×
Ad

ಕಾಂಗ್ರೆಸ್ ಆಡಳಿತದಲ್ಲಿ ರೈತರು, ಜನಸಾಮಾನ್ಯರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ: ಶಾಸಕ ಶಿವರಾಜ್‌ ಪಾಟೀಲ್

Update: 2025-12-04 22:00 IST

ರಾಯಚೂರು: ರೈತ ವಿರೋಧ ನೀತಿ ಅನುಸರಿಸುತ್ತಿರುವ ಹಾಗೂ ರೈತರ ಸಮಸ್ಯೆಗಳಿಗೆ ಸ್ಪಂದಿಸದ ಸರಕಾರದ ಧೋರಣೆಗಳನ್ನು ವಿರೋಧಿಸಿ ಬಿಜೆಪಿ ಜಿಲ್ಲಾ ರೈತ ಮೋರ್ಚಾ ನೇತೃತ್ವದಲ್ಲಿ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಗುರುವಾರ ನಗರದ ಹಳೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಶಾಸಕ ಡಾ.ಶಿವರಾಜ್‌ ಪಾಟೀಲ್, ರಾಜ್ಯದ ಜನರು ಹಾಗೂ ರೈತರಿಗೆ ದ್ರೋಹ ಬಗೆದಿರುವ ಕಾಂಗ್ರೆಸ್ ಸರಕಾರದ ಆಡಳಿತದಲ್ಲಿ ಅಭಿವೃದ್ಧಿ ಮೂಲೆಗುಂಪಾಗಿದ್ದು, ರೈತರು, ಜನಸಾಮಾನ್ಯರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ ಎಂದು ಆಪಾದಿಸಿದರು.

ಅಧಿಕಾರಕ್ಕೆ ಬರುವ ಮುನ್ನ ಸಾಕಷ್ಟು ಭರವಸೆಗಳನ್ನು ನೀಡಿದ ರಾಜ್ಯದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಬರೀ ಗ್ಯಾರಂಟಿ ಯೋಜನೆಗಳಿಗೆ ಆದ್ಯತೆ ನೀಡಿ ಉಳಿದ ವಿಚಾರಗಳ ಬಗ್ಗೆ ನಿರ್ಲಕ್ಷ್ಯ ವಹಿಸಿದೆ. ಇದರಿಂದ ರಾಜ್ಯದ ಜನರು ಹಾಗೂ ರೈತರು ಹತ್ತು ಹಲವು ಸಮಸ್ಯೆಗಳನ್ನು ಅನುಭವಿಸುವಂತಾಗಿದೆ. ಆರಂಭದಿಂದಲೂ ಕೇವಲ ಪಂಚ ಗ್ಯಾರಂಟಿಗಳ ಜಾರಿಗೆ ಆದ್ಯತೆ ನೀಡಿ ರೈತರಿಗೆ ಸಿಗಬೇಕಿದ್ದ ಎಲ್ಲಾ ಸೌಕರ್ಯಗಳನ್ನು ಕಡಿತಗೊಳಿಸಿ ಅವರ ಬದುಕನ್ನು ಬೀದಿಗೆ ತಂದಿದ್ದೀರಿ ಎಂದು ಟೀಕಿಸಿದರು.  

ಸಕಾಲದಲ್ಲಿ ಖರೀದಿ ಕೇಂದ್ರ ಸ್ಥಾಪಿಸದೆ ವಂಚಿಸಲಾಗಿದೆ. ಇಷ್ಟೇ ಅಲ್ಲದೇ ಬೆಂಬಲ ಬೆಲೆಯಲ್ಲಿ ಕೊಂಡುಕೊಂಡ ಧಾನ್ಯದ ಹಣವನ್ನು ಸರಿಯಾಗಿ ಸಂದಾಯ ಮಾಡದೆ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಟಿಬಿಯಿಂದ ಎರಡನೇ ಬೆಳೆಗೆ ನೀರು ಕೊಡಿ ಇಲ್ಲದೇ ಇದ್ದರೆ ಎಕರೆಗೆ 25 ಸಾವಿರ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು. 

ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ವೀರನಗೌಡ ಲೆಕ್ಕಿಹಾಳ, ವಿಧಾನ ಪರಿಷತ್ ಮಾಜಿ ಸದಸ್ಯ ಎನ್.ಶಂಕರಪ್ಪ ವಕೀಲ್, ಸಿದ್ದನಗೌಡ ನೆಲಹಾಳ, ಶರಣಬಸವ ಜೋಳದಹೆಡಗಿ, ಸುಮಾ ಗಸ್ತಿ, ಸುಲೋಚನಾ ಬಸವರಾಜ ಸೇರಿ ವಿವಿಧ ಮೋರ್ಚಾಗಳ ಪ್ರಮುಖರು, ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಿದ್ದರು.  

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News