×
Ad

ಸಿಂಧನೂರು| ಸರ್ಕಾರಿ ಆಸ್ಪತ್ರೆಯಲ್ಲಿ ಮಗು ಅದಲು-ಬದಲು: ಆರೋಪ

Update: 2025-07-06 17:22 IST

ಸಿಂಧನೂರು: ಸಿಂಧನೂರು ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಶನಿವಾರ ರೇವತಿ ಎಂಬವರಿಗೆ ಗಂಡು ಮಗು ಜನಿಸಿದ್ದು, ಅವರಿಗೆ ಹೆಣ್ಣು ಮಗು ನೀಡಿದ ಆರೋಪ ಕೇಳಿ ಬಂದಿದೆ.

ನರ್ಸ್ ಸಿಬ್ಬಂದಿ ಮಗು ಬದಲಾಯಿಸಿದ್ದಾರೆ ಎಂದು ಹೆರಿಗೆಯಾದ ಮಹಿಳೆಯ ಕುಟುಂಬಸ್ಥರು ಆರೋಪ ಮಾಡಿದ್ದಾರೆ.

ತಾಲೂಕಿನ ಗಾಂಧಿನಗರದ ರೇವತಿ ಎಂಬ ಮಹಿಳೆಯು ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಹೆರಿಗೆಯಾಗಿದ್ದು, ಹೆರಿಗೆ ಆದನಂತರ ಆಸ್ಪತ್ರೆಯ ಸಿಬ್ಬಂದಿ ಪ್ರಾರಂಭದಲ್ಲಿ ಗಂಡು ಮಗುವನ್ನು ಹೆರಿಗೆಯಾದ ಮಹಿಳೆಗೆ ಕೊಟ್ಟು ತಾಯಿಯ ಎದೆಹಾಲುಣಿಸಿ ನಂತರ ನಮ್ಮಿಂದ ತಪ್ಪಾಗಿದೆ ನಿಮಗೆ ಹುಟ್ಟಿರುವುದು ಹೆಣ್ಣು ಮಗು, ಈ ಗಂಡು ಮಗು ನಿಮ್ಮದಲ್ಲ ಎಂದು ಹೇಳಿರುವುದು  ಕುಟುಂಬದವರ ಆಕ್ರೋಶಕ್ಕೆ ಕಾರಣವಾಗಿದೆ.

ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಸಿಬ್ಬಂದಿಗಳ ಕೈಚಳಕದಿಂದ ʼಎಕ್ಸ್ ಚೇಂಜಿಂಗ್ʼ ನಡೆಯುತ್ತಿದ್ದು, ನನ್ನ ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದ್ದು, ಆದರೆ ವೈದ್ಯಾಧಿಕಾರಿಗಳು ಮೊದಲಿಗೆ ಗಂಡು ಮಗುವನ್ನು ನೀಡಿ, ಈಗ ನಿಮಗೆ ಹುಟ್ಟಿರುವುದು ಹೆಣ್ಣು ಮಗು ಎಂದು ಹೇಳುತ್ತಿರುವುದು ನೋಡಿದರೆ, ಇವರು ಯಾರೊಂದಿಗೆ ಶಾಮೀಲಾಗಿ ನನ್ನ ಮಗುವನ್ನು ಬದಲಾಯಿಸುತ್ತಿದ್ದಾರೆ ಎಂದು ಗೊತ್ತಾಗುತ್ತಿಲ್ಲ. ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಲಾಗುತ್ತಿದ್ದು, ಜನಿಸಿದ ಗಂಡು ಮಗು ನಮ್ಮದೇ. ಬೇಕಿದ್ದರೆ ಡಿಎನ್ಎ ಪರೀಕ್ಷೆ ಮಾಡಿಕೊಳ್ಳಲಿ ಎಂದು ರೇವತಿಯ ಸಂಬಂಧಿಕರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

