ರಾಯಚೂರು | ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಅಭ್ಯಾಸ ಪುಸ್ತಕ ವಿತರಣೆ
ದೊಡ್ಡ ಕನಸಿರಲಿ ಯಶಸ್ವಿಗೆ ಶ್ರಮ ಇರಲಿ : ಡಾ.ಈರಣ್ಣ ಕೋಸಗಿ
ರಾಯಚೂರು: ನಗರದ ಪೂರ್ಣಿಮಾ ಪಿಯು ಕಾಲೇಜ್, ವೇದಾಂತ ಡಿಗ್ರಿ ಕಾಲೇಜ್ ಹಾಗೂ ಭಾರತ ಜ್ಞಾನ ವಿಜ್ಞಾನ ಸಮಿತಿ ಸಹಯೋಗದಲ್ಲಿ ಎಸೆಸೆಲ್ಸಿ ವಿದ್ಯಾರ್ಥಿಗಳಿಗಾಗಿ ಅಭ್ಯಾಸ ಪುಸ್ತಕಗಳ ವಿತರಣಾ ಕಾರ್ಯಕ್ರಮವನ್ನು ಸಾಗಮ್ ಕುಂಟ, ಗಿಲೆಸೂರು, ಗುಂಜಹಳ್ಳಿ ಹಾಗೂ ಯರಗೇರದ ಸರ್ಕಾರಿ ಪ್ರೌಢಶಾಲೆಗಳಲ್ಲಿ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಈರಣ್ಣ ಕೋಸಗಿ ಅವರು ಮಾತನಾಡಿ, ಎಸ್‌ಎಸ್‌ಎಲ್‌ಸಿ ವಿದ್ಯಾಭ್ಯಾಸವು ವಿದ್ಯಾರ್ಥಿ ಜೀವನದ ಪ್ರಮುಖ ಮೈಲುಗಲ್ಲಾಗಿದೆ. ಇದನ್ನು ಯಶಸ್ವಿಯಾಗಿ ಉತ್ತೀರ್ಣರಾದರೆ ಮುಂದಿನ ಭವಿಷ್ಯವನ್ನು ಕಟ್ಟಿಕೊಳ್ಳಲು ಉತ್ತಮ ಅವಕಾಶಗಳು ದೊರೆಯುತ್ತವೆ ಎಂದು ಹೇಳಿದರು.
ಈ ಸಮಯದಲ್ಲಿ ಹೆಚ್ಚು ಸಮಯ ವಿದ್ಯಾಭ್ಯಾಸಕ್ಕೆ ಮೀಸಲಿಟ್ಟು ಶ್ರಮಪಟ್ಟರೆ, ಉತ್ತಮ ವಿದ್ಯಾರ್ಥಿಗಳಾಗುವ ಜೊತೆಗೆ ಸಮಾಜಕ್ಕೆ ಕೊಡುಗೆ ನೀಡುವ ವ್ಯಕ್ತಿಗಳಾಗಬಹುದು. ದೊಡ್ಡ ಕನಸುಗಳನ್ನು ಕಂಡು ಸ್ಪಷ್ಟ ಗುರಿಯೊಂದಿಗೆ ಮುನ್ನಡೆಯಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ತಂದೆ-ತಾಯಿಗಳು ತಮ್ಮ ಮಕ್ಕಳ ಭವಿಷ್ಯ ಮತ್ತು ಉತ್ತಮ ಜೀವನಕ್ಕಾಗಿ ಅನೇಕ ಕಷ್ಟಗಳನ್ನು ಸಹಿಸಿಕೊಂಡು ಶಿಕ್ಷಣ ಕೊಡಿಸುತ್ತಿದ್ದಾರೆ. ಅವರ ಶ್ರಮವನ್ನು ಅರಿತು, ಉತ್ತಮ ಸಾಧನೆ ಮಾಡುವ ಮೂಲಕ ಅವರಿಗೆ ಹೆಮ್ಮೆ ತರುವಂತೆ ವಿದ್ಯಾರ್ಥಿಗಳು ಮುನ್ನಡೆಯಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ರಾಕೇಶ್ ರಾಜಲಬಂಡಿ, ವೇದಾಂತ ಡಿಗ್ರಿ ಕಾಲೇಜಿನ ಪ್ರಾಚಾರ್ಯರು ಮಾತನಾಡಿ, ಪರೀಕ್ಷೆಯನ್ನು ಹೇಗೆ ಎದುರಿಸಬೇಕು ಮತ್ತು ಯಾವ ರೀತಿಯಲ್ಲಿ ಅಧ್ಯಯನ ಮಾಡಿದರೆ ಯಶಸ್ಸು ಸಾಧಿಸಬಹುದು ಎಂಬ ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಈ ಸಂದರ್ಭದಲ್ಲಿ ಸಂಬಂಧಿಸಿದ ಶಾಲೆಗಳ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.