×
Ad

ಬಾಹ್ಯಾಕಾಶ ತಂತ್ರಜ್ಞಾನ ನೀತಿ 2025-30 | 5 ಶತಕೋಟಿ ಡಾಲರ್‌ ಮೊತ್ತದ ಹೂಡಿಕೆ ಆಕರ್ಷಿಸುವ ಗುರಿ : ಸಚಿವ ಪ್ರಿಯಾಂಕ್ ಖರ್ಗೆ

Update: 2025-12-15 19:59 IST

 ಪ್ರಿಯಾಂಕ್ ಖರ್ಗೆ

ಬೆಂಗಳೂರು : ರಾಜ್ಯ ಸರಕಾರದ 'ಬಾಹ್ಯಾಕಾಶ ತಂತ್ರಜ್ಞಾನ ನೀತಿಯು 2025-30ʼ ದೇಶದ ಪ್ರಮುಖ ಬಾಹ್ಯಾಕಾಶ ತಂತ್ರಜ್ಞಾನ ಕೇಂದ್ರವಾಗಿ ಕರ್ನಾಟಕವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿನ ಮಹತ್ವದ ಹೆಜ್ಜೆಯಾಗಿದ್ದು, 5 ಶತಕೋಟಿ ಡಾಲರ್‌ ಮೊತ್ತದ ಹೂಡಿಕೆ ಆಕರ್ಷಿಸುವ ಗುರಿ ಹೊಂದಿದೆ ಎಂದು ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಸೋಮವಾರ ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ನವೆಂಬರ್‌ನಲ್ಲಿ ನಡೆದಿದ್ದ ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯ ಸಂದರ್ಭದಲ್ಲಿ ಪ್ರಕಟಿಸಲಾಗಿರುವ ಈ ನೀತಿ ರೂಪಿಸಲಾಯಿತು. ಈ ನೀತಿಯಡಿ 2034ರ ವೇಳೆಗೆ ದೇಶದ ಬಾಹ್ಯಾಕಾಶ ತಂತ್ರಜ್ಞಾನ ಮಾರುಕಟ್ಟೆಯಲ್ಲಿ ಶೇ.50 ರಷ್ಟು ಪಾಲು ಸ್ವಾಧೀನಪಡಿಸಿಕೊಳ್ಳಲು ಮತ್ತು ಜಾಗತಿಕ ಬಾಹ್ಯಾಕಾಶ ಆರ್ಥಿಕತೆಯಲ್ಲಿ ಶೇ.5ರಷ್ಟು ಪಾಲು ಹೊಂದುವ ಗುರಿ ನಿಗದಿಪಡಿಸಲಾಗಿದೆ ಎಂದು ಹೇಳಿದ್ದಾರೆ.

