×
Ad

ತಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಪ್ರಿಯಾಂಕ್‌ ಖರ್ಗೆ ಆರೆಸ್ಸೆಸ್ ಬಗ್ಗೆ ಸಿಎಂಗೆ ಪತ್ರ ಬರೆದು ಕಾಲಹರಣ ಮಾಡುತ್ತಿದ್ದಾರೆ: ಆರ್.‌ ಅಶೋಕ

"ಆರೆಸ್ಸೆಸ್ ನಿಷೇಧ ಮಾಡುವ ಗೀಳು ಬಿಟ್ಟು ಉತ್ತರ ಕರ್ನಾಟಕದ ನೆರೆ ಪೀಡಿತ ಪ್ರದೇಶಗಳ ರೈತರ ಸಂಕಷ್ಟಕ್ಕೆ ಸ್ಪಂದಿಸಿ"

Update: 2025-10-13 13:30 IST

ಬೆಂಗಳೂರು: ಉತ್ತರ ಕರ್ನಾಟಕದಲ್ಲಿ ನೆರೆಬಾಧಿತ ರೈತರ ಹೇಳತೀರದ ಗೋಳು; ಇಲ್ಲಿ ಮರಿ ಖರ್ಗೆ ಅವರಿಗೆ ಆರೆಸ್ಸೆಸ್ ನಿಷೇಧ ಮಾಡುವ ಗೀಳು ಎಂದು ವಿಪಕ್ಷ ನಾಯಕ ಆರ್.‌ ಅಶೋಕ ಅವರು ಸಚಿವ ಪ್ರಿಯಾಂಕ್‌ ಖರ್ಗೆ ವಿರುದ್ಧ ಪ್ರತಿಕ್ರಿಯಿಸಿದ್ದಾರೆ.

ಸಚಿವ ಪ್ರಿಯಾಂಕ್‌ ಖರ್ಗೆ ಅವರು ಆರೆಸ್ಸೆಸ್ ಬಗ್ಗೆ ಸಿಎಂಗೆ ಪತ್ರ ಬರೆದಿರುವ ಬಗ್ಗೆ ಸಾಮಾಜಿಕ ಜಾಲತಾಣ x ನಲ್ಲಿ ಪೋಸ್ಟ್ ಮಾಡಿರುವ ಅವರು,

ಕಲಬುರಗಿ ಸೇರಿದಂತೆ ಉತ್ತರ ಕರ್ನಾಟಕದ ರೈತರು ನೆರೆಯಿಂದ ಕಂಗಾಲಾಗಿದ್ದಾರೆ. ಹಸಿರು ಬರ ಘೋಷಣೆ ಮಾಡಿ, ಎಕರೆಗೆ 25,000 ರೂಪಾಯಿ ಪರಿಹಾರ ಕೊಡಿ, ಸಾಲ ಮನ್ನಾ ಮಾಡಿ ಎಂದು ಅನ್ನದಾತರು ಬೀದಿಗಿಳಿದು ಪ್ರತಿಭಟನೆ, ಬಂದ್ ಮಾಡುತ್ತಿದ್ದಾರೆ. ಆದರೆ ಇಲ್ಲಿ ಸಚಿವ  ಪ್ರಿಯಾಂಕ್‌ ಖರ್ಗೆ ಅವರು ತಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಆರೆಸ್ಸೆಸ್ ಬಗ್ಗೆ ಸಿಎಂಗೆ ಪತ್ರ ಬರೆದು ಕಾಲಹರಣ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಸಚಿವ ಪ್ರಿಯಾಂಕ್‌ ಖರ್ಗೆ ಅವರೇ, ಆರೆಸ್ಸೆಸ್ ನಿಷೇಧ ಮಾಡುವ ನಿಮ್ಮ ಗೀಳು ಬಿಡಿ. ಈ ಕೂಡಲೇ ಮುಖ್ಯಮಂತ್ರಿಗಳ ಮನವೊಲಿಸಿ ನೆರೆ ಪೀಡಿತ ಪ್ರದೇಶಗಳಲ್ಲಿ ಹಸಿರು ಬರ ಘೋಷಣೆ ಮಾಡಿಸಿ ರೈತರ ಸಂಕಷ್ಟಕ್ಕೆ ಸ್ಪಂದಿಸಿ ಎಂದು ಆಗ್ರಹಿಸಿದ್ದಾರೆ.

ಜನ ನಿಮಗೆ ಅಧಿಕಾರ ಕೊಟ್ಟಿರೋದು ಬರೀ ರಾಜಕಾರಣ ಮಾಡೋದಕ್ಕೆ ಅಲ್ಲ. ಆರೆಸ್ಸೆಸ್ ಬಗ್ಗೆ ನಿಮ್ಮ ಖಯಾಲಿ ಬಿಟ್ಟು ನಿಮ್ಮ ಜವಾಬ್ದಾರಿ ನಿರ್ವಹಿಸಿ ಎಂದು ಕುಟುಕಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News