×
Ad

ರಾಯಚೂರು | ರೋಗಿಯ ಸಾವಿನ ಪ್ರಕರಣದಲ್ಲಿ ವೈದ್ಯರ ನಿರ್ಲಕ್ಷ್ಯ ಆರೋಪ : ಕ್ರಮ ಕೈಗೊಳ್ಳದ ಆರೋಗ್ಯ ಇಲಾಖೆ ವಿರುದ್ಧ ಆಕ್ರೋಶ

Update: 2026-01-21 23:50 IST

ರಾಯಚೂರು: ಮಾನ್ವಿ ತಾಲೂಕಿನ ಬಾಗಲವಾಡ ಗ್ರಾಮದ ಅನ್ವರ್ ಸಾಬ್ ಅವರ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣವಾಗಿದ್ದರೂ, ಇದನ್ನು ಮುಚ್ಚಿಹಾಕುವ ಪ್ರಯತ್ನಗಳು ನಡೆಯುತ್ತಿವೆ. ಘಟನೆ ನಡೆದು 60 ದಿನ ಕಳೆದರೂ ಆರೋಗ್ಯ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ರಿಯಾಜ್ ಆರೋಪಿಸಿದರು.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ ವರ್ಷ ನ.24ರಂದು ಅನ್ವರ್ ಸಾಬ್ ಅವರು ಉಸಿರಾಟದ ತೊಂದರೆಯಿಂದ ಮಾನವಿ ಪಟ್ಟಣದ ಶ್ರೀ ಲಕ್ಷ್ಮೀ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಾಗಿದ್ದರು. "ಅವರು ಆಸ್ಪತ್ರೆಗೆ ನಡೆದುಕೊಂಡೇ ಹೋಗುತ್ತಿರುವುದು ಸಿಸಿಟಿವಿ ವಿಡಿಯೋದಲ್ಲಿ ಸ್ಪಷ್ಟವಾಗಿ ದಾಖಲಾಗಿದೆ. ಆದರೂ ಆಸ್ಪತ್ರೆ ಮಂಡಳಿಯು ಇದೊಂದು ನೈಸರ್ಗಿಕ ಸಾವು ಎಂದು ವರದಿ ನೀಡಿ ಪ್ರಕರಣವನ್ನು ಹಳ್ಳ ಹಿಡಿಸಲು ಪ್ರಯತ್ನಿಸುತ್ತಿದೆ" ಎಂದು ದೂರಿದರು.

ವೈದ್ಯಕೀಯ ನಿರ್ಲಕ್ಷ್ಯದ ಕುರಿತು ಮೆಡಿಕಲ್ ಅಸೋಸಿಯೇಷನ್‌ಗೆ ದೂರು ನೀಡಲಾಗಿತ್ತು. ಅಸೋಸಿಯೇಷನ್ ಅಧ್ಯಕ್ಷರು ಸ್ಥಳಕ್ಕೆ ಭೇಟಿ ನೀಡಿ ಆರೋಗ್ಯ ಇಲಾಖೆಗೆ ವರದಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಬದಲಿಗೆ, ಜಿಲ್ಲಾ ಮತ್ತು ತಾಲೂಕು ಆರೋಗ್ಯ ಅಧಿಕಾರಿಗಳು ದೂರುದಾರರಿಗೇ ಬೆದರಿಕೆ ಹಾಕುತ್ತಿದ್ದಾರೆ. ಪ್ರಕರಣವನ್ನು ಇಲ್ಲಿಗೆ ಬಿಡದಿದ್ದರೆ ಜಿಲ್ಲೆಯ ಯಾವ ಆಸ್ಪತ್ರೆಯಲ್ಲೂ ಚಿಕಿತ್ಸೆ ಸಿಗದಂತೆ ಮಾಡುವುದಾಗಿ ಹೆದರಿಸುತ್ತಿದ್ದಾರೆ ಎಂದು ರಿಯಾಜ್ ಆತಂಕ ವ್ಯಕ್ತಪಡಿಸಿದರು.

ಜೀವಂತವಾಗಿ ದಾಖಲಾದ ವ್ಯಕ್ತಿ ಮೃತಪಟ್ಟರೂ ಮರಣ ಪ್ರಮಾಣ ಪತ್ರ ನೀಡದೆ ಆಸ್ಪತ್ರೆಯು ಕುಟುಂಬಕ್ಕೆ ವಂಚಿಸುತ್ತಿದೆ. ಮೃತರ ಕುಟುಂಬಕ್ಕೆ ಕೂಡಲೇ ನ್ಯಾಯ ಒದಗಿಸಬೇಕು. ತಪ್ಪಿತಸ್ಥ ವೈದ್ಯರು ಮತ್ತು ಆಸ್ಪತ್ರೆಯ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಇಲ್ಲವಾದಲ್ಲಿ ನ್ಯಾಯಾಲಯದ ಮೊರೆ ಹೋಗುವುದಾಗಿ ಅವರು ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮೃತರ ಕುಟುಂಬಸ್ಥರಾದ ಅನೀಫಾ ಬೇಗಂ ಹಾಗೂ ಅಜಮಲಮ್ಮ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News