ಬಾಹ್ಯಾಕಾಶ ಕ್ಷೇತ್ರದಲ್ಲಿ ಬೆಳವಣಿಗೆಗೆ ವೇಗ ನೀಡಲು ರಾಜ್ಯವು ಕಾರ್ಯಸಾಧ್ಯವಾದ ಸ್ಪಷ್ಟ ಗುರಿ ಹೊಂದಿದೆ. ಈ ನೀತಿಯ ಮೂಲಕ, ಕರ್ನಾಟಕವು 500ಕ್ಕೂ ಹೆಚ್ಚು ಬಾಹ್ಯಾಕಾಶ ನವೋದ್ಯಮಗಳು ಮತ್ತು ಕಿರು, ಸೂಕ್ಷ್ಮ ಹಾಗೂ ಮಧ್ಯಮ ಉದ್ದಿಮೆಗಳನ್ನು (ಎಂಎಸ್‌ಎಂಇ) ಬೆಂಬಲಿಸುವುದು, 50 ಸಾವಿರಕ್ಕೂ ಹೆಚ್ಚು ಉನ್ನತ-ಕೌಶಲದ ಉದ್ಯೋಗಗಳನ್ನು ಸೃಷ್ಟಿಸುವುದು ಮತ್ತು ಮುಂಬರುವ ವರ್ಷಗಳಲ್ಲಿ ರಾಜ್ಯದಲ್ಲಿನ ಕಂಪನಿಗಳು 50ಕ್ಕೂ ಹೆಚ್ಚು ಉಪಗ್ರಹಗಳನ್ನು ವಿನ್ಯಾಸಗೊಳಿಸಲು ಮತ್ತು ಉಡಾವಣೆ ಮಾಡಲು ಅನುವು ಮಾಡಿಕೊಡುವ ಗುರಿ ನಿಗದಿಪಡಿಸಲಾಗಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಬೆಂಗಳೂರು ನಗರವು ಹೊಸ ಚಿಂತನೆಗಳನ್ನು ರಾಷ್ಟ್ರೀಯ ಮತ್ತು ಜಾಗತಿಕವಾಗಿ ಮಹತ್ವದ ಕಾರ್ಯಕ್ರಮಗಳಾಗಿ ಪರಿವರ್ತಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿದೆ. ಉಪಗ್ರಹಗಳು ಮತ್ತು ವೈಮಾಂತರಿಕ್ಷ, ರೊಬೊಟಿಕ್ಸ್ ಮತ್ತು ಡೀಪ್‌ಟೆಕ್‌ ವಲಯಗಳಲ್ಲಿ ಭಾರತದ ಜಾಗತಿಕ ಆಕಾಂಕ್ಷೆಗಳು ರೂಪುಗೊಳ್ಳುವ ಸ್ಥಳವಾಗಿ ಬೆಂಗಳೂರು ವಿಶ್ವದಾದ್ಯಂತ ಗಮನ ಸೆಳೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಈ ವ್ಯವಸ್ಥೆಯು ಹಿಂದಿನ ದಶಕಗಳಲ್ಲಿ ಎಚ್‌ಎಎಲ್‌, ಎನ್‌ಎಎಲ್‌ ಮತ್ತು ಇಸ್ರೋ ನಂತಹ ಪ್ರತಿಷ್ಠಿತ ಸಂಸ್ಥೆಗಳ ಸ್ಥಾಪನೆಯ ಫಲವಾಗಿ ನಿರ್ಮಾಣಗೊಂಡಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ನಮ್ಮ ಬಾಹ್ಯಾಕಾಶ ತಂತ್ರಜ್ಞಾನ ನೀತಿಯು ಕರ್ನಾಟಕದ ತಂತ್ರಜ್ಞಾನ ನೇತೃತ್ವದಲ್ಲಿನ ಬೆಳವಣಿಗೆಯ ಮುಂದಿನ ಹಂತವನ್ನು ಪ್ರತಿನಿಧಿಸಲಿದೆ. ಡೀಪ್‌ಟೆಕ್‌ ಸಂಶೋಧನೆ, ತಯಾರಿಕೆ ಮತ್ತು ಕೋರ್ ಸಿಸ್ಟಮ್ಸ್‌ ಒಳಗೊಂಡಂತೆ ವಾಸ್ತವ ಜಗತ್ತಿನ ಸವಾಲುಗಳನ್ನು ಪರಿಹರಿಸಲು ಬಾಹ್ಯಾಕಾಶ ಆಧಾರಿತ ಅಪ್ಲಿಕೇಷನ್ಸ್‌ಗಳನ್ನು ಅಭಿವೃದ್ಧಿಪಡಿಸುವ ಹಾಗೂ ನಾವೀನ್ಯತೆಗಳಿಗೆ ಮಾರುಕಟ್ಟೆ ಒದಗಿಸುವಲ್ಲಿ ರಾಜ್ಯದ ಮುಂಚೂಣಿ ಸ್ಥಾನ ಬಲಪಡಿಸಲು ಈ ನೀತಿಯನ್ನು ವಿನ್ಯಾಸಗೊಳಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಈ ನೀತಿಯಡಿ ಹೊಸ ತಲೆಮಾರಿನ ಬಾಹ್ಯಾಕಾಶ ಸಾಮರ್ಥ್ಯಗಳನ್ನು ವೃದ್ಧಿಗೊಳಿಸುವ ಕ್ಷೇತ್ರಗಳಲ್ಲಿ ತೊಡಗಿರುವ ಕಂಪನಿಗಳಿಗೆ ಅಗತ್ಯ ಬೆಂಬಲ ನೀಡಲಾಗುವುದು. ಉದಾಹರಣೆಗೆ ಬಾಹ್ಯಾಕಾಶ ತಂತ್ರಜ್ಞಾನ ತಯಾರಿಕೆ, ವೈಮಾಂತರಿಕ್ಷ ಹಾಗೂ ರಕ್ಷಣಾ ಉದ್ದಿಮೆ ಮತ್ತು ರಕ್ಷಣಾ ವಲಯದ ಬಳಕೆಗೆ ಸುಧಾರಿತ ವೈರ್‌ಲೆಸ್ ಸಂವಹನ ಕ್ಷೇತ್ರಗಳಲ್ಲಿನ ಕಂಪನಿಗಳಿಗೆ ನೆರವು ನೀಡಲಾಗುವುದು. ಇದನ್ನು ಕಾರ್ಯಗತಗೊಳಿಸಲು, ರಾಜ್ಯವು ಪ್ರತ್ಯೇಕ ಬಾಹ್ಯಾಕಾಶ ತಯಾರಿಕಾ ಕ್ಲಸ್ಟರ್‌ಗಳನ್ನು ಸ್ಥಾಪಿಸಲಿದೆ ಎಂದು ಅವರು ನುಡಿದಿದ್ದಾರೆ.

