ಈ ಕಾನೂನಿನ ಮುಂದೆ ಎಲ್ಲರೂ ಸಮಾನರಲ್ಲ
ಉಮರ್ ಖಾಲಿದ್ | ಶರ್ಜೀಲ್ ಇಮಾಮ್
ಹಣ, ಜಾತಿ, ಅಧಿಕಾರ ಇದ್ದವರಿಗೆ ಸಿಗುವ ನ್ಯಾಯ ಇದಾವುದೂ ಇಲ್ಲದವರಿಗೆ ಸಿಗುವುದು ಸುಲಭದ ಸಂಗತಿಯಲ್ಲ. ಉಮರ್ ಖಾಲಿದ್ ಮತ್ತು ಇಮಾಮ್‌ಗೆ ನ್ಯಾಯ ನೀಡದ ನ್ಯಾಯಾಲಯಗಳು ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಬಿಜೆಪಿ ನಾಯಕ ಹಾಗೂ ಭಾರತ ಕುಸ್ತಿ ಫೆಡರೇಶನ್ ಹಿಂದಿನ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಎಂಬಾತನನ್ನು ದೋಷ ಮುಕ್ತಗೊಳಿಸುತ್ತವೆ.
ಭಾರತದಲ್ಲಿ ಎಲ್ಲರಿಗೂ ಒಂದೇ ಕಾನೂನಿದೆ. ಈ ಕಾನೂನು ಬಡವ, ಶ್ರೀಮಂತ, ಆ ಜಾತಿ, ಈ ಜಾತಿ, ಭಾಷೆ, ಪ್ರದೇಶ ಎಂಬ ಭೇದವಿಲ್ಲದೇ ಎಲ್ಲರಿಗೂ ಸಮಾನವಾಗಿ ಅನ್ವಯಿಸಲ್ಪಡುತ್ತದೆ ಎಂಬುದರ ಬಗ್ಗೆ ಭಿನ್ನಾಭಿಪ್ರಾಯವಿಲ್ಲ. ಆದರೆ ವಾಸ್ತವ ಸಂಗತಿ ಭಿನ್ನವಾಗಿದೆ.
ಕಾನೂನು ಒಂದೇ ಆಗಿದ್ದರೂ, ನ್ಯಾಯಾಲಯಗಳಲ್ಲಿ ಎಲ್ಲರಿಗೂ ಸಮಾನವಾಗಿ ನ್ಯಾಯ ಸಿಗುವುದಿಲ್ಲ ಎಂಬುದು ಅತ್ಯಂತ ಕಹಿಯಾದ ಸತ್ಯ ಸಂಗತಿ. ಇದಕ್ಕೆ ತೀರ ಇತ್ತೀಚಿನ ಎರಡು ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ದಿಲ್ಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ (ಜೆಎನ್‌ಯು) ಪ್ರತಿಭಾವಂತ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಮತ್ತು ಶರ್ಜೀಲ್ ಇಮಾಮ್ ಇವರಿಬ್ಬರನ್ನು ಜೈಲಿಗೆ ಹಾಕಿ ಬರೋಬ್ಬರಿ ಆರು ವರ್ಷಗಳಾದವು. ಇದುವರೆಗೆ ವಿಚಾರಣೆ ಇಲ್ಲ. ಜಾಮೀನು ಮೇಲೆ ಬಿಡುಗಡೆಯೂ ಇಲ್ಲ. ಇವರದು ಒಂದು ಉದಾಹರಣೆಯಾದರೆ ಇನ್ನೊಂದು ಉದಾಹರಣೆ ಗುರ್ಮಿತ್ ರಾಮ ರಹೀಮ್ ಎಂಬ ಧರ್ಮದ ಸೋಗು ಹಾಕಿದ ವ್ಯಕ್ತಿಯದು. ಹಲವಾರು ಅತ್ಯಾಚಾರ ಮತ್ತು ಕೊಲೆಗಳನ್ನು ಮಾಡಿದ, ಮಾಡಿಸಿದ ಈ ರಾಮ ರಹೀಮ ಅತ್ಯಂತ ಕುಖ್ಯಾತ. ಈತ ಈಗ ಮತ್ತೆ ಹನ್ನೊಂದು ದಿನಗಳ ಜಾಮೀನಿನ ಮೇಲೆ ಹೊರಗೆ ಬಂದಿದ್ದಾನೆ. ಈತ ಶಿಕ್ಷೆಗೊಳಗಾಗಿ ಒಂಭತ್ತು ವರ್ಷಗಳಲ್ಲಿ ಹದಿನೇಳು ಬಾರಿ ಜಾಮೀನು ಪಡೆದಿದ್ದಾನೆ. ಈತನ ಜಾಮೀನು ಅರ್ಜಿಯನ್ನು ನ್ಯಾಯಾಲಯ ಎಂದೂ ತಿರಸ್ಕರಿಸಿಲ್ಲ. ಈ ವರ್ಷ ಪೆರೋಲ್ (ಶಿಕ್ಷೆಗೊಳಗಾದವರು ಜಾಮೀನು ಮೇಲೆ ಹೊರಗೆ ಬಂದರೆ ಪೆರೋಲ್ ಎಂದು ಕರೆಯುತ್ತಾರೆ) ಮೇಲೆ 91 ದಿನಗಳನ್ನು ಜೈಲಿನ ಹೊರಗೆ ಕಳೆದಿದ್ದಾನೆ.
ಇವನಿಗೆ ಹೋಲಿಸಿದರೆ ಉಮರ್ ಖಾಲಿದ್ ಮತ್ತು ಶರ್ಜೀಲ್ ಇಮಾಮ್ ಇವರು ವರ್ಷಗಟ್ಟಲೆ ಯಾವುದೇ ವಿಚಾರಣೆಯಿಲ್ಲದೆ ಸುಂದರ ಬದುಕಿನ ಕನಸು ಕಾಣುವ ಯೌವನದಲ್ಲಿ ಸೆರೆಮನೆಯ ಕತ್ತಲ ಕೋಣೆಯಲ್ಲಿ ಇದ್ದಾರೆ. ಕ್ರಿಮಿನಲ್ ರಾಮ ರಹೀಮ್ ಯಾವ ಕಾನೂನಿನ ಅಡಿಯಲ್ಲಿ ಪೆರೋಲ್ ಮೇಲೆ ಹೊರಗೆ ಬಂದಿದ್ದಾನೋ ಅದೇ ಕಾನೂನು ಉಮರ್ ಖಾಲಿದ್ ಮತ್ತು ಶರ್ಜೀಲ್ ಇಮಾಮ್‌ಗೆ ಯಾಕೆ ಅನ್ವಯಿಸಲ್ಪಡುವುದಿಲ್ಲ. ರಾಮ ರಹೀಮನಂತೆ ಉಮರ್ ಯಾವ ಕೊಲೆಯನ್ನೂ ಮಾಡಿಲ್ಲ. ಯಾರ ಮನೆಯನ್ನೂ ದರೋಡೆ ಮಾಡಿಲ್ಲ. ಆದರೂ ಅವರಿಗೆ ಜಾಮೀನಿಲ್ಲ.
