×
Ad

ನಿಜಶರಣ ಅಂಬಿಗರ ಚೌಡಯ್ಯನವರ ಆಚಾರ-ವಿಚಾರಗಳನ್ನು ಅರಿತು ನಡೆಯಬೇಕು: ಸಚಿವ ಎನ್.ಎಸ್.ಬೋಸರಾಜು

ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಕಾರ್ಯಕ್ರಮ

Update: 2026-01-21 22:12 IST

ರಾಯಚೂರು: ಸಮಾಜದಲ್ಲಿನ ಅನಾಚಾರ, ಅಪನಂಬಿಕೆಗಳನ್ನು ನಿರ್ಭೀತಿಯಿಂದ ಟೀಕಿಸಿ ಕ್ರಾಂತಿಕಾರಿ ಶರಣರೆಂದು ಗುರುತಿಸಿಕೊಂಡ ನಿಜಶರಣ ಅಂಬಿಗರ ಚೌಡಯ್ಯನವರ ಆಚಾರ–ವಿಚಾರಗಳನ್ನು ನಾವೆಲ್ಲರೂ ಅರಿತು ಅನುಸರಿಸಬೇಕು ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು ಹೇಳಿದರು.

ಜನವರಿ 21ರ ಬುಧವಾರ ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಯಚೂರು ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಅಂಬಿಗರ ಚೌಡಯ್ಯನವರು ತಮ್ಮ ವಚನ ಸಾಹಿತ್ಯದ ಮೂಲಕ ಸಮಾಜದಲ್ಲಿ ಸಮಾನತೆಯ ಸಂದೇಶವನ್ನು ಸಾರಿದರು. ಬಸವಣ್ಣನವರ ಅನುಯಾಯಿಗಳಾಗಿದ್ದ ಚೌಡಯ್ಯನವರ ವಚನಗಳಲ್ಲಿ ಜೀವನದ ಸಾರ ಅಡಗಿದ್ದು, ಅವುಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಸಚಿವರು ತಿಳಿಸಿದರು.

ಈ ಸಂದರ್ಭದಲ್ಲಿ ರಾಯಚೂರು ನಗರ ಕ್ಷೇತ್ರದ ಶಾಸಕ ಡಾ. ಎಸ್. ಶಿವರಾಜ ಪಾಟೀಲ್ ಮಾತನಾಡಿ, ಅಂಬಿಗರ ಚೌಡಯ್ಯನವರು ವಚನಗಳ ಮೂಲಕ ಸಮಸಮಾಜ ನಿರ್ಮಾಣಕ್ಕೆ ಶ್ರಮಿಸಿದರು. ಬಹುಸಂಖ್ಯಾತ ಗಂಗಾಮತಸ್ಥ ಸಮಾಜಕ್ಕೆ ಸೂಕ್ತ ಪ್ರಾತಿನಿಧ್ಯ ದೊರಕಬೇಕು. ಈ ನಿಟ್ಟಿನಲ್ಲಿ ಸಮಾಜದ ಅಭಿವೃದ್ಧಿ ಕಾರ್ಯಗಳನ್ನು ಪಕ್ಷಾತೀತವಾಗಿ ಕೈಗೊಳ್ಳಲಾಗುತ್ತದೆ. ಸಮಾಜದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು ಎಂದು ಆಶಿಸಿದರು.

ಗಂಗಾಮತಸ್ಥ ಸಮಾಜದ ಜಿಲ್ಲಾಧ್ಯಕ್ಷ ಕೆ. ಶಾಂತಪ್ಪ ಅವರು ವಿಶೇಷ ಉಪನ್ಯಾಸ ನೀಡಿ, ಅಂಬಿಗರ ಚೌಡಯ್ಯನವರು ಯಾವುದೇ ಒಂದು ಜಾತಿಗೆ ಸೀಮಿತವಲ್ಲದ ಶರಣರಾಗಿದ್ದರು. ಅವರು ಮೂರ್ತಿ ಪೂಜೆಯನ್ನು ತಿರಸ್ಕರಿಸಿ ನೇರ ನಿಷ್ಠುರತೆಯ ಮಾರ್ಗವನ್ನು ತೋರಿಸಿದರು. ಬಸವನ ತತ್ವವನ್ನು ಸ್ವೀಕರಿಸಿ ಅನುಭವ ಮಂಟಪಕ್ಕೆ ಹೋಗಿದ ಚೌಡಯ್ಯನವರ ಸನ್ಮಾರ್ಗದಲ್ಲಿ ನಾವು ನಡೆಯಬೇಕು ಎಂದು ಹೇಳಿದರು.

ಇಂದಿನ ಸಮಾಜ ಮೂಢನಂಬಿಕೆಗಳಲ್ಲಿ ಮುಳುಗಿದೆ. ಅವುಗಳಿಂದ ಹೊರಬರಬೇಕು. ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದ ಮಾರ್ಗದರ್ಶನದಲ್ಲಿ ಸಮಾಜ ಮುನ್ನಡೆಯಬೇಕು. ನಮ್ಮ ಆಚಾರ–ವಿಚಾರ ಹಾಗೂ ಸಂಸ್ಕೃತಿಯನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿ ನಮ್ಮದು. ವಿದ್ಯಾರ್ಥಿಗಳಲ್ಲಿ ಸಂಸ್ಕಾರ ಬೆಳೆಸುವ ಕೆಲಸ ಆಗಬೇಕು ಎಂದು ಅವರು ತಿಳಿಸಿದರು.