ಭಾರತದ ಬಾಹ್ಯಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮತ್ತು ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ)ನಂತಹ ಪ್ರತಿಷ್ಠಿತ ಸಂಸ್ಥೆಗಳ ಜೊತೆಗಿನ ರಾಜ್ಯದ ಬಲವಾದ ಸಾಂಸ್ಥಿಕ ಸಂಪರ್ಕಗಳನ್ನು ಬಳಸಿಕೊಳ್ಳಲಿದೆ. "ಈ ನೀತಿಯೊಂದಿಗೆ, ಕರ್ನಾಟಕವು ಈ ವಲಯದಲ್ಲಿನ ನಾವೀನ್ಯತೆ, ತಯಾರಿಕೆ ಮತ್ತು ಸೇವಾ ಕಂಪನಿಗಳು ಯಶಸ್ವಿಯಾಗಲು ಪೂರಕ ವ್ಯವಸ್ಥೆ ಸೃಷ್ಟಿಸಲಿದೆ ಎಂದು ಅವರು ಭರವಸೆ ನೀಡಿದ್ದಾರೆ.

ಜಾಗತಿಕ ಬಾಹ್ಯಾಕಾಶ ಆರ್ಥಿಕತೆಯಲ್ಲಿ ಭಾರತದ ಮುಂದಿನ ಹಂತದ ಬೆಳವಣಿಗೆಗೆ ಶಕ್ತಿ ತುಂಬಲು ರಾಜ್ಯವು ಈಗ ಉತ್ತಮ ಸ್ಥಾನದಲ್ಲಿದೆ. ಕರ್ನಾಟಕ ಬಾಹ್ಯಾಕಾಶ ತಂತ್ರಜ್ಞಾನ ನೀತಿಯು ನಾವೀನ್ಯತೆ-ನೇತೃತ್ವದ ಅಭಿವೃದ್ಧಿಗೆ ರಾಜ್ಯದ ಬದ್ಧತೆಯ ಮೇಲೆ ಬೆಳಕು ಚೆಲ್ಲುತ್ತದೆ. ಬಾಹ್ಯಾಕಾಶ ತಂತ್ರಜ್ಞಾನ ಮೌಲ್ಯ ಸರಪಳಿಯಲ್ಲಿ ಜಾಗತಿಕ ನಾಯಕನಾಗಿ ಹೊರಹೊಮ್ಮುವ ರಾಜ್ಯದ ಮಹತ್ವಾಕಾಂಕ್ಷೆಯನ್ನು ಬಲಪಡಿಸಲಿದೆ ಎಂದು ಪ್ರಿಯಾಂಕ್ ಖರ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News