ದೇವದುರ್ಗ | ಸಾಮೂಹಿಕ ವಿವಾಹಗಳು ದುಂದು ವೆಚ್ಚಕ್ಕೆ ಕಡಿವಾಣ : ನಾಗಲಕ್ಷ್ಮೀ ಚೌಧರಿ
ಗಬ್ಬೂರಿನ ಬೂದಿ ಬಸವೇಶ್ವರ ಜಾತ್ರೆಯಲ್ಲಿ 152ಜೋಡಿಗಳ ಸಾಮೂಹಿಕ ವಿವಾಹ
ದೇವದುರ್ಗ: ಸಾಮೂಹಿಕ ವಿವಾಹ ಪದ್ಧತಿ ದುಂದು ವೆಚ್ಚಕ್ಕೆ ಕಡಿವಾಣ ಹಾಕುವ ಜೊತೆಗೆ ಬಡವರಿಗೆ ಆರ್ಥಿಕ ಬಲ ನೀಡುತ್ತದೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಹೇಳಿದರು.
ಅವರು ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದ ಬೂದಿ ಬಸವೇಶ್ವರ ಸಂಸ್ಥಾನ ಮಠದಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು.
ಸಾಮೂಹಿಕ ವಿವಾಹಗಳು ಸಮ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಿವೆ. ಜಾತಿ ವ್ಯವಸ್ಥೆಯನ್ನು ದೇವರು ಸೃಷ್ಟಿಸಿಲ್ಲ, ಮನುಷ್ಯನೇ ನಿರ್ಮಿಸಿದ್ದಾನೆ. ಇದರ ಪರಿಣಾಮವಾಗಿ ಅಸಮಾನತೆ ಹೆಚ್ಚಿದ್ದು, ಬಡವರು ಬಡವರಾಗಿಯೇ ಉಳಿದರೆ ಶ್ರೀಮಂತರು ಇನ್ನಷ್ಟು ಶ್ರೀಮಂತರಾಗುತ್ತಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕಿ ಕರೆಮ್ಮ ಜಿ. ನಾಯಕ್ ಅವರು, ನೂತನ ದಂಪತಿಗಳು ಪರಸ್ಪರ ಅರ್ಥಮಾಡಿಕೊಂಡು, ಸುಖ–ದುಃಖಗಳನ್ನು ಸಮನ್ವಯದಿಂದ ಎದುರಿಸಿಕೊಂಡು ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.
ಶಾಸಕ ಶರಣಗೌಡ ಕಂದಕೂರ ಮಾತನಾಡಿ, ಇಂದಿನ ಕಾಲದಲ್ಲಿ ಮದುವೆ ಸುಲಭವಲ್ಲ. ಬಡವರು ಶ್ರೀಮಂತರನ್ನು ಅನುಸರಿಸಿ ದುಂದು ವೆಚ್ಚದ ಮದುವೆ ಮಾಡಬಾರದು. ದುಬಾರಿ ಮದುವೆಗಳು ಬಡವರನ್ನು ಸಾಲಗಾರರನ್ನಾಗಿಸುತ್ತವೆ ಎಂದು ಎಚ್ಚರಿಸಿದರು.
ಈ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 152 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್, ಮಾಹಿತಿ ಆಯೋಗದ ಕಲಬುರಗಿ ಪೀಠದ ಆಯುಕ್ತ ವೆಂಕಟಸಿಂಗ್, ಬೂದಿ ಬಸವೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಬೂದಿಬಸವೇಶ್ವರ ಶಿವಾಚಾರ್ಯರರು, ಕಿಲ್ಲೇ ಬೃಹನ್ಮಠದ ಶಿವಾಚಾರ್ಯರು, ಶಾಂತಮಲ್ಲ ಶಿವಾಚಾರ್ಯರು, ನವಲಕಲ್ ಮಠದ ಸೋಮನಾಥ ಗುರುವಿನ ಸಿದ್ದಯ್ಯಸ್ವಾಮಿ, ವಿನಯ ಗುರೂಜಿ, ಫಕೀರ ದಿಂಗಾಲೇಶ್ವರ ಸ್ವಾಮೀಜಿ, ಶಾಸಕರಾದ ಬಸನಗೌಡ ದದ್ದಲ್, ಡಾ.ಶಿವರಾಜ ಪಾಟೀಲ, ರಾಜಾ ವೇಣುಗೋಪಾಲ ನಾಯಕ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಪಾಟೀಲ ಇಟಗಿ, ವಿಧಾನ ಪರಿಷತ್ ಸದಸ್ಯ ಎ.ವಸಂತಕುಮಾರ, ಮಾಜಿ ಸಂಸದ ಬಿ.ವಿ. ನಾಯಕ, ಮಾಜಿ ಸಚಿವ ಕೆ.ಶಿವನಗೌಡ ನಾಯಕ, ಮಾಜಿ ಶಾಸಕ ಬಸನಗೌಡ ಬ್ಯಾಗವಾಟ, ಕಾಂಗ್ರೆಸ್ ಮುಖಂಡ ರವಿ ಬೋಸರಾಜ, ಕೆ.ಶಾಂತಪ್ಪ, ರುದ್ರಪ್ಪ ಅಂಗಡಿ ಹಾಗೂ ಶ್ರೀದೇವಿ ನಾಯಕ ಸೇರಿ ಹಲವರು ಹಾಜರಿದರು.