ಈ ರಾಮ ರಹೀಮ್ ತನ್ನದೇ ಸ್ವಂತ ರಕ್ಷಣಾ ಪಡೆಯನ್ನು ಕಟ್ಟಿಕೊಂಡು ನೂರಾರು ಎಕರೆ ಜಾಗದಲ್ಲಿ ತನ್ನದೇ ಸಾಮ್ರಾಜ್ಯವನ್ನು ನಿರ್ಮಿಸಿಕೊಂಡು ಶಾಸನ ಬದ್ಧ ಆಡಳಿತಕ್ಕೆ ಸವಾಲು ಹಾಕಿದ್ದಾನೆ. ಅನೇಕ ಹೆಣ್ಣು ಮಕ್ಕಳ ಮೇಲೆ ರೇಪ್ ಮಾಡಿದ, ಹತ್ಯೆ ಮಾಡಿದ ಆರೋಪ ಸಾಬೀತಾಗಿ ಶಿಕ್ಷೆಯನ್ನು ಅನುಭವಿಸುತ್ತಿದ್ದ ತನಗೆ ಹೊರಗೆ ಬರಬೇಕೆನಿಸಿದಾಗೆಲ್ಲ ಹೊರಗೆ ಬರುತ್ತಾನೆ. ಆದರೆ ವಿಚಾರಣೆಯಿಲ್ಲದೆ ಆರು ವರ್ಷಗಳ ಕಾಲ ಕನಿಷ್ಠ ಜಾಮೀನು ಕೂಡ ಸಿಗದೆ ಜೈಲಿನಲ್ಲಿ ರಾಜಕೀಯ ಕೈದಿಗಳಾದ ಉಮರ್ ಖಾಲಿದ್ ಮತ್ತು ಇಮಾಮ್‌ಗೆ ಪದೇ ಪದೇ ಜಾಮೀನು ಯಾಕೆ ನಿರಾಕರಿಸಲ್ಪಡುತ್ತದೆ?
ಕಾನೂನಿನ ಮುಂದೆ ಎಲ್ಲರೂ ಸಮಾನರಲ್ಲವೇ? ನ್ಯಾಯಾಲಯದ ತಕ್ಕಡಿ ಅತ್ತ ಇತ್ತ ವಾಲುವುದೇಕೇ? ವ್ಯಕ್ತಿ ಯಾರೇ ಆಗಿರಲಿ ಮುಖ ನೋಡದೆ ತೀರ್ಪು ನೀಡುವುದು ನ್ಯಾಯಾಧೀಶರ ಸಾಂವಿಧಾನಿಕ ಕರ್ತವ್ಯ. ಸರ್ವರಿಗೂ ಸಮಾನ ನ್ಯಾಯ ಎಂಬುದು ಸಂವಿಧಾನ ನೀಡಿದ ಭರವಸೆ. ಒಬ್ಬರಿಗೊಂದು ನ್ಯಾಯ, ಇನ್ನೊಬ್ಬರಿಗೆ ಇನ್ನೊಂದು ನ್ಯಾಯ ಎಂಬುದಿಲ್ಲ.
ನಾಗರಿಕನೊಬ್ಬನ ಸಾಂವಿಧಾನಿಕ ಹಕ್ಕುಗಳ ರಕ್ಷಕ ಎಂಬ ಪ್ರತೀತಿ ಪಡೆದ ಸುಪ್ರೀಂ ಕೋರ್ಟ್ ಮೂಕ ಪ್ರೇಕ್ಷಕನಂತಾಗಿರುವುದೇಕೆ? ಹೀಗಾದರೆ ದೇಶದ ಪ್ರಜಾಪ್ರಭುತ್ವದ ಗತಿ ಏನು? ಇದು ಹೀಗೇ ಮುಂದುವರಿದರೆ ಮುಂದೆ ತಲುಪುವುದೆಲ್ಲಿಗೆ?
