×
Ad

ಇನ್ನು ಅವರ ಫೋನ್ ಕರೆ ಬರುವುದಿಲ್ಲ

Update: 2026-02-02 11:33 IST

ಅನಂತ ಸುಬ್ಬರಾವ್ ಅವರಂಥ ವ್ಯಕ್ತಿ ನಮ್ಮ ಇಂದಿನ ಸಾರ್ವಜನಿಕ ಜೀವನದಲ್ಲಿ ಲಕ್ಷಕ್ಕೊಬ್ಬರೂ ಸಿಗುವುದಿಲ್ಲ. ಅವರ ರಾಜಿ ರಹಿತ ಹೋರಾಟ, ಜೈಲು ವಾಸ, ಲಾಠಿ ಏಟು, ಬದ್ಧತೆ, ತ್ಯಾಗ ಛಲ, ಸರಳತೆ, ಸಜ್ಜನಿಕೆ, ಜಿಗುಟುತನ ಉಳಿದವರಿಗೆ ಮಾದರಿಯಾಗಿದೆ. ಕೊನೆಯ ದಾಗಿ ಹಾಸನ ಜಿಲ್ಲೆಯ ಬಾಗೂರು ನವಿಲೆ ರೈತ ಹೋರಾಟದ ಸಮಯದಲ್ಲಿ ಪ್ರಧಾನಿಯಾಗಿದ್ದ ಎಚ್.

ಡಿ.ದೇವೇಗೌಡರು ಸ್ವತಃ ಫೋನ್ ಮಾಡಿ ಚಳವಳಿಯನ್ನು ವಾಪಸ್ ಪಡೆಯಲು ಮನವಿ ಮಾಡಿದರೂ ಅವರು

ಜಗ್ಗಲಿಲ್ಲ. ಸೊಪ್ಪುಹಾಕಲಿಲ್ಲ. ಇದು ಅವರ ದಿಟ್ಟತನಕ್ಕೆ ಒಂದು ಉದಾಹರಣೆಯಾಗಿದೆ.

ನಾನು ‘ವಾರ್ತಾಭಾರತಿ’ಯಲ್ಲಿ ‘ಪ್ರಚಲಿತ’ ಅಂಕಣ ಬರೆಯಲು ಆರಂಭಿಸಿದಾಗಿನಿಂದ ಆ ಫೋನ್ ಕರೆ ವಾರಕ್ಕೊಮ್ಮೆ ತಪ್ಪದೇ ಬರುತ್ತಿತ್ತು. ಪ್ರತೀ ಸೋಮವಾರ ಪ್ರಕಟವಾಗುತ್ತಿದ್ದ ಪ್ರಚಲಿತ ಓದಿದ ತಕ್ಷಣ ಅವರು ಫೋನ್ ಮಾಡುತ್ತಿದ್ದರು. ಅಂಕಣದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರು. ಬರೀ ಹೊಗಳಿಕೆಯಲ್ಲ, ಲೇಖನವನ್ನು ವಿಮರ್ಶಿಸಿ ತಪ್ಪು, ಸರಿಗಳ ಬಗ್ಗೆ ಹೇಳುತ್ತಿದ್ದರು. ತಮಗೆ ಸರಿಯೆನಿಸಿದರೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು. ಅವರು ಬೇರಾರೂ ಅಲ್ಲ, ಕಳೆದ ಗುರುವಾರ ನಮ್ಮನ್ನಗಲಿದ ನನ್ನ ಆತ್ಮ ಬಂಧು ಎಚ್. ವಿ.ಅನಂತಸುಬ್ಬರಾವ್. ಅವರ ನಿರ್ಗಮನವನ್ನು ಅರಗಿಸಿಕೊಳ್ಳಲು ನನಗೆ ಈಗಲೂ ಸಾಧ್ಯವಾಗುತ್ತಿಲ್ಲ.

