ರಾಯಚೂರು | ರಾಷ್ಟ್ರಮಟ್ಟದ ಅಥ್ಲೆಟಿಕ್ಸ್: 11ನೇ ಸ್ಥಾನ ಪಡೆದ ವಾಲ್ಮೀಕಿ ವಿಶ್ವವಿದ್ಯಾಲಯ
ರಾಯಚೂರು : ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಹಾಗೂ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ನಡೆದ 85ನೇ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯಗಳ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯವು 11ನೇ ಸ್ಥಾನ ಪಡೆಯುವ ಮೂಲಕ ರಾಷ್ಟ್ರಮಟ್ಟದಲ್ಲಿ ಗಮನಾರ್ಹ ಸಾಧನೆ ಮಾಡಿದೆ.
ವಿಜೇತ ಕ್ರೀಡಾಪಟುಗಳನ್ನು ಅಭಿನಂದಿಸಿ ಮಾತನಾಡಿದ ಕುಲಪತಿ ಪ್ರೊ. ಶಿವಾನಂದ ಕೆಳಗಿನಮನಿ, ದೇಶದ 306 ವಿಶ್ವವಿದ್ಯಾಲಯಗಳು ಪಾಲ್ಗೊಂಡಿದ್ದ ಈ ಬೃಹತ್ ಕ್ರೀಡಾಕೂಟದಲ್ಲಿ ನಮ್ಮ ವಿವಿ 11ನೇ ಸ್ಥಾನ ಪಡೆದಿರುವುದು ಅತ್ಯಂತ ಸಂತಸದ ವಿಷಯ. ಯುವ ಕ್ರೀಡಾಪಟುಗಳನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳೆಸಲು ನಮ್ಮ ವಿಶ್ವವಿದ್ಯಾಲಯವು ಸದಾ ಬೆನ್ನೆಲುಬಾಗಿ ನಿಲ್ಲಲಿದೆ ಎಂದು ತಿಳಿಸಿದರು.
ಕುಲಸಚಿವ ಡಾ.ಎ.ಚನ್ನಪ್ಪ ಕೆ.ಎ.ಎಸ್ ಮಾತನಾಡಿ, ರಾಷ್ಟ್ರಮಟ್ಟದ ಅಂತರ್ ವಿವಿಗಳ ಅಥ್ಲೆಟಿಕ್ ಕ್ರೀಡಾಕೀಟದಲ್ಲಿ ಇಲ್ಲಿನ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಓಟ, ರಿಲೇ, ಮ್ಯಾರಥಾನ್‍ಗಳಲ್ಲಿ ಉತ್ತಮ ಪ್ರದರ್ಶನ ತೋರಿದ್ದಾರೆ. ವಾಲ್ಮೀಕಿ ವಿಶ್ವವಿದ್ಯಾನಿಲಯದ ವ್ಯಾಪ್ತಿಗೊಳಪಡುವ ನಾನಾ ಕಾಲೇಜಿನ ವಿದ್ಯಾರ್ಥಿಗಳಾದ ಸೋನಿ ದೇವಿ 5 ಸಾವಿರ ಮೀಟರ್ ಓಟದಲ್ಲಿ ಚಿನ್ನದ ಪದಕ, ಪ್ರಿನ್ಸ್‍ರಾಜ್ ಯಾದವ್ 10 ಸಾವಿರ ಸಾವಿರ ಮೀಟರ್ ಓಟದಲ್ಲಿ ಕಂಚಿನ ಪದಕ ಮತ್ತು 5 ಸಾವಿರ ಮೀಟರ್ ಓಟದಲ್ಲಿ ಬೆಳ್ಳಿ ಪದಕ, ಖುಷ್ಬೂ ಪಾಟೀಲ್ ಹಾಫ್ ಮ್ಯಾರಥಾನ್ ಓಟದಲ್ಲಿ ಕಂಚಿನ ಪದಕ ಮತ್ತು 4x100 ಮೀ ಮೀಟರ್ ರಿಲೇ ಓಟದಲ್ಲಿ ಗೌರಮ್.ಎಂ., ನವೀನ್ .ವಿ., ಮಾರ್ಕ್ ಆ್ಯಂಥೋನಿ ಡಿಕೋಸ್ಟ್, ಶರಣದೀಪ್.ಕೆ.ಪಿ. ಬೆಳ್ಳಿ ಪದಕ ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ವಿಜೇತ ಕ್ರೀಡಾಪಟುಗಳಿಗೆ ವಿಶ್ವವಿದ್ಯಾಲಯದ ವತಿಯಿಂದ ಶೀಘ್ರದಲ್ಲೇ ಸೂಕ್ತ ಬಹುಮಾನ ಹಾಗೂ ಉತ್ತಮ ಕ್ರೀಡಾ ಸೌಲಭ್ಯಗಳನ್ನು ಒದಗಿಸುವುದಾಗಿ ಕುಲಸಚಿವರು ಭರವಸೆ ನೀಡಿದರು.
ಕುಲಸಚಿವ (ಮೌಲ್ಯಮಾಪನ) ಡಾ. ಜ್ಯೋತಿ ಧಮ್ಮ ಪ್ರಕಾಶ್ ಮಾತನಾಡಿ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ವಾಲ್ಮೀಕಿ ವಿವಿ ತನ್ನದೇ ಆದ ಛಾಪನ್ನು ಮೂಡಿಸುತ್ತಿದ್ದು, ಕ್ರೀಡಾಪಟುಗಳ ಈ ಸಾಧನೆ ಹೆಮ್ಮೆ ತಂದಿದೆ ಎಂದರು.
ಕ್ರೀಡಾ ವಿಭಾಗದ ನಿರ್ದೇಶಕಿ ಡಾ. ಲತಾ ಎಂ.ಎಸ್. ಮಾತನಾಡಿ, ನಮ್ಮ ವಿವಿಯ 22 ಪುರುಷ ಹಾಗೂ 9 ಮಹಿಳಾ ಕ್ರೀಡಾಪಟುಗಳು ಈ ಕೂಟದಲ್ಲಿ ಭಾಗವಹಿಸಿದ್ದರು. ಕಲ್ಯಾಣ ಕರ್ನಾಟಕ ಭಾಗದ ಎಲ್ಲ ವಿವಿಗಳನ್ನು ಸರಿಗಟ್ಟಿ ಪದಕಗಳ ಪಟ್ಟಿಯಲ್ಲಿ ವಾಲ್ಮೀಕಿ ವಿವಿ ಮುಂಚೂಣಿಯಲ್ಲಿರುವುದು ಗಮನಾರ್ಹ ಎಂದರು.
ಉಪಕುಲಸಚಿವರು, ನಿಕಾಯಗಳ ಡೀನರು, ಅಧಿಕಾರಿಗಳು ಹಾಗೂ ಬೋಧಕ-ಬೋಧಕೇತರ ಸಿಬ್ಬಂದಿ ಸಂತಸ ವ್ಯಕ್ತಪಡಿಸಿದ್ದಾರೆ.