ಜೂನ್ 21ರಂದು ಹಟ್ಟಿ ಚಿನ್ನದ ಗಣಿ ಕಂಪನಿಯ ಚುನಾವಣೆ; ವಿವಿಧ ಸಂಘಟನೆಗಳಿಂದ ಪ್ರಚಾರ
ರಾಯಚೂರು: ಹಟ್ಟಿ ಚಿನ್ನದ ಗಣಿ ಕಂಪನಿಯಲ್ಲಿ ಗುತ್ತಿಗೆ ಪದ್ದತಿ ರದ್ದು ಮಾಡಬೇಕು, ನಿರುದ್ಯೋಗ ನಿವಾರಣೆ, ಕಾರ್ಮಿಕರಿಗೆ ಅನ್‌ಫಿಟ್ ಯೋಜನೆ ಜಾರಿಗೊಳಿಸಬೇಕು. ಗಣಿಯಲ್ಲಿ ಶುದ್ಧಗಾಳಿ ಸಂಚಾರ(ವೆಂಟಿಲೇಷನ್) ಹಾಗೂ ಕಾರ್ಮಿಕರ ಹೆಚ್ಚಿನ ಸುರಕ್ಷತೆಗೆ ಗಮನ ಹರಿಸಬೇಕು ಎಂದು ಚುನಾವಣೆಗೆ ಸ್ಪರ್ಧಿಸಿದ್ದು ಕಾರ್ಮಿಕರು ನಮಗೆ ಬೆಂಬಲಿಸಲಿದ್ದಾರೆ ಎಂದು ಸಿಐಟಿಯು ಪಕ್ಷದ ಮುಖಂಡ ಹಾಗೂ ಪ್ರಧಾನ ಕಾರ್ಯದರ್ಶಿಗೆ ಸ್ಪರ್ಧಿಸಿದ ಎಸ್ ಎಂ.ಶಫಿ ಭರವಸೆ ವ್ಯಕ್ತಪಡಿಸಿದರು.
ಹಟ್ಟಿ ಚಿನ್ನದ ಗಣಿ ಕಂಪನಿಯ ಸಿಐಟಿಯು ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಈ ಹಿಂದೆ ಎಐಟಿಯುಸಿ ಯಲ್ಲಿದ್ದೆ ಪ್ರಸ್ತುತ ಅನೇಕ ಭಿನ್ನಾಭಿಪ್ರಾಯದಿಂದ ಹೊರಬಂದು ಕಾರ್ಮಿಕರ ಇಚ್ಛೆಯ ಅನುಸಾರ ಸಿಐಟಿಯು ಸೇರ್ಪಡೆಯಾಗಿದ್ದೇನೆ. 40 ವರ್ಷ ಕಾರ್ಮಿಕರ ಪರ ಕೆಲಸ ಮಾಡಿದ್ದೇನೆ. ಗಣಿ ಕಾರ್ಮಿಕರ ಸಮಸ್ಯೆ ಚೆನ್ನಾಗಿ ತಿಳಿದಿದ್ದೇನೆ. ಅನೇಕ ಸಮಸ್ಯೆಗೆ ಹಿಂದೆ ಸ್ಪಂದಿಸಿ ಹೋರಾಡಿರುವೆ ಎಂದರು.
ಗಣಿಯಲ್ಲಿ ಡೀಸಲ್ ಯಂತ್ರಗಳನ್ನು ಬಳಸುತ್ತಿರುವದು ಕಾರ್ಮಿಕ ಆರೋಗ್ಯದ ಮೇಲೆ ಗಂಭೀರವಾಗಿ ಪರಿಣಾಮ ಬೀರುತ್ತಿದೆ. ಅನೇಕ ಸಾವು ನೋವು ಸಂಭವಿಸುತ್ತಿದೆ. ಇದನ್ನು ತೆಗೆದುಹಾಕಿ ಕಾರ್ಮಿಕ ಸ್ನೇಹಿ ವಾತಾವರಣ ನಿರ್ಮಿಸಬೇಕು. ಗಣಿ ಕಂಪನಿಯಲ್ಲಿ 400 ಹುದ್ದೆಗಳು ಖಾಲಿ ಇದ್ದು ಚಿನ್ನದ ಉತ್ಪಾದನೆ ಗುರಿ ಸಾಧಿಸಲು ಕಾರ್ಮಿಕರ ಮೇಲೆ ಒತ್ತಡ ಹೇರಲಾಗುತ್ತಿದೆ. ಕಾರ್ಮಿಕರ ಸಮಸ್ಯೆ ಹಾಗೂ ಪರಿಹಾರ ಕಲ್ಪಿಸಲು ಸಚಿವ ಎನ್ ಎಸ್ ಬೋಸರಾಜು, ಉಸ್ತುವಾರಿ ಸಚಿವ ಶರಣಪ್ರಕಾಶ ಪಾಟೀಲ್ ಹಾಗೂ ಸಂಬಂಧಿಸಿದ ಸಚಿವರಿಗೆ ಮನವಿ ಸಲ್ಲಿಸಿ ಸಭೆ ಮಾಡಲಾಗಿದೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.
ಈ ವೇಳೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಕೆ.ಮಹಾಂತೇಶ, ಉಪಾಧ್ಯಕ್ಷದ ರಮೇಶ ವೀರಾಪೂರ, ಪ್ರಧಾನ ಕಾರ್ಯದರ್ಶಿಗೆ ಸ್ಪರ್ಧಿಸಿದ ಮೊಹಮ್ಮದ್ ಹನೀಫ್ ಮತ್ತಿತರರು ಇದ್ದರು.