×
Ad

ಸಿಂಧನೂರು ಜಿಲ್ಲೆ ರಚನೆಗೆ ಬದ್ಧ : ಬಸನಗೌಡ ಬಾದರ್ಲಿ

Update: 2026-01-19 22:50 IST

ಸಿಂಧನೂರು : ಜಿಲ್ಲೆ ರಚನೆಗೆ ಸಂಬಂಧಿಸಿದಂತೆ ಈಗಾಗಲೇ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆದಿದ್ದು, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಸಿಂಧನೂರು ಜಿಲ್ಲೆಯನ್ನಾಗಿಸುವ ನನ್ನ ಬದ್ಧತೆ ದೃಢವಾಗಿದೆ ಎಂದು ವಿಧಾನಪರಿಷತ್ ಶಾಸಕ ಬಸನಗೌಡ ಬಾದರ್ಲಿ ವಾಗ್ದಾನ ಮಾಡಿದ್ದಾರೆ.

ಅವರ ನೇತೃತ್ವದಲ್ಲಿ ಸಿಂಧನೂರು ಜಿಲ್ಲಾ ಹೋರಾಟ ಸಮಿತಿ ನಗರದ ಟೌನ್‌ಹಾಲ್‌ನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಾರ್ವಜನಿಕರ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಸಿಂಧನೂರು ಜಿಲ್ಲೆ ರಚನೆಗೆ ಸಂಬಂಧ ಕಂದಾಯ ಸಚಿವರು ಅಧಿವೇಶನದಲ್ಲಿ ಪ್ರಾದೇಶಿಕ ಆಯುಕ್ತರಿಂದ ವರದಿ ಕೇಳಿರುವುದಾಗಿ ತಿಳಿಸಿದ್ದಾರೆ. ಈಗ ಪ್ರಾದೇಶಿಕ ಆಯುಕ್ತರು ಜಿಲ್ಲಾಧಿಕಾರಿಗಳಿಗೆ ವರದಿ ಕೇಳಿದ್ದಾರೆ. ಅಲ್ಲದೆ ಅಂಬಾಮಠದ ಅಂಬಾದೇವಿ ಜಾತ್ರಾ ಮಹೋತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಆಗಮಿಸಿದಾಗಲೂ ಸಿಂಧನೂರು ಜಿಲ್ಲೆ ರಚನೆಗೆ ಕುರಿತಂತೆ ಪ್ರಸ್ತಾಪಿಸಿದ್ದೇನೆ. ಮುಂಬರುವ ದಿನಗಳಲ್ಲೂ ಅಧಿವೇಶನದಲ್ಲಿ ಈ ಬಗ್ಗೆ ಗಮನ ಸೆಳೆಯುವೆ. ಪೂರ್ವಭಾವಿ ಸಭೆಯಲ್ಲಿ ಸ್ವಾಮೀಜಿಗಳು, ಸಾರ್ವಜನಿಕರು, ಗಣ್ಯರು, ವಿವಿಧ ಸಂಘ-ಸಂಸ್ಥೆಗಳು ಭಾಗವಹಿಸಿರುವುದು ಹೋರಾಟಕ್ಕೆ ಬಲ ನೀಡಿದೆ. ಸದಾ ಈ ಹೋರಾಟದ ಪರ ನಿಲ್ಲುವುದಾಗಿ ಎಂದು ಬಸನಗೌಡ ಬಾದರ್ಲಿ ಪುನರುಚ್ಚರಿಸಿದರು.

ಕೆಲಸ ಶಾಶ್ವತ: ಅಧಿಕಾರ ಬರುತ್ತದೆ. ಹೋಗುತ್ತದೆ. ಆದರೆ ಮಾಡಿದ ಕೆಲಸ ಮಾತ್ರ ಜನರ ಮನಸ್ಸಿನಲ್ಲಿ ಉಳಿಯುತ್ತದೆ. ಈ ನಿಟ್ಟಿನಲ್ಲಿ ತಾಲೂಕಿನ ಅಭಿವೃದ್ಧಿಗೆ ಹಲವು ಕೆಲಸ ಕಾರ್ಯಗಳಿಗೆ ನಿರಂತರ ಶ್ರಮಿಸುತ್ತಿದ್ದೇನೆ. ಸಿಂಧನೂರು ಭಾಗದಲ್ಲಿ ಅಪಘಾತಗಳು ಹೆಚ್ಚುತ್ತಿರುವ ದೃಷ್ಟಿಯಿಂದ ಅತ್ಯಂತ ಅವಶ್ಯವಾದ ಟ್ರಾಮಾಕೇರ್ ಸೆಂಟರ್ ನಿರ್ಮಾಣಕ್ಕೆ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ 3 ಕೋಟಿ ರೂಪಾಯಿ ನೀಡಿರುವೆ. ಕೋವಿಡ್ ಸಂದರ್ಭದಲ್ಲಿ ನಾನು ಕೈಗೊಂಡ ಸೇವಾ ಕಾರ್ಯದ ಬಗ್ಗೆ ಇಂದಿಗೂ ಜನ ಸ್ಮರಿಸುತ್ತಾರೆ ಎಂದು ಹೇಳಿದರು.

