಗೂ ತಾಕತ್ತು ಇಲ್ಲ. ಒಂದು ವೇಳೆ ದತ್ತ ಪಾದುಕೆ ಹೊತ್ತಿದ್ದ ಈ ಯಾತ್ರೆಯನ್ನು ತಡೆದರೆ ಹಿಂದೂ ಸಮಾಜ ರೊಚ್ಚಿಗೇಳುವ ಸಾಧ್ಯತೆ ಇತ್ತು.

ನಾವು ಆರು ಜನರಿಗೆ ಹೊರತುಪಡಿಸಿ ಉಳಿದವರು ಯಾರಿಗೂ ದತ್ತಪಾದುಕೆಯ ರಹಸ್ಯ ತಿಳಿದಿಲ್ಲ. ಇಡೀ ಹಿಂದೂ ಸಮುದಾಯ ಅದು ದತ್ತಾತ್ರೇಯರೇ ಬಳಸಿದ ಪಾದುಕೆ ಎಂದು ತಿಳಿದಿತ್ತು.

ಈಗ ನಾವು ಗಟ್ಟಿಯಾಗಿದ್ದೆವು. ಜನಬಲ, ಹಣ ಬಲ ಎಲ್ಲವೂ ನಮ್ಮ ಜೊತೆಗಿತ್ತು. ಸರಕಾರ ಮತ್ತು ಜಿಲ್ಲಾಡಳಿತ ನಮ್ಮ ಜೊತೆ ಇರಲಿಲ್ಲ. ಅವರು ನಾಲ್ಕು ಕೇಸು ಹಾಕಿ ಜೈಲಿಗೆ ಹಾಕುವುದು ಬಿಟ್ಟರೆ ಇನ್ನೇನೂ ಮಾಡಲು ಆಗುತ್ತಿರಲಿಲ್ಲ.

ನಾನು ದತ್ತಾತ್ರೇಯನ ಹೆಸರಲ್ಲಿ ಸಂಗ್ರಹವಾದ ಹಣದ ಚಿಕ್ಕಾಸು ಮುಟ್ಟುತ್ತಿರಲಿಲ್ಲ. ಅದು ದತ್ತ ಹೋರಾಟಕ್ಕೆ ಮಾತ್ರ ಸೀಮಿತವಾಗಿತ್ತು. ನನ್ನ ಕೇಸುಗಳಿಗೂ ಅದನ್ನು ಬಳಸುತ್ತಿರಲಿಲ್ಲ.

‘‘ಈ ಮಧ್ಯೆ ದತ್ತ ಪಾದುಕೆ ಮಾಡಿಕೊಟ್ಟಿದ್ದ ಕಾರ್ಪೆಂಟರ್ ಮೂರ್ತಿಯವರು ನಮ್ಮನ್ನು ಸಂಪರ್ಕಿಸಿ ಪಾದುಕೆ ಮಾಡಿರುವುದರ ಹಣ ಕೊಡುವಂತೆ ಕೇಳಿಕೊಂಡರು. ನಮ್ಮ ಹುಡುಗರು ಮೂರ್ತಿಗೆ ಸರಿಯಾಗಿ ಹೊಡೆದು ಕಳಿಸಿದರು. ಇವತ್ತು ಇಡೀ ಸರಕಾರ ಆ ದತ್ತ ಪಾದುಕೆಗೆ ಕೈ ಮುಗಿಯುತ್ತಿದೆ. ಇಡೀ ಹಿಂದೂ ಸಮುದಾಯ ಅದೇ ದತ್ತ ಪಾದುಕೆಗೆ ಸಾಷ್ಟಾಂಗ ನಮಸ್ಕಾರ ಮಾಡುತ್ತದೆ. ಆ ದತ್ತ ಪಾದುಕೆಯಿಂದಲೇ ಹಲವರು ಶಾಸಕರಾದರು, ಮಂತ್ರಿಗಳಾದರು. ಆ ದತ್ತಪಾದುಕೆಯನ್ನು ಕಾಯಲು ಐಎಎಸ್ ಮಾಡಿರುವ ಜಿಲ್ಲಾಧಿಕಾರಿಗೆ ಉಸ್ತುವಾರಿ ನೀಡಲಾಗಿದೆ.

ಚುನಾವಣಾ ರಾಜಕೀಯ, ಕೋಮುವಾದಿ ಅಜೆಂಡಾ ಜಾರಿಗಾಗಿ ಎಂತೆಂಥ ಮಸಲತ್ತುಗಳು ನಡೆದವು ಎಂಬುದರ ಮೇಲೆ ಈ ಪುಸ್ತಕ ಬೆಳಕು ಚೆಲ್ಲಿದೆ.

