ರಾಯಚೂರು| ಜಾತಿ ನಿಂದನೆ, ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಪ್ರತಿಭಟನೆ
ರಾಯಚೂರು : ನಗರದ ಹರಿಜನವಾಡ ಬಡಾವಣೆಯ ಮಾದಿಗ ಸಮುದಾಯದ ದಶವಂತ್ ಕೊಲೆ ಆರೋಪಿಗಳನ್ನು ಬಂಧಿಸುವಂತೆ ಎಂದು ಆಗ್ರಹಿಸಿ ಭೀಮ್ ಆರ್ಮಿ, ದಲಿತ, ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳ ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು.
ನಗರಸಭೆ ಮಾಜಿ ಸದಸ್ಯ, ಜೆಡಿಎಸ್ ಮುಖಂಡ ಬಿ.ತಿಮ್ಮಾರೆಡ್ಡಿ ಮತ್ತು ಆತನ ಸಹಚರರು ವಿನಾ ಕಾರಣ ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿದ ಪರಿಣಾಮ ನಗರದ ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಅಕ್ಟೋಬರ್ 6ರಂದು ಬಿ. ತಿಮ್ಮಾರೆಡ್ಡಿ ಸೇರಿದಂತೆ ಇತರೆ ಐವರ ವಿರುದ್ಧ ವಿವಿಧ ಕಲಂಗಳಡಿಯಲ್ಲಿ ಜಾತಿ ನಿಂದನೆ ಮತ್ತು ಕೊಲೆ ಪ್ರಕರಣ ದಾಖಲಾಗಿತ್ತು. ಜಾಮೀನು ರಹಿತವಾದ ಗಂಭೀರ ಸ್ವರೂಪದ ಪ್ರಕರಣ ದಾಖಲಾಗಿ ಎರಡು ತಿಂಗಳು ಕಳೆದರೂ ಈವರೆಗೆ ಯಾವುದೇ ಆರೋಪಿಗಳನ್ನು ಬಂಧನ ಮಾಡಲಾಗಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ನ್ಯಾಯಕ್ಕಾಗಿ ಆಗ್ರಹಿಸಿ ಸುದ್ದಿಗೋಷ್ಠಿ ನಡೆಸಿದ ಸಂಘಟನೆಯ ಮುಖಂಡರಿಗೂ ಈ ಕೊಲೆ ಪ್ರಕರಣದ ಪ್ರಮುಖ ಆರೋಪಿ ಬೆದರಿಕೆ ಹಾಕಿದ್ದಾನೆ. ಈ ಆರೋಪಿಗಳ ವಿರುದ್ಧ ಈ ಮೊದಲು ಕೂಡ ಪ್ರಕರಣ ದಾಖಲಾಗಿರುತ್ತದೆ. ಈ ಆರೋಪಿಗಳ ವಿರುದ್ಧ ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯಲ್ಲಿ ನಾಲ್ಕೈದು ಪ್ರಕರಣಗಳು ದಾಖಲಾಗಿದೆ. ಕೆಲವರ ಮೇಲೆ ಗೂಂಡಾ ಪ್ರಕರಣ ಕೂಡ ದಾಖಲಾಗಿದೆ. ಈ ಆರೋಪಿಗಳು ನ್ಯಾಯಾಲಯದಲ್ಲಿ ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿಯು ಕೂಡ ತಿರಸ್ಕೃತಗೊಂಡಿದೆ. ಪ್ರಕರಣ ದಾಖಲಾಗಿ ಎರಡು ತಿಂಗಳು ಕಳೆದರೂ, ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕೃತಗೊಂಡು 15 ದಿನಗಳು ಗತಿಸಿದರೂ ಇಲ್ಲಿಯವರೆಗೂ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಕೂಡಲೇ ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು. ಕೊಲೆಯಾದ ಸಂತ್ರಸ್ತ ಕುಟುಂಬಕ್ಕೆ ಸೂಕ್ತ ರಕ್ಷಣೆ ಮತ್ತು ಅಗತ್ಯ ನೆರವು ನೀಡಬೇಕು. ನಿರ್ಲಕ್ಷ್ಯ ವಹಿಸಿದರೆ ಬೃಹತ್ ಪ್ರತಿಭಟನೆಯ ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ವಕೀಲರಾದ ಶಿವಕುಮಾರ ಮ್ಯಾಗಳಮನಿ, ಭೀಮ್ ಆರ್ಮಿ ಜಿಲ್ಲಾಧ್ಯಕ್ಷ ಪ್ರವೀಣ್ ಕುಮಾರ್, ಎಲ್.ವಿ. ಸುರೇಶ್, ದಲಿತ ಸಂಘರ್ಷ ಸಮಿತಿ ಸಂಚಾಲಕರಾದ ಎಸ್. ನರಸಿಂಹಲು, ಮುಖಂಡರಾದ ಹನುಮೇಶ್ ಆರೋಲಿ, ರಂಜಿತ್ ದಂಡೋರಾ, ದೂಳ್ಳಯ್ಯ ಗುಂಜಳ್ಳಿ, ಹನುಮೇಶ್ ಭೇರಿ, ಶಾಂತಕುಮಾರ್, ಜಯರಾಜ್ ಭಂಡಾರಿ, ಪ್ರಸಾದ್, ಅನೀಲ ಕುಮಾರ್, ನೀಲಕಂಠ, ರಾಜು, ಸುರೇಶ್, ಚಿದಾನಂದ, ಅಲಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.