ಅನಂತ ಸುಬ್ಬರಾವ್ ಮತ್ತು ನನ್ನದು ಸುಮಾರು 50 ವರ್ಷಗಳ ಒಡನಾಟ. ಒಂದೇ ವಿಚಾರ ಧಾರೆ, ಒಂದೇ ಸಂಘಟನೆ ಮಾತ್ರವಲ್ಲ ವೈಯಕ್ತಿಕವಾಗಿಯೂ ನಮ್ಮದು ಕರುಳು ಬಳ್ಳಿಗಿಂತ ಮಿಗಿಲಾದ ಬಾಂಧವ್ಯ. ನಾವು ಬದುಕಿರುವಾಗ ಸುತ್ತಲಿನ ಸಮಾಜದಲ್ಲಿ ಬಂಧು ಬಳಗ ಮಾತ್ರವಲ್ಲ, ಹಲವಾರು ಜನರ ಸ್ನೇಹ ಸಂಬಂಧ ಸಹಜವಾಗಿ ಬರುತ್ತದೆ. ಅನೇಕ ಸ್ನೇಹ ಸಂಬಂಧಗಳ ಆಯುಷ್ಯ ತುಂಬಾ ಕಡಿಮೆ. ಒಂದೆರಡು ವರ್ಷ, ನಾಲ್ಕಾರು ವರ್ಷ ಹೀಗೆ ಅನಿರ್ದಿಷ್ಟ ಕಾಲಾವಧಿಯಲ್ಲಿ ಗೆಳೆತನದ ಕೊಂಡಿ ಕಳಚಿ ಬೀಳುತ್ತದೆ. ಆದರೆ, ಬದುಕಿನ ಪಯಣದಲ್ಲಿ ಜೊತೆಗಿರುವವರು ಕೆಲವೇ ಜನ. ನಮ್ಮೆರಡು ಕುಟುಂಬಗಳ ನಡುವಿನ ಸ್ನೇಹ ಸಂಬಂಧ ನಿತ್ಯ, ನಿರಂತರ ಹಸಿರಾಗಿರುತ್ತಿತ್ತು.

ಬಿಡುವಿಲ್ಲದ ಕೆಲಸಗಳ ನಡುವೆ ಸದಾ ಅಧ್ಯಯನಶೀಲರಾಗಿರುತ್ತಿದ್ದ ಅನಂತ ಸುಬ್ಬರಾವ್ ಅವರು ಅತ್ಯಂತ ಹೆಚ್ಚು ಇಷ್ಟಪಡುವ ಪತ್ರಿಕೆ ವಾರ್ತಾಭಾರತಿ. ಅದರಲ್ಲಿ ಬರುವ ಲೇಖನಗಳು ಮತ್ತು ಸಂಪಾದಕೀಯಗಳನ್ನು ಅವರು ತಪ್ಪದೇ ಓದುತ್ತಿದ್ದರು. ಸಂಪಾದಕೀಯ ಬರಹಗಳು ಹಾಗೂ ನನ್ನ ಅಂಕಣ ಬರಹಗಳ ಸಂಗ್ರಹ ಪುಸ್ತಕ ಬರಬೇಕೆಂದು ಹೇಳುತ್ತಿದ್ದರು. ರಾಜ್ಯದಲ್ಲಿ ಸಂಚರಿಸುವಾಗ ಕಾರ್ಮಿಕರ ಸಭೆಗಳಲ್ಲಿ ವಾರ್ತಾಭಾರತಿ ಪತ್ರಿಕೆಯನ್ನು ಓದಬೇಕೆಂದು ಮನವಿ ಮಾಡುತ್ತಿದ್ದರು. ಒಂದು ವಾರ ನನ್ನ ಅಂಕಣ ಬರದಿದ್ದರೆ ಯಾಕೆ ಬರೆದಿಲ್ಲ ಎಂದು ಕೇಳುತ್ತಿದ್ದರು. ಮನೆಗೆ ‘ವಾರ್ತಾಭಾರತಿ’ ಬರುವುದು ತಡವಾದರೆ ಯಾಕೆ ಬಂದಿಲ್ಲ ಎಂದೇ ಕೇಳುತ್ತಿದ್ದರು.

ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಹಳ್ಳಿಯೊಂದರಿಂದ ಬಂದ ಅನಂತ ಸುಬ್ಬರಾವ್ ಅರುವತ್ತರ ದಶಕದಲ್ಲಿ ಹಾಸನದಲ್ಲಿ ವ್ಯಾಸಂಗ ಮಾಡಿದ ನಂತರ ಜೀವ ವಿಮಾ ಕಚೇರಿಯಲ್ಲಿ ಕೆಲಸಕ್ಕೆ ಸೇರಿ ಬೆಂಗಳೂರಿಗೆ ಬಂದರು.ವಿಮಾ ಸಂಸ್ಥೆಯಲ್ಲಿ ಕೆಲಸ ಮಾಡುವಾಗಲೇ ನೌಕರರ ಸಂಘಟನೆಯನ್ನು ಸೇರಿದರು. ಅಲ್ಲಿ ಮಾರ್ಕ್ಸ್ ವಾದದ ಸೈದ್ಧಾಂತಿಕ ದೀಕ್ಷೆ ಪಡೆದ ಅವರು ಮತ್ತೆ ತಿರುಗಿ ನೋಡಲಿಲ್ಲ. ವಿಮಾ ಸಂಸ್ಥೆಯಲ್ಲಿ ಅಧಿಕಾರಿಯಾಗಿ ಭಡ್ತಿ ಪಡೆಯಲು ಆಡಳಿತದಿಂದ ಸೂಚನೆ ಬಂದರು ಅದನ್ನು ಅನಂತ ಸುಬ್ಬರಾವ್ ನಿರಾಕರಿಸಿದರು. ಪ್ರಮೋಶನ್ ಪಡೆದರೆ ಉನ್ನತ ಅಧಿಕಾರಿಯಾಗಬಹುದು ಆದರೆ ಕಾರ್ಮಿಕ ಸಂಘಟನೆಯಲ್ಲಿ ಸೇವೆ ಮಾಡುವ ಅವಕಾಶ ತಪ್ಪಿ ಹೋದರೆ ಹೇಗೆ ಎಂದು ಭಕ್ತಿಯನ್ನು ಅವರು ಇಷ್ಟಪಡಲಿಲ್ಲ.

