ಗದಗ-ವಾಡಿ ರೈಲ್ವೆ ಮಾರ್ಗ ಹಟ್ಟಿ ಪಟ್ಟಣಕ್ಕೆ ಸಂಪರ್ಕಿಸಲು ಒತ್ತಾಯ; ಮಾನವ ಬಂಧುತ್ವ ವೇದಿಕೆ ನೇತೃತ್ವದಲ್ಲಿ ಸಂಸದರಿಗೆ ಮನವಿ
ರಾಯಚೂರು: ಪಿ.ಎಂ.ಗತಿ ಶಕ್ತಿ ಹಾಗೂ ಪ್ರಧಾನಮಂತ್ರಿ ಖನಿಜ ಕ್ಷೇತ್ರ ಕಲ್ಯಾಣ ಯೋಜನೆಯ ನಿಯಮಗಳ ಪ್ರಕಾರ ಗದಗ- ವಾಡಿ ರೈಲ್ವೆ ಮಾರ್ಗವನ್ನು ಹಟ್ಟಿ ಪಟ್ಟಣಕ್ಕೆ ಸಂಪರ್ಕಿಸಬೇಕು ಎಂದು ಮಾನವ ಬಂಧುತ್ವ ವೇದಿಕೆ ಕರ್ನಾಟಕ ಲಿಂಗಸುಗುರು ಘಟಕದ ವತಿಯಿಂದ ಸಂಸದ ಜಿ.ಕುಮಾರ ನಾಯಕ ಅವರಿಗೆ
ಲಿಂಗಸುಗೂರು ತಾಲೂಕಿನ ಹಟ್ಟಿ ಪಟ್ಟಣವು ಒಂದು ದೊಡ್ಡ ನಗರ ಪ್ರದೇಶವಾಗಿದ್ದು ಇಲ್ಲಿ ಎರಡು ನಗರಗಳಾದ ಹಟ್ಟಿ ಚಿನ್ನದ ಗಣಿ(NAC Census Code 803065) ಮತ್ತು ಹಟ್ಟಿ ಪಟ್ಟಣ ಪಂಚಾಯತಿ (Census Code 600535) ಈ ಎರಡು ನಗರಗಳು ಸೇರಿ ಒಟ್ಟು 50 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಪಟ್ಟಣವಾಗಿದೆ. ಹಟ್ಟಿ ಚಿನ್ನದ ಗಣಿಯ ವಾರ್ಷಿಕ ರೂ. 350 ಕೋಟಿ ಹೆಚ್ಚು ತೆರಿಗೆ ಹಾಗೂ ರಾಯಲ್ಟಿ ಸರ್ಕಾರಕ್ಕೆ ಪಾವತಿಸುತ್ತಿದೆ. ಹಟ್ಟಿ ಸುತ್ತಮುತ್ತಲೂ ಚಿನ್ನದ ಗಣಿಗಾರಿಕೆಯು ಅಶೋಕನ ಕಾಲದಿಂದ ನಡೆಯುತ್ತಿರುವುದು ಇತಿಹಾಸದ ಪ್ರಕಾರ ಗೊತ್ತಾಗುತ್ತದೆ. ದೇಶದಲ್ಲಿಯೇ ಅತೀ ಹೆಚ್ಚು ಚೆನ್ನದ ನಿಕ್ಷೇಪವಿರುವ ಪ್ರದೇಶವಾಗಿದೆ. ಸದರಿ ಪ್ರದೇಶದಿಂದ ಬೇರೆ ಕಡೆಗೆ ರೈಲ್ವೆ ಯೋಜನೆಯನ್ನು ಕಲ್ಪಿಸುವುದರಿಂದ ಇನ್ನೂ ಹೆಚ್ಚಿನ ಅಭಿವೃದ್ಧಿಗೆ ಕಾರಣವಾಗಲಿದೆ ಎಂದು ಮನವಿ ಮಾಡಿದರು.
