ರಾಯಚೂರು | ಬೈಕ್ ವಿಚಾರಕ್ಕೆ ಜಗಳ; ಯುವಕನ ಹತ್ಯೆ : ಆರೋಪಿಗಳ ಬಂಧನ
ಮೃತ ವಿಶಾಲ ಕುಮಾರ್ ; ಆರೋಪಿಗಳಾದ ಬಸವರಾಜ, ರಾಜು
ರಾಯಚೂರು: ಬೈಕ್ ವಿಚಾರಕ್ಕೆ ಉಂಟಾದ ಗಲಾಟೆಯಿಂದ ಸ್ನೇಹಿತರೇ ಯುವಕನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ನಗರದ ಮಾವಿನ ಕೆರೆ ಬಳಿಯ ದತಾರ್ ಲೇಔಟ್‌ನಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ರಾತ್ರಿ ಸುಮಾರು 10.30ರ ವೇಳೆಗೆ ಜಹಿರಾಬಾದ್ ಬಡಾವಣೆಯ ನಿವಾಸಿಗಳಾದ ರಾಜು ಹಾಗೂ ಬಸವರಾಜ ಎಂಬ ಯುವಕರು, ಅದೇ ಬಡಾವಣೆಯ ನಿವಾಸಿ ವಿಶಾಲ್ (24) ಎಂಬ ಯುವಕನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಹಿಂದೆ ಆರೋಪಿ ರಾಜು, ವಿಶಾಲ್ ಬಳಿ ಬೈಕ್ ಕೇಳಿದ್ದು, ವಿಶಾಲ್ ನೀಡಲು ನಿರಾಕರಿಸಿದ್ದ. ಈ ವಿಚಾರವಾಗಿ ಇಬ್ಬರ ನಡುವೆ ಗಲಾಟೆ ನಡೆದಿತ್ತು. ಶುಕ್ರವಾರ ರಾತ್ರಿ ರಾಜು, ವಿಶಾಲ್‌ಗೆ ಮಾವಿನ ಕೆರೆ ಬಳಿ ಬರಲು ಕರೆಸಿಕೊಂಡಿದ್ದಾನೆ. ಆ ಸ್ಥಳದಲ್ಲಿ ರಾಜು ಹಾಗೂ ಬಸವರಾಜ ಸೇರಿಕೊಂಡು ವಿಶಾಲ್ ಜೊತೆ ಜಗಳವಾಡಿದ್ದು, ಮಾತಿನ ಚಕಮಕಿ ತೀವ್ರಗೊಂಡಿದೆ. ಈ ವೇಳೆ ರಾಜು ವಿಶಾಲ್‌ನ ಹೊಟ್ಟೆ ಹಾಗೂ ಬೆನ್ನಿನ ಭಾಗಕ್ಕೆ ಚಾಕುವಿನಿಂದ ಮನಬಂದಂತೆ ಇರಿದ ಪರಿಣಾಮ ವಿಶಾಲ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆರೋಪಿಗಳ ಬಂಧನ :
ಘಟನೆ ಕುರಿತು ಮೃತನ ಸಂಬಂಧಿಕರು ನೀಡಿದ ದೂರಿನ ಆಧಾರದ ಮೇಲೆ ಸದರ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಾದ ರಾಜು ಹಾಗೂ ಬಸವರಾಜರನ್ನು ಪೊಲೀಸರು ಬಂಧಿಸಿದ್ದಾರೆ. ಮುಂದಿನ ಕ್ರಮವಾಗಿ ಆರೋಪಿಗಳನ್ನು ನ್ಯಾಯಾಂಗಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷುಗಿರಿ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ. ರಾತ್ರಿ ಗಸ್ತು ವೇಳೆ ಈ ಪ್ರಕರಣ ಬೆಳಕಿಗೆ ಬಂದಿದ್ದು, ಆರೋಪಿಗಳನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಗಿದೆ. ಮುಂದಿನ ತನಿಖೆಯ ನಂತರ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುವುದು. ನಂತರ ಈ ಪ್ರಕರಣದ ಕುರಿತು ಹೆಚ್ಚಿನ ತನಿಖೆಯನ್ನು ನಡೆಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಡಿವೈಎಸ್‌ಪಿ ಶಾಂತವೀರ, ಸಿಪಿಐ ಉಮೇಶ್ ಕಾಂಬ್ಳೆ ಸೇರಿದಂತೆ ಪೊಲೀಸ್ ಸಿಬ್ಬಂದಿಗಳು ಸ್ಥಳದಲ್ಲಿದ್ದರು.