ಕಾನೂನಿನ ಪ್ರಕಾರ ಯಾವುದೇ ವ್ಯಕ್ತಿ ಅಪರಾಧಿ ಅಥವಾ ದೋಷಿ ಎಂದು ಸಾಬೀತಾಗುವವರೆಗೆ ಆತ ಕಾನೂನಿನ ಪ್ರಕಾರ ನಿರಪರಾಧಿ. ಆದರೆ ಉಮರ್ ಖಾಲಿದ್ ವಿಷಯದಲ್ಲಿ ಕಳೆದ ಆರು ವರ್ಷಗಳ ಕಾಲಾವಧಿಯಲ್ಲಿ ವಿಚಾರಣೆಯೇ ಆರಂಭವಾಗಿಲ್ಲ. ಸಮರ್ಪಕವಾದ ಆರೋಪ ಪಟ್ಟಿ ಸಲ್ಲಿಕೆಯಾಗಿ ವಿಚಾರಣೆ ನಡೆಯದಿದ್ದರೂ ಒಬ್ಬ ವ್ಯಕ್ತಿಯನ್ನು ಇಷ್ಟು ವರ್ಷಗಳ ಕಾಲ ಜೈಲಿನಲ್ಲಿ ಇಡುವುದು ಸಂವಿಧಾನಾತ್ಮಕವಾದ ವೈಯಕ್ತಿಕ ಸ್ವಾತಂತ್ರ್ಯದ ಹಕ್ಕಿನ ಉಲ್ಲಂಘನೆಯಾಗುವುದಿಲ್ಲವೇ?
2020ರ ದಿಲ್ಲಿ ಗಲಭೆಗಳಿಗೆ ಸಂಬಂಧಿಸಿದಂತೆ ಆರೋಪ ಹೊರಿಸಿ ಉಮರ್ ಖಾಲಿದ್ ಮತ್ತು ಇಮಾಮ್ ಅವರನ್ನು ಬಂಧಿಸಲಾಗಿದೆ. ಆದರೆ ದಿಲ್ಲಿ ಗಲಭೆಗಿಂತ ಮೊದಲು ಪೊಲೀಸ್ ಅಧಿಕಾರಿಯ ಪಕ್ಕದಲ್ಲಿ ನಿಂತು ಟ್ರಂಪ್ ಹೋಗುವವರೆಗೆ ನಾವು ಸುಮ್ಮನಿರುತ್ತೇವೆ. ಆ ಮೇಲೆ ಪೊಲೀಸರ ಮಾತನ್ನೂ ಕೇಳುವುದಿಲ್ಲ ಎಂದು ಬೆದರಿಕೆ ಹಾಕಿದ ಬಿಜೆಪಿ ನಾಯಕ ಕಪಿಲ್ ಮಿಶ್ರಾ ಮೇಲೆ ಯಾವುದೇ ಕ್ರಮವನ್ನು ಯಾಕೆ ಕೈಗೊಂಡಿಲ್ಲ. ಈಗ ಅವರು ಕೇಂದ್ರ ಮಂತ್ರಿಯಾಗಿ ಅಧಿಕಾರವನ್ನು ಚಲಾಯಿಸುತ್ತಿದ್ದಾರೆ. ಆದರೆ ಶಾಂತಿಯುತ ಪ್ರತಿಭಟನೆಗೆ ಕರೆ ನೀಡಿದವರು ಭಯೋತ್ಪಾದನಾ ತಡೆ ಕಾಯ್ದೆಯನ್ವಯ (ಯುಎಪಿಎ) ಜೈಲು ಸೇರಿದ್ದಾರೆ. ಮಕ್ಕಳ ಮೇಲೆ ಅತ್ಯಾಚಾರ ಮಾಡಿದ ಅಪರಾಧ ಸಾಬೀತಾಗಿ ಶಿಕ್ಷೆಗೊಳಗಾದ ಆಸಾರಾಮ್ ಬಾಪುಗೆ ಜಾಮೀನು ಸಿಗುತ್ತದೆ. ಆದರೆ ಕೇವಲ ಭಾಷಣ ಮಾಡಿದ ಕಾರಣಕ್ಕಾಗಿ ಸಂಚಿನ ಆರೋಪ ಹೊರಿಸಿ ಜೈಲಿಗೆ ಹಾಕಲ್ಪಟ್ಟಿರುವ ವಿದ್ಯಾರ್ಥಿ ನಾಯಕರಿಗೆ ವರ್ಷಗಟ್ಟಲೆ ನ್ಯಾಯಾಂಗ ಹೋರಾಟ ನಡೆಸಿದರೂ ಜಾಮೀನು ಸಿಗುತ್ತಿಲ್ಲ. ಇದೆಂಥ ನ್ಯಾಯ?
