×
Ad

ಸ್ವತಃ ಶಾಸಕಿ ಮತ್ತು ಅವರ ಹಿಂಬಾಲಕರೇ ಮರಳು ದಂಧೆಯಲ್ಲಿ ತೊಡಗಿದ್ದಾರೆ : ಶ್ರೀನಿವಾಸ ನಾಯಕ್ ಆರೋಪ

Update: 2026-01-21 18:51 IST

ದೇವದುರ್ಗ: ಮರಳು ದಂಧೆಕೋರರು ನಾವಲ್ಲ, ಸ್ವತಃ ಶಾಸಕಿ ಮತ್ತು ಅವರ ಹಿಂಬಾಲಕರೇ ದಂಧೆಯಲ್ಲಿ ತೊಡಗಿದ್ದಾರೆ ಎಂದು ಯುವ ಮುಖಂಡ ಶ್ರೀನಿವಾಸ ನಾಯಕ್ ಗಂಭೀರ ಆರೋಪ ಮಾಡಿದ್ದಾರೆ.

ಶಾಸಕಿ ಕರೆಮ್ಮ ಜಿ. ನಾಯಕ್ ಅವರು ತಮ್ಮ ಮೇಲೆ ಮಾಡಿರುವ ಜೀವ ಬೆದರಿಕೆ ಆರೋಪವು ಸಂಪೂರ್ಣ ಸುಳ್ಳು ಮತ್ತು ಸತ್ಯಕ್ಕೆ ದೂರವಾಗಿದೆ ಎಂದು ಅವರು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕರು ತಾಲೂಕಿನಲ್ಲಿ ಅಭಿವೃದ್ಧಿ ಮಾಡುವ ಬದಲು ಹಫ್ತಾ ವಸೂಲಿಗೆ ಮುಂದಾಗಿದ್ದಾರೆ. ಶಾಸಕರು ತಮ್ಮ ಊರಿನಲ್ಲಿ ಕಟ್ಟುತ್ತಿರುವ 10 ಕೋಟಿ ರೂ. ಮೌಲ್ಯದ ಮನೆಗೆ ಹಾಗೂ ಇಂಜಿನಿಯರಿಂಗ್ ಕಾಲೇಜು ಕಟ್ಟಡಕ್ಕೆ ಸಾವಿರಾರು ಟ್ರಿಪ್ ಮರಳನ್ನು ರಾಯಲ್ಟಿ ಇಲ್ಲದೆ ಅನಧಿಕೃತವಾಗಿ ಸಾಗಿಸಲಾಗಿದೆ. ಇದಕ್ಕೆ ಶಾಸಕಿ ಮೊದಲು ಉತ್ತರ ನೀಡಲಿ ಎಂದು ಹೇಳಿದರು.

ಮರಳು ಟೆಂಡರ್ ಪ್ರಕ್ರಿಯೆ ವಿಳಂಬವಾಗುತ್ತಿರುವ ಬಗ್ಗೆ ಮನವಿ ನೀಡಲು ನಾವು ಕೇವಲ 20 ಜನ ಹೋಗಿದ್ದೆವು. ನಾವು ಹೋದಾಗ ಅಲ್ಲಿ ಪೊಲೀಸರೂ ಇದ್ದರು. ಒಂದು ವೇಳೆ ನಾವು ಬೆದರಿಕೆ ಹಾಕಿದ್ದರೆ ಅಂದೇ ನಮ್ಮನ್ನು ಯಾಕೆ ಬಂಧಿಸಲಿಲ್ಲ? ಸತ್ಯಾಂಶ ತಿಳಿಯಲು ಪೊಲೀಸರು ಶಾಸಕರ ನಿವಾಸದ ಸಿಸಿಟಿವಿ ದೃಶ್ಯಾವಳಿಗಳನ್ನು ತನಿಖೆ ಮಾಡಲಿ. ಸುಳ್ಳು ಪ್ರಕರಣ ದಾಖಲಿಸಿ ಸಮಾಜದಲ್ಲಿ ನಮಗೆ ಮಾನಹಾನಿ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಾಸಕಿಯ ಸಂಬಂಧಿ ಹನುಮಂತ್ರಾಯ ಚಿಂತಲಕುಂಟ ವಕೀಲ, ರಮೇಶ ರಾಮನಾಳ, ಮತ್ತಿತರರು ಚೆಕ್ ಪೋಸ್ಟ್ ಹಾಗೂ ನದಿ ಪಾತ್ರಗಳಲ್ಲಿ ನಿಂತು ಪ್ರತಿ ಟಿಪ್ಪರ್‌ಗೆ 50,000 ರೂ. ಹಫ್ತಾ ನೀಡುವಂತೆ ಕಿರುಕುಳ ನೀಡುತ್ತಿದ್ದಾರೆ. ಹಫ್ತಾ ನೀಡದಿದ್ದರೆ ಕೇಸ್ ಹಾಕಿಸುವ ಬೆದರಿಕೆ ಹಾಕುತ್ತಿದ್ದಾರೆ. ಮಟ್ಕಾ ದಂಧೆಕೋರರನ್ನು ಪಕ್ಕದಲ್ಲಿ ಇಟ್ಟುಕೊಂಡು ಇತರರ ಮೇಲೆ ಗೂಬೆ ಕೂರಿಸುವುದು ನಿಲ್ಲಿಸಲಿ ಎಂದು ಹೇಳಿದರು.

ನನ್ನ ಹೆಸರಿನಲ್ಲಿ ಯಾವುದೇ ಅಕ್ರಮ ಟಿಪ್ಪರ್ ಅಥವಾ ದಂಧೆ ನಡೆಯುತ್ತಿದೆ ಎಂದು ದಾಖಲೆ ಇದ್ದರೆ ತೋರಿಸಲಿ. ಸುಳ್ಳು ಪ್ರಕರಣವನ್ನು ಕೂಡಲೇ ಹಿಂಪಡೆಯದಿದ್ದರೆ, ಶಾಸಕಿಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ಅವರು ಎಚ್ಚರಿಕೆ ನೀಡಿದರು

ಸುದ್ದಿಗೋಷ್ಠಿಯಲ್ಲಿ ಸುರೇಶ್ ನಾಯಕ್ ಚಿಂತಲಕುಂಟ, ವೀರನಗೌಡ, ಶಿವು ನಗರಗುಂಡ, ಹನುಮಂತ್ರಾಯ‌ ಕಮಾಂಡರ್, ಅಂಜಳ ಅಂಬ್ರೇಶ್, ವಾಸು ಸೋಮಕಾರ, ಮತ್ತಿತರರು ಉಪಸ್ಥಿತರಿದ್ದರು.






Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News