ಎಪ್ಪತ್ತರ ದಶಕದ ಆರಂಭದಲ್ಲಿ ಕಮ್ಯುನಿಸ್ಟ್ ಪಕ್ಷದ ಪೂರ್ಣಾವಧಿ ಕಾರ್ಯಕರ್ತನಾಗಿ ಸಮತೆಯ ಹೋರಾಟಕ್ಕೆ ತಮ್ಮನ್ನು ಸಮರ್ಪಿಸಿಕೊಂಡ ಅನಂತ ಸುಬ್ಬರಾವ್ ಜೀವ ವಿಮಾ ಕೆಲಸಕ್ಕೆ ರಾಜೀನಾಮೆ ನೀಡಿದರು. ಆಗ ಸೋವಿಯತ್ ರಶ್ಯ ಸೇರಿದಂತೆ ಪೂರ್ವ ಯುರೋಪಿನ ಕೆಲವು ದೇಶಗಳಲ್ಲಿ ಕಮ್ಯುನಿಸ್ಟ್ ಸರಕಾರಗಳು ಅಸ್ತಿತ್ವದಲ್ಲಿ ಇದ್ದವು. ಭಾರತದ ಕಮ್ಯುನಿಸ್ಟ್ ಪಕ್ಷದ ಹಲವಾರು ನಾಯಕರು ಮತ್ತು ಕಾರ್ಯಕರ್ತರು ಕಮ್ಯುನಿಸ್ಟ್ ದೇಶಗಳಿಗೆ ಅಧ್ಯಯನ ಕಾರಣಕ್ಕಾಗಿ ಪ್ರವಾಸ ಮಾಡಿ ಬರಲು ಆಹ್ವಾನ ಇರುತ್ತಿತ್ತು. ಇಂಥ ಅವಕಾಶ ಅನಂತ ಸುಬ್ಬರಾವ್ ಅವರಿಗೆ ಹಲವಾರು ಸಲ ಬಂದಾಗ ಅಲ್ಲಿ ಪ್ರವಾಸ ಹೋದರೆ ಇಲ್ಲಿ ಸಾರಿಗೆ ಮತ್ತಿತರ ಕಾರ್ಮಿಕ ಸಂಘಟನೆಗಳನ್ನು ನೋಡಿಕೊಳ್ಳುವವರು ಯಾರು? ಎಂದು ಅದನ್ನು ಒಪ್ಪಿಕೊಳ್ಳಲಿಲ್ಲ. ಕಾಮ್ರೇಡ್ ದಣಿವರಿಯದ ಕಾರ್ಮಿಕ ಹೋರಾಟಗಾರ .

