ಜಯಪ್ರಕಾಶ್ ನಾರಾಯಣ ಮತ್ತು ರಾಮ ಮನೋಹರ್ ಲೋಹಿಯಾ ಅವರು ಸಾಕಷ್ಟು ಓದಿಕೊಂಡವರು. ಲೋಹಿಯಾ ಅವರಂತೂ ಜರ್ಮನಿಯಲ್ಲಿ ವ್ಯಾಸಂಗ ಮಾಡಿದವರು. ಹಿಟ್ಲರ್‌ನ ಅತಿರೇಕವನ್ನು ಕಣ್ಣಾರೆ ಕಂಡವರು. ಗಾಂಧೀಜಿ ಹಂತಕ ಗೋಡ್ಸೆ ಯಾರೆಂಬುದು, ಯಾವ ಸಂಘಟನೆಗೆ ಸೇರಿದವನು ಎಂಬುದು ಇವರಿಬ್ಬರಿಗೂ ಗೊತ್ತಿತ್ತು.ಅದರೂ ಸಂಘ ಪರಿವಾರದ ಒಡನಾಟವನ್ನು ಅವರು ಬಿಟ್ಟು ಕೊಡಲಿಲ್ಲ. ಸಂಘದ ಬಲೆಗೆ ಬಿದ್ದ ಇವರು ಕಾಂಗ್ರೆಸೇತರ ಪಕ್ಷಗಳನ್ನು ಒಂದು ಗೂಡಿಸುವ, ಒಂದೇ ಪಕ್ಷ ಮಾಡುವ ಸಾಹಸಕ್ಕೆ ಜೈ ಹಾಕಿ ಪರೋಕ್ಷವಾಗಿ ಕೋಮುವಾದಿ ಶಕ್ತಿಗಳು ಈ ಪರಿ ಬೆಳೆಯಲು ಕಾರಣರಾದರು.

ಚುನಾವಣಾ ಆಯೋಗವನ್ನು ಕೈ ವಶ ಮಾಡಿಕೊಂಡು ಅದರ ಮುಖ್ಯ ಆಯುಕ್ತರಿಂದ ಮಾಡಬಾರದ್ದನ್ನೆಲ್ಲ ಮಾಡಿಸಿದ, ಮಾಡಿಸುತ್ತಿರುವ ನಾಗಪುರ ನಿಯಂತ್ರಿತ ನರೇಂದ್ರ ಮೋದಿ ಸರಕಾರ ಹೇರಿರುವ ಅಘೋಷಿತ ತುರ್ತು ಪರಿಸ್ಥಿತಿಯಷ್ಟು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಹೇರಿದ್ದ ಘೋಷಿತ ಪರಿಸ್ಥಿತಿ ಭಯಾನಕವಾಗಿರಲಿಲ್ಲ.

ನಾನು ಎರಡೂ ತುರ್ತು ಪರಿಸ್ಥಿತಿಗಳನ್ನು ನೋಡಿದ್ದೇನೆ.

1975_-76ರಲ್ಲಿ ಇಂದಿರಾ ಗಾಂಧಿ ಅವರು ತುರ್ತು ಪರಿಸ್ಥಿತಿಯನ್ನು ಘೋಷಿಸಿದಾಗ ನನಗೆ 23 ವಯಸ್ಸು, ಆಗಲೇ ‘ಸಂಯುಕ್ತ ಕರ್ನಾಟಕ’ ದ ಮೂಲಕ ಪತ್ರಿಕೋದ್ಯಮವನ್ನು ಪ್ರವೇಶಿಸಿದ್ದೆ.ಜನಸಂಘ (ಈಗಿನ ಬಿಜೆಪಿ) ಹಾಗೂ ಸಂಸ್ಥಾ ಕಾಂಗ್ರೆಸ್‌ನ ಕೆಲ ನಾಯಕರನ್ನು ಬಂಧಿಸಲಾಗಿತ್ತು. ಆದರೆ ರೈಲು, ಬಸ್ ಸಂಚಾರವನ್ನು ಸ್ಥಗಿತಗೊಳಿಸಿರಲಿಲ್ಲ. ತುರ್ತು ಪರಿಸ್ಥಿತಿ ಜೊತೆಗೆ 20 ಅಂಶಗಳ ಆರ್ಥಿಕ, ಸಾಮಾಜಿಕ ಕಾರ್ಯಕ್ರಮಗಳನ್ನು ಪ್ರಧಾನಿ ಘೋಷಿಸಿದ್ದರು. ಇದರಿಂದಾಗಿ ದುಗ್ಗಾಣಿ ದುಡ್ಡಿಗೆ ಬಡವರನ್ನು ಜೀತದಾಳುಗಳನ್ನಾಗಿ ಇಟ್ಟುಕೊಂಡಿದ್ದ ಸಾಹುಕಾರರ ಬಲೆಯಿಂದ ಅವರನ್ನು ಮುಕ್ತಗೊಳಿಸಲಾಗಿತ್ತು. ಅದೇ ಕಾಲ ಘಟ್ಟದಲ್ಲಿ ಹಲವಾರು ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತರಲಾಯಿತು.ಕರ್ನಾಟಕದಲ್ಲಂತೂ ಮುಖ್ಯಮಂತ್ರಿ ದೇವರಾಜ ಅರಸು ಅವರು ಎಮರ್ಜೆನ್ಸಿಯ ಬಿಸಿ ಯಾರಿಗೂ ತಟ್ಟದಂತೆ ನೋಡಿಕೊಂಡಿದ್ದರು.

ಆಗ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಹೇರಿದರೆಂದು ಆಕೆಯನ್ನು ರಾಕ್ಷಸಿ ಎಂಬಂತೆ ಬಿಂಬಿಸಲಾಗುತ್ತಿತ್ತು. ಈಗಲೂ ಬಿಂಬಿಸಲಾಗುತ್ತಿದೆ. ಆದರೆ ಅಂಥ ಪರಿಸ್ಥಿತಿ ಯಾಕೆ ನಿರ್ಮಾಣವಾಯಿತೆಂಬುದರ ಬಗ್ಗೆ ಯಾರೂ ಹೇಳುವುದಿಲ್ಲ. ಸರಕಾರದ ಭ್ರಷ್ಟಾಚಾರದ ಹಗರಣಗಳ ವಿರುದ್ಧ ಚಳವಳಿ ಮಾಡಲು ಯಾರ ಅಭ್ಯಂತರವೂ ಇರಲಿಲ್ಲ. ಆದರೆ ಚಳವಳಿಯ ನೇತಾರ ಜಯಪ್ರಕಾಶ್ ನಾರಾಯಣ (ಜೆಪಿ) ಅವರು ಪೊಲೀಸರು, ಸೇನಾ ಪಡೆಗಳ ಸೈನಿಕರು, ಸರಕಾರಿ ನೌಕರರು ಸರಕಾರದ ವಿರುದ್ಧ ಸಿಡಿದೇಳಬೇಕೆಂದು ಬಹಿರಂಗ ವಾಗಿ ಕರೆ ನೀಡ ತೊಡಗಿದ್ದರು. ದೇಶದೊಳಗೆ ಈ ರೀತಿ ಬಂಡೇಳುವಂತೆ ಪ್ರಚೋದಿಸುವುದು, ರಾಷ್ಟ್ರ ದ್ರೋಹಕ್ಕೆ ಸಮಾನವಾದ ಅಪರಾಧ ಎಂಬುದು ಸರಕಾರದ ನಿಲುವಾಗಿತ್ತು. ಯಾವುದೇ ಸರಕಾರ ಇಂಥದ್ದನ್ನು ಸಹಿಸುವುದಿಲ್ಲ.

ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ಉಚ್ಚಾಟನೆಗೆ ಪಟ್ಟು ಹಿಡಿದು ಬೀದಿಗೆ ಬಂದಿರುವ ಯಾರೂ ಸರಕಾರದ ವಿರುದ್ಧ ಬಂಡೇಳುವಂತೆ ಪೊಲೀಸರು ಹಾಗೂ ಸೇನಾ ಪಡೆಗಳಿಗೆ ಕರೆ ನೀಡಿಲ್ಲ. ಅವರದು ಒಂದೇ ಬೇಡಿಕೆ ಮುಖ್ಯ ಚುನಾವಣಾ ಆಯುಕ್ತ ಉಚ್ಚಾಟನೆ ಮತ್ತು ಎಸ್‌ಐಆರ್ ರದ್ದತಿ. ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಯಾಕೆ ಇವರ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ?

ಜಯಪ್ರಕಾಶ್ ನಾರಾಯಣ (ಜೆಪಿ) ಮತ್ತು ಡಾ.ರಾಮ ಮನೋಹರ್ ಲೋಹಿಯಾ ಇವರಿಬ್ಬರೂ ಭಾರತದ ಸಮಾಜವಾದಿ ಚಳವಳಿಯ ಬಹುದೊಡ್ಡ ನೇತಾರರು. ಮಹಾತ್ಮಾ ಗಾಂಧೀಜಿ ಅವರ ಅಚ್ಚು ಮೆಚ್ಚಿನ ಶಿಷ್ಯರು. ಆರಂಭದ ದಿನಗಳಲ್ಲಿ ಮಾರ್ಕ್ಸ್‌ವಾದದತ್ತ ಒಲವು ಹೊಂದಿದವರು. ನಂತರ ಗಾಂಧೀಜಿ ತಾತ್ವಿಕ ನಿಲುವಿಗೆ ಪೂರಕವಾಗಿ ತಮ್ಮದೇ ಸಮಾಜವಾದಿ ಸಿದ್ಧಾಂತವನ್ನು ಪ್ರತಿಪಾದಿಸಿದವರು.ಅನುಷ್ಠಾನದಲ್ಲಿ ಮಾತ್ರ ಕಾಂಗ್ರೆಸನನ್ನು ಅದರಲ್ಲೂ ಗಾಂಧಿ, ನೆಹರೂ ಕುಟುಂಬವನ್ನು ವಿರೋಧಿಸುವುದು ಅವರ ಏಕೈಕ ಸಿದ್ಧಾಂತ. ಇಂದಿನ ಭಯಾನಕ ಪರಿಸ್ಥಿತಿಗೆ ಇವರ ಕೊಡುಗೆ ಸಣ್ಣದೇನಲ್ಲ. ಕಾಂಗ್ರೆಸ್ ವಿರೋಧ ಅದರಲ್ಲೂ ನೆಹರೂ ಕುಟುಂಬದ ಬಗೆಗಿನ ದ್ವೇಷ ಇವರನ್ನು ದಾರಿ ತಪ್ಪಿಸಿತು.ಗಾಂಧಿ ಹತ್ಯೆಯ ನಂತರ ಅದಕ್ಕೆ ಕಾರಣವಾದ ಕೋಮುವಾದಿ ಸಂಘಟನೆಗಳನ್ನು ಜನರು ನಂಬುತ್ತಿರಲಿಲ್ಲ. ಲೋಕಸಭೆಯಲ್ಲಿ ಒಬ್ಬಿಬ್ಬರು ಸದಸ್ಯರು ಮಾತ್ರ ಇದ್ದರು.ಇದರಿಂದ ಆರೆಸ್ಸೆಸ್ ರೋಸಿ ಹೋಗಿತ್ತು. ಅದಕ್ಕೆ ಸಾಮಾಜಿಕ ಮತ್ತು ರಾಜಕೀಯ ಮಾನ್ಯತೆ ಬೇಕಾಗಿತ್ತು. ಗುರೂಜಿ ಗೋಳ್ವಲ್ಕರ್ ಆದೇಶದ ಮೇರೆಗೆ ಕಾಂಗ್ರೆಸ್ ವಿರೋಧಿ ರಂಗದ ನಿರ್ಮಾಣಕ್ಕಾಗಿ ಸಂಘದ ಹಿರಿಯ ನಾಯಕ ನಾನಾಜಿ ದೇಶ್‌ಮುಖ್ ಅವರು ಹಿರಿಯ ಸಮಾಜವಾದಿ ನಾಯಕರಾದ ಜಯಪ್ರಕಾಶ್ ನಾರಾಯಣ ಮತ್ತು ರಾಮ ಮನೋಹರ್ ಲೋಹಿಯಾ ಅವರನ್ನು ಭೇಟಿಯಾಗಿ ಭಾರತದ ಬಹುತೇಕ ಜನರು ಸಂಘವನ್ನು ದೂರ ವಿಟ್ಟಿದ್ದಾರೆ. ಗಾಂಧಿ ಹತ್ಯೆಯ ಕಳಂಕದಿಂದ ಸಂಘವನ್ನು ಮುಕ್ತ ಮಾಡಲು ಸಹಾಯ ಮಾಡಬೇಕೆಂದು ಪರಿ ಪರಿಯಾಗಿ ಕೇಳಿಕೊಂಡರು. ಇದರ ಪರಿಣಾಮವಾಗಿ ಆರೆಸ್ಸೆಸ್ ರಾಜಕೀಯ ವೇದಿಕೆ ಭಾರತೀಯ ಜನಸಂಘವನ್ನು ಕಾಂಗ್ರೆಸ್ ವಿರೋಧಿ ರಂಗಕ್ಕೆ ಸೇರಿಸಿಕೊಳ್ಳಲಾಯಿತು. ಮುಂದೆ ಜೆಪಿ ಚಳವಳಿಯಲ್ಲೂ ಸಂಘಕ್ಕೆ ಪ್ರಾಧಾನ್ಯ ದೊರಕಿತು.

