5ವರ್ಷದ ಹಿಂದಿನ ಸೈಬರ್ ವಂಚನೆ ಪ್ರಕರಣ: ರಾಯಚೂರು ಪೊಲೀಸರಿಂದ 18.29 ಲಕ್ಷ ಹಣ ಸಂತ್ರಸ್ತರಿಗೆ ವಾಪಸ್
ರಾಯಚೂರು: 2020ರಲ್ಲಿ ನಡೆದ ಸೈಬರ್ ವಂಚನೆ ಪ್ರಕರಣವನ್ನು ರಾಯಚೂರು ಜಿಲ್ಲಾ ಪೊಲೀಸರು ಹಾಗೂ ಸೆನ್ ಪೊಲೀಸರು 18,29,425 ರೂ. ಹಣವನ್ನು ಸಂತ್ರಸ್ತರಿಗೆ ಮರಳಿಸಿದ್ದಾರೆ.
ರಾಯಚೂರಿನ ವಿದ್ಯಾನಗರದ ಲಕ್ಷ್ಮೀಕಾಂತ ಹಾಗೂ ಅವರ ಸಹೋದರರು ಫೇಸ್‌ಬುಕ್‌ನಲ್ಲಿ “ಟ್ರೆಡ್ ಎಂಡಿಎಫ್‌ಎಸ್” ಎಂಬ ಕಂಪನಿಯ ಲಿಂಕ್ ಮೂಲಕ ಹಣ ಹೂಡಿ ಲಾಭಾಂಶ ಪಡೆಯಬಹುದು ಎಂಬ ಜಾಹೀರಾತಿಗೆ ಕ್ಲಿಕ್ ಮಾಡಿದ್ದರು. ಅದರ ಬಳಿಕ ಹಂತ ಹಂತವಾಗಿ 58,57,450 ರೂ. ಹಣವನ್ನು 2020ರ ಆ.7ರಿಂದ 2021ರ ಏ.7ರವರೆಗೆ ಹೂಡಿಕೆ ಮಾಡಿದ್ದರು.
ಆದರೆ, ಅನೇಕ ತಿಂಗಳುಗಳಾದರೂ ಲಾಭಾಂಶ ಬಾರದ ಹಿನ್ನೆಲೆಯಲ್ಲಿ ಸಂಶಯಗೊಂಡು, ತಾವು ವಂಚನೆಗೆ ಒಳಗಾಗಿರುವುದು ತಿಳಿದುಬಂದ ನಂತರ 2021ರ ಅ,10ರಂದು ಸೆನ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಐದು ವರ್ಷಗಳ ತನಿಖೆಯ ನಂತರ ಪೊಲೀಸರು ಆರೋಪಿಯನ್ನು ಪತ್ತೆಹಚ್ಚಿ, ವಿವಿಧ ಬ್ಯಾಂಕ್ ಖಾತೆಗಳಿಂದ 18.29 ಲಕ್ಷ ರೂ. ಹಣ ವಸೂಲಿ ಮಾಡಿ ಸಂತ್ರಸ್ತರಿಗೆ ವಾಪಸ್ ನೀಡಿದರು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಪುಟ್ಟಮಾದಯ್ಯ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಆರೋಪಿಯು ತಮಿಳುನಾಡು ರಾಜ್ಯದ ರಾಮನಾಥಪುರಂ ಜಿಲ್ಲೆಯ ಬಥುರುಸ್ಮಾನ್ ಎಂದು ತಿಳಿದು ಬಂದಿದ್ದು, ಆತ ತನ್ನ ಸಂಬಂಧಿಕರ ಖಾತೆಗೆ ಹಣ ಹಾಕಿ ದುರುಪಯೋಗ ಪಡೆಸಿಕೊಂಡಿದ್ದ ಎನ್ನಲಾಗಿದೆ. ಸದ್ಯ ಆರೋಪಿ ಮೃತಪಟ್ಟ ಕಾರಣ ಆತನ ವಿರುದ್ಧ ಅಬೆಟೆಡ್ ಚಾರ್ಜ್ ಶೀಟ್ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ ಎಂದು ತಿಳಿದು ಬಂದಿದೆ.
ಸೈಬರ್ ಕ್ರೈಮ್ ಠಾಣೆಯ ಡಿಐಎಸ್ ಪಿ ವೆಂಕಟೇಶ ಹೊಗಿಬಂಡಿ, ಸಹಾಯಕ ತನಿಖಾಧಿಕಾರಿ ರಾಜಪ್ಪ ಅವರ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.