ಲಕ್ಷಾಂತರ ಕಾರ್ಮಿಕರ ಅಚ್ಚುಮೆಚ್ಚಿನ ನಾಯಕ. ಬರೀ ಕಾರ್ಮಿಕ ನಾಯಕ ಮಾತ್ರವಲ್ಲ ಮಾರ್ಕ್ಸ್ ವಾದದ ಸೈದ್ಧಾಂತಿಕ ತತ್ವ ಶಾಸ್ತ್ರ ದಲ್ಲಿ ಪಾರಂಗತ. ಕರ್ನಾಟಕ ಕಂಡ ಈ ಅಪರೂಪದ ಕಮ್ಯುನಿಸ್ಟ್ ಸಂಗಾತಿ, ಎಚ್.ವಿ. ಅನಂತ ಸುಬ್ಬರಾವ್ ನಿರ್ಗಮನ ಅಕ್ಷರಶಃ ಸಾರ್ವಜನಿಕ ಜೀವನಕ್ಕೆ ತುಂಬಲಾಗದ ನಷ್ಟ. ಅವರನ್ನು ತುಂಬಾ ಹತ್ತಿರದಿಂದ ನೋಡಿದ ನನ್ನಂಥವರಿಗೆ ಈ ಅಗಲಿಕೆಯನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ಒಂದೂವರೆ ಲಕ್ಷಕ್ಕೂ ಹೆಚ್ಚು ಕಾರ್ಮಿಕರ ಅಚ್ಚುಮೆಚ್ಚಿನ ನಾಯಕರಾಗಿದ್ದ ಅನಂತ ಸುಬ್ಬರಾವ್ ನಮ್ಮ ಸಾರ್ವಜನಿಕ ಜೀವನಕ್ಕೆ ಒಂದು ಘನತೆಯನ್ನು ತಂದು ಕೊಟ್ಟವರು. ಅವರದು ಸರಳ, ಸಜ್ಜನಿಕೆಯ ವ್ಯಕ್ತಿತ್ವ. ಅವರ ಬದುಕು ಪಾರದರ್ಶಕವಾಗಿತ್ತು. ನಂಬಿದ ಸಿದ್ಧಾಂತ ಮತ್ತು ಶ್ರಮಜೀವಿಗಳ ಹೋರಾಟದಲ್ಲಿ ಎಂದೂ ರಾಜಿ ಮಾಡಿಕೊಳ್ಳದ ಅನಂತ ಸುಬ್ಬರಾವ್ ತಮ್ಮನ್ನು ತಾವು ಮೇಣದ ಬತ್ತಿಯಂತೆ ಸುಟ್ಟುಕೊಂಡು ಚಳವಳಿ ಕಟ್ಟಿದವರು. ಅವರ ಮಾತು ಮತ್ತು ಕೃತಿಯಲ್ಲಿ ಒಂದಿಂಚು ವ್ಯತ್ಯಾಸವೂ ಇರಲಿಲ್ಲ. ಅನಂತ ಸುಬ್ಬರಾವ್ ಕೇವಲ ವೇದಿಕೆಯ ಮೇಲೆ ನಿಂತು ಭಾಷಣ ಮಾಡುವ ನಾಯಕ ಅಲ್ಲ.ಕಮ್ಯುನಿಸ್ಟ್ ಪಕ್ಷದ ಪ್ರತೀ ಕಾರ್ಯಕರ್ತನ ,

ಕಾರ್ಮಿಕ ಸಂಘಟನೆಯ ಪ್ರತಿಯೊಬ್ಬ ಕಾರ್ಮಿಕನ ಕಷ್ಟ ,

ತಾಪತ್ರಯಗಳಿಗೆ ಸ್ಪಂದಿಸುತ್ತಿದ್ದರು. ಅವರ ಮನೆಗೆ ಹೋಗಿ ಆರೋಗ್ಯದ ಸ್ಥಿತಿ ಗತಿಗಳ ಬಗ್ಗೆ ವಿಚಾರಿಸುತ್ತಿದ್ದರು. ವೈದ್ಯಕೀಯ ವರದಿಗಳನ್ನು ನೋಡಿ ಅಗತ್ಯವೆನಿಸಿದರೆ ಚಿಕಿತ್ಸೆಗೆ ಏರ್ಪಾಟು ಮಾಡುತ್ತಿದ್ದರು.

ವೈಯಕ್ತಿಕವಾಗಿ ನನ್ನ ಅನುಭವವನ್ನು ಹೇಳಬೇಕೆಂದರೆ ನಾನು ಅಸ್ವಸ್ಥತೆಯಿಂದ ಹಲವಾರು ಸಲ ಆಸ್ಪತ್ರೆಗೆ ಸೇರಿದಾಗ ಸ್ವತಃ ತಾವೇ ಆಸ್ಪತ್ರೆಗೆ ಬಂದು ವಿಚಾರಿಸಿದವರು ಅನಂತ ಸುಬ್ಬರಾವ್. ಇಂಥವರನ್ನು ಹೇಗೆ ಮರೆಯಲು ಸಾದ್ಯ?