ಸಮಾಜದ ವಿವಿಧ ಸಾಧಕರಿಗೆ ಸನ್ಮಾನ :

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಮಾಜದ ಸಾಧಕರಿಗೆ ಗಣ್ಯರಿಂದ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಕೈಗಾರಿಕಾ ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರು ಆಗಿರುವ ಸಿಂಧನೂರು ಕ್ಷೇತ್ರದ ಶಾಸಕರಾದ ಹಂಪನಗೌಡ ಬಾದರ್ಲಿ, ವಿಧಾನ ಪರಿಷತ್ ಶಾಸಕರಾದ ಎ.ವಸಂತಕುಮಾರ, ಜಿಲ್ಲಾಧಿಕಾರಿಗಳಾದ ನಿತೀಶ್ ಕೆ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಅರುಣಾಂಗ್ಷು ಗಿರಿ, ರಾಯಚೂರು ಮಹಾನಗರ ಪಾಲಿಕೆಯ ಉಪ ಆಯುಕ್ತರಾದ ಸಂತೋಷ ರಾಣಿ, ಸಮಾಜದ ಮುಖಂಡರಾದ ಕೆ.ಶರಣಪ್ಪ, ಲಲಿತಾ ಕಡಗೋಳ, ಶರಣಪ್ಪ ಕಡಗೋಳ, ಕುರ್ಡಿ ಲಕ್ಷö್ಮಣ, ರಂಗ ದೇಸಾಯಿ, ರಾಜೇಶ್ವರಿ ಸೇರಿದಂತೆ ಇತರರು ಇದ್ದರು.

ಗಣ್ಯರಿಂದ ಮಾಲಾರ್ಪಣೆ: ವೇದಿಕೆಯ ಕಾರ್ಯಕ್ರಮಕ್ಕೂ ಮೊದಲು ನಗರದ ಬಿ.ಆರ್.ಬಿ. ಸರ್ಕಲ್ ಹತ್ತಿರವಿರುವ ಅಂಬಿಗರ ಚೌಡಯ್ಯನವರ ಪುತ್ಥಳಿ ನಡೆದ ಕಾರ್ಯಕ್ರಮದಲ್ಲಿ ಕಿಲ್ಲೇ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಮಹಾಸ್ವಾಮೀಜಿ, ಸೋಮವಾರಪೇಟೆ ಹಿರೇಮಠದ ಅಭಿನವ ರಾಚೋಟಿ ವೀರಶಿವಾಚಾರ್ಯ ಸ್ವಾಮೀಜಿ ಹಾಗೂ ಸಚಿವರಾದ ಎನ್.ಎಸ್.ಬೋಸರಾಜು, ರಾಯಚೂರು ಲೋಕಸಭಾ ಸದಸ್ಯರಾದ ಜಿ.ಕುಮಾರ ನಾಯಕ, ಶಾಸಕರಾದ ಡಾ.ಎಸ್.ಶಿವರಾಜ ಪಾಟೀಲ್, ವಿಧಾನ ಪರಿಷತ್ ಶಾಸಕರಾದ ಎ.ವಸಂತಕುಮಾರ, ಜಿಲ್ಲಾಧಿಕಾರಿಗಳಾದ ನಿತೀಶ್ ಕೆ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಅರುಣಾಂಗ್ಷು ಗಿರಿ., ರಾಯಚೂರು ಮಹಾನಗರ ಪಾಲಿಕೆಯ ಆಯುಕ್ತರಾದ ಜುಬಿನ್ ಮೊಹಪಾತ್ರ ಸೇರಿದಂತೆ, ಮಾಜಿ ಸಂಸದರಾದ ಬಿ.ವಿ.ನಾಯಕ, ಮಾಜಿ ಶಾಸಕರಾದ ಎ.ಪಪ್ಪರೆಡ್ಡಿ, ರಾಯಚೂರು ನಗರಸಭೆಯ ಮಾಜಿ ಅಧ್ಯಕ್ಷರಾದ ಲಲಿತಾ ಕಡಗೋಳ, ಮುಖಂಡರಾದ ಕೆ.ಶಾಂತಪ್ಪ, ಕೆ.ಶರಣಪ್ಪ, ಕುರ್ಡಿ ಲಕ್ಷö್ಮಣ, ಹೊನ್ನಪ್ಪ, ಶ್ರೀನಿವಾಸ್, ಪಿ.ಪರಮೇಶ್, ಕೆ.ತಿಮ್ಮಪ್ಪ, ಪಿ.ಈರೇಶ, ಈರೇಶ ಜಾಲಗೇರಿ, ಕೆ.ನರಸಿಂಹ, ಇ.ಶಿವರಾಮ್, ಹನುಮಂತು ಕಡಗೋಳ ಸೇರಿದಂತೆ ಇತರರು ಅಂಬಿಗರ ಚೌಡಯ್ಯನವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News