ರಾಯಚೂರು ಉತ್ಸವಕ್ಕೆ ಚುರುಕಿನ ಸಿದ್ಧತೆ : ವ್ಯಾಪಕ ಪ್ರಚಾರಕ್ಕೆ ಜಿಲ್ಲಾಧಿಕಾರಿ ನಿತೀಶ್ ಕೆ. ಸೂಚನೆ
ರಾಯಚೂರು : ಫೆ.5ರಿಂದ ಮೂರು ದಿನಗಳ ಕಾಲ ನಡೆಯಲಿರುವ ಎಡೆದೊರೆ ನಾಡು–ರಾಯಚೂರು ಜಿಲ್ಲಾ ಉತ್ಸವಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇರುವ ಹಿನ್ನೆಲೆಯಲ್ಲಿ, ಸಂಬಂಧಿಸಿದ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿ ಚುರುಕಾಗಿ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ನಿತೀಶ್ ಕೆ ಅವರು ಸೂಚನೆ ನೀಡಿದರು.
ನಗರದ ಹಳೆಯ ಜಿಲ್ಲಾಧಿಕಾರಿಗಳ ಆವರಣದಲ್ಲಿರುವ ಮಹಾನಗರ ಪಾಲಿಕೆಯ ಕೋರ್ಟ್ ಹಾಲ್‌ನಲ್ಲಿ ಸೋಮವಾರ ನಡೆದ ಉತ್ಸವದ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯ ಎಲ್ಲಾ ಮಂದಿರ, ಮಸೀದಿ, ಚರ್ಚ್‌ಗಳು ಸೇರಿದಂತೆ ಧಾರ್ಮಿಕ ಕೇಂದ್ರಗಳಲ್ಲಿ ಪ್ರಾರ್ಥನಾ ಸಮಯದಲ್ಲಿ ಉತ್ಸವದ ಮಾಹಿತಿ ನೀಡಬೇಕು. ರಾಯಚೂರು, ಮಾನವಿ, ಸಿಂಧನೂರು, ಲಿಂಗಸುಗೂರು, ದೇವದುರ್ಗ, ಮಸ್ಕಿ, ಸಿರವಾರ ಸೇರಿದಂತೆ ಜಿಲ್ಲೆಯ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಕಸ ಎತ್ತುವ ವಾಹನಗಳ ಮೂಲಕ ಜಿಂಗಲ್ ಪ್ರಸಾರ ಕಡ್ಡಾಯ ಮಾಡಬೇಕು ಎಂದು ಸೂಚಿಸಿದರು.
ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು ತಮ್ಮ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳ ಪಿಡಿಒಗಳ ಸಭೆ ಕರೆದು, ಗ್ರಾಮ ಹಾಗೂ ಹೋಬಳಿ ಮಟ್ಟದಲ್ಲಿ ಡಂಗೂರ, ಕಸ ವಾಹನ ಮತ್ತು ಜಾಥೆಗಳ ಮೂಲಕ ಉತ್ಸವದ ಪ್ರಚಾರ ನಡೆಸಬೇಕು. ಶಾಲಾ ಮುಖ್ಯಶಿಕ್ಷಕರ ಸಹಯೋಗದಲ್ಲಿ ಗ್ರಾಮ ಪಂಚಾಯಿತಿಗಳು ಮತ್ತು ಶಾಲೆಗಳ ಮೂಲಕ ಜನಜಾಗೃತಿ ಜಾಥೆಗಳನ್ನು ಆಯೋಜಿಸಿ, ಫೆ.5, 6 ಮತ್ತು 7ರಂದು ಉತ್ಸವ ನಡೆಯಲಿದೆ ಎಂಬ ಸಂದೇಶವನ್ನು ಮನೆಮನೆ ತಲುಪಿಸಬೇಕು ಎಂದು ಸೂಚನೆ ನೀಡಿದರು.