ಜಯಪ್ರಕಾಶ್ ನಾರಾಯಣ ಮತ್ತು ರಾಮ ಮನೋಹರ್ ಲೋಹಿಯಾ ಅವರು ಸಾಕಷ್ಟು ಓದಿಕೊಂಡವರು. ಲೋಹಿಯಾ ಅವರಂತೂ ಜರ್ಮನಿಯಲ್ಲಿ ವ್ಯಾಸಂಗ ಮಾಡಿದವರು. ಹಿಟ್ಲರ್‌ನ ಅತಿರೇಕವನ್ನು ಕಣ್ಣಾರೆ ಕಂಡವರು. ಗಾಂಧೀಜಿ ಹಂತಕ ಗೋಡ್ಸೆ ಯಾರೆಂಬುದು, ಯಾವ ಸಂಘಟನೆಗೆ ಸೇರಿದವನು ಎಂಬುದು ಇವರಿಬ್ಬರಿಗೂ ಗೊತ್ತಿತ್ತು.ಅದರೂ ಸಂಘ ಪರಿವಾರದ ಒಡನಾಟವನ್ನು ಅವರು ಬಿಟ್ಟು ಕೊಡಲಿಲ್ಲ. ಸಂಘದ ಬಲೆಗೆ ಬಿದ್ದ ಇವರು ಕಾಂಗ್ರೆಸೇತರ ಪಕ್ಷಗಳನ್ನು ಒಂದು ಗೂಡಿಸುವ, ಒಂದೇ ಪಕ್ಷ ಮಾಡುವ ಸಾಹಸಕ್ಕೆ ಜೈ ಹಾಕಿ ಪರೋಕ್ಷವಾಗಿ ಕೋಮುವಾದಿ ಶಕ್ತಿಗಳು ಈ ಪರಿ ಬೆಳೆಯಲು ಕಾರಣರಾದರು. ಆರೆಸ್ಸೆಸ್ ಕೋಮುವಾದಿ ಫ್ಯಾಶಿಸ್ಟ್ ಸಂಘಟನೆ ಎಂದು ಹೇಳಿದರೆ ಜೆಪಿ ಅವರು ‘ಆರೆಸ್ಸೆಸ್ ಕೋಮುವಾದಿ’ ಫ್ಯಾಶಿಸ್ಟ್ ಆದರೆ ನಾನೂ ಕೋಮುವಾದಿ ಎಂದು ಅದನ್ನು ಬಹಿರಂಗ ವಾಗಿ ಬೆಂಬಲಿಸಿದರು.

