ರಾಯಚೂರಿನಲ್ಲಿ ಹತ್ತಿ ಬೆಳೆಯಲ್ಲಿ ಹೆಚ್ಚಿನ ಸಾಂದ್ರತೆಯ ನಾಟಿ ಪದ್ಧತಿಯ ಕ್ಷೇತ್ರೋತ್ಸವ, ರೈತರ ಸಂವಾದ ಯಶಸ್ವಿ
ರಾಯಚೂರು : ಹತ್ತಿ ಬೆಳೆಯಲ್ಲಿ ಹೆಚ್ಚಿನ ಸಾಂದ್ರತೆಯ ನಾಟಿ ಪದ್ಧತಿಯ (HDPS) ಕ್ಷೇತ್ರೋತ್ಸವ ಮತ್ತು ರೈತರ ಸಂವಾದ ಕಾರ್ಯಕ್ರಮವು ರಾಯಚೂರಿನ ಕಸಬೆಕ್ಯಾಂಪನ ಡಾ. ಶಂಕರಗೌಡ ಅವರ ಫಾರ್ಮ್ ಹೌಸ್‌ನಲ್ಲಿ ನಡೆಯಿತು. ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಮತ್ತು ಕೃಷಿ ಇಲಾಖೆಯ ಸಹಯೋಗದಲ್ಲಿ ಕೃಷಿ ತಂತ್ರಜ್ಞರ ಸಂಸ್ಥೆ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.
ಕಾರ್ಯಕ್ರಮಕ್ಕೆ ಕಾಯಕಶ್ರೀ ಪ್ರಶಸ್ತಿ ಪುರಸ್ಕೃತ ಹಾಗೂ ಪ್ರಗತಿಪರ ರೈತರಾದ ಶರಣಪ್ಪಗೌಡ ಅವರು ಚಾಲನೆ ನೀಡಿದರು. ಹತ್ತಿ ಬೆಳೆಯಲ್ಲಿ ಮೂರು ಬಿ.ಟಿ ಹೈಬ್ರಿಡ್ ಮತ್ತು ಎರಡು ಬೇರೆ ಜಾತಿಗಳ ಅಡಿಯಲ್ಲಿ ಎಕರೆಗೂ 29,000 ಗಿಡಗಳ ಸಾಂದ್ರತೆಯ ನಾಟಿ ಮೂಲಕ ಎಕರೆಗೊಂದು 16 ಕ್ವಿಂಟಲ್ ಇಳುವರಿಯನ್ನು ಸಾಧಿಸುವ ತಂತ್ರವನ್ನು ಚರ್ಚಿಸಲಾಯಿತು.
ಬೆಂಗಳೂರಿನ ಕೃಷಿ ತಂತ್ರಜ್ಞರ ಸಂಸ್ಥೆಯ ಅಧ್ಯಕ್ಷ ಡಾ. ಎ.ಬಿ. ಪಾಟೀಲ ಮಾತನಾಡಿ, ರೈತರು ಹೆಚ್‌ಡಿಪಿಎಸ್ ಪದ್ಧತಿಯನ್ನು ಅಳವಡಿಸಿಕೊಂಡು ಏಕಕಾಲಕ್ಕೆ ಕೊಯ್ಲು ಮಾಡಿ ಲಾಭವನ್ನು ದ್ವಿಗುಣಗೊಳಿಸಬಹುದು ಎಂದು ಸಲಹೆ ನೀಡಿದರು. ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ. ಹನುಮಂತಪ್ಪ ಎಂದು ಹೇಳಿದರು,
ಹತ್ತಿ ಬೆಳೆಯಲ್ಲಿ ಅಡಚಣೆಗಳನ್ನು ನಿವಾರಿಸಿಕೊಂಡು ಏಕಕಾಲದಲ್ಲಿ ಕೊಯ್ಲು ಮಾಡಿದರೆ ಹಿಂಗಾರಿನಲ್ಲಿ ಎರಡನೇ ಬೆಳೆ ಪಡೆಯುವ ಅವಕಾಶವಿದೆ ಎಂದರು.