ಅನಂತ ಸುಬ್ಬರಾವ್ ಒಮ್ಮ್ಮೆಲೇ ಬೆಳೆದು ನಿಂತವರಲ್ಲ.ಒಂದೊಂದು ಹೆಜ್ಜೆ ಇಡುತ್ತ ಬಹು ಎತ್ತರಕ್ಕೆ ಬೆಳೆದು ನಿಂತವರು. ಬರೀ ಸಿದ್ಧಾಂತವನ್ನು ಅರಿತುಕೊಂಡು ಅವರು ಸುಮ್ಮನಿರಲಿಲ್ಲ. ಸುಲಿಗೆ, ಶೋಷಣೆಯಿಲ್ಲದ ಹೊಸ ಸಮಾಜವನ್ನು ನಿರ್ಮಿಸುವ ಕನಸನ್ನು ನನಸಾಗಿಸಲು ತನ್ನ ಇಡೀ ಬದುಕನ್ನೇ ಸಮರ್ಪಿಸಿಕೊಂಡರು. ಸಾರಿಗೆ ಸಂಸ್ಥೆಯ ಕಾರ್ಮಿಕರನ್ನು ಸಂಘಟಿಸುವುದು ಸುಲಭದ ಸಂಗತಿಯಲ್ಲ.ಅದಕ್ಕಾಗಿ ಇಡೀ ಕರ್ನಾಟಕವನ್ನು ನೂರಾರು ಸಲ ಸುತ್ತಿದರು. ಪ್ರತೀ ಜಿಲ್ಲೆ ‘ತಾಲೂಕು’ಡಿಪೊಗೆ ಹೋಗಿ ಕಾರ್ಮಿಕರ ಕಷ್ಟಗಳನ್ನು ಆಲಿಸಿದರು. ಸಮಸ್ಯೆ ಅರಿತುಕೊಂಡು ಸರಕಾರಕ್ಕೆ ಮನದಟ್ಟು ಮಾಡುವ ಚಾಕಚಕ್ಯತೆ ಅವರಿಗಿತ್ತು. ಅವರ ಮತ್ತು ನನ್ನ ಐದು ದಶಕಗಳ ಪರಿಚಯ ಮತ್ತು ಒಡನಾಟದಲ್ಲಿ ನಾನು ಕಂಡಂತೆ ಅವರಿಗೆ ಸ್ವಂತದ ಬದುಕಿಗಿಂತ ಲಕ್ಷಾಂತರ ಸಾರಿಗೆ ನೌಕರರ, ಕಾರ್ಮಿಕರ ಬದುಕು ಮುಖ್ಯವಾಗಿತ್ತು. ಮಧುಮೇಹ, ನೂರೆಂಟು ಆರೋಗ್ಯದ ಸಮಸ್ಯೆಗಳಿದ್ದರೂ ಅನಂತ ಸುಬ್ಬರಾಯರ ಹೋರಾಟ, ಚಳವಳಿಗಳೆದುರು ಅವೆಲ್ಲವೂ ನಗಣ್ಯವಾಗಿದ್ದವು. ಕಾರ್ಮಿಕರ ಪಾಲಿಗೆ ಅವರು ಕೇವಲ ನೇತಾರರಾಗಿರಲ್ಲ್ಲ ಹಿರಿಯಣ್ಣನಂತೆ ಇದ್ದರು. ಅದೊಂದು ಕಾಲವಿತ್ತು ಅನಂತ ಸುಬ್ಬರಾಯರು ಬೆಂಗಳೂರಿನಿಂದ ಒಂದು ಕರೆ ಕೊಟ್ಟರೆ ಸಾಕು ಇಡೀ ರಾಜ್ಯದ ಬಸ್ ಸಂಚಾರ ಒಮ್ಮೆಲೆ ನಿಂತಲ್ಲೇ ನಿಲ್ಲುತ್ತಿದ್ದವು. ಅವರ ಒಂದು ಕರೆಯಿಂದ ಇಡೀ ರಾಜ್ಯದ ಸರಕಾರಿ ಬಸ್ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಳ್ಳುತ್ತಿತ್ತು. ಹೀಗಾಗಿ ಯಾವುದೇ ಸರಕಾರವಿರಲಿ ಅನಂತ ಸುಬ್ಬರಾವ್ ಅವರ ಮಾತನ್ನು ಕಡೆಗಣಿಸುವುದು ಸುಲಭವಾಗಿರಲಿಲ್ಲ.

ಜಾಗತೀಕರಣದ ಶಕೆ ಆರಂಭವಾದ ನಂತರ ಸಾರ್ವಜನಿಕ ಒಡೆತನದ ರಾಜ್ಯ ಸಾರಿಗೆ ಸಂಸ್ಥೆಯನ್ನು ಖಾಸಗೀಕರಣ ಮಾಡಲು ನಿರಂತರವಾಗಿ ಮಸಲತ್ತು ನಡೆಯುತ್ತಲೇ ಬಂತು.ರಾಜ್ಯ ಸಾರಿಗೆ ಸಂಸ್ಥೆಯ ಸಾವಿರಾರು ಕೋಟಿ ರೂಪಾಯಿ ಸೊತ್ತನ್ನು ನುಂಗುವ ಹುನ್ನಾರವನ್ನು ತಡೆಯಲು ಅವಿಶ್ರಾಂತ ಹೋರಾಟ ಮಾಡಿದವರು ಅನಂತ ಸುಬ್ಬರಾವ್. ಸಾರಿಗೆ ಸಂಸ್ಥೆಗೆ ಸಂಬಂಧಿಸಿದ ಅಂಕಿ ಸಂಖ್ಯೆಗಳು ಸದಾ ಅವರ ನಾಲಗೆ ಮೇಲೆ ಇರುತ್ತಿದ್ದವು. ಹೀಗಾಗಿ ಅವರನ್ನು ಯಾಮಾರಿಸಲು ಅಧಿಕಾರಿಗಳಿಗೆ ಸಾಧ್ಯವಾಗುತ್ತಿರಲಿಲ್ಲ.

