ರೈತರ ವಿಚಾರ ಬಂದಾಗ ಅಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಬೇಕು : ಶಾಸಕಿ ಕರೆಮ್ಮ ಜಿ ನಾಯಕ್
ದೇವದುರ್ಗ: ರೈತರ ವಿಚಾರದಲ್ಲಿ ಅಧಿಕಾರಿಗಳು ಪ್ರಮಾಣಿಕವಾಗಿ ಸೇವೆ ಸಲ್ಲಿಸಬೇಕು. ಹತ್ತಿ ಖರೀದಿ ಕೇಂದ್ರದಲ್ಲಿರುವ ಹಲವು ಸಮಸ್ಯೆಗಳನ್ನು ರೈತರು ಪರಿಹರಿಸಬೇಕು ಎಂದು ಶಾಸಕಿ ಕರೆಮ್ಮ ಜಿ. ನಾಯಕ ಹೇಳಿದರು.
ಪಟ್ಟಣದ ಮಿನಿವಿಧಾನಸೌಧ ಸಭಾಂಗಣದಲ್ಲಿ ರೈತರು ಹಾಗೂ ಜಿನ್ನಿಂಗ್ ಫ್ಯಾಕ್ಟರಿಗಳ ಮಾಲೀಕರ ಸಭೆಯಲ್ಲಿ ಮಾತನಾಡಿದ ಶಾಸಕಿ ಕರೆಮ್ಮ ಜಿ. ನಾಯಕ, ಆನ್‌ಲೈನ್ ಮೂಲಕ ಅಪ್ಲೋಡ್ ಮಾಡಲು ತಾಂತ್ರಿಕ ಸಮಸ್ಯೆಯಿಂದ ರೈತರು ಬೇಸೆತ್ತಿದ್ದಾರೆ. ಹಲವು ರೈತರು ಸಮಸ್ಯೆ ಕುರಿತು ನನ್ನ ಬಳಿ ಹೇಳಿಕೊಂಡಿದ್ದಾರೆ. ಹತ್ತಿ ಖರೀದಿ ಕೇಂದ್ರದಲ್ಲಿರುವ ಸಮಸ್ಯೆಗಳು ಕೂಡಲೇ ಸರಿಪಡಿಸಬೇಕು. ಪದೇ-ಪದೇ ರೈತರು ನನ್ನ ಹತ್ತಿರ ಬರದಂತೆ ಅಧಿಕಾರಿಗಳು ನಿಗಾವಹಿಸಬೇಕು ಎಂದು ಹೇಳಿದರು.
ಬೆಳಿಗ್ಗೆಯಿಂದ ಸಂಜೆವರೆಗೆ ಹತ್ತಿ ಖರೀದಿ ಕೇಂದ್ರದಲ್ಲಿ ಹತ್ತಿ ತುಂಬಿದ ವಾಹನಗಳು ನಿಲ್ಲಿಸಿಕೊಂಡು ಸಂಜೆ ನಂತರ ವಾಪಸ್ ಕಳುಹಿಸುವುದು ಏಕೆ ಎಂದು ರೈತ ಮುಖಂಡ ನರಸಣ್ಣ ನಾಯಕ ಜಾಲಹಳ್ಳಿ ಅಧಿಕಾರಿಗಳಿಗೆ ಪ್ರಶ್ನಿಸಿದರು.
ಹೇರುಂಡಿ ಗ್ರಾಮದ ಕಂದಾಯ ವಿಎ ರೈತರಿಗೆ ಪರಿಹಾರ ನೀಡುವ ಹೆಸರಿನಲ್ಲಿ ಲಕ್ಷಾಂತರ ರೂ.ವಂಚನೆ ಮಾಡಿದ್ದಾರೆ. ಅವರನ್ನು ಅಮಾನತು ಮಾಡುವ ಜೊತೆಗೆ ಹಣ ವಸೂಲಿ ಮಾಡಬೇಕು. ಅತಿವೃಷಿಯಲ್ಲಿ ಬೆಳೆ ಹಾನಿಯಾಗಿ ಬಹುತೇಕ ರೈತರಿಗೆ ಪರಿಹಾರ ಬಂದಿಲ್ಲ. ಕೂಡಲೇ ರೈತರಿಗೆ ಪರಿಹಾರದ ಹಣ ಬರುವಂತೆ ತಹಶೀಲ್ದಾರಿಗೆ ಸೂಚನೆ ನೀಡಿದರು. ರೈತರಿಗೆ ಮೋಸ ಮಾಡುವ ಅಧಿಕಾರಿಗಳ ವಿರುದ್ಧ ಮುಲ್ಲಾಜಿಲ್ಲದೆ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಶಾಸಕಿ ಕರೆಮ್ಮ ನಾಯಕ್ ಹೇಳಿದರು.