×
Ad

ರಾಯಚೂರಲ್ಲಿ ಪ್ಲಾಸ್ಟಿಕ್, ಧೂಳು ನಿರ್ವಹಣೆಗೆ ಸೂಕ್ತ ಕ್ರಮ : ಪಾಲಿಕೆ ಆಯುಕ್ತ ಜುಬಿನ್

Update: 2025-02-01 19:07 IST

ರಾಯಚೂರು : ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ನಿಷೇಧ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಹಾಗೂ ಧೂಳು ನಿರ್ವಹಣೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ರಾಯಚೂರು ಮಹಾನಗರ ಪಾಲಿಕೆಯ ಆಯುಕ್ತರಾದ ಜುಬಿನ್ ಮೋಹೊಪತ್ರ ಹೇಳಿದರು.

ಫೆ.1ರ ಶನಿವಾರದಂದು ನಗರದ ಹಳೆ ಡಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ನಗರದಲ್ಲಿ ಅಭಿವೃದ್ಧಿಗೆ ಸಾಕಷ್ಟು ಸಮಸ್ಯೆ ಮತ್ತು ಸವಾಲುಗಳಿದ್ದು, ಸಮಸ್ಯೆಗಳನ್ನು ಬಗೆಹರಿಸಲು ಜನಪ್ರತಿನಿಧಿಗಳ ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರವೇ ನಗರದ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ರೂಪಿಸಲಾಗುವುದು ಎಂದು ಹೇಳಿದರು.

ರಾಯಚೂರು ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ಜಿಲ್ಲೆಯಾಗಿದ್ದು, ಇಲ್ಲಿ ಅನೇಕ ರಾಜವಂಶಸ್ಥರು ಆಳಿ ಹೋಗಿದ್ದಾರೆ. ಅಂದಿನಿಂದ ಇಂದಿನವರೆಗೆ ಈ ಪ್ರದೇಶದಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಲೆ ಬಂದಿವೆ. ಇದೀಗ ಮಹಾನಗರ ಪಾಲಿಕೆಯಾಗಿ ರಾಯಚೂರು ನಗರಸಭೆಯನ್ನು ಮೇಲ್ದರ್ಜೆಗೇರಿಸಲಾಗಿದೆ. ಪಾಲಿಕೆಯಿಂದ ನಗರದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.

ನಗರದಲ್ಲಿ ಕುಡಿಯುವ ನೀರು ಪೂರೈಕೆ, ಚರಂಡಿ ಸ್ವಚ್ಛತೆ, ಬೀದಿ ದೀಪ, ರಸ್ತೆ ದುರಸ್ತಿಗೆ ಹಂತಹಂತವಾಗಿ ಗಮನ ಹರಿಸಲಾಗುವುದು.

ಇಲ್ಲಿ ಮುಖ್ಯವಾಗಿ ಪ್ಲಾಸ್ಟಿಕ್ ಬಳಕೆ ಹೆಚ್ಚಾಗಿರುವುದು ಕಂಡುಬಂದಿದೆ. ಜೊತೆಗೆ ನಗರದಲ್ಲಿ ಧೂಳು ಹೆಚ್ಚಾಗಿದ್ದು, ಪ್ಲಾಸ್ಟಿಕ್ ಹಾಗೂ ಧೂಳು ಮುಕ್ತ ನಗರವನ್ನಾಗಿಸಲು ಮುಂದಿನ ದಿನಗಳಲ್ಲಿ ಯೋಜನೆಯನ್ನು ರೂಪಿಸಿ ಕಾರ್ಯ ಕೈಗೆತ್ತಿಕೊಳ್ಳಲಾಗುವುದು ಎಂದರು.

ಮೂರು ವಾರಗಳಲ್ಲಿ ಸೂಕ್ತ ಕ್ರಮ :

ಬೀದಿ ದೀಪ ನಿರ್ವಹಣೆ ಸರಿಯಾಗಿ ನೋಡಿಕೊಳ್ಳಲು ಪಾಲಿಕೆಯ ಅಧಿಕಾರಿ ಮತ್ತು ಸಿಬ್ಬಂದಿಗಳೊಂದಿಗೆ ಚರ್ಚಿಸಲಾಗುವುದು. ನಗರದ ಎಲ್ಲ ಕಡೆಗಳಲ್ಲೂ ಬೀದಿ ದೀಪಗಳು ಸುವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸಲು ಕ್ರಮ ಕೈಗೊಳ್ಳಲಾಗುವುದು. ರಾಜ್ಯದ ಎಲ್ಲಾ ಕಡೆಗಳಲ್ಲಿ ವಾಟರ್ ಪೌಚ್ಗಳು ಬ್ಯಾನ್ ಆಗಿವೆ. ಆದರೆ ರಾಯಚೂರು ನಗರದಲ್ಲಿ ಮಾತ್ರ ನೀರಿನ ಪ್ಯಾಕೆಟುಗಳು ಚಾಲ್ತಿಯಲ್ಲಿದ್ದು, ಮೂರು ವಾರಗಳಲ್ಲಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ನಗರದಲ್ಲಿ ವಾರ್ಡವಾರು ಮನೆ ಮನೆಗಳಿಗೆ ತೆರಳಿ ತ್ಯಾಜ್ಯ ಸಂಗ್ರಹಿಸಲಾಗುತ್ತಿದೆ. ಆದರೆ ಕಸ ಸಾಗಿಸುವಾಗ ಸರಿಯಾದ ನಿರ್ವಹಣೆ ಇಲ್ಲದೆ ಕಸ ರಸ್ತೆಯ ಮೇಲೆ ಬೀಳುವ ಬಗ್ಗೆ ಮಾಹಿತಿ ಇದ್ದು, ಈ ಬಗ್ಗೆ ಅಧಿಕಾರಿಗಳು ಮತ್ತು ಕಸ ಸಂಗ್ರಹಣೆ, ವಿಲೇವಾರಿ ಹಾಗೂ ಸಾಗಣೆ ಮಾಡುವ ಸಿಬ್ಬಂದಿಯು ಸರಿಯಾಗಿ ನಿರ್ವಹಣೆ ಮಾಡುವಂತೆ ಸೂಚಿಸಲಾಗುವುದು ಎಂದು ಹೇಳಿದರು.

ಒತ್ತುವರಿ ಸ್ಥಳಗಳಿಗೆ ಭೇಟಿ :

ನಗರದಲ್ಲಿ ಐತಿಹಾಸಿಕ ಸ್ಥಳಗಳು ಹಾಗೂ ಸರಕಾರದ ಆಸ್ತಿಗಳು ಒತ್ತುವರಿಯಾದ ಕಡೆ ಭೇಟಿ ನೀಡಿ, ಅತಿಕ್ರಮಿಸಿದ ಸ್ಥಳಗಳನ್ನು ತೆರವುಗೊಳಿಸಲು ಯೋಜನೆ ರೂಪಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಉಪ ಆಯುಕ್ತ ಗುರುಸಿದ್ದಯ್ಯಸ್ವಾಮಿ ಹಿರೆಮಠ, ಅಭಿವೃದ್ಧಿ ಆಯುಕ್ತ ಅನಿಲ್, ವಲಯ ಆಯುಕ್ತರಾದ ಮಹೆಬೂಬ್ ಜಿಲಾನಿ ಸೇರಿದಂತೆ ಇತರರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News