ಪ್ರತಿಪಕ್ಷಗಳು ಚುನಾವಣೆಯ ಮೂಲಕ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವ ಹತಾಶ ಯತ್ನದ ಬದಲಿಗೆ ಬಹುತ್ವ ಭಾರತ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯ ಉಳಿವಿಗಾಗಿ ನಿರಂತರ ಜನ ಜಾಗೃತಿ ಮತ್ತು ನೈಜ ಜನ ಹೋರಾಟಗಳ ಮೂಲಕ ನಕಲಿ ಚುನಾವಣೆಗಳನ್ನು ಬಹಿಷ್ಕರಿಸಿ ಸಂಸದೀಯ ಜನತಂತ್ರದ ನಿಜವಾದ ಆಶಯಗಳನ್ನು ಎತ್ತಿ ಹಿಡಿಯಬೇಕಾಗಿದೆ.

ಸಾವಿರಾರು ಜನ ಸಮುದಾಯಗಳು, ನೂರಾರು ಭಾಷೆಗಳು, ವಿಭಿನ್ನ ಸಂಸ್ಕೃತಿಗಳು, ಹಲವಾರು ಆಹಾರ ಪದ್ಧತಿಗಳು,ವೈವಿಧ್ಯಮಯ ಉಡುಪುಗಳು,

ಬುಡಕಟ್ಟು ಸಮುದಾಯಗಳು ಹಾಗೂ ಜಾತಿ, ಮತಗಳು ಮತ್ತು ರಾಷ್ಟ್ರೀಯತೆಗಳ ಆಸರೆಯ ತಾಣವಾದ ಭಾರತದಂಥ ದೇಶ ಜಗತ್ತಿನಲ್ಲಿ ಇನ್ನೊಂದಿಲ್ಲ. ವಿವಿಧತೆಯಲ್ಲಿ ಏಕತೆ ಈ ನೆಲದ ಜೀವ ನಾಡಿ. ಈ ಅನೇಕತೆಯ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡೇ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ನೇತೃತ್ವದಲ್ಲಿ ಸಂವಿಧಾನ ರೂಪುಗೊಂಡಿತು. ನಮ್ಮ ಸ್ವಾತಂತ್ರ್ಯ ಹೋರಾಟದ ನೇತಾರರು ಬಯಸಿದ್ದು ಕೂಡ ಬಹುತ್ವ ಭಾರತದ ಸುರಕ್ಷತೆಯನ್ನು. ಬಹುತ್ವ ಭಾರತದ ಈ ಸೌಂದರ್ಯ ಇಡೀ ಜಗತ್ತಿನ ಗಮನವನ್ನು ತನ್ನತ್ತ ಸೆಳೆದಿದೆ. ಆದರೆ ಈ ವಿವಿಧತೆೆಯನ್ನು ಒಪ್ಪಿಕೊಳ್ಳದ ಕೆಲವು ಶಕ್ತಿಗಳು ನಮ್ಮಲ್ಲಿ ಇವೆ. ‘ಒಂದೇ ದೇಶ, ಒಂದೇ ಧರ್ಮ, ಒಂದೇ ಭಾಷೆ ಒಂದೇ ಆಹಾರ ಪದ್ಧತಿ, ಒಂದೇ ಪಡಿತರ ಚೀಟಿ’ ಹೀಗೇ ದೇಶದ ಮೇಲೆ ಏಕ ಧರ್ಮ, ಏಕ ಭಾಷೆ,ಏಕ ಸಂಸ್ಕೃತಿ, ಒಂದೇ ಉಡುಪು ಎಂದೆಲ್ಲಾ ವಿತಂಡ ವಾದವನ್ನು ಮಾಡುತ್ತ ಬಂದವರು ಈಗ ಒಕ್ಕೂಟ ಸರಕಾರದ ಚುಕ್ಕಾಣಿ ಹಿಡಿದಿರುವುದರಿಂದ ಜನಸಾಮಾನ್ಯರ ನಡುವೆ, ಅಪನಂಬಿಕೆಯ ಗೋಡೆಗಳು ಎದ್ದು ನಿಂತಿವೆ, ಮನಸ್ಸುಗಳಲ್ಲಿ ಬಿರುಕು ಮೂಡಿದೆ.

