×
Ad

ರಾಯಚೂರು | ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ

Update: 2025-10-13 20:15 IST

ರಾಯಚೂರು :  ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ ಅಗತ್ಯ ಕ್ರಮ ಕೈಗೊಂಡು ಈ ಬಾರಿ ಫಲಿತಾಂಶದಲ್ಲಿ ಬದಲಾವಣೆ ಮಾಡಬೇಕೆಂದು ಜಿಲ್ಲಾ ಪಂಚಾಯತ್ ಆಡಳಿತಾಧಿಕಾರಿಗಳು ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಆಗಿರುವ ಆರ್ಥಿಕ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಿತೇಶಕುಮಾರ್ ಸಿಂಗ್ ಅವರು ಹೇಳಿದರು.

ನಗರದ ಜಿಲ್ಲಾ ಪಂಚಾಯತ ಕಚೇರಿ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರಾಯಚೂರು ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ ಫಲಿತಾಂಶ ಕುಸಿತ ಕಂಡಿದೆ. ದೇವದುರ್ಗ ತಾಲೂಕಿನಲ್ಲಿ 17 ಶಾಲೆಗಳಲ್ಲಿ ಶೇ.40ಕ್ಕಿಂತ ಕಡಿಮೆ ಫಲಿತಾಂಶ ಬಂದಿದೆ. ಈ ತಾಲೂಕಿನಲ್ಲಿನ ಮಕ್ಕಳಿಗೆ ಬರವಣಿಗೆ ಕೌಶಲ್ಯವಿಲ್ಲ ಎಂಬ ಮಾಹಿತಿಯಿದೆ. ರಾಯಚೂರು ನಗರ ವ್ಯಾಪ್ತಿಯಲ್ಲಿ 60 ಶಾಲೆಗಳಲ್ಲಿ ಶೇ.40ಕ್ಕಿಂತ ಕಡಿಮೆ ಫಲಿತಾಂಶ ದಾಖಲಾಗುತ್ತದೆ. ನಗರ ವ್ಯಾಪ್ತಿಯ ಸಾಕಷ್ಟು ಮಕ್ಕಳು ಶಾಲೆಗೆ ಬರುವುದಿಲ್ಲ ಎಂಬ ಮಾಹಿತಿಯೂ ಇದ್ದು, ಫಲಿತಾಂಶ ಸುಧಾರಣೆಗೆ ಸೂಕ್ತ ಕ್ರಮಕೈಗೊಳ್ಳಬೇಕು. ವಾರದಲ್ಲಿ 2-3 ಶಾಲೆಗಳಿಗೆ ಆಯಾ ತಾಲೂಕು ವ್ಯಾಪ್ತಿಯ ನೋಡೆಲ್ ಅಧಿಕಾರಿಗಳು ಭೇಟಿ ನೀಡಲೇಬೇಕು ಎಂದು ಸೂಚನೆ ನೀಡಿದರು.

ಕಲಿಕೆಯಲ್ಲಿ ಹಿಂದುಳಿದಿರುವ ವಿದ್ಯಾರ್ಥಿಗಳನ್ನು ಗುರುತಿಸುವುದಕ್ಕೆ ಆದ್ಯತೆ ನೀಡಬೇಕು. ಮಕ್ಕಳು ಶಾಲೆಯಿಂದ ಹೊರಗಡೆ ಉಳಿಯದಂತೆ ನೋಡಿಕೊಳ್ಳಬೇಕು. ಫಲಿತಾಂಶ ಸುಧಾರಣಾ ಕ್ರಮಗಳು ಪ್ರತಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಸಹ ಅಚ್ಚುಕಟ್ಟಾಗಿ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.

ಬಯೋಮೆಟ್ರಿಕ್ ಯಂತ್ರ ಅಳವಡಿಕೆಗೆ ಸೂಚನೆ: ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವ್ಯಾಪ್ತಿಯ ವಸತಿ ನಿಲಯಗಳಿಗೆ ಪೂರೈಕೆಯಾಗುವ ಆಹಾರ ಧಾನ್ಯಗಳು ಮತ್ತು ಅದರ ಗುಣಮಟ್ಟದ ಬಗ್ಗೆ ಕಾರ್ಯದರ್ಶಿಗಳು ಕೇಳಿದರು.

ಇದರಲ್ಲಿ ಯಾವುದೇ ರೀತಿಯ ವ್ಯತ್ಯಾಸವಾಗಬಾರದು. ಕಡ್ಡಾಯವಾಗಿ ಬಯೋಮೆಟ್ರಿಕ್‌ನಲ್ಲಿನ ಮಕ್ಕಳ ಹಾಜರಾತಿಯನ್ನೇ ಪರಿಗಣನೆಗೆ ಪಡೆಯಬೇಕು. ರಿಜಿಸ್ಟರ್‌ನಲ್ಲಿನ ಹಾಜರಾತಿಗೂ ಬಯೋಮೆಟ್ರಿಕನಲ್ಲಿ ಹಾಜರಾತಿಗೂ ವ್ಯತ್ಯಾಸವಾಗಕೂಡದು. ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ವಸತಿ ನಿಲಯಗಳಲ್ಲಿ ಬಯೋಮೆಟ್ರಿಕ್ ಯಂತ್ರಗಳನ್ನು ಅಳವಡಿಸಿ ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯಗೊಳಿಸಬೇಕು ಎಂದು ಸೂಚನೆ ನೀಡಿದರು.