ತಿಂಗಳು, ಎರಡು ತಿಂಗಳಿಗೊಮ್ಮೆ ಕರ್ನಾಟಕ ಸುತ್ತಿ ಶ್ರಮಿಕರ ಕಷ್ಟ ಸುಖಗಳನ್ನು ಆಲಿಸದಿದ್ದರೆ ಅವರಿಗೆ ಸಮಾಧಾನವಿರುತ್ತಿರಲಿಲ್ಲ. ಬೆಂಗಳೂರಿನಲ್ಲಿ ಇದ್ದಾಗ ಅವರು ಇಡೀ ದಿನ ಎಐಟಿಯುಸಿ ಕಚೇರಿಯಲ್ಲೇ ಇರುತ್ತಿದ್ದರು. ಇಷ್ಟು ಮಾತ್ರವಲ್ಲ ರಾತ್ರಿ ಕಚೇರಿಯಲ್ಲೇ ಉಳಿಯುತ್ತಿದ್ದರು. ಚಾಪೆ, ಪೇಪರ್‌ಗಳನ್ನು ಹಾಸಿಕೊಂಡು ಮಲಗುತ್ತಿದ್ದರು. ನಾನೂ ಅನೇಕ ಸಲ ರಾತ್ರಿಯೆಲ್ಲ ಚರ್ಚಿಸುತ್ತ ಅಲ್ಲಿರುತ್ತಿದ್ದೆ.

ಅನಂತ ಸುಬ್ಬರಾವ್ ಅವರ ಮನೆಯಲ್ಲಿ ಜಾತಿ ಎಂಬುದು ಯಾರಿಗೂ ಗೊತ್ತಿರಲಿಲ್ಲ. ಯಾರೇ ಬರಲಿ ಅವರ ಜೊತೆಗೆ ಕುಳಿತು ಊಟ ಮಾಡಬೇಕೆಂದು ಅವರು ಬಯಸುತ್ತಿದ್ದರು. ತಮ್ಮ ತಟ್ಟೆಯನ್ನು ತಾವೇ ತೊಳೆಯುತ್ತಿದ್ದ ಅವರು, ಬಹುತೇಕ ಸಲ ಮನೆಯಲ್ಲಿ ಊಟ ಮಾಡಿದ ಎಲ್ಲರ ಪಾತ್ರೆಗಳನ್ನು ತೊಳೆಯುವುದಕ್ಕೆ ಹಿಂಜರಿಯುತ್ತಿರಲಿಲ್ಲ. ನಮ್ಮ ತಟ್ಟೆಯನ್ನು ನಾವೇ ತೊಳೆಯಬೇಕೆಂಬುದನ್ನು ನಾನು ಅವರಿಂದ ಕಲಿತೆ.ಮಗಳು ಜ್ಯೋತಿ ಅಂತರ್ಜಾತಿ ಮದುವೆಯಾಗುವು ದಾಗಿ ಹೇಳಿದಾಗ ಕಮ್ಯುನಿಸ್ಟ್ ಪಕ್ಷದ ಸಂಗಾತಿ ದಲಿತ ಸಮುದಾಯದಿಂದ ಬಂದ ಸಾತಿ ಸುಂದರೇಶ ಜೊತೆಗೆ ಅನಂತ ಸುಬ್ಬರಾವ್ ಅವರು ತಾವೇ ನಿಂತು ಮದುವೆ ಮಾಡಿಸಿದರು.