ಈ ಕುರಿತು ಪ್ರತಿಕ್ರಿಯಿಸಿರುವ ತಾಲೂಕು ಸಾರ್ವಜನಿಕ ಆಸ್ಪತ್ರೆಯ ವೈದ್ಯರಾದ ಡಾ.ನಾಗರಾಜ ಕಾಟ್ವಾ, "ಅವರಿಗೆ ಸೀಸರಿಯನ್ ಮಾಡಿದ್ದು ನಾನೇ. ಅವರಿಗೆ ಹುಟ್ಟಿರುವುದು ಹೆಣ್ಣು ಮಗು ಆದರೆ ನರ್ಸ್ ಗಳ ಎಡವಟ್ಟಿನಿಂದ ಹೆಣ್ಣು ಮಗು ಕೊಡುವ ಬದಲು ಗಂಡು ಮಗು ಕೊಟ್ಟಿದ್ದೆ ಅವರಿಗೆ ಅನುಮಾನ ಮೂಡಲು ಕಾರಣ. ಅವರು ಬೇಕಾದರೆ ತಮ್ಮ ಇಚ್ಛೆ ಅನುಸಾರವಾಗಿ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳಬಹುದು" ಎಂದು ಅವರು ತಿಳಿಸಿದ್ದಾರೆ.

ಹೆರಿಗೆ ವೇಳೆಯಲ್ಲಿ ಮಕ್ಕಳ ವೈದ್ಯರಾದ ಡಾ.ಫರಹತ್ ತಬಸೂಮ್ ಬೇಗಂ ಹಾಗೂ ನರ್ಸ್ ಗಳಾದ ಮಮತಾ, ಸುಮಿತ್ರಾ, ತೇಜಸ್ವಿನಿ, ರೇಶ್ಮಾ, ಇದ್ದರು ಎಂದು ತಿಳಿದು ಬಂದಿದೆ.

ಘಟನೆಯ ಬಗ್ಗೆ ಹುಲ್ಲಪ್ಪ ಅವರು ಸಿಂಧನೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ತನಿಖೆ ನಡೆಸಿ ತಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಮನವಿ ಮಾಡಿದ್ದಾರೆ.

ದೂರಿನಲ್ಲೇನಿದೆ:

ಮದ್ಯಾಹ್ನ 12:00 ಕ್ಕೆ ಗಂಡು ಮಗು ಜನಿಸಿದೆ ಎಂದು ನಮಗೆ ಮಗುವನ್ನು ಹಸ್ತಾಂತರಿಸಿದ್ದಾರೆ. ಮಗುವು ಜನಿಸಿರುವುದನ್ನ ಆಶಾಕಾರ್ಯಕರ್ತೆಯವರು, ಮಗುವಿನ ಅಜ್ಜಿ, ಮಗುವಿನ ತಂದೆ ಸಹ ನೋಡಿದ್ದಾರೆ. ನಂತರ ಮಗುವನ್ನು ಐ.ಸಿ.ಯುಗೆ ಕರೆದುಕೊಂಡು ಹೋದ ನಂತರ ನಮಗೆ ಹೆಣ್ಣು ಮಗುವನ್ನು ಹಸ್ತಾಂತರಿಸಿದ್ದಾರೆ. ನಾವು ಅವರಿಗೆ ಮೊದಲು ನೀವು ನಮಗೆ ಗಂಡು ಮಗುವನ್ನು ನಮ್ಮ ಕೈಯಲ್ಲಿ ಕೊಟ್ಟಿದ್ದೀರಿ. ಐಸಿಯುಗೆ ಹೋದ ನಂತರ ನೀವು ಹೆಣ್ಣು ಮಗುವನ್ನು ನೀಡಿರುವುದನ್ನು ಪ್ರಶ್ನಿಸಿದಾಗ, ಆಸ್ಪತ್ರೆ ಸಿಬ್ಬಂದಿಯು ನಿಮಗೆ ಜನಿಸಿದ್ದು ಹೆಣ್ಣು ಮಗು. ಅವಾಗ ತರಾತುರಿಯಲ್ಲಿ ಬೇರೆ ಮಗುವನ್ನು ನಿಮಗೆ ಕೊಟ್ಟಿದ್ದೆವು ಎಂದು ಹೇಳಿದ್ದಾರೆ. ಕೂಡಲೇ ತನಿಖೆ ನಡೆಸಿ ತಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ ಮಗುವಿನ ಡಿ.ಎನ್.ಎ ಪರೀಕ್ಷೆ ಮಾಡಿಸಿ ನಂತರ ನಮಗೆ ಮಗುವನ್ನು ನಮಗೆ ನೀಡಬೇಕು ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News