ಸ್ವಾತಂತ್ರ್ಯ ಪೂರ್ವದಲ್ಲಿ ಹೈದರಾಬಾದ್ ನಿಜಾಮರ ಸರ್ಕಾರವು ಹಟ್ಟಿ ಚಿನ್ನದ ಗಣಿಯಿಂದ ಹೈದರಾಬಾದ್‌ಗೆ ರೈಲ್ವೆ ಯೋಜನೆ ಸಿದ್ಧಪಡಿಸಿ ಅನುಮೋದನೆ ನೀಡಿತ್ತು. 1963ರಲ್ಲಿ ಕಲಬುರಗಿ ಭಾಗದ ಶಾಸಕರಾದ ಶರಣಪ್ಪರವರು ಅಂದಿನ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಹಟ್ಟಿ ಚಿನ್ನದ ಗಣಿ ಮುಖಾಂತರ ವಾಡಿಗೆ ರೈಲ್ವೆ ಮಾರ್ಗವನ್ನು ಸೂಚಿಸಿ ಮನವಿ ಮಾಡಿದ್ದರು. 1985ರಲ್ಲಿ ಅಂದಿನ ಬಳ್ಳಾರಿ ಸಂಸದ ಬಸವರಾಜ ರಾಜೇಶ್ವರಿ ಕೇಂದ್ರ ಸರ್ಕಾರಕ್ಕೆ ಹಟ್ಟಿ ಚಿನ್ನದ ಗಣಿ ಮುಖಾಂತರ ಗದಗ-ವಾಡಿ ರೈಲ್ವೆ ಯೋಜನೆಗೆ ಅನುಮೋದನೆಗೆ ಸೂಚಿಸಿದ್ದರು. ಗದಗ-ವಾಡಿ ರೈಲ್ವೆ ಯೋಜನೆಯನ್ನು ಹಟ್ಟೆ ಮುಖಾಂತರ ಸಂಪರ್ಕಿಸಲು ಹಲವು ಪ್ರಗತಿಪರ ಸಂಘ ಸಂಸ್ಥೆಗಳು ಬಹಳ ಸುಧೀರ್ಘ ಹೋರಾಟ ನಡೆಸಿದ್ದರು ಎಂದು ವಿವರಿಸಿದರು.
ಭಾರತ ಸರ್ಕಾರವು ಗದಗ-ವಾಡಿ ರೈಲ್ವೆ ಯೋಜನೆಯನ್ನು ಮಂಜೂರು ಮಾಡಿದ್ದು ಅದರ ಸರ್ವೇ ಕೆಲಸವು ಪ್ರಗತಿಯಲ್ಲಿದೆ. ಆ ಸರ್ವೇ ಮಾರ್ಗವು ಅವೈಜ್ಞಾನಿಕವಾಗಿದ್ದು, ಲಿಂಗಸುಗೂರು-ಹೊನ್ನಳ್ಳಿ-ಯರಡೋಣ-ಗುರುಗುಂಟಾ ಮೂಲಕ ಹಾದುಹೋಗಲು ಯೋಜನೆ ಸಿದ್ಧಪಡಿಸಲಾಗಿದೆ. ಆದರೆ ಮೂಲ ಗದಗ-ವಾಡಿ ರೈಲ್ವೆ ಯೋಜನೆಯ ಪ್ರಕಾರ ಹಟ್ಟಿ ಮಾರ್ಗವಾಗಿ ಹಾದುಹೋಗಬೇಕಾಗಿರುತ್ತದೆ. ಹಟ್ಟಿ ಚಿನ್ನದ ಗಣಿ ಸುತ್ತಮುತ್ತಲೂ 14 ಚಿನ್ನದ ಗಣಿ ಬ್ಲಾಕ್(ನಿಕ್ಷೇಪ)ಗಳಿದ್ದು, ಭಾರತ ಸರ್ಕಾರದ ಭೂ ವಿಜ್ಞಾನ ಇಲಾಖೆಯು ಸಂಶೋಧಿಸಿದೆ. ಭವಿಷ್ಯದಲ್ಲಿ ಬೃಹತ್ ಮಟ್ಟದ ಗಣಿಗಾರಿಕೆ ಪ್ರಾರಂಭವಾಗಲಿದ್ದು ದೊಡ್ಡ ಮಟ್ಟದ ಕೈಗಾರಿಕೆ ಪ್ರದೇಶವಾಗಲಿದೆ ಎಂದು ಮನವಿ ಮಾಡಿದರು.
