ರಾಯಚೂರು | ಮಹಿಳೆಯರ ಸುರಕ್ಷೆ, ಭದ್ರತೆಗಾಗಿ ನಾನು ಸದಾ ಸಿದ್ದ : ಡಾ.ನಾಗಲಕ್ಷ್ಮೀ ಚೌದರಿ
"ಹೆಣ್ಣು ಮಕ್ಕಳು ಧೈರ್ಯವಾಗಿ ಸಮಸ್ಯೆ ಎದುರಿಸಬೇಕು"
ರಾಯಚೂರು: ಹೆಣ್ಣು ಮಕ್ಕಳು ಯಾವುದೇ ಸಮಸ್ಯೆಗಳು ಎದುರಾದರೂ ಧೈರ್ಯವಾಗಿ ಎದುರಿಸಬೇಕು. ಗುಣಮಟ್ಟದ ಶಿಕ್ಷಣದ ಜೊತೆಗೆ ಸಂಘಟಿತರಾದಾಗ ತಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ತಾವೇ ಕಂಡುಕೊಳ್ಳಬಹುದು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌದರಿ ಹೇಳಿದರು.
ಸೋಮವಾರ ದೇವದುರ್ಗ ಪಟ್ಟಣದ ಅಲ್ಪಸಂಖ್ಯಾತ ಇಲಾಖೆ, ಪೊಲೀಸ್ ಠಾಣೆ ಹಾಗೂ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.
ಪಟ್ಟಣದ ಅಲ್ಪಸಂಖ್ಯಾತ ಬಾಲಕಿಯರ ವಸತಿ ನಿಲಯಕ್ಕೆ ಭೇಟಿ ನೀಡಿದ ಅವರು, ಅಲ್ಲಿ ಮೂಲಸೌಕರ್ಯಗಳ ಕೊರತೆ, ಗುಣಮಟ್ಟದ ಊಟದ ವ್ಯವಸ್ಥೆ ಇಲ್ಲದಿರುವುದು, ಬೆಂಚ್–ಚೇರ್, ಡೈನಿಂಗ್ ಟೇಬಲ್ ಹಾಗೂ ಸರಿಯಾದ ನಾಮಫಲಕಗಳಿಲ್ಲದಿರುವುದಕ್ಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ವಿದ್ಯಾರ್ಥಿನಿಯರ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ನಾಮಫಲಕಗಳಲ್ಲಿ ಮೇಲಾಧಿಕಾರಿಗಳ ದೂರವಾಣಿ ಸಂಖ್ಯೆಯನ್ನು ಕಡ್ಡಾಯವಾಗಿ ಹಾಕಿ, ಯಾವುದೇ ಸಮಸ್ಯೆ ಬಂದರೂ ತಕ್ಷಣ ಸ್ಪಂದಿಸುವಂತೆ ಸೂಚಿಸಿದರು.
ಪೊಲೀಸ್ ಠಾಣೆಗೆ ಭೇಟಿ :
ದೇವದುರ್ಗ ಪೊಲೀಸ್ ಠಾಣೆಗೆ ಭೇಟಿ ನೀಡಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳ ಪರಿಶೀಲನೆ ನಡೆಸಿದ ಅವರು, ಯಾವುದೇ ಮಹಿಳೆ ಸಮಸ್ಯೆ ಹೇಳಿಕೊಳ್ಳಲು ಬಂದರೆ ಪೊಲೀಸರು ತಕ್ಷಣ ಸ್ಪಂದಿಸಬೇಕು ಎಂದರು.
ತಪ್ಪು ಮಾಡದವರು ಭಯಪಡುವ ಅಗತ್ಯವಿಲ್ಲ. ತಪ್ಪು ಮಾಡಿದವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ. ಮಹಿಳೆಯರು ಭಯವಿಲ್ಲದೆ ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿ ರಕ್ಷಣೆ ಪಡೆಯಬೇಕು ಎಂದು ತಿಳಿಸಿದರು.
ಪೊಕ್ಸೊ ಪ್ರಕರಣವೊಂದರ ಕುರಿತು ಯುವತಿಯ ತಾಯಿಯೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಡಾ. ನಾಗಲಕ್ಷ್ಮೀ, ಪೊಲೀಸರ ಸ್ಪಂದನೆ ಬಗ್ಗೆ ಮಾಹಿತಿ ಪಡೆದರು. ಇದಕ್ಕೆ ಪ್ರತಿಕ್ರಿಯಿಸಿದ ಯುವತಿಯ ತಾಯಿ, ಪಿಐ ಮಂಜುನಾಥ ಅವರು ನಿರಂತರವಾಗಿ ರಕ್ಷಣೆ ಮತ್ತು ಸಹಕಾರ ನೀಡುತ್ತಿದ್ದಾರೆ. ಇಂತಹ ಅಧಿಕಾರಿಗಳಿಂದ ನಮಗೆ ನ್ಯಾಯ ಸಿಗುತ್ತದೆ ಎಂದು ಹೇಳಿದರು.
