×
Ad

ರಾಯಚೂರು ರಿಪೋಟರ‍್ಸ್ ಗಿಲ್ಡ್ ಪತ್ರಿಕಾ ಭವನ ನವೀಕರಣ ಕಾಮಗಾರಿಗೆ ಎ.ವಸಂತಕುಮಾರ ಚಾಲನೆ

Update: 2026-01-20 16:19 IST

ರಾಯಚೂರು: ನಗರದ ರಿಪೋಟರ‍್ಸ್ ಗಿಲ್ಡ್ ಪತ್ರಿಕಾ ಭವನದ ನವೀಕರಣ ಅತ್ಯಂತ ಅವಶ್ಯವಿದ್ದು, ಈ ಕಾಮಗಾರಿಗಾಗಿ ಮೊದಲ ಹಂತದಲ್ಲಿ ನನ್ನ ಶಾಸಕರ ನಿಧಿಯಿಂದ 10 ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಅಗತ್ಯಬಿದ್ದರೆ ಹೆಚ್ಚಿನ ಅನುದಾನವನ್ನೂ ಒದಗಿಸಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಎ. ವಸಂತ ಕುಮಾರ್ ಹೇಳಿದರು.

ನಗರದ ರಾಯಚೂರು ರಿಪೋರ್ಟರ್ಸ್ ಗಿಲ್ಡ್ ಪತ್ರಿಕಾ ಭವನದ ಒಳಾಂಗಣ ನವೀಕರಣ ಕಾಮಗಾರಿಗೆ ಮಂಗಳವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಕಳೆದ 25 ವರ್ಷಗಳ ಹಿಂದೆ ನಿರ್ಮಾಣವಾದ ಈ ಪತ್ರಿಕಾ ಭವನಕ್ಕೆ ಇಂದಿನ ಕಾಲಘಟ್ಟಕ್ಕೆ ಅನುಗುಣವಾಗಿ ಆಧುನೀಕರಣದ ಅಗತ್ಯವಿದೆ. ಈ ನಿಟ್ಟಿನಲ್ಲಿ ರಾಯಚೂರು ರಿಪೋರ್ಟರ್ಸ್ ಗಿಲ್ಡ್ ಅಧ್ಯಕ್ಷರಾದ ವಿಜಯಕುಮಾರ ಜಾಗಟಗಲ್ ಅವರು ಸಲ್ಲಿಸಿದ್ದ ಪ್ರಸ್ತಾವನೆಗೆ ಸ್ಪಂದಿಸಿ, ಭರವಸೆಯಂತೆ ಅನುದಾನ ಬಿಡುಗಡೆ ಮಾಡಲಾಗಿದೆ. ನವೀಕರಣ ಕಾಮಗಾರಿಯು ಅತ್ಯಂತ ಸುಸಜ್ಜಿತವಾಗಿ ಮೂಡಿಬರಬೇಕು ಎಂದು ಅವರು ತಿಳಿಸಿದರು.

ಪತ್ರಿಕಾ ಭವನದ ಇತಿಹಾಸವನ್ನು ಸ್ಮರಿಸಿದ ಅವರು, ನಾನು ನಗರಸಭೆ ಸದಸ್ಯನಾಗಿದ್ದ ಕಾಲದಲ್ಲಿ ಎಂ. ಈರಣ್ಣನವರ ಅಧ್ಯಕ್ಷತೆಯಲ್ಲಿ ಪತ್ರಿಕಾ ಭವನಕ್ಕೆ ಭೂಮಿ ಮಂಜೂರು ಮಾಡಲು ಒಪ್ಪಿಗೆ ನೀಡಲಾಗಿತ್ತು. ಅಂದಿನ ಮುಖ್ಯಮಂತ್ರಿ ಧರ್ಮಸಿಂಗ್, ಸಂಸದ ಎ. ವೆಂಕಟೇಶ ನಾಯಕ ಹಾಗೂ ಎನ್.ಎಸ್. ಬೋಸರಾಜು ಅವರ ಸಹಕಾರದಿಂದ ಈ ಕಟ್ಟಡ ನಿರ್ಮಾಣಗೊಂಡಿತ್ತು. ಇಂದು ಈ ಕಟ್ಟಡದ ನವೀಕರಣಕ್ಕೆ ನನ್ನ ಅನುದಾನ ಬಳಕೆಯಾಗುತ್ತಿರುವುದು ನನಗೆ ಹೆಮ್ಮೆ ತಂದಿದೆ ಎಂದರು.

ಜಿಲ್ಲೆಯ ಜನರ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗಾಗಿ ಕಳೆದ ಒಂದು ವರ್ಷದಲ್ಲಿ ಹತ್ತಾರು ಯೋಜನೆಗಳನ್ನು ಜಾರಿಗೆ ತಂದಿರುವುದಾಗಿ ಅವರು ಇದೇ ವೇಳೆ ತಿಳಿಸಿದರು.

ಇದೇ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಎ.ವಸಂತ ಕುಮಾರ ಅವರನ್ನು ರಾಯಚೂರು ರಿಪೋಟರ‍್ಸ್ ಗಿಲ್ಡ್ ಪದಾಧಿಕಾರಿಗಳು ಹಾಗೂ ಪತ್ರಕರ್ತರು ಸನ್ಮಾನಿಸಿ ಗೌರವಿಸಿದರು.

ರಾಯಚೂರು ರಿಪೋಟರ‍್ಸ್ ಗಿಲ್ಡ್ ಅಧ್ಯಕ್ಷರಾದ ವಿಜಯಕುಮಾರ ಜಾಗಟಗಲ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ವೇದಿಕೆಯಲ್ಲಿ ಕಾಂಗ್ರೇಸ್ ಮುಖಂಡರಾದ ಅಬ್ದುಲ್ ಕರೀಮ, ಡಿ.ಕೆ.ಮುರಳಿ ಯಾದವ್‌, ಎಂ.ಕೆ.ಬಾಬರ್, ಡಾ.ರಝಾಕ ಉಸ್ತಾದ್, ಬದಸವರಾಜ ದರೂರು, ಕೆ.ಅಸ್ಲಂ ಪಾಶಾ, ಜೆ.ಸತ್ಯನಾಥ, ಕೆ.ಇ.ಕುಮಾರ, ಮೊಹಮ್ಮದ ಉಸ್ಮಾನ, ಹಿರಿಯ ಪತ್ರಕರ್ತರಾದ ಚನ್ನಬಸವಣ್ಣ, ಕೆ.ಸತ್ಯನಾರಾಯಣ, ಚನ್ನಬಸವ ಬಾಗಲವಾಡ, ಖಾನ್‌ಸಾಬ್ ಮೋಮಿನ್, ಜಯರಾಂ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಈ ವೇಳೇ ಹಿರಿಯ ವೀಡಿಯೋ ಜರ್ನಲಿಸ್ಟ್ ಅಬ್ದುಲ್ ಖಾದರ್ ಅವರಿಗೆ ರಾಯಚೂರು ರಿಪೋಟರ‍್ಸ್ ಗಿಲ್ಡ್ ‌ನ ವಾರ್ಷಿಕ ದತ್ತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.



 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News