ಕಾಲ್ತುಳಿತ ಪ್ರಕರಣದಲ್ಲಿ ಆರೋಪ ಪಟ್ಟಿ ಸಲ್ಲಿಕೆಗೆ ಹೈಕೋರ್ಟ್ ಅನುಮತಿ ಕೋರಿದ ಸರಕಾರ; ಆರ್‌ಸಿಬಿ, ಡಿಎನ್‌ಎ ಆಕ್ಷೇಪ
ಬೆಂಗಳೂರು : ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ್ದ ಕಾಲ್ತುಳಿತ ಪ್ರಕರಣದ ಆರೋಪ ಪಟ್ಟಿಯನ್ನು ತನಿಖಾಧಿಕಾರಿಯು ಸಕ್ಷಮ ನ್ಯಾಯಾಲಯಕ್ಕೆ ಸಲ್ಲಿಸಿದರೂ ಪ್ರಕರಣಕ್ಕೆ ಸಂಬಂಧಿಸಿದ ಎಫ್‌ಐಆರ್ ಪ್ರಶ್ನಿಸಿರುವ ಅರ್ಜಿಗಳನ್ನು ನಿರ್ಧರಿಸುವ ಅಧಿಕಾರ ಹೈಕೋರ್ಟ್‌ಗೆ ಇದೆ ಎಂಬುದಕ್ಕೆ ಸಂಬಂಧಿಸಿದ ತೀರ್ಪುಗಳ ಕುರಿತು ವಾದ ಮಂಡಿಸುವಂತೆ ರಾಜ್ಯ ಸರಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
ಕಾಲ್ತುಳಿತ ಪ್ರಕರಣದ ಸಂಬಂಧ ಕಬ್ಬನ್‌ಪಾರ್ಕ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ಗಳನ್ನು ರದ್ದುಪಡಿಸುವಂತೆ ಕೋರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ), ಡಿಎನ್‌ಎ ಎಂಟರ್ಟೇನ್ಮೆಂಟ್, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ), ಆರ್‌ಸಿಬಿಯ ಮಾರುಕಟ್ಟೆ ವಿಭಾಗದ ನಿಖಿಲ್ ಸೋಸಲೆ, ಡಿಎನ್‌ಎ ಎಂಟರ್ಟೇನ್ಮೆಂಟ್‌ನ ಸುನೀಲ್ ಮ್ಯಾಥ್ಯೂ ಮತ್ತಿತರರು ಸಲ್ಲಿಸಿರವ ಪ್ರತ್ಯೇಕ ಅರ್ಜಿಗಳನ್ನು ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.
ರಾಜ್ಯ ಸರಕಾರದ ಪರ ವಿಶೇಷ ವಕೀಲ ಬಿ.ಟಿ. ವೆಂಕಟೇಶ್‌ವಾದ ಮಂಡಿಸಿ, ಕಾಲ್ತುಳಿತ ಪ್ರಕರಣದ ಸಂಬಂಧ ಆರೋಪ ಪಟ್ಟಿ ಸಿದ್ಧವಾಗಿದ್ದು, ಸಕ್ಷಮ ನ್ಯಾಯಾಲಯಕ್ಕೆ ಸಲ್ಲಿಸಲು ಅನುಮತಿ ನೀಡಬೇಕು. ಒಂದೇ ಪ್ರಕರಣಕ್ಕೆ ಸಂಬಂಧಿಸಿದಂತೆ 3 ಎಫ್‌ಐಆರ್ ದಾಖಲಾಗಿದ್ದು, ಒಂದು ಪ್ರಕರಣದ ವಿಚಾರಣೆ ನಡೆಸುವಂತೆ ಹೈಕೋರ್ಟ್ ಆದೇಶಿಸಿದೆ. 2025ರ ಜೂನ್ 17ರಂದು ಪ್ರಕರಣದ ತನಿಖೆ ಮುಂದುವರಿಸಬಹುದು. ಅರ್ಜಿದಾರರ ವಿರುದ್ಧ ಬಲವಂತದ ಕ್ರಮಕೈಗೊಳ್ಳಬಾರದು, ಸಿಐಡಿ ಪೊಲೀಸರು ಆರೋಪ ಪಟ್ಟಿ ಸಲ್ಲಿಸುವುದಕ್ಕೂ ಮುನ್ನ ಹೈಕೋರ್ಟ್ ಅನುಮತಿ ಪಡೆಯಬೇಕು ಎಂದು ಮಧ್ಯಂತರ ಆದೇಶ ಮಾಡಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಅರ್ಜಿದಾರರು ತನಿಖೆಗೆ ಸಹಕರಿಸಿದ್ದು, ಅವರ ಹೇಳಿಕೆ ದಾಖಲಿಸಲಾಗಿದೆ. ಇದರ ಆಧಾರದಲ್ಲಿ ಆರೋಪ ಪಟ್ಟಿ ಸಿದ್ಧಪಡಿಸಿದ್ದು, ಅದನ್ನು ಸಕ್ಷಮ ನ್ಯಾಯಾಲಯಕ್ಕೆ ಸಲ್ಲಿಸಬೇಕಿದೆ. ಇದಕ್ಕಾಗಿ ನ್ಯಾಯಾಲಯದ ಈ ಹಿಂದಿನ ನಿರ್ದೇಶನದಂತೆ ಅನುಮತಿ ಕೋರಲಾಗುತ್ತಿದೆ ಎಂದರು. ಆಗ ನ್ಯಾಯಪೀಠ, ಅಂತಿಮ ವರದಿಯನ್ನು ಅರ್ಜಿದಾರರು ಪ್ರಶ್ನಿಸಬಹುದಲ್ಲವೇ? ಎಂದು ಕೇಳಿತು.