ದತ್ತಪೀಠದಲ್ಲಿರುವ ಕಾರ್ಪೆಂಟರ್ ಮಾಡಿದ ಮರದ ಚಪ್ಪಲಿಯನ್ನು ದತ್ತ ಪಾದುಕೆಗಳು ಎಂದು ನಂಬಿಸುವಲ್ಲಿ ಯಶಸ್ವಿ ಯಾದವರು ಮುಂದೆ ಕಲ್ಲಡ್ಕ ಪ್ರಭಾಕರ ಭಟ್ಟರ ಸಲಹೆಯಂತೆ ದತ್ತ ಜಯಂತಿಯ ಮುನ್ನಾ ದಿನ ಅನುಸೂಯಾ ಜಯಂತಿ ಮಾಡಲು ಆರಂಭಿಸಿದರು. ಅನುಸೂಯಾ ದತ್ತಾತ್ರೇಯನ ತಾಯಿ, ಆಕೆಯ ಜಯಂತಿಯನ್ನು ಮಾಡುವ ಮೂಲಕ ಹಿಂದೂ ಮಹಿಳೆಯರನ್ನು ದತ್ತ ಪೀಠಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸಬೇಕು ,ಮಕ್ಕಳಾಗದ ಮಹಿಳೆಯರು ದತ್ತಪೀಠಕ್ಕೆ ಬಂದರೆ ಮಕ್ಕಳಾಗುತ್ತವೆ ಎಂದು ಜನ ನಂಬುವಂತೆ ವ್ಯಾಪಕ ಪ್ರಚಾರ ಮಾಡಲು ಭಟ್ಟರು ಸಲಹೆ ಮಾಡಿದರು.ಈ ತಂತ್ರ ಯಶಸ್ವಿಯಾಯಿತು, ಮಹಿಳೆಯರೂ ಹೆಚ್ಚಿನ ಸಂಖ್ಯೆಯಲ್ಲಿ ದತ್ತ ಪೀಠಕ್ಕೆ ಬರಲಾರಂಭಿಸಿದರು ಎಂದು ಮಹೇಂದ್ರ ಕುಮಾರ್ ಅಸಲಿ ಕತೆಯನ್ನು ಬಿಚ್ಚಿಟ್ಟಿದ್ದಾರೆ.

ಮಲೆನಾಡನ್ನು ಕೋಮುವಾದೀಕರಣಗೊಳಿಸುವ ಸಂಘ ಪರಿವಾರದ ಮಸಲತ್ತಿಗೆ ಮೊದಲು ಅಡ್ಡಿಯಾದವರಲ್ಲಿ ಸಾಣೇಹಳ್ಳಿ ಶ್ರೀಗಳು ಪ್ರಮುಖರು. 1997 ರಲ್ಲಿ ತರೀಕೆರೆ, ಬೀರೂರು, ಕಡೂರು ಭಾಗ ಸೇರಿದಂತೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಬಜರಂಗದಳ ರಥಯಾತ್ರೆಯನ್ನು ಸಂಘಟಿಸಲು ಮುಂದಾದಾಗ ಸಾಣೇಹಳ್ಳಿ ಶ್ರೀಗಳು ಅಲ್ಲಲ್ಲಿ ಸಭೆಗಳನ್ನು ನಡೆಸಿ ಯಾವುದೇ ಕಾರಣಕ್ಕೂ ಬಜರಂಗದಳದ ರಥಯಾತ್ರೆಗೆ ನಿಮ್ಮ ಗ್ರಾಮದಲ್ಲಿ ಪ್ರವೇಶ ಕೊಡಬೇಡಿ ಎಂದು ಜನರನ್ನು ಎಚ್ಚರಿಸುತ್ತಾರೆ. ಹೀಗಾಗಿ ರಥಯಾತ್ರೆಗೆ ಹೇಗೆ ತೊಂದರೆಯಾಯಿತು. ಅದನ್ನು ಹೇಗೆ ನಿವಾರಿಸಲಾಯಿತು ಎಂಬುದನ್ನು ಮಹೇಂದ್ರ ಕುಮಾರ್ ವಿವರವಾಗಿ ಬರೆದಿದ್ದಾರೆ.

ಸಂಘ ಪರಿವಾರದಿಂದ ತಾನೂ ಸೇರಿದಂತೆ ಹಿಂದುಳಿದ ಸಮುದಾಯಗಳ ತರುಣರು ಹೇಗೆ ದಾರಿ ತಪ್ಪಿ ಬಲಿಪಶುವಾದೆವು ಮತ್ತು ಅದರಿಂದ ಹೇಗೆ ಹೊರಗೆ ಬಂದೆವು ಎಂಬುದನ್ನು ಮಹೇಂದ್ರ ಕುಮಾರ್ ಅತ್ಯಂತ ವಿವರವಾಗಿ ದಾಖಲಿಸಿದ್ದಾರೆ.

ಗದುಗಿನ ಲಡಾಯಿ ಪ್ರಕಾಶನ ಹೊರ ತಂದಿರುವ ಈ ಪುಸ್ತಕ ಮನೆ,ಮನೆಗೆ ತಲುಪಬೇಕು.ಕೋಮುವಾದಿ ಸಂಘಟನೆಯಲ್ಲಿ ಇದ್ದು ಹೊರಗೆ ಬಂದವರ ಕೆಲವು ಪುಸ್ತಕಗಳು ಈಗಾಗಲೇ ಅನೇಕ ರಿಗೆ ತಲುಪಿವೆ. ಅವುಗಳ ಸಾಲಿನಲ್ಲಿ ಅತ್ಯಂತ ಮಾಹಿತಿಪೂರ್ಣ ಪುಸ್ತಕ ವಿದು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಸನತ್ ಕುಮಾರ ಬೆಳಗಲಿ

contributor

Similar News