ಪಿಐ ಮಂಜುನಾಥ ಹಾಗೂ ದೇವದುರ್ಗ ಪೊಲೀಸ್ ಇಲಾಖೆ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿ ವಿಶ್ವಾಸ ಗಳಿಸುತ್ತಿದ್ದಾರೆ ಎಂದು ಡಾ. ನಾಗಲಕ್ಷ್ಮೀ ಶ್ಲಾಘಿಸಿದರು.
ಸರ್ಕಾರಿ ಆಸ್ಪತ್ರೆ ಪರಿಶೀಲನೆ :
ನಂತರ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಅವರು, ರೋಗಿಣಿಯರ ಬಳಿ ನೇರವಾಗಿ ಹೋಗಿ ಸಮಸ್ಯೆಗಳನ್ನು ಕೇಳಿದರು. ವೃದ್ಧರು ಹಾಗೂ ಮಹಿಳೆಯರಿಗೆ ಮೊದಲ ಆದ್ಯತೆ ನೀಡಬೇಕು. ಆಸ್ಪತ್ರೆಯಲ್ಲಿ ಔಷಧಿ ಲಭ್ಯವಿಲ್ಲದಿದ್ದರೆ ಹೊರಗಡೆ ತರಿಸಿ ನೀಡಬೇಕು, ರೋಗಿಗಳನ್ನು ಕಳುಹಿಸಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಬಾಣಂತಿಯರಿಗೆ ಊಟ, ಹಾಲು, ಮೊಟ್ಟೆ ನೀಡುವ ವಿಚಾರವಾಗಿ ಬಂದ ಆರೋಪಗಳ ಕುರಿತು ಸ್ಪಷ್ಟತೆ ನೀಡಿದ ಅವರು, ನೇರವಾಗಿ ವಿಚಾರಿಸಿದಾಗ ಮಹಿಳೆಯರು ಸೌಲಭ್ಯ ದೊರಕುತ್ತಿದೆ ಎಂದು ತಿಳಿಸಿದ್ದಾರೆ ಎಂದರು.
ಜನನಿ ಸುರಕ್ಷಾ ಯೋಜನೆಯಡಿ ತಜ್ಞರಿಲ್ಲದ ಕಾರಣ ರಿಮ್ಸ್‌ಗೆ ರೆಫರ್ ಮಾಡುವ ಸಂದರ್ಭದಲ್ಲಿ, ಬಡ ರೋಗಿಗಳಿಗೆ ಆಂಬುಲೆನ್ಸ್ ಸೇರಿದಂತೆ ಎಲ್ಲ ವ್ಯವಸ್ಥೆಗಳನ್ನು ಆಸ್ಪತ್ರೆಯೇ ಮಾಡಬೇಕು. ತಾಯಿ ಮತ್ತು ಮಗು ಸುರಕ್ಷಿತವಾಗುವವರೆಗೂ ಒಂದೂ ರೂಪಾಯಿ ಖರ್ಚಾಗಬಾರದು ಎಂದು ಕಟ್ಟುನಿಟ್ಟಾಗಿ ಸೂಚಿಸಿದರು.
ಸರ್ಕಾರಿ ಆಸ್ಪತ್ರೆಯಲ್ಲಿ ಶುಚಿತ್ವದ ಕೊರತೆ ಹಾಗೂ ಮಹಿಳಾ ಶೌಚಾಲಯಗಳಲ್ಲಿ ಕೋತಿಗಳ ಸಮಸ್ಯೆ ಇರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಇಂತಹ ಸಮಸ್ಯೆಗಳು ತಾಲೂಕು ಆಸ್ಪತ್ರೆಯಲ್ಲಿ ಇರಬಾರದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶ್ರೀದೇವಿ ನಾಯಕ, ತಹಶೀಲ್ದಾರ್ ನಾಗಮ್ಮ ಕಟ್ಟಿಮನಿ, ಪಿಐ ಮಂಜುನಾಥ, ತಾಲೂಕು ವೈದ್ಯಾಧಿಕಾರಿ ಡಾ. ಬನೇಶ್ ಗಬ್ಬೂರು, ಸಿಡಿಪಿಓ ಅನೀಲ್ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.