ಬಳಗಾನೂರು ಪಟ್ಟಣ ಪಂಚಾಯಿತಿಯಲ್ಲಿ ಇ- ಖಾತಾ ನೀಡಲು ವಿಳಂಬ, ಲಂಚ ಸ್ವೀಕಾರ; ಆರೋಪ
ಅಣಕು ಭಿಕ್ಷಾಟನೆ ಮೂಲಕ ಪ್ರತಿಭಟನೆ
ಮಸ್ಕಿ ಡಿ:4, ಬಳಗಾನೂರು ಪಟ್ಟಣ ಪಂಚಾಯಿತಿಯಲ್ಲಿ ಇ- ಖಾತಾ ನೀಡಲು ವಿಳಂಬ ಮಾಡಿ ಒಂದು ಹಂತದ ಲಂಚ ಪಡೆದುಕೊಂಡು ಹೆಚ್ಚಿನ ಹಣಕ್ಕೆ ಬೇಡಿಕೆ ಇಡಲಾಗಿದೆ ಎಂದು ಆರೋಪಿಸಿ, ಅಧ್ಯಕ್ಷ, ಮುಖ್ಯಾಧಿಕಾರಿ ವಿರುದ್ಧ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಮತ್ತು ಸಾಮಾಜಿಕ ನ್ಯಾಯ ಸಂಸ್ಥೆಯ ಹಾಗೂ ಕೆಆರ್‌ಎಸ್ ಪಕ್ಷದ ಕಾರ್ಯಕರ್ತರು ಪಟ್ಟಣದ ಸಂತೆ ಬಜಾರದಿಂದ ಪಟ್ಟಣ ಪಂಚಾಯ್ತಿಯ ಕಾರ್ಯಾಲಯದ ತನಕ ಗುರುವಾರ ಹಲಗಿ ಬಾರಿಸುತ್ತ ವಿನೂತನ ಅಣಕು ಭಿಕ್ಷಾಟನೆ ಮಾಡಿ ಪ್ರತಿಭಟನೆ ನೆಡೆಸಿದರು.
ಕೆಲವು ತಿಂಗಳುಗಳ ಹಿಂದೆ ಸಿಂಧನೂರಿನ ರಿಯಲ್ ಎಸ್ಟೇಟ್ ಉದ್ಯಮಿ ಖಾಜಾಸಾಬ್ ಮತ್ತು ಪಾಲುದಾರರು ಬಳಗಾನೂರಿನಲ್ಲಿ ನೂತನವಾಗಿ ನಿರ್ಮಿಸಿರುವ ಬಡಾವಣೆಯ ನಿವೇಷನಗಳ ನಮೂನೆ-3ನ್ನು ಕೋರಿ ಅರ್ಜಿ ಸಲ್ಲಿಸಿದ್ದರು. ಅದನ್ನು ಕೇಳಲು ಪಟ್ಟಣ ಪಂಚಾಯ್ತಿಯ ಕಾರ್ಯಾಲಯಕ್ಕೆ ಹೋದಾಗ ಐದು ಲಕ್ಷ ಲಂಚ ನೀಡಿದರೆ ಮಾತ್ರ ನಮೂನೆ-3ನ್ನು ಕೊಡುತ್ತೇವೆ ಎಂದಿದ್ದರು. ಈ ವೇಳೆ ಮಾತಿನ ಚಕಮಕಿ ನಡೆದು ದೈಹಿಕ ಹಲ್ಲೆಯೂ ಆಗಿ ಬಳಗಾನೂರು ಠಾಣೆಯಲ್ಲಿ ದೂರು ಪ್ರತಿದೂರುಗಳು ದಾಖಲಾಗಿ ತನಿಖೆ ಪ್ರಗತಿಯಲ್ಲಿದೆ.
ಆದರೆ ನಮೂನೆ-3ನ್ನು ಇನ್ನೂ ನೀಡದೆ ಸತಾಯಿಸುತ್ತಿರುವ ಮುಖ್ಯಾಧಿಕಾರಿಗಳ ವಿರುದ್ದ ಅಣಕು ಭಿಕ್ಷಾಟನೆ ಮಾಡಿ ನೂತನವಾಗಿ ವರ್ಗಾವಣೆಗೊಂಡು ಬಂದಿರುವ ಮುಖ್ಯಾಧಿಕಾರಿ ಗೋಪಾಲನಾಯಕರಿಗೆ ಪುನಃ ಮನವಿಪತ್ರ ನೀಡಲಾಯಿತು.