ಮುಖಂಡರಾದ ಡಾ.ಶಿವರಾಜ ಪಾಟೀಲ್, ಭೀಮಣ್ಣ ವಕೀಲ, ಬಸವರಾಜ ನಾಡಗೌಡ, ಬಿ.ಹರ್ಷ, ರಾಜಶೇಖರ ಪಾಟೀಲ್, ಎಚ್.ಎನ್.ಬಡಿಗೇರ್, ಎಂ.ದೊಡ್ಡಬಸವರಾಜ, ನಿರುಪಾದೆಪ್ಪ ವಕೀಲ, ಶರಣೇಗೌಡ, ವೆಂಕಟೇಶ್ ರಾಗಲಪರ್ವಿ, ಸತ್ಯನಾರಾಯಣ, ವೆಂಕಣ್ಣ ಜೋಶಿ ದೋಟಿಹಾಳ ಇತರರು ಅನಿಸಿಕೆ ವ್ಯಕ್ತಪಡಿಸಿದರು.

ಪಕ್ಷಾತೀತ ಹೋರಾಟ ನಡೆಯಲಿ ಸಿಂಧನೂರು ಜಿಲ್ಲಾ ರಚನೆ ಕುರಿತಂತೆ ಪಕ್ಷಾತೀತ, ಜಾತ್ಯತೀತ, ಧರ್ಮಾತೀತ ಹಾಗೂ ಲಿಂಗಾತೀತ ಹೋರಾಟ ನಡೆಯಬೇಕಿದೆ. ಈ ನಿಟ್ಟಿನಲ್ಲಿ ರಾಜಕೀಯ ಇಚ್ಛಾಶಕ್ತಿ ಅತ್ಯಂತ ಪ್ರಮುಖವಾಗಿದ್ದು, ಜನಪ್ರತಿನಿಧಿಗಳು ಹಾಗೂ ಸಂಘ-ಸಂಸ್ಥೆಗಳು, ಸಾರ್ವಜನಿಕರು ಒಗ್ಗೂಡಿ ಸಿಂಧನೂರು ಜಿಲ್ಲಾ ರಚನೆಗೆ ಒಕ್ಕೊರಲಿನಿಂದ ಸರ್ಕಾರದ ಗಮನ ಸೆಳೆದು ಒತ್ತಡ ಹೇರಬೇಕಿದೆ ಎಂದು ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ಹೇಳಿದರು.

ಜಿಲ್ಲಾ ರಚನೆಗೆ ಎರಡು ಪರಿಕಲ್ಪನೆ

ಸಿಂಧನೂರು, ಮಸ್ಕಿ, ತುರವಿಹಾಳ, ಕಾರಟಗಿ, ಸಿರುಗುಪ್ಪಗಳನ್ನು ಒಳಗೊಂಡು ಸಿಂಧನೂರು ಜಿಲ್ಲೆ ರಚನೆ ಹಾಗೂ ಸಿಂಧನೂರು, ಮಸ್ಕಿ, ಲಿಂಗಸುಗೂರು, ಸಿರವಾರ ಒಳಗೊಂಡು ಸಿಂಧನೂರು ಜಿಲ್ಲೆ ರಚನೆ ಹೀಗೆ ಎರಡು ರೀತಿಯ ಪರಿಕಲ್ಪನೆಗಳನ್ನಿಟ್ಟುಕೊಂಡು ಪೂರ್ವಭಾವಿ ಸಭೆಯಲ್ಲಿ ಚರ್ಚಿಸಲಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News