×
Ad

ರಾಯಚೂರು | ಯರಮರಸ್ ಬಳಿ ನಿರ್ಮಾಣ ಹಂತದಲ್ಲಿರುವ ವಿಮಾನ ನಿಲ್ದಾಣ ಕಾಮಗಾರಿ ಪರಿಶೀಲಿಸಿದ ಜಿಲ್ಲಾಧಿಕಾರಿ

Update: 2026-01-22 10:40 IST

ರಾಯಚೂರು: ಜಿಲ್ಲಾಧಿಕಾರಿ ನಿತೀಶ್ ಕೆ ಅವರು ಜ.21ರಂದು ಸಂಜೆ ರಾಯಚೂರು ನಗರದ ಹೊರವಲಯದ ಯರಮರಸ್ ಬಳಿ ನಿರ್ಮಾಣ ಹಂತದಲ್ಲಿರುವ ವಿಮಾನ ನಿಲ್ದಾಣದ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ವಿವಿಧ ಹಂತದ ಕಾಮಗಾರಿಗಳ ಪ್ರಗತಿಯನ್ನು ಸಮಗ್ರವಾಗಿ ಪರಿಶೀಲಿಸಿದರು.

ಮೊದಲಿಗೆ ವಿಮಾನ ನಿಲ್ದಾಣದ ರನ್‌ವೇ ಕಾಮಗಾರಿಯನ್ನು ವೀಕ್ಷಿಸಿದ ಜಿಲ್ಲಾಧಿಕಾರಿಗಳು, ಕಾಮಗಾರಿಯ ಸ್ಥಿತಿಗತಿಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಒಟ್ಟು 1.7 ಕಿಲೋ ಮೀಟರ್ ಉದ್ದದ ರನ್‌ವೇ ಪೈಕಿ ಇದುವರೆಗೆ 800 ಮೀಟರ್ ಉದ್ದದ ರನ್‌ವೇಗೆ ಮೊರಂ ಹಾಕಲಾಗಿದ್ದು, ಉಳಿದ ಭಾಗದ ಕಾಮಗಾರಿ ಪ್ರಗತಿ ಹಂತದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದರು.

ನಂತರ ಪ್ಯಾಸೆಂಜರ್ ಟರ್ಮಿನಲ್ ಬಿಲ್ಡಿಂಗ್‌ಗೆ ಭೇಟಿ ನೀಡಿ ಪರಿಶೀಲಿಸಿದ ಜಿಲ್ಲಾಧಿಕಾರಿಗಳಿಗೆ, ಕಟ್ಟಡಕ್ಕೆ ಈಗಾಗಲೇ ಕಾಲಂ ಹಾಗೂ ಚತ್ತು ಹಾಕಲಾಗಿದ್ದು, ಪ್ರಸ್ತುತ ರೂಫ್ ಟ್ರಸ್ ಕಾಮಗಾರಿ ನಡೆಯುತ್ತಿದೆ ಎಂದು ಮಾಹಿತಿ ನೀಡಲಾಯಿತು.

ಇದೇ ವೇಳೆ ಎಲೆಕ್ಟ್ರಿಕಲ್ ಸಬ್ ಸ್ಟೇಷನ್ ಬಿಲ್ಡಿಂಗ್–1 ಹಾಗೂ ಬಿಲ್ಡಿಂಗ್–2ರ ಕಾಮಗಾರಿಗಳ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಗಳಿಗೆ, ಈ ಎರಡು ಕಟ್ಟಡಗಳು ಪ್ಲಾಸ್ಟರ್ ಹಂತದಲ್ಲಿವೆ ಎಂದು ಅಧಿಕಾರಿಗಳು ವಿವರಿಸಿದರು. ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ) ಬಿಲ್ಡಿಂಗ್‌ನ ಚತ್ತಿನ ಕಾಂಕ್ರೀಟ್ ಕಾಮಗಾರಿ ನಡೆಯುತ್ತಿದೆ ಎಂದು ತಿಳಿಸಲಾಯಿತು.

ವಿಮಾನ ನಿಲ್ದಾಣದ ಒಟ್ಟು 8 ಕಿಲೋ ಮೀಟರ್ ಕಾಂಪೌಂಡ್ ವ್ಯಾಪ್ತಿಯಲ್ಲಿ 5 ಕಿಲೋ ಮೀಟರ್ ಉದ್ದದ ಪೆರಿಮೀಟರ್ ರಸ್ತೆ ಪ್ರಸ್ತುತ ಡಬ್ಲ್ಯೂಎಂಎಂ ಹಂತದಲ್ಲಿದ್ದು, ಮುಂದಿನ ದಿನಗಳಲ್ಲಿ ಡಾಂಬರೀಕರಣ ಕೈಗೊಳ್ಳಲಾಗುವುದು. ಒಟ್ಟು 12 ಸೆಕ್ಯುರಿಟಿ ವಾಚ್ ಟವರ್‌ಗಳಲ್ಲಿ 6 ಟವರ್‌ಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಕಾಂಪೌಂಡ್ ಒಳಭಾಗದ ಆಂತರಿಕ ರಸ್ತೆಗಳ ನಿರ್ಮಾಣ ಕಾಮಗಾರಿಯೂ ಸಹ ಸಾಗುತ್ತಿದೆ. ವಿಮಾನ ನಿಲ್ದಾಣದ 8 ಕಿಲೋ ಮೀಟರ್ ಕಾಂಪೌಂಡ್ ನಿರ್ಮಾಣ ಕಾರ್ಯ ಈಗಾಗಲೇ ಪೂರ್ಣಗೊಂಡಿದೆ ಎಂದು ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು.

ಕಾಮಗಾರಿ ವೇಗಗೊಳಿಸಲು ನಿರ್ದೇಶನ :

ಪರಿಶೀಲನೆಯ ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ನಿತೀಶ್ ಕೆ ಅವರು, ವಿಮಾನ ನಿಲ್ದಾಣದ ಕಾಮಗಾರಿಯನ್ನು ಇನ್ನಷ್ಟು ವೇಗಗೊಳಿಸಿ, ಬಾಕಿ ಉಳಿದ ಎಲ್ಲ ಕಾರ್ಯಗಳನ್ನು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ರಾಯಚೂರು ಸಹಾಯಕ ಆಯುಕ್ತರಾದ ಡಾ.ಹಂಪಣ್ಣ ಸಜ್ಜನ್, ತಹಶೀಲ್ದಾರ್‌ ಸುರೇಶ ವರ್ಮಾ, ಲೋಕೋಪಯೋಗಿ ಇಲಾಖೆಯ ಅಭಿಯಂತರರಾದ ಮಹೇಶ್, ಗುತ್ತಿಗೆದಾರ ಕಂಪನಿ ಕೆಎಂವಿದ ಪ್ರತಿನಿಧಿಗಳಾದ ಪ್ರವೀಣ್ ಹಾಗೂ ಇನ್ನೀತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News