ರಾಯಚೂರು ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಹೆಚ್ಚಾಗಿ ಭತ್ತ, ಹತ್ತಿ ಮತ್ತು ತೊಗರಿ ಬೆಳೆ ಬಿತ್ತನೆಯಾಗಿದೆ. ವಿಪರೀತ ಸುರಿದ ಮಳೆಯಿಂದಾಗಿ ಹತ್ತಿ, ಭತ್ತ, ತೊಗರಿ, ಜೋಳ ಸೇರಿದಂತೆ ಅನೇಕ ಬೆಳೆಗಳಿಗೆ ಹಾನಿಯಾಗಿದೆ. ಇದಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಈಗಾಗಲೇ ಜಂಟಿ ಸರ್ವೆ ಕಾರ್ಯ ಪ್ರಗತಿಯಲ್ಲಿದೆ ಎಂದು ಜಂಟಿ ಕೃಷಿ ನಿರ್ದೇಶಕರು ಸಭೆಗೆ ವಿವರಿಸಿದರು. ಬಾಕಿ ಸರ್ವೇ ಕಾರ್ಯವನ್ನು ಶೀಘ್ರವೇ ಪೂರ್ಣಗೊಳಿಸಬೇಕು ಎಂದು ಕಾರ್ಯದರ್ಶಿಗಳು ಸೂಚನೆ ನೀಡಿದರು.

ಆರೋಗ್ಯ ಇಲಾಖೆಯಿಂದ ಸ್ಯಾನಿಟರಿ ಪ್ಯಾಡ್ ವಿತರಣೆಯಾಗಬೇಕಿದೆ ಎಂದು ಬಿಸಿಎಂ ಇಲಾಖೆಯ ಅಧಿಕಾರಿ ಸಭೆಗೆ ತಿಳಿಸಿದರು. ಸ್ಯಾನಿಟರಿ ಪ್ಯಾಡ್ ಪೂರೈಕೆಗೆ ಸಂಬಂಧಿಸಿದಂತೆ ಇಲಾಖೆಯೊಂದಿಗೆ ಸಮನ್ವಯ ಮಾಡಲು ಕಾರ್ಯದರ್ಶಿಗಳು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ವಸತಿ ನಿಲಯಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಅವುಗಳಲ್ಲಿ 02 ವಸತಿ ನಿಲಯಗಳಿಗೆ ನಿವೇಶನ ಲಭ್ಯವಿದ್ದು, ಒಂದಕ್ಕೆ ನಿವೇಶನ ಬೇಕು ಎಂದು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಯು ತಿಳಿಸಿದರು. ವಿದ್ಯಾರ್ಥಿಗಳ ಅಗತ್ಯಕ್ಕೆ ತಕ್ಕಂತೆ ಮೂಲ ಸೌಕರ್ಯ ಕಲ್ಪಿಸಲು ಅಧಿಕಾರಿಗಳು ಒತ್ತು ಕೊಡಬೇಕು ಎಂದು ಸೂಚನೆ ನೀಡಿದರು.

ಪ್ರತಿ ತಿಂಗಳ ಕಾರ್ಯಕ್ಷಮತೆಯ ಆಧಾರದ ಮೇಲೆ ಅತ್ಯುತ್ತಮ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಎಂದು ರಾಯಚೂರು ತಾಲೂಕಿನ ಬಿಚ್ಚಾಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಾಳಮ್ಮ ಅವರಿಗೆ ಸೆಪ್ಟೆಂಬರ್ ತಿಂಗಳಿನ ಪ್ರಶಂಸನೀಯ ಪ್ರಮಾಣ ಪತ್ರವನ್ನು ಕಾರ್ಯದರ್ಶಿಗಳು ನೀಡಿ ಪ್ರೋತ್ಸಾಹಿಸಿದರು.

ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ನಿತೀಶ್ ಕೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಈಶ್ವರ ಕುಮಾರ್ ಕಾಂದೂ, ರಾಯಚೂರು ಮಹಾನಗರ ಪಾಲಿಕೆ ಆಯುಕ್ತರಾದ ಜುಬೀನ್ ಮೊಹಪಾತ್ರ, ರಾಯಚೂರು ಸಹಾಯಕ ಆಯುಕ್ತರಾದ ಗಜಾನನ ಬಾಳೆ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಹಾಲಸಿದ್ದಪ್ಪ ಪೂಜಾರಿ, ಮುಖ್ಯ ಯೋಜನಾಧಿರಿಗಳಾದ ಡಾ.ಟಿ.ರೋಟಿ, ಯೋಜನಾ ನಿರ್ದೇಶಕರಾದ ಶರಣ ಬಸವರಾಜ ಕೆ. ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News