ಪಟ್ಟಣ ಪಂಚಾಯಿತಿಯಲ್ಲಿ ಸಾರ್ವಜನಿಕರ ಯಾವುದೇ ಕೆಲಸಗಳಾಗಬೇಕಾದರೆ ಲಂಚ ನೀಡಲೇ ಬೇಕು. ಇಲ್ಲವೇ ಎಮ್ ಪಿ, ಎಂಎಲ್‌ಎ ಶಿಫಾರಸು ಬೇಕು. ಅದಿಲ್ಲದಿದ್ದರೆ ಅಧಿಕಾರಿಗಳ ಕೈ ಕಾಲು ಹಿಡಿದರೆ ಮಾತ್ರ ಕೆಲಸಗಳಾಗುತ್ತವೆ. ಸಾಮಾನ್ಯ ವ್ಯಕ್ತಿಗಳು ಹೋದರೆ ಕ್ಯಾರೇ ಎನ್ನುವುದಿಲ್ಲವೆಂದು ಕೆಆರ್‌ಎಸ್ ಪಕ್ಷದ ಮುಖಂಡ ಕೆ.ನಿರುಪಾದಿ ಗೋಮರ್ಸಿ ಆರೋಪಿಸಿದರು.
ಅಂತರಾಷ್ಟ್ರೀಯ ಮಾನವ ಹಕ್ಕುಗಳ ಮತ್ತು ಸಾಮಾಜಿಕ ನ್ಯಾಯ ಸಂಸ್ಥೆಯ ಜಿಲ್ಲಾಧ್ಯಕ್ಷ ಎಸ್. ನಝೀರ್ ಮಾತನಾಡಿ, ಜನಪ್ರತಿನಿಧಿಗಳ, ರಾಜಕಾರಣಿಗಳ ಅಡಿಯಾಳುಗಳಾಗಿ ಇಲ್ಲಿನ ಸಿಬ್ಬಂದಿ, ಮುಖ್ಯಾಧಿಕಾರಿಗಳು ಕೆಲಸಮಾಡುತ್ತಿದ್ದಾರೆ. ಸಾರ್ವಜನಿಕರ ಸೇವಕರೆಂಬುದನ್ನು ಮರೆತು ಜನರ ರಕ್ತಹೀರುವ ರಕ್ತಪಿಪಾಸುಗಳಾಗಿದ್ದಾರೆ. ಕೆಲಸ ಮಾಡಿಕೊಡಿ ಸರ್ ಎಂದು ಕೇಳಲು ಕರೆಮಾಡಿದರೆ ಕರೆ ಸ್ವೀಕರಿಸುವುದಿಲ್ಲ. ಅದೇ ಲಂಚಕೊಡುತ್ತೇವೆ ಸರ್ ಬನ್ನಿ ಎಂದರೆ ತಕ್ಷಣವೇ ಹಾಜರ್. ಇಂತಹ ಲಂಚಬಾಕ ಅಧಿಕಾರಿಗಳಿಗಾಗಿಯೇ ಇವತ್ತು ಬಳಗಾನೂರಿನ ಸಾರ್ವಜನಿಕರು ಭಿಕ್ಷೆ ಹಾಕಿದ್ದಾರೆ. ತೆಗೆದುಕೊಂಡು ಫಾರ್ಮ್-3ನ್ನು ಕೊಡಿ. ಇಷ್ಟು ಭಿಕ್ಷೆ ಸಾಕಾಗದಿದ್ದರೆ ನಾಳೆಯೂ ಭಿಕ್ಷೆ ಬೇಡಿಕೊಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಂತರ ಎಸ್,ಎಫ್,ಐ,ದ ಮುಖಂಡ ಬಸವಂತ ಮಾಡಿನಾಡಿದರು. ಮನವಿಪತ್ರ ನೀಡಿ ಶೀಘ್ರ ನಮೂನೆ ಮೂರನ್ನು ನೀಡುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಖಾಜಾಸಾಬ್,ನಿರುಪಾದಿ ಗೋಮರ್ಸಿ,ಎಸ್,ನಜೀರ್, MD ಖಾಜಾ ಶೇಡ್ಮಿ, ಬಸ್ವಂತ ಹಿರೇಕಡುಬೂರು ನಿರುಪಾದಿ ಮುರಾರಿ, ಹುಸೇನ್ ಸಾಬ್ ಸೇರಿದಂತೆ ಹಲವರಿದ್ದರು.