ಆಶಾ–ಅಂಗನವಾಡಿ ಮೂಲಕ ಮನೆಮನೆ ಪ್ರಚಾರ :
ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಪ್ರತಿ ಗ್ರಾಮದಲ್ಲಿ ಮನೆಮನೆಗೆ ತೆರಳಿ ಉತ್ಸವದ ಮಾಹಿತಿ ನೀಡಬೇಕು. ಈ ನಿಟ್ಟಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಜಂಟಿ ಸಭೆ ಅಥವಾ ವೀಡಿಯೋ ಕಾನ್ಫರೆನ್ಸ್ ನಡೆಸಿ ಪ್ರಚಾರ ಕಾರ್ಯದ ಮೇಲ್ವಿಚಾರಣೆ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಆಟೋ, ಬಸ್, ರೈಲ್ವೆ ನಿಲ್ದಾಣಗಳಲ್ಲಿ ಪ್ರಚಾರ :
ಜಿಲ್ಲೆಯ ಎಲ್ಲಾ ನಗರ, ಪಟ್ಟಣ ಹಾಗೂ ಹೋಬಳಿಗಳಲ್ಲಿ ಆಟೋ ಮೂಲಕ ತಕ್ಷಣ ಪ್ರಚಾರ ಆರಂಭಿಸಬೇಕು. ನಗರ ಹಾಗೂ ಹೊರ ಜಿಲ್ಲೆಗಳಿಗೆ ಸಂಚರಿಸುವ ಎಲ್ಲ ಬಸ್‌ಗಳಿಗೆ ಪೋಸ್ಟರ್ ಅಂಟಿಸಿ ಪ್ರಚಾರ ನಡೆಸಬೇಕು. ನಗರದ ರೈಲ್ವೆ ನಿಲ್ದಾಣ ಸೇರಿದಂತೆ ಜನಸಂಚಾರ ಹೆಚ್ಚಿರುವ ಸ್ಥಳಗಳಲ್ಲಿ ಬ್ಯಾನರ್ ಅಳವಡಿಸಿ, ಉತ್ಸವದ ದಿನವಾರು ಹಾಗೂ ಸಮಯವಾರು ಕಾರ್ಯಕ್ರಮಗಳ ವಿವರ ನೀಡಬೇಕು ಎಂದು ಸೂಚಿಸಿದರು.
ಶಾಲಾ–ಕಾಲೇಜು ವಿದ್ಯಾರ್ಥಿಗಳಲ್ಲಿ ಪ್ರಚಾರ :
ಜಿಲ್ಲೆಯ ಎಲ್ಲಾ ಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಉತ್ಸವದ ಮಾಹಿತಿ ತಲುಪಿಸುವ ನಿಟ್ಟಿನಲ್ಲಿ ಡಿಡಿಪಿಐ ಹಾಗೂ ಡಿಡಿಪಿಯು ಅಧಿಕಾರಿಗಳು ಸುತ್ತೋಲೆ ಹೊರಡಿಸಿ ಚುರುಕಾಗಿ ಕಾರ್ಯನಿರ್ವಹಿಸಬೇಕು ಎಂದು ನಿರ್ದೇಶನ ನೀಡಿದರು.
ಉತ್ಸವಕ್ಕಾಗಿ ಸಿದ್ಧಪಡಿಸಿರುವ ವೆಬ್‌ಸೈಟ್, ಇನ್‌ಸ್ಟಾಗ್ರಾಂ, ಫೇಸ್‌ಬುಕ್, ಎನ್‌ಐಸಿ ಪೇಜ್‌ಗಳನ್ನು ಜಿಲ್ಲಾಧಿಕಾರಿಗಳು ವೀಕ್ಷಿಸಿ, ಪ್ರತಿ ದಿನ ನವೀಕರಿಸಿ ಜನತೆಗೆ ನಿಖರ ಮಾಹಿತಿ ನೀಡಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಈಶ್ವರ್ ಕಾಂದೂ, ಮಹಾನಗರ ಪಾಲಿಕೆ ಆಯುಕ್ತ ಜುಬಿನ್ ಮೋಹಪಾತ್ರ, ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ, ಸಹಾಯಕ ಆಯುಕ್ತ ಡಾ.ಹಂಪಣ್ಣ ಸಜ್ಜನ್, ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಈರಣ್ಣ ಬಿರಾದಾರ, ಪಾಲಿಕೆ ಉಪ ಆಯುಕ್ತೆ ಸಂತೋಷ ರಾಣಿ ಸೇರಿದಂತೆ ವಿವಿಧ ಸಮಿತಿಗಳ ಅಧ್ಯಕ್ಷರು ಹಾಗೂ ಸದಸ್ಯ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.