ಭಾರತೀಯ ಜನಸಂಘ, ಸಂಸ್ಥಾ ಕಾಂಗ್ರೆಸ್, ಸಮಾಜವಾದಿ ಪಕ್ಷ ,ಸ್ವತಂತ್ರ ಪಕ್ಷಗಳನ್ನು ವಿಸರ್ಜನ ಮಾಡಿ ಜನತಾ ದಳ ಎಂಬ ಹೊಸ ಪಕ್ಷವನ್ನು ಸ್ಥಾಪಿಸಿದರು. ಅದನ್ನು ಬಳಸಿಕೊಂಡು ಸಂಘ ಪರಿವಾರ ವ್ಯಾಪಕವಾಗಿ ಬೆಳೆಯಿತು. ಜನಸಂಘವನ್ನು ವಿಸರ್ಜನ ಮಾಡಿದರೂ ಆರೆಸ್ಸೆಸ್ ತನ್ನ ಪ್ರತ್ಯೇಕ ಅಸ್ತಿತ್ವವನ್ನು ಉಳಿಸಿಕೊಂಡಿತ್ತು. ನೇಪತ್ಯದಲ್ಲಿ ಇದ್ದುಕೊಂಡೇ ಮೂರಾರ್ಜಿ ಸರಕಾರವನ್ನು ಅದು ನಿಯಂತ್ರಿಸ ತೊಡಗಿತು.ಹಿರಿಯ ಸಮಾಜವಾದಿ ನಾಯಕ ಮಧು ಲಿಮಯೆ ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸತೊಡಗಿದರು.

ಇದೇ ಕಾರಣಕ್ಕಾಗಿ 1977ರಲ್ಲಿ ಮೊದಲ ಬಾರಿಗೆ ಅಸ್ತಿತ್ವಕ್ಕೆ ಬಂದಿದ್ದ ಮೊರಾರ್ಜಿ ದೇಸಾಯಿ ಅವರ ನೇತೃತ್ವದ ಕಾಂಗ್ರೆಸೇತರ ಸರಕಾರ ಪತನಗೊಂಡಿತು. ತತ್ಪರಿಣಾಮವಾಗಿ ಅಸ್ತಿತ್ವ ಕಳೆದುಕೊಂಡ ಜನಸಂಘ ಮತ್ತೆ ಹೊಸ ಪಕ್ಷಕ್ಕೆ ಚಾಲನೆ ನೀಡಿತು, ಭಾರತೀಯ ಜನಸಂಘ ಹೋಗಿ ಭಾರತೀಯ ಜನತಾ ಪಕ್ಷ ಎಂಬ ಹೆಸರಿನ ಹೊಸ ಪಕ್ಷ ಬಂತು. ಆದರೆ ಜೆಪಿ ಮಾತು ಕೇಳಿ ಅಸ್ತಿತ್ವವನ್ನು ಕಳೆದುಕೊಂಡಿದ್ದ ಸಮಾಜವಾದಿ ಪಕ್ಷ ಮತ್ತೆ ತಲೆ ಎತ್ತಿ ನಿಲ್ಲಲಿಲ್ಲ. ಅಪಾರ ಪರಿಶ್ರಮದಿಂದ ಕಟ್ಟಿದ ಭಾರತದ ಸಮಾಜವಾದಿ ಚಳವಳಿಯನ್ನು ಅದರ ನಾಯಕರ ಲೋಪವೇ ಬಲಿದೆೆಗೆದು ಕೊಂಡಿತು.