ವಿಶ್ರಾಂತ ಕುಲಪತಿ ಡಾ.ಬಿ.ವಿ.ಪಾಟೀಲ ಅವರು, ಅಮೆರಿಕಾ ಮತ್ತು ಬ್ರೆಜಿಲ್ ಮುಂತಾದ ದೇಶಗಳಲ್ಲಿ ಹೆಚ್‌ಡಿಪಿಎಸ್ ಪದ್ಧತಿಯ ಯಶಸ್ವಿ ಅನುಭವಗಳ ಬಗ್ಗೆ ವಿವರಿಸಿದರು.
ಡಾ. ಸಿ.ವಿ. ಪಾಟೀಲ ಅವರು, ಹತ್ತಿ ಬೆಳೆಯು ವಾಣಿಜ್ಯ ಬೆಳೆ ಆಗಿರುವುದರಿಂದ ಹೆಚ್‌ಡಿಪಿಎಸ್ ಪ್ರಯೋಗವು ಲಾಭದಾಯಕ ಬೆಳೆಗೆ ಅತ್ಯಗತ್ಯ, ಎಂದು ಹೇಳಿದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಪ್ರಕಾಶ ಚವ್ಹಾಣ್ ಅವರು, ರಾಜ್ಯದಲ್ಲಿಯೇ ಅತಿ ಹೆಚ್ಚು ಹತ್ತಿ ಬೆಳೆವ ಜಿಲ್ಲೆಗಳಲ್ಲಿ ರಾಯಚೂರು ಪ್ರಮುಖವಾಗಿದೆ. ಜಿಲ್ಲೆಯಲ್ಲಿ 1.8 ಲಕ್ಷ ಹೆಕ್ಟೇರ್ ಹತ್ತಿ ಬೆಳೆ ಇರುತ್ತದೆ. ಹೆಚ್‌ಡಿಪಿಎಸ್ ಅಳವಡಿಸಿಕೊಂಡರೆ ರೈತರು ಇನ್ನಷ್ಟು ಲಾಭ ಪಡೆಯಲು ಸಾಧ್ಯ. ಈ ಪದ್ದತಿಯನ್ನು ಉತ್ತೇಜಿಸಲು ಯಂತ್ರೋಪಕರಣಗಳ ಸಹಾಯಕ್ಕಾಗಿ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದರು.
ಕೃಷಿ ತಂತ್ರಜ್ಞರ ಸಂಸ್ಥೆಯ ಅಧ್ಯಕ್ಷ ಆರ್.ಎ. ಪಾಟೀಲ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಹೆಚ್‌ಡಿಪಿಎಸ್ ಪ್ರಯೋಗಕ್ಕಾಗಿ ತಮ್ಮ ಜಮೀನು ಒದಗಿಸಿದ ಸಿ.ಎ. ಶಿವಾನಂದ ಅಮರಖೇಡ ಮತ್ತು ಕುಟುಂಬಕ್ಕೆ ಧನ್ಯವಾದಗಳು. ಸಂಸ್ಥೆಯು ರೈತರ ಹಿತಕ್ಕಾಗಿ ಸದಾ ಕಾರ್ಯನಿರ್ವಹಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಡಾ.ಭೀಮಣ್ಣ ಮತ್ತು ಡಾ.ಜೆ.ಎಂ.ನಿಡಗುಂದಿ ತಾಂತ್ರಿಕ ಮಾಹಿತಿ ನೀಡಿದರು. ಡಾ.ಶರಣಗೌಡ ಹಿರೇಗೌಡರ್ ಕಾರ್ಯಕ್ರಮವನ್ನು ನಿರೂಪಿಸಿದರು. ಈ ಸಂದರ್ಭದಲ್ಲಿ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಅಧಿಕಾರಿಗಳು, ಕೃಷಿ ತಂತ್ರಜ್ಞರ ಸಂಸ್ಥೆಯ ಸದಸ್ಯರು ಹಾಗೂ ಜಿಲ್ಲೆಯ ಹಲವಾರು ರೈತರು ಭಾಗವಹಿಸಿದ್ದರು.