ರಾಯಚೂರು ಪಕ್ಷಿಗಳ ಫೋಟೋ ಪ್ರದರ್ಶನ ಕಾರ್ಯಕ್ರಮ
ಪಕ್ಷಿಗಳು ಉತ್ತಮ ಪರಿಸರದ ಸಂಕೇತ: ರಾಜೇಶ್ ನಾಯಕ್
ರಾಯಚೂರು: ಪಕ್ಷಿಗಳು ಉತ್ತಮ ಪರಿಸರದ ಪ್ರಮುಖ ಸಂಕೇತವಾಗಿದ್ದು, ಪರಿಸರ ಸಮತೋಲನ ಕಾಪಾಡುವಲ್ಲಿ ಅವು ಮಹತ್ತರ ಪಾತ್ರ ವಹಿಸುತ್ತವೆ ಎಂದು ವಲಯ ಅರಣ್ಯಾಧಿಕಾರಿ ರಾಜೇಶ್ ನಾಯಕ್ ಹೇಳಿದರು.
ನಗರದ ಟಾಗೋರ್ ಸಭಾಂಗಣದಲ್ಲಿ ಪ್ರಯತ್ನ ವೆಲ್‌ಫೇರ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ, ಪಕ್ಷಿ ಛಾಯಾಗ್ರಾಹಕ ಈರಣ್ಣ ಬೆಂಗಾಲಿ ಅವರು ತೆಗೆಯಲಾದ 150ಕ್ಕೂ ಅಧಿಕ ರಾಯಚೂರು ಜಿಲ್ಲೆಯ ಪಕ್ಷಿಗಳ ಫೋಟೋ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪಕ್ಷಿಗಳು ಭೂಲೋಕದ ಅದ್ಭುತ ಜೀವಿಗಳಾಗಿದ್ದು, ಮನುಕುಲಕ್ಕೆ ನೇರ ಹಾಗೂ ಪರೋಕ್ಷವಾಗಿ ಸಹಕಾರಿಯಾಗಿವೆ. ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪಕ್ಷಿ ಸಂರಕ್ಷಣೆಯತ್ತ ಹೆಚ್ಚಿನ ಗಮನ ಹರಿಸಬೇಕೆಂದು ಅವರು ಕರೆ ನೀಡಿದರು.
ಪಕ್ಷಿ ಛಾಯಾಗ್ರಾಹಕ ಈರಣ್ಣ ಬೆಂಗಾಲಿ ಮಾತನಾಡಿ, ರಾಯಚೂರು ಜಿಲ್ಲೆಯಲ್ಲಿ 200ಕ್ಕೂ ಹೆಚ್ಚು ಪ್ರಭೇದದ ಹಕ್ಕಿಗಳು ಇದ್ದು, ಅವುಗಳನ್ನು ಸಂರಕ್ಷಿಸಿ ಮುಂದಿನ ತಲೆಮಾರಿಗೆ ಉಳಿಸುವ ಪ್ರಯತ್ನ ಅಗತ್ಯವಾಗಿದೆ. ಜನರು ಪಕ್ಷಿಗಳ ಬಗ್ಗೆ ಒಲವು ಬೆಳೆಸಿ, ಅವುಗಳ ಮಹತ್ವವನ್ನು ಅರಿಯಬೇಕೆಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಭಿಜ್ಞಾನ ಶಾಲೆಯ ರಮೇಶ್ ಮಾತನಾಡಿ, ರಾಯಚೂರು ಜಿಲ್ಲೆಯ ಪಕ್ಷಿಗಳನ್ನು ಛಾಯಾಚಿತ್ರಗಳ ಮೂಲಕ ಜನರಿಗೆ ಪರಿಚಯಿಸಿದ ಈರಣ್ಣ ಬೆಂಗಾಲಿ ಅವರ ಕಾರ್ಯ ಶ್ಲಾಘನೀಯ. ಪರಿಸರ ಸಂರಕ್ಷಣೆಯಂತಹ ಕಾರ್ಯಗಳಿಗೆ ನಾವು ಸದಾ ಬೆಂಬಲ ನೀಡಬೇಕು. ಪಕ್ಷಿಗಳಿಲ್ಲದೆ ಮಾನವನ ಅಸ್ತಿತ್ವವೇ ಇಲ್ಲ ಎಂಬ ಸತ್ಯವನ್ನು ಮರೆಯಬಾರದೆಂದು ಹೇಳಿದರು.
ಈ ಸಂದರ್ಭದಲ್ಲಿ ಮೊಹಿಯುದ್ದೀನ್ ಪೀರಜಾದೆ, ವೀರಹನುಮಾನ, ನೀಲಕಂಠ ಮಳಿಮಠ, ಈರಣ್ಣ ಕೋಸಗಿ, ಹಫಿಜುಲ್ಲಾ, ಬಶೀರ ಅಹ್ಮದ ಹೊಸಮನಿ, ಪ್ರಭಣ್ಣಗೌಡ, ಬಸವಂತರಾಯ ಪಾಟೀಲ, ಸಲಾವುದ್ದಿನ್, ಅಜಯ್, ಮುನಿಸ್ವಾಮಿ, ಯಲ್ಲಪ್ಪ ಮರ್ಚೆಡ್ ಸೇರಿದಂತೆ ಅಭಿಜ್ಞಾನ ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪಕ್ಷಿಗಳ ಫೋಟೋ ಪ್ರದರ್ಶನ ರವಿವಾರವೂ ಮುಂದುವರಿಯಲಿದೆ.