×
Ad

ಕಾನ್ ಸ್ಟೆಬಲ್ ಮೇಲೆ ಹಲ್ಲೆ ಪ್ರಕರಣ : ಜೆಡಿಎಸ್ ಶಾಸಕಿ ಪುತ್ರನ ವಿರುದ್ಧ ಬಂಧನ ವಾರೆಂಟ್

Update: 2025-06-11 14:44 IST

ಸಂತೋಷ ಗೋಪಾಲಕೃಷ್ಣ

ರಾಯಚೂರು: ದೇವದುರ್ಗ ತಾಲೂಕಿನ ಪ್ರವಾಸಿ ಮಂದಿರದಲ್ಲಿ ಕರ್ತವ್ಯನಿರತ ಪೊಲೀಸ್ ಕಾನ್ ಸ್ಟೆಬಲ್ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ದೇವದುರ್ಗ ಶಾಸಕಿ ಕರೆಮ್ಮ ಜಿ.ನಾಯಕ ಪುತ್ರ ಸಂತೋಷ ಗೋಪಾಲಕೃಷ್ಣ ನಾಯಕ ಅವರ ಬಂಧನಕ್ಕೆ ಜಿಲ್ಲಾ ಸತ್ರ ನ್ಯಾಯಾಲಯ ವಾರೆಂಟ್ ಜಾರಿ ಮಾಡಿದೆ.

ಕಳೆದ ವರ್ಷ ಕೃಷ್ಣ ನದಿಯಿಂದ ಮರಳು ಅಕ್ರಮ ಸಾಗಣೆ ಮಾಡುವ ವೇಳೆ ಕರ್ತವ್ಯದಲ್ಲಿದ್ದ ಕಾನ್ ಸ್ಟೆಬಲ್ ಹನುಮಂತ ಎನ್ನುವವರು ಟ್ರ್ಯಾಕ್ಟರ್ ನಿಲ್ಲಿಸಿದ್ದರು. ಈ ಸಂಬಂಧ ಮಾತುಕತೆಗೆಂದು ಪ್ರವಾಸಿ ಮಂದಿರಕ್ಕೆ ಕರೆಸಿ ಶಾಸಕಿಯ ಪುತ್ರ ಸಂತೋಷ, ಶಾಸಕರ ಆಪ್ತ ಸಹಾಯಕರಾದ ರಫಿ, ಇಲಿಯಾಝ್ ಹಲ್ಲೆ ನಡೆಸಿದ್ದಾರೆ ಹಾಗೂ ಜಾತಿ ನಿಂದನೆ ಮಾಡಿದ್ದಾರೆ ಎಂದು ಹನುಮಂತ ದೂರು ನೀಡಿದ್ದರು.

ಪ್ರಕರಣದಲ್ಲಿ ಬಹುತೇಕ ಆರೋಪಿಗಳು ಜಾಮೀನು ಪಡೆದುಕೊಂಡಿದ್ದರು. ಆದರೆ ಗೋಪಾಲಕೃಷ್ಣ ನಾಯಕ ವಿಚಾರಣೆಗೆ ಹಾಜರಾಗದ ಹಿನ್ನೆಲೆ ಅವರ ವಿರುದ್ಧ ನ್ಯಾಯಾಲಯ ಬಂಧನ ವಾರೆಂಟ್ ಜಾರಿಗೊಳಿಸಿದ್ದು, ಜುಲೈ 5ರಂದು ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಸೂಚಿಸಿದೆ.

ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಸಂತೋಷ ವಿರುದ್ಧ ಸೆಕ್ಷನ್ 143, 147, 323, 332, 353, 342, 504, 1490 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ಕೋರ್ಟ್ ಬಂಧನ ಆದೇಶ ನೀಡಿದರೂ ಪೊಲೀಸರು ಸಂತೋಷನನ್ನು ಬಂಧಿಸಲು ಹಿಂದೇಟು ಹಾಕಿದ್ದಾರೆ ಎನ್ನುವ ಆರೋಪಗಳು ಕೇಳಿಬರುತ್ತಿವೆ.

ʼಪ್ರವಾಸಿ ಮಂದಿರದಲ್ಲಿ ಪೊಲೀಸರ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ಸಂತೋಷ ಗೋಪಾಲಕೃಷ್ಣ ಸೇರಿ ಕೆಲವರ ವಿರುದ್ಧ ಕೇಸ್ ದಾಖಲಾಗಿತ್ತು. ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಈ ಕುರಿತು ವಿಚಾರಣೆ ನಡೆಯುತ್ತಿದೆ. ಸಂತೋಷ ಬಂಧನ ವಾರಂಟ್ ಬಗ್ಗೆ ಮಾಹಿತಿ ಪಡೆದು ಮುಂದಿನ ಕ್ರಮ ಕೈಗೊಳ್ಳುತ್ತೇವೆʼ ಎಂದು ಲಿಂಗಸುಗೂರು ಡಿವೈಎಸ್ಪಿ ದತ್ತಾತ್ರೇಯ ಕರ್ನಾಡ್ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News