ಕೊಲೆ ಮತ್ತು ಅತ್ಯಾಚಾರದಂಥ ಅತ್ಯಂತ ಹೀನ ಅಪರಾಧ ಮಾಡಿದ ರಾಮ ರಹೀಮ್ ಎಂಬ ವ್ಯಕ್ತಿ 17 ಬಾರಿ ಪೆರೋಲ್ ಮೇಲೆ ಹೊರಗೆ ಬರುತ್ತಾನೆ. ಆದರೆ ಉಮರ್ ಖಾಲಿದ್ ಮತ್ತು ಇಮಾಮ್‌ಗೆ ಜಾಮೀನು ನಿರಾಕರಿಸಿರುವುದು ಮಾತ್ರವಲ್ಲ ಬದಲಿಗೆ ಮುಂದಿನ ಒಂದು ವರ್ಷದವರೆಗೆ ಉಮರ್ ಖಾಲಿದ್ ಜಾಮೀನಿಗೆ ಮತ್ತೆ ಅರ್ಜಿಯನ್ನು ಸಲ್ಲಿಸಕೂಡದು ಎಂದು ನ್ಯಾಯಾಲಯ ಕಠಿಣ ನಿರ್ಬಂಧವನ್ನು ವಿಧಿಸಿದೆ. ಇದರ ಜೊತೆಗೆ ಒಂದು ವರ್ಷದೊಳಗೆ ವಿಚಾರಣೆಯನ್ನು ಪೂರ್ಣಗೊಳಿಸಬೇಕೆಂದು ಕೆಳ ಹಂತದ ನ್ಯಾಯಾಲಯಕ್ಕೆ ಸೂಚಿಸಿದೆ. ಆದರೆ ಕಳೆದ ಐದು ವರ್ಷಗಳ ಕಾಲಾವಧಿಯಲ್ಲಿ ನಡೆಯದ ವಿಚಾರಣೆ ಈ ಒಂದು ವರ್ಷದೊಳಗೆ ಪೂರ್ಣಗೊಳ್ಳುವುದೇ ಎಂಬುದು ಉತ್ತರಿಸಲಾಗದ ಪ್ರಶ್ನೆ.
ದಿಲ್ಲಿ ಗಲಭೆಯ ನೆಪದಲ್ಲಿ ಉಮರ್ ಖಾಲಿದ್ ಸೇರಿದಂತೆ ಒಂಭತ್ತು ಮಂದಿಯನ್ನು ಬಂಧಿಸಲಾಗಿತ್ತು. ಈ ಗಲಭೆಗೂ ಇವರಿಗೂ ಯಾವುದೇ ಸಂಬಂಧವಿಲ್ಲ. ಅಧಿಕಾರದಲ್ಲಿ ಇರುವವರಿಗೆ ಇವರನ್ನು ಜೈಲಿಗೆ ಹಾಕುವುದು ಬೇಕಾಗಿತ್ತು. ಆದರೆ ಜೈಲಿಗೆ ಹಾಕಿಸಿದ ಸರಕಾರಕ್ಕೆ ಅಥವಾ ತನಿಖಾ ಸಂಸ್ಥೆಗಳಿಗೆ ಹಾಗೂ ಪೊಲೀಸರಿಗೆ ಇವರ ಮೇಲಿನ ಆರೋಪವನ್ನು ಸಾಬೀತು ಮಾಡಲು ಈವರೆಗೆ ಆಗಿಲ್ಲ. ಪುರಾವೆಗಳಿಗಾಗಿ ಇನ್ನೂ ತಡಕಾಡುತ್ತಲೇ ಇದ್ದಾರೆ.