ಜಯಪ್ರಕಾಶ್ ನಾರಾಯಣ ಅವರ ಜನ್ಮದಿನದ (ಅಕ್ಟೋಬರ್ 11) ಸಂದರ್ಭದಲ್ಲಿ ಇದೆಲ್ಲ ನೆನಪಿಗೆ ಬಂತು. ಅವರನ್ನು ಗೌರವಿಸುತ್ತಲೇ ಕೆಲವು ಪ್ರಶ್ನೆಗಳ ಸುತ್ತ ಚರ್ಚಿಸುವದುಅಗತ್ಯವೆನಿಸುತ್ತದೆ. ಜೆ.ಪಿ. ಮತ್ತು ಲೋಹಿಯಾ ಅವರಂಥ ಮಹಾ ನಾಯಕರು ದೂರದೃಷ್ಟಿಯಿಂದ ಯೋಚಿಸಿ ಮುಂದಿನ ಪೀಳಿಗೆಗೆ ಮಾರ್ಗದರ್ಶನ ನೀಡಬೇಕಾಗಿತ್ತು. ಆದರೆ ರಾತ್ರಿ ಕಂಡ ಬಾವಿಯಲ್ಲಿ ಹಗಲು ಹೋಗಿ ಬಿದ್ದರು.

ಅವರ ಕಾಂಗ್ರೆಸ್ ವಿರೋಧದ ರಾಜಕಾರಣದ ಬಗ್ಗೆ ಆಕ್ಷೇಪವಿಲ್ಲ. ಆದರೆ ಅದಕ್ಕೆ ಎದುರಾಗಿ ಒಂದು ಮೈತ್ರಿ ಕೂಟ ರಚಿಸುವಾಗ ಯಾವುದೇ ಕಾರ್ಯಕ್ರಮ ಇಲ್ಲದೆ ಕೇವಲ ವಿರೋಧಕ್ಕಾಗಿ ವಿರೋಧ ಎಂಬಂತೆ ಇರಬಾರದಿತ್ತು. ಒಂದು ನಿರ್ದಿಷ್ಟ ಕಾರ್ಯಕ್ರಮದ ಆಧಾರದಲ್ಲಿ ಸಂಯುಕ್ತ ರಂಗವನ್ನು ಕಟ್ಟಬೇಕಿತ್ತು. ಆರೆಸ್ಸೆಸ್‌ನ ಪ್ರಜಾಪ್ರಭುತ್ವ ವಿರೋಧಿ ನಿಲುವು, ಹಿಂದೂ ರಾಷ್ಟ್ರದ ಪರಿಕಲ್ಪನೆ ಇದಾವುದೂ ಗುಟ್ಟಿನ ಸಂಗತಿಯಲ್ಲ, ಒಮ್ಮೆ ಅಧಿಕಾರಕ್ಕೆ ಬಂದರೆ ಬಹುತ್ವ ಭಾರತ ಎಂಥ ಅಪಾಯದ ಅಂಚಿಗೆ ಬಂದು ನಿಲ್ಲುತ್ತದೆ ಎಂಬುದನ್ನು ಜೆಪಿ ಅವರಂಥ ಮಹಾ ನಾಯಕರು ತಿಳಿದುಕೊಳ್ಳಬೇಕಾಗಿತ್ತು. ನಮ್ಮ ನೇತಾರರ ತಪ್ಪಿನ ಪರಿಣಾಮವನ್ನು ನಾವು ಅನುಭವಿಸುತ್ತಿದ್ದೇವೆ. ಜೆಪಿ, ಲೋಹಿಯಾ ಅವರ ಮಹತ್ಕಾರ್ಯಗಳ ಜೊತೆಗೆ ಅವರ ವಿವಾದಾತ್ಮಕ ನಡೆಯನ್ನು ನಾವು ಎಂದೂ ಮರೆಯಬಾರದು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಸನತ್ ಕುಮಾರ ಬೆಳಗಲಿ

contributor