ಚಾರ್ಜ್‌ಶೀಟ್‌ಗೆ ಅರ್ಜಿದಾರರ ಆಕ್ಷೇಪ:
ಇದಕ್ಕೆ ಅರ್ಜಿದಾರರ ಪರ ಹಿರಿಯ ವಕೀಲ ಸಿ.ವಿ. ನಾಗೇಶ್ ಅವರು, ಜುಲೈ 8ರಂದು ಹೈಕೋರ್ಟ್ ಅನುಮತಿ ಪಡೆಯದೇ ಸಕ್ಷಮ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಬಾರದೆಂಬ ಮಧ್ಯಂತರ ಆದೇಶ ಹೊರಡಿಸಲಾಗಿದೆ. ಸರಕಾರ ಸಕ್ಷಮ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದರೆ ಈ ನ್ಯಾಯಾಲಯವು ಅರ್ಜಿದಾರರ ಪರವಾಗಿ ಮಾಡಿರುವ ಮಧ್ಯಂತರ ಆದೇಶ ಹೋಗಲಿದೆ ಎಂದು ಆರೋಪ ಪಟ್ಟಿ ಸಲ್ಲಿಸುವ ಸರಕಾರದ ಕೋರಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ವಾದ ಮುಂದುವರಿಸಿದ ಸಿ.ವಿ. ನಾಗೇಶ್, ಆರೋಪ ಪಟ್ಟಿಯನ್ನು ಸಕ್ಷಮ ನ್ಯಾಯಾಲಯಕ್ಕೆ ಸಲ್ಲಿಸಿದಾಕ್ಷಣ ಎಫ್‌ಐಆರ್ ರದ್ದು ಕೋರಿರುವ ಅರ್ಜಿಯು ಅಮಾನ್ಯವಾಗುವುದಿಲ್ಲ ಎಂದು ಇತ್ತೀಚಿನ ತೀರ್ಪಿನಲ್ಲಿ ಸುಪ್ರೀಂಕೋರ್ಟ್ ಹೇಳಿದ್ದು, ಈ ಕುರಿತು ಹಲವು ತೀರ್ಪುಗಳಿವೆ. ಆರೋಪ ಪಟ್ಟಿ ಸಿದ್ಧವಾಗಿದ್ದರೂ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಮುಂದುವರಿಸಬಹುದು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಹಾಲಿ ಪ್ರಕರಣದಲ್ಲಿ ಎಫ್‌ಐಆರ್‌ಗಳನ್ನು ರದ್ದುಪಡಿಸಲು ಕೋರಲಾಗಿದೆ. ಈ ಅರ್ಜಿಗಳನ್ನು ನ್ಯಾಯಾಲಯ ಪುರಸ್ಕರಿಸಿದರೆ ಆರೋಪ ಪಟ್ಟಿಯೇ ಅಮಾನ್ಯವಾಗಲಿದೆ. ಆರೋಪ ಪಟ್ಟಿ ಸಿದ್ಧವಾದ ಮಾತ್ರಕ್ಕೆ ಹಾಲಿ ಅರ್ಜಿಗಳು ಅಮಾನ್ಯವಾಗುವುದಿಲ್ಲ ಎಂದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಹಿರಿಯ ವಕೀಲ ಸಿ.ವಿ. ನಾಗೇಶ್ ಅವರು ಉಲ್ಲೇಖಿಸಿರುವ ತೀರ್ಪುಗಳ ಮೇಲೆ ವಾದಿಸಲು ಸರಕಾರದ ಪರ ವಕೀಲರಿಗೆ ನಿರ್ದೇಶಿಸಿ, ವಿಚಾರಣೆಯನ್ನು 2026ರ ಜನವರಿ 20ಕ್ಕೆ ಮುಂದೂಡಿತಲ್ಲದೆ, ಪ್ರಕರಣದಲ್ಲಿ ಈ ಹಿಂದೆ ನೀಡಿದ್ದ ಮಧ್ಯಂತರ ಆದೇಶವನ್ನು ಅರ್ಜಿಯ ಮುಂದಿನ ವಿಚಾರಣೆವರೆಗೆ ವಿಸ್ತರಿಸಿತು.