ರಾಯಚೂರು ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ, ಮಟ್ಕಾ, ಇಸ್ಪೀಟ್ ದಂಧೆ ನಿಯಂತ್ರಣಕ್ಕೆ ಜನಪ್ರತಿನಿಧಿಗಳ ಸಭೆ ನಡೆಸಿ ಕ್ರಮ: ಸಚಿವ ಡಾ.ಜಿ.ಪರಮೇಶ್ವರ್
ಬೆಂಗಳೂರು : ‘ದೇವದುರ್ಗ ತಾಲೂಕು ಸೇರಿದಂತೆ ರಾಯಚೂರು ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ, ಮಟ್ಕಾ ಹಾಗೂ ಇಸ್ಪೀಟ್ ದಂಧೆಗೆ ಕಡಿವಾಣ ಹಾಕಲು ಜಿಲ್ಲೆಯ ಶಾಸಕರ ಸಭೆ ಕರೆದು ಚರ್ಚಿಸಿ ಕ್ರಮ ವಹಿಸಲಾಗುವುದು. ಅಕ್ರಮ ಚಟುವಟಿಕೆಗಳ ನಿಯಂತ್ರಣದ ವಿಚಾರದಲ್ಲಿ ಯಾವುದೇ ರಾಜೀ ಮಾಡಿಕೊಳ್ಳುವುದಿಲ್ಲ’ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಇಂದಿಲ್ಲಿ ಭರವಸೆ ನೀಡಿದ್ದಾರೆ.
ಮಂಗಳವಾರ ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್ ಸದಸ್ಯೆ ಕರೆಮ್ಮ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರ ನೀಡಿದ ಅವರು, ‘ಶಾಸಕಿ ಕರೆಮ್ಮ ಸೇರಿದಂತೆ ಎಲ್ಲ ಪಕ್ಷದ ಶಾಸಕರಿಗೆ ಸೂಕ್ತ ಭದ್ರತೆ ಕಲ್ಪಿಸುವುದು ಗೃಹ ಇಲಾಖೆ ಜವಾಬ್ದಾರಿ. ಈ ವಿಚಾರದಲ್ಲಿ ಯಾವುದೇ ಲೋಪ ಆಗಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದರು.
ಅಕ್ರಮ ಮರಳು ದಂಧೆ ದೇವದುರ್ಗ ತಾಲೂಕಿಗೆ ಸೀಮಿತವಾಗಿಲ್ಲ, ರಾಜ್ಯಾದ್ಯಂತ ನಡೆಯುತ್ತಿದೆ. ಈ ದಂಧೆ ತಡೆಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆ, ಜಿಲ್ಲಾಧಿಕಾರಿ, ತಹಶೀಲ್ದಾರ್ ಹಾಗೂ ಪೊಲೀಸ್ ಇಲಾಖೆ ಒಳಗೊಂಡ ಕಾರ್ಯಪಡೆ ರಚನೆ ಮಾಡಲಾಗಿದೆ. ಆ ಸಮಿತಿ ದೂರು ನೀಡಿದರೆ ಪೊಲೀಸರು ಕೂಡಲೇ ಕ್ರಮ ವಹಿಸಲಿದ್ದಾರೆ. ದಂಧೆಯಲ್ಲಿ ತೊಡಗಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗಿದ್ದು, 10 ಪ್ರಕರಣಗಳಲ್ಲಿ ಸಕ್ಷಮ ಪ್ರಾಧಿಕಾರವು ಗಡಿಪಾರಿಗೆ ಆದೇಶ ಮಾಡಿದೆ ಎಂದರು.
2023 ರಿಂದ ಈವರೆಗೆ ಜಿಲ್ಲೆಯಲ್ಲಿ ಅಕ್ರಮ ಮರಳು ಗಣಿಗಾರಿಕೆ ಪ್ರಕರಣಗಳ ಸಂಖ್ಯೆ-440, ಮಟ್ಕಾ-342 ಹಾಗೂ 199 ಇಸ್ಪೀಟ್ ದಂಧೆ ಸಂಬಂಧ ಪ್ರಕರಣಗಳನ್ನು ದಾಖಲಿಸಲಾಗಿದೆ. ಸಿಪಿಐ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚನೆ ಮಾಡಲಾಗಿದೆ. ಪ್ರತಿಗ್ರಾಮಗಳಿಗೆ ಬೀಟ್ ಸಿಬ್ಬಂದಿ ನೇಮಕ ಮಾಡಲಾಗಿದೆ ಎಂದು ಅವರು ತಿಳಿಸಿದರು.
‘ದೇವದುರ್ಗ ತಾಲೂಕಿನಲ್ಲಿ ಅಕ್ರಮ ಮರಳು ದಂಧೆ ಹಿನ್ನೆಲೆಯಲ್ಲಿ ನಾನು ಜನಪ್ರತಿನಿಧಿಯಾಗಿ ಪರಿಶೀಲಿಸಲು ತೆರಳಿದರೆ ದಂಧೆಕೋರರು ನನ್ನ ಬೆನ್ನತ್ತಿದ್ದರೆ ನಾನು ಹೇಗೇ ಕೆಲಸ ಮಾಡಬೇಕು. ನನ್ನ ನಿವಾಸಕ್ಕೆ ಮುತ್ತಿಗೆ ಹಾಕಿ, ಬೆದರಿಕೆ ಹಾಕಿದ್ದಾರೆ. ಸ್ಥಳೀಯ ಪೊಲೀಸರು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಹೀಗಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಜೆಡಿಎಸ್ ಸದಸ್ಯೆ ಕರೆಮ್ಮ ಆಗ್ರಹಿಸಿದರು.