PM-Gathi Shakthi ಹಾಗೂ ಪ್ರಧಾನ ಮಂತ್ರಿ ಖನಿಜ ಕ್ಷೇತ್ರ ಕಲ್ಯಾಣ ಯೋಜನೆ(PMKKKY)ಯ ನಿಯಮಗಳು “ಬಂದರು, ಗಣಿಗಾರಿಕೆ, ಕೈಗಾರಿಕೆ, ಬೃಹತ್ ಜನಸಂಖ್ಯೆ ಹೊಂದಿರುವ ಪ್ರದೇಶಗಳಿಗೆ ರೈಲ್ವೆ ಹಾಗೂ ರಾಷ್ಟ್ರೀಯ ಹೆದ್ದಾರಿಗಳ ಸೌಲಭ್ಯ ಕಲ್ಪಿಸಿ ಅಭಿವೃದ್ಧಿಗೆ ಉತ್ತೇಜನ ನೀಡಬೇಕೆಂದು” ಹೇಳುತ್ತದೆ. ಗದಗ-ವಾಡಿ ರೈಲ್ವೆ ಮಾರ್ಗದ ಯೋಜನೆಯು ಸದ್ಯ ಇರುವ ಮಾರ್ಗವನ್ನು ರದ್ದುಪಡಿಸಿ, ಹಟ್ಟಿ ಚಿನ್ನದ ಗಣಿ ಮುಖಾಂತರ ಹಾದುಹೋಗುವಂತೆ ತನ್ನ ಮೂಲ ಮಾರ್ಗದ ನಕ್ಷೆಯಂತೆ ಅನುಮೋದಿಸಿ, ಹಟ್ಟಿ ಚಿನ್ನದ ಗಣಿಗೆ ರೈಲ್ವೆ ಸೌಲಭ್ಯವನ್ನು ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಹಟ್ಟಿ ಪಟ್ಟಣ ನಾಗರಿಕ ಸಮಿತಿ, ಮಾನವ ಬಂದುತ್ವ ವೇದಿಕೆ, ಹಿಂದೂ ನವ ಭಾರತ ದಲಿತ ಸಂಘರ್ಷ ಸಮಿತಿ ಮೂರು ಸಂಘದ ನೇತೃತ್ವದಲ್ಲಿ ಮನವಿ ಸಲ್ಲಿಸಿದ್ದು ಸಂಸದ ಜಿ.ಕುಮಾರ ನಾಯಕ ಸಕರಾತ್ಮಕವಾಗಿ ಸ್ಪಂದಿಸಿ ಕೇಂದ್ರ ರೈಲ್ವೆ ಸಚಿವರಿಗೆ ಪತ್ರ ಬರೆಯುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಟ್ಟಿ ನಾಗರಿಕ ಸಮಿತಿ ಅಧ್ಯಕ್ಷ ಸುರೇಶ್ ಗೌಡ ಗುರಿಕಾರ್ ಮಾನವ ಬಂದುತ್ವ ವೇದಿಕೆ ಅಧ್ಯಕ್ಷ ಲಾಲ್ ಪೀರ್, ನವ ಭಾರತ ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ವಿನೋದ್ ಕುಮಾರ್ ಹಾಗೂ ಬಸವರಾಜ್ ಗೌಡ ಪೊಲೀಸ್ ಪಾಟೀಲ್ ವೆಂಕಟಗಿರಿ ಉಪಸ್ಥಿತರಿದ್ದರು