ವಿಧಾನ ಸಭಾ ಚುನಾವಣೆಗೆ ಪಕ್ಷದ ಪರವಾಗಿ ಸ್ಪರ್ಧಿಸಲು ಕಮ್ಯುನಿಸ್ಟ್ ಪಕ್ಷದಿಂದ ಸೂಚನೆ ಬಂದಾಗೆಲ್ಲ ನಿರಾಕರಿಸುತ್ತಲೇ ಬಂದ ಅನಂತ ಸುಬ್ಬರಾವ್ ಪಕ್ಷದ ಒತ್ತಾಯ ತೀವ್ರವಾದಾಗ ಬೆಂಗಳೂರಿನ ರಾಜಾಜಿ ನಗರದಿಂದ ಒಂದು ಬಾರಿ ಸ್ಪರ್ಧಿಸಿದರು. ನಂತರ ಚುನಾವಣೆ ನಮ್ಮಂಥವರಿಗಲ್ಲ ಎಂದು ಮತ್ತೆ ಅದರ ಉಸಾಬರಿಗೆ ಹೋಗಲಿಲ್ಲ. ಸಮಾಜವಾದಿ ನಾಯಕ ಶಾಂತವೇರಿ ಗೋಪಾಲಗೌಡರ ಒಡನಾಟವನ್ನೂ ಹೊಂದಿದ್ದ ಅನಂತ ಸುಬ್ಬರಾಯರಂಥ ಅಪರೂಪದ ನಾಯಕನನ್ನು ಕಳೆದುಕೊಂಡು ರಾಜ್ಯದ ಕಾರ್ಮಿಕ ಚಳವಳಿ, ಕಮ್ಯುನಿಸ್ಟ್ ಪಕ್ಷ ಮಾತ್ರವಲ್ಲ ಸಾರ್ವಜನಿಕ ಜೀವನದಲ್ಲಿ ಬಹುದೊಡ್ಡ ಶೂನ್ಯ ಆವರಿಸಿದೆ. ಚಳವಳಿಗಳು ಇರುವವರೆಗೆ ಅನಂತಸುಬ್ಬರಾವ್ ಇದ್ದೇ ಇರುತ್ತಾರೆ ಅಂದರೆ ಅತಿಶಯೋಕ್ತಿಯಲ್ಲ.

ಸಾಮಾನ್ಯವಾಗಿ ಸಾರ್ವಜನಿಕ ರಂಗದ ಯಾರಾದರೂ ವ್ಯಕ್ತಿ ಅಸುನೀಗಿದಾಗ ಕೊನೆಯುಸಿರೆಳೆಯುವವರೆಗೆ ತಾನು ನಂಬಿದ ಆದರ್ಶಕ್ಕಾಗಿ ದುಡಿದರು ಎಂಬ ವರ್ಣನೆ ಬರುತ್ತಿರುತ್ತದೆ.ಕಾಮ್ರೆಡ್ ಅನಂತ ಸುಬ್ಬರಾವ್ ಅವರು ಅಕ್ಷರಶಃ ಅದೇ ರೀತಿ ನಿರ್ಗಮಿಸಿದರು. ಜನವರಿ 29 ಕ್ಕೆ ಸಾರಿಗೆ ನೌಕರರ ಚಲೋ ಬೆಂಗಳೂರು ಪ್ರತಿಭಟನೆಯನ್ನು ನಡೆಸುವ ಯೋಚನೆಯಲ್ಲ್ ಅನಂತಸುಬ್ಬರಾವ್ ಇದ್ದರು. ಅದರ ಬಗ್ಗೆ ತಮ್ಮ ಸಂಘಟನೆಯ ಸಂಗಾತಿಗಳ ಜೊತೆಗೆ ಚರ್ಚಿಸುತ್ತಿರುವಾಗಲೇ ಉಸಿರು ನಿಂತು ಹೋಯಿತು. ಅಂತಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅವರ ಪ್ರಾರ್ಥಿವ ಶರೀರಕ್ಕೆ ಗೌರವಿಸಲು ಮನೆಗೆ ಬಂದಾಗ ಅನಂತ ಸುಬ್ಬರಾವ್ ಅವರ ಜ್ಯೋತಿ ತಮ್ಮ ತಂದೆ ಸಾರಿಗೆ ನೌಕರರ ಬೇಡಿಕೆಗಳು ಈಡೇರದ ಕೊರಗಿನಲ್ಲೇ ಹೊರಟು ಹೋದರು, ದಯವಿಟ್ಟು ಅವರ ಈ ಕೊನೆಯಾಸೆಯನ್ನು ಈಡೇರಿಸಿ ಎಂದು ಕೊಂಡರು. ಇದು ಅನಂತ ಸುಬ್ಬರಾವ್ ಕುಟುಂಬದ ಎಲ್ಲರೂ ಹೇಗೆ ಒಂದು ಆದರ್ಶಕ್ಕೆ ಬದ್ಧರಾಗಿದ್ದರು ಎಂಬುದಕ್ಕೆ ಒಂದು ಉದಾಹರಣೆಯಾಗಿದೆ.

ಸಾಮಾನ್ಯವಾಗಿ ದೊಡ್ಡವರು ನಿರ್ಗಮಿಸಿದಾಗ ಅವರನ್ನು ಮಾತ್ರ ಹೊಗಳಿ ಅವರ ಸಾಧನೆಯ ಹಿಂದೆ ಇರುವವರನ್ನು ಮರೆತು ಬಿಡುತ್ತೇವೆೆ. ಬಹು ಎತ್ತರಕ್ಕೆ ಬೆಳೆದು ನಿಂತ ಬಾಬಾಸಾಹೇಬ ಅಂಬೇಡ್ಕರ್ ಅವರ ಹಿಂದೆ ಅವರ ಜೀವನ ಸಂಗಾತಿ ರಮಾಬಾಯಿ ಅವರ ಸಣ್ಣಪುಟ್ಟ ಮಕ್ಕಳನ್ನು ಕಟ್ಟಿಕೊಂಡು ಪಟ್ಟ ಪರಿಶ್ರಮ, ತ್ಯಾಗ ಮತ್ತು ಅವರ ಸಾವಿನ ನಂತರ ಅಂಬೇಡ್ಕರ್ ಸೇವೆಗೆ ತಮ್ಮನ್ನು ಸಮರ್ಪಿಸಿಕೊಂಡ ಸವಿತಾ ಅಂಬೇಡ್ಕರ್ ಅವರು ಯಾರ ಗಮನಕ್ಕೂ ಬರುವುದಿಲ್ಲ.ಅದೇ ರೀತಿ ದುಡಿಯುವ ಜನರ ಹೋರಾಟಕ್ಕೆ ತಮ್ಮನ್ನು ಅರ್ಪಿಸಿಕೊಂಡ ಅನಂತ ಸುಬ್ಬರಾವ್ ಅವರ ಸಾಧನೆಯ ಹಿಂದೆ ಅವರ ಜೀವನ ಸಂಗಾತಿ ನಾಗರತ್ನಮ್ಮನವರ ಕೊಡುಗೆಯನ್ನು ಮರೆಯಲು ಆಗುವುದಿಲ್ಲ. ಸುಮಾರು ಐವತ್ತು ವರ್ಷಗಳ ಕಾಲ ಮನೆಯ ಹೊಣೆಯನ್ನು ತಾನೇ ಹೊತ್ತು ಕೊಂಡ ನಾಗರತ್ನಮ್ಮ ಯಾವುದೂ ಪತಿಯ ಹೋರಾಟದ ಬದುಕಿಗೆ ಅಡ್ಡಿಯಾಗದಂತೆ ನೋಡಿಕೊಂಡರು. ಇದು ಎಲ್ಲ ದೊಡ್ಡವರಿಗೆ ಅನ್ವಯಿಸುವ ಸತ್ಯ ಸಂಗತಿ.

ಅನಂತ ಸುಬ್ಬರಾವ್ ಅವರಂಥ ವ್ಯಕ್ತಿ ನಮ್ಮ ಇಂದಿನ ಸಾರ್ವಜನಿಕ ಜೀವನದಲ್ಲಿ ಲಕ್ಷಕ್ಕೊಬ್ಬರೂ ಸಿಗುವುದಿಲ್ಲ. ಅವರ ರಾಜಿ ರಹಿತ ಹೋರಾಟ, ಜೈಲು ವಾಸ, ಲಾಠಿ ಏಟು, ಬದ್ಧತೆ, ತ್ಯಾಗ ಛಲ, ಸರಳತೆ, ಸಜ್ಜನಿಕೆ, ಜಿಗುಟುತನ ಉಳಿದವರಿಗೆ ಮಾದರಿಯಾಗಿದೆ. ಕೊನೆಯ ದಾಗಿ ಹಾಸನ ಜಿಲ್ಲೆಯ ಬಾಗೂರು ನವಿಲೆ ರೈತ ಹೋರಾಟದ ಸಮಯದಲ್ಲಿ ಪ್ರಧಾನಿಯಾಗಿದ್ದ ಎಚ್.

ಡಿ.ದೇವೇಗೌಡರು ಸ್ವತಃ ಫೋನ್ ಮಾಡಿ ಚಳವಳಿಯನ್ನು ವಾಪಸ್ ಪಡೆಯಲು ಮನವಿ ಮಾಡಿದರೂ ಅನಂತ ಸುಬ್ಬರಾವ್ ಜಗ್ಗಲಿಲ್ಲ. ಸೊಪ್ಪುಹಾಕಲಿಲ್ಲ. ಇದು ಅವರ ದಿಟ್ಟತನಕ್ಕೆ ಒಂದು ಉದಾಹರಣೆಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಸನತ್ ಕುಮಾರ ಬೆಳಗಲಿ

contributor

Similar News