ದಿಲ್ಲಿ ಗಲಭೆಯ ಸಂದರ್ಭದಲ್ಲಿ ಬಿಜೆಪಿ ನಾಯಕ ಕಪಿಲ್ ಮಿಶ್ರಾ ಮಾತ್ರವಲ್ಲ ಕೇಂದ್ರ ಮಂತ್ರಿ ಅನುರಾಗ್ ಠಾಕೂರ್ ಬಹಿರಂಗ ಸಭೆಯಲ್ಲಿ ಗೋಲಿ ಮಾರೋ ಸಾಲೋಂಕೋ ಎಂದು ಅತ್ಯಂತ ಪ್ರಚೋದನಕಾರಿ ಮಾತುಗಳನ್ನು ಆಡಿದ್ದರು. ಅವರ ಮೇಲೆ ಈವರೆಗೆ ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ಕೇಂದ್ರ ಮಂತ್ರಿಯೊಬ್ಬ ಹೀಗೆ ಮಾತಾಡಬಹುದೇ? ಅವರ ಮೇಲೆ ಯಾಕೆ ಕ್ರಮವಿಲ್ಲ. ಕೇಂದ್ರ ಸಚಿವರಿಗೆ ವಿಶೇಷ ರಿಯಾಯಿತಿ ಇದೆಯೇ? ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷದ ಕೋಮುವಾದಿ ಸಿದ್ಧಾಂತವನ್ನು ವಿರೋಧಿಸುವ ಎಲ್ಲರನ್ನೂ ಜೈಲಿಗೆ ಹಾಕುವುದು ಈಗ ಸಾಮಾನ್ಯವಾಗಿದೆ. ವಿಚಾರಣೆಯಿಲ್ಲದೆ ಸೆರೆಮನೆಯಲ್ಲಿಡುವುದು ಸಂವಿಧಾನದ 21ನೇ ವಿಧಿಯ (ಜೀವ ಮತ್ತು ವೈಯಕ್ತಿಕ ಸ್ವಾತಂತ್ರ್ಯ ರಕ್ಷಣೆ)ಉಲ್ಲಂಘನೆಯಲ್ಲವೇ?
ಭಾರತದ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಜಾತಿ, ಮತ, ಭಾಷೆ ಭೇದವಿಲ್ಲದೆ ಎಲ್ಲರಿಗೂ ಸಂವಿಧಾನದ ರಕ್ಷಣೆ ಇದೆ ಎಂಬುದು ಈಗ ಭಾಷಣಕ್ಕೆ ಸೀಮಿತವಾದ ವಿಷಯವಾಗಿದೆ. ಆದರೆ ಹಣ, ಜಾತಿ, ಅಧಿಕಾರ ಇದ್ದವರಿಗೆ ಸಿಗುವ ನ್ಯಾಯ ಇದಾವುದೂ ಇಲ್ಲದವರಿಗೆ ಸಿಗುವುದು ಸುಲಭದ ಸಂಗತಿಯಲ್ಲ. ಉಮರ್ ಖಾಲಿದ್ ಮತ್ತು ಇಮಾಮ್‌ಗೆ ನ್ಯಾಯ ನೀಡದ ನ್ಯಾಯಾಲಯಗಳು ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಬಿಜೆಪಿ ನಾಯಕ ಹಾಗೂ ಭಾರತ ಕುಸ್ತಿ ಫೆಡರೇಶನ್ ಹಿಂದಿನ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಎಂಬಾತನನ್ನು ದೋಷ ಮುಕ್ತಗೊಳಿಸುತ್ತವೆ. ಕಾರ್ಯಾಂಗ, ಶಾಸಕಾಂಗಗಳಲ್ಲಿ ನ್ಯಾಯ ಸಿಗದಿದ್ದರೆ ಅನ್ಯಾಯಕ್ಕೊಳಗಾದ ಜನರು ನ್ಯಾಯಾಂಗದ ಕದ ತಟ್ಟುತ್ತಾರೆ. ಅಲ್ಲೂ ಕೂಡ ನ್ಯಾಯ ಸಿಗದಿದ್ದರೆ ಹೋಗುವುದೆಲ್ಲಿಗೆ?