ಜನ ವಿಭಜನೆಯ ಮೂಲಕ ಚುನಾವಣೆಯಲ್ಲಿ ಗೆಲುವು ಸಾಧಿಸುವ ಸುಲಭದ ಮಾರ್ಗಕ್ಕೆ ಮೊರೆ ಹೋದ ಪಕ್ಷ ಈಗ ‘ಏಕರೂಪ ನಾಗರಿಕ ಸಂಹಿತೆ’ ಎಂಬ ಹೊಸ ತಂತ್ರದ ಪ್ರಯೋಗ ನಡೆಸಲು ಮುಂದಾಗಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸುವ ಏಕೈಕ ಗುರಿಯನ್ನು ಇಟ್ಟುಕೊಂಡು ಹೊರಟಿರುವ ಪಕ್ಷ ಎನ್‌ಡಿಎ ಅಧಿಕಾರದಲ್ಲಿರುವ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿ ಮಾಡುವ ಕಸರತ್ತು ಆರಂಭಿಸಿದೆ. ಈ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಈಗಾಗಲೇ ಹೇಳಿಕೆ ನೀಡಿದ್ದಾರೆ.

ಜನ ಸಂಘದ ಕಾಲದಿಂದಲೂ ಬಿಜೆಪಿ ತನ್ನ ಮಹತ್ವದ ಮೂರು ಕಾರ್ಯಸೂಚಿಗಳನ್ನು ಮುಂದಿಡುತ್ತಲೇ ಬಂದಿದೆ.ಅಯೋಧ್ಯೆಯಲ್ಲಿ ಮಸೀದಿ ಇರುವ ಜಾಗದಲ್ಲಿ ರಾಮ ಮಂದಿರ ನಿರ್ಮಾಣ , 370ನೇ ವಿಧಿಯ ಅನ್ವಯ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದತಿ, ಹಾಗೂ ಏಕರೂಪ ನಾಗರಿಕ ಸಂಹಿತೆ. ಈ ಮೂರರಲ್ಲಿ ಮೊದಲಿನ ಎರಡನ್ನು ಈಗಾಗಲೇ ಕಾರ್ಯಗತಗೊಳಿಸಲಾಗಿದೆ. ಮೂರನೆಯದಾಗಿ 2029ರ ಲೋಕಸಭಾ ಚುನಾವಣೆಯಲ್ಲಿ ಮತ್ತು ಉತ್ತರ ಪ್ರದೇಶ ಸೇರಿದಂತೆ ಕೆಲವು ರಾಜ್ಯಗಳಲ್ಲಿ ನಡೆಯಲಿರುವ ವಿಧಾನ ಸಭಾ ಚುನಾವಣೆಗಳಲ್ಲಿ ಅಧಿಕಾರ ಸೂತ್ರ ಹಿಡಿಯಲು ಕೋಮು ಧ್ರುವೀಕರಣ ಅದಕ್ಕೆ ಅನಿವಾರ್ಯವಾಗಿದೆ. ಇಂಥ ಏಕರೂಪ ನಾಗರಿಕ ಸಂಹಿತೆಯನ್ನು ಶತಾಯ ಗತಾಯ ಜಾರಿಗೆ ತರಲು ಬಿಜೆಪಿ ಮುಂದಾಗಿದೆ.

ಲೋಕಸಭಾ ಚುನಾವಣೆಯಲ್ಲಿ ಮತ್ತೆ ಮತದಾರರ ಮನೆ ಬಾಗಿಲಿಗೆ ಹೋಗಲು ಬಿಜೆಪಿಗೆ ಮುಖವಿಲ್ಲ. ಹೇಳಿಕೊಳ್ಳುವ ಯಾವ ಸಾಧನೆಗಳೂ ಇಲ್ಲ. ತನ್ನ ವೈಫಲ್ಯಗಳನ್ನು ಮರೆ ಮಾಚಲು ಬಿಜೆಪಿ ಮತ್ತೆ ಕೋಮು ಮತ್ತು ಜಾತಿ ವಿಭಜನೆಗೆ ಹಿಂಜರಿಯುವುದಿಲ್ಲ.ಏಕರೂಪ ನಾಗರಿಕ ಸಂಹಿತೆ ಜೊತೆಗೆ ವಿವಾದಾತ್ಮಕ ಪ್ರಸ್ತಾವಗಳಾದ ಕ್ಷೇತ್ರ ಮರುವಿಂಗಡಣೆ, ‘ಒಂದು ದೇಶ ಒಂದು ಚುನಾವಣೆ’ ಯೋಜನೆ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಅಸ್ತ್ರಗಳನ್ನು ಬಿಜೆಪಿ ಬಳಸಲಿದೆ.

ಅಸಲಿಗೆ ಏಕರೂಪ ನಾಗರಿಕ ಸಂಹಿತೆ ಅಂದರೆ ಏನು? ಅತ್ಯಂತ ವೈಯಕ್ತಿಕ ವಿಷಯಗಳಾದ ಮದುವೆ, ವಿಚ್ಛೇದನ, ದತ್ತು ಸ್ವೀಕಾರ ಮೊದಲಾದ ವಿಷಯಗಳಲ್ಲಿ ವಿಭಿನ್ನ ನಂಬಿಕೆಗಳು ಮತ್ತು ಆಚರಣೆಗಳು ನಮ್ಮಲ್ಲಿವೆ. ಹಲವಾರು ವಿಷಯಗಳಿಗೆ ಸಂಬಂಧಿಸಿದಂತೆ ವಿಭಿನ್ನ ಜಾತಿ, ಮತಗಳ ನಂಬಿಕೆಗಳ ಪರಿಗಣನೆಇಲ್ಲದೆ ಎಲ್ಲರಿಗೂ ಒಂದೇ ರೀತಿಯ ಕಾನೂನು ಅನ್ವಯಿಸುವುದು ಏಕರೂಪ ನಾಗರಿಕ ಸಂಹಿತೆಯ ಉದ್ದೇಶವಾಗಿದೆ.

ವಾಸ್ತವವಾಗಿ ನೂರೆಂಟು ಜಾತಿ, ಮತಗಳಿಂದ ಕೂಡಿರುವ ಭಾರತೀಯ ಸಮಾಜ ಇನ್ನೂ ಸಂಪೂರ್ಣವಾಗಿ ನಾಗರಿಕ ಸಮಾಜವಾಗಿ ರೂಪುಗೊಂಡಿಲ್ಲ. ಒಂದು ಆಶಯವಾಗಿ, ಆದರ್ಶವಾಗಿ ,

ಮತ ನಿರಪೇಕ್ಷವಾಗಿ ಏಕರೂಪದ ನಾಗರಿಕ ಸಂಹಿತೆ ರೂಪಿಸಲು ಕಾಲ ಪಕ್ವವಾಗಿಲ್ಲ. ಇಂಥ ಸಂದರ್ಭದಲ್ಲಿ ಬಿಜೆಪಿ ಹೇಳುತ್ತಿರುವ ಆ ಪಕ್ಷದ ಸರಕಾರಗಳು ಇರುವ ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯ ಹೆಸರಿನಲ್ಲಿ ಜಾರಿಯಾಗಿರುವುದು ನಿಜವಾದ ಅರ್ಥದಲ್ಲಿ ಮತ ನಿರಪೇಕ್ಷವಾಗಿಲ್ಲ. ಬದಲಿಗೆ ಅಲ್ಪ ಸಂಖ್ಯಾತ ಸಮುದಾಯಗಳನ್ನು ಗುರಿಯಾಗಿರಿಸಿಕೊಂಡು ಬಹುಸಂಖ್ಯಾತರ ಆಚಾರ, ವಿಚಾರಗಳ ಪದ್ಧತಿಗಳನ್ನು ಬಲವಂತವಾಗಿ ಹೇರುವ ಸಂಹಿತೆಯಾಗಿದೆ.

ವಿವಿಧ ರಾಜ್ಯಗಳಲ್ಲಿ ಇರುವ ಬಿಜೆಪಿ ಸರಕಾರಗಳು ಜಾರಿಗೆ ತಂದ ಏಕರೂಪ ನಾಗರಿಕ ಸಂಹಿತೆ ಕೂಡ ನಿಜವಾಗಿ ಏಕರೂಪ ವಾಗಿಲ್ಲ. ವಿಭಿನ್ನ ರಾಜ್ಯಗಳು ತಮ್ಮ ರಾಜ್ಯದ ವಾಸ್ತವ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಭಿನ್ನ ಭಿನ್ನವಾಗಿ ಜಾರಿಗೆ ತಂದಿರುವುದರಿಂದ ಇದನ್ನು ಏಕರೂಪ ನಾಗರಿಕ ಸಂಹಿತೆ ಎಂದು ಕರೆಯಲು ಸಾಧ್ಯವಿಲ್ಲ.

ಏಕರೂಪ ನಾಗರಿಕ ಸಂಹಿತೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಕಾಯ್ದೆಯನ್ನು ರೂಪಿಸಲು ಬಿಜೆಪಿಗೆ ಸಂಸತ್ತಿನ ಉಭಯ ಸದನಗಳಲ್ಲಿ ಬಹುಮತವಿಲ್ಲ. ಬೆಂಬಲ ನೀಡಿದ ಮಿತ್ರ ಪಕ್ಷಗಳು ಕೂಡ ಏಕರೂಪ ನಾಗರಿಕ ಕಾಯ್ದೆಯನ್ನು ಬೆಂಬಲಿಸುವುದಿಲ್ಲ.ಅಂತಲೇ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಮಾತ್ರ ವಿಭಿನ್ನವಾದ ಸಂಹಿತೆಗಳನ್ನು ಅಳವಡಿಸಲಾಗಿದೆ. ಏಕರೂಪದ ನಾಗರಿಕ ಸಂಹಿತೆಯನ್ನು ಜಾರಿಗೆ ತಂದ ಮೊದಲ ರಾಜ್ಯ ಉತ್ತರಾ ಖಂಡ, ನಂತರ ಕ್ರಮೇಣವಾಗಿ ಮಧ್ಯಪ್ರದೇಶ, ಗುಜರಾತ್ ಹಾಗೂ ಅಸ್ಸಾಂ ಜಾರಿಗೆ ತರಲಾಗಿದೆ.

ಏಕರೂಪದ ನಾಗರಿಕ ಸಂಹಿತೆಯನ್ನು ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಜಾರಿಗೆ ತಂದಿದ್ದರೂ ಅದು ವಾಸ್ತವವಾಗಿ ಏಕರೂಪವಾಗಿಲ್ಲ. ತಮ್ಮದೇ ಆದ ಆಚಾರ, ವಿಚಾರ ಮತ್ತು ಪದ್ಧತಿಗಳನ್ನು ಹೊಂದಿರುವ ಬುಡಕಟ್ಟು ಸಮುದಾಯಗಳನ್ನು ಇದರ ವ್ಯಾಪ್ತಿಯಿಂದ ಹೊರಗೆ ಇರಿಸಲಾಗಿದೆ. ಬುಡಕಟ್ಟು ಸಮುದಾಯಗಳ ಮೇಲೆ ಏಕರೂಪದ ನಾಗರಿಕ ಸಂಹಿತೆಯನ್ನು ಹೇರಿ ಅವುಗಳನ್ನು ಎದುರು ಹಾಕಿಕೊಳ್ಳುವ ದುಸ್ಸಾಹಸಕ್ಕೆ ಬಿಜೆಪಿ ಕೈ ಹಾಕಿಲ್ಲ, ಹಾಕುವುದಿಲ್ಲ.

ಯಾವುದೇ ದೃಷ್ಟಿಯಿಂದ ಏಕರೂಪವಲ್ಲದ ವಿಭಿನ್ನ ಸಮುದಾಯಗಳು ಸಮಾನತೆ, ಧಾರ್ಮಿಕ ಸ್ವಾತಂತ್ರ್ಯದಂಥ ಸಂವಿಧಾನ ನೀಡಿರುವ ಹಕ್ಕುಗಳನ್ನು ಅನುಭವಿಸುತ್ತ ನೆಮ್ಮದಿಯಾಗಿವೆ. ಏಕರೂಪ ನಾಗರಿಕ ಕಾಯ್ದೆಯ ಹೆಸರಿನಲ್ಲಿ ಈ ಸಮುದಾಯಗಳಿಗೆ ಸಂವಿಧಾನ ನೀಡಿರುವ ಹಕ್ಕುಗಳನ್ನು ಕಸಿದುಕೊಳ್ಳುವವುದು ಸರಿಯಲ್ಲ. ಅಂತಲೇ ವಿಭಿನ್ನ ರಾಜಕೀಯ ಸಂಘಟನೆಗಳು, ಪ್ರತಿಪಕ್ಷಗಳು, ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿಯಂಥ ಸಂಸ್ಥೆಗಳು ಸರಕಾರದ ನಡೆಯನ್ನು ಟೀಕಿಸಿವೆ. ಇದನ್ನು ಆಕ್ಷೇಪಿಸುವವರು ಎತ್ತಿರುವ ಪ್ರಶ್ನೆಗಳನ್ನು ಸುಲಭವಾಗಿ ತಳ್ಳಿ ಹಾಕಲು ಆಗುವುದಿಲ್ಲ. ಎನ್‌ಡಿಎ ಮಿತ್ರ ಪಕ್ಷಗಳಾದ ಸಂಯುಕ್ತ ಜನತಾ ದಳ(ಜೆಡಿಯು) ಹಾಗೂ ತೆಲುಗು ದೇಶಂ (ಟಿಡಿಪಿ)ಏಕರೂಪ ನಾಗರಿಕ ಸಂಹಿತೆಯನ್ನು ಬಲವಂತವಾಗಿ ಹೇರುವ ಬಿಜೆಪಿ ವರ್ತನೆಯ ಬಗ್ಗೆ ತೀವ್ರ ಆತಂಕವನ್ನು ವ್ಯಕ್ತಪಡಿಸಿವೆ.

ಈ ನಡುವೆ ಚುನಾವಣಾ ಆಯೋಗದಲ್ಲಿ ಆಯುಕ್ತರ ನಡುವಿನ ಒಡಕು ಬಯಲಿಗೆ ಬಂದಿದೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ತಮಗೆ ತೋಚಿದ ತೀರ್ಮಾನಗಳನ್ನು ಕೈಗೊಳ್ಳುತ್ತಿದ್ದಾರೆ ಎಂದು ಇನ್ನಿಬ್ಬರು ಚುನಾವಣಾ ಆಯುಕ್ತರಾದ ಸುಖ್ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದರು. ನಂತರ ಹಾಗೇನಿಲ್ಲ ಎಂದು ಮೂವರು ಆಯುಕ್ತರ ಪರವಾಗಿ ಜ್ಞಾನೇಶ್ ಕುಮಾರ್ ಸಮಜಾಯಿಷಿ ನೀಡಿದ್ದಾರೆ.

ಇಂಥ ಮೋಸದ ಚುನಾವಣೆಯಲ್ಲಿ ಭಾಗವಹಿಸುವುದಿಲ್ಲ ಎಂದು ಪ್ರತಿಪಕ್ಷ ಗಳು ಒಟ್ಟಾಗಿ ತೀರ್ಮಾನ ತೆಗೆದುಕೊಳ್ಳಬೇಕಾಗಿದೆ. ಇಂಥ ನಕಲಿ ಚುನಾವಣೆಗಳಲ್ಲಿ ಭಾಗವಹಿಸಿದರೆ ಅದಕ್ಕೆ ಮಾನ್ಯತೆಯನ್ನು ತಂದು ಕೊಟ್ಟಂತಾಗುತ್ತದೆ. ಪ್ರಜಾಪ್ರಭುತ್ವ ಅಂದರೆ ಚುನಾವಣೆ ಮಾತ್ರವಲ್ಲ. ಇದು ಪ್ರತಿಪಕ್ಷಗಳಿಗೂ ಗೊತ್ತಿದೆ. ಆದರೆ ಚುನಾವಣೆಯಲ್ಲಿ ಸ್ಪರ್ಧಿಸದಿದ್ದರೆ ತಮ್ಮ ಅಸ್ತಿತ್ವವೇ ಇಲ್ಲದಂತಾಗುತ್ತದೆ ಎಂಬ ಆತಂಕ ಪ್ರತಿಪಕ್ಷಗಳಲ್ಲಿ ಇದೆ. ಆದರೆ ವಾಸ್ತವವಾಗಿ ಹಾಡಹಗಲೇ ಮತದಾರ ಪಟ್ಟಿಯಲ್ಲಿರುವ ಮತಗಳೇ ಕಳವಾಗುತ್ತಿರುವಾಗ ಪ್ರತಿಪಕ್ಷ ಗಳು ಯಾವ ರೀತಿ ತಮ್ಮ ಅಸ್ತಿತ್ವವನ್ನು ಕಾಪಾಡಿಕೊಳ್ಳುತ್ತವೆ ಎಂಬ ಪ್ರಶ್ನೆಗೆ ಉತ್ತರ ಬೇಕಾಗಿದೆ.

ಒಂದೆಡೆ ಮತಗಳ್ಳತನ, ಇನ್ನೊಂದೆಡೆ ಶಾಸಕರು ಮತ್ತು ಸಂಸದರ ಖರೀದಿ, ಮಗದೊಂದೆಡೆ ಪ್ರತಿಪಕ್ಷ ಗಳ ಇಬ್ಭಾಗ,ಕೊನೆಗೆ ಒಂದಿಲ್ಲೊಂದು ದಿನ ಪ್ರತಿಪಕ್ಷಗಳಿಲ್ಲದ ನಕಲಿ ಪ್ರಜಾಪ್ರಭುತ್ವ. ಇಂಥ ತಂತ್ರ, ಕುತಂತ್ರಗಳ ನಡುವೆ ಪ್ರತಿಪಕ್ಷಗಳು ಬದುಕಲು ಹೇಗೆ ಸಾಧ್ಯ? ಇಂಥ ಸನ್ನಿವೇಶದಲ್ಲಿ ಪ್ರತಿಪಕ್ಷಗಳು ಚುನಾವಣೆಯ ಮೂಲಕ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವ ಹತಾಶ ಯತ್ನದ ಬದಲಿಗೆ ಬಹುತ್ವ ಭಾರತ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯ ಉಳಿವಿಗಾಗಿ ನಿರಂತರ ಜನ ಜಾಗೃತಿ ಮತ್ತು ನೈಜ ಜನ ಹೋರಾಟಗಳ ಮೂಲಕ ನಕಲಿ ಚುನಾವಣೆಗಳನ್ನು ಬಹಿಷ್ಕರಿಸಿ ಸಂಸದೀಯ ಜನತಂತ್ರದ ನಿಜವಾದ ಆಶಯಗಳನ್ನು ಎತ್ತಿ ಹಿಡಿಯಬೇಕಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಸನತ್ ಕುಮಾರ